ಸೈಯದ್ ಮೋದಿ ಇಂಟರ್ ನ್ಯಾಷನಲ್ ಸೂಪರ್ 500 ಟೂರ್ನಮೆಂಟ್ನಲ್ಲಿ ಪಿವಿ ಸಿಂಧು ಸೆಮಿಫೈನಲ್ ತಲುಪಿದ್ದಾರೆ. ಅವರು 11-21, 21-12, 21-17 ರಲ್ಲಿ ಥಾಯ್ಲೆಂಡ್‌ನ ಸುಪಾನಿಡಾ ಕೆಥಾಂಗ್ ಅವರನ್ನು ಸೋಲಿಸಿದರು. ಪುರುಷರ ವಿಭಾಗದಲ್ಲಿ ಭಾರತದ ಎಚ್‌ಎಸ್ ಪ್ರಣಯ್ ಸೋತು ಹೊರಬಿದ್ದರು. ಅವರು ಫ್ರಾನ್ಸ್‌ನ ಅರ್ನಾಡ್ ಮರ್ಕೆಲ್ ಎದುರು 19-21 16-21 ರಿಂದ ಸೋಲನುಭವಿಸಿದರು. ಐದನೇ ಶ್ರೇಯಾಂಕದ ಭಾರತೀಯ ಪ್ರಣಯ್ 59 ನಿಮಿಷಗಳ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ತಮ್ಮ ಫ್ರೆಂಚ್ ಪ್ರತಿಸ್ಪರ್ಧಿ ವಿರುದ್ಧ ಸೋತರು. ಆದಾಗ್ಯೂ, ಮಿಥುನ್ ಮಂಜುನಾಥ್ ಕ್ವಾರ್ಟರ್ ಫೈನಲ್‌ನಲ್ಲಿ ರಷ್ಯಾದ ಸರ್ಗೆ ಸಿರಾಂಟ್ ಅವರನ್ನು 11-21 21-12 21-18 ರಿಂದ ಸೋಲಿಸಿ ಸೆಮಿಫೈನಲ್ ತಲುಪಿದರು. ಮಂಜುನಾಥ್ ಸೆಮಿಫೈನಲ್‌ನಲ್ಲಿ ಮರ್ಕಲ್ ಅವರನ್ನು ಎದುರಿಸಲಿದ್ದಾರೆ.
ಸಿಂಧು ತಮ್ಮ ಪಂದ್ಯದಲ್ಲಿ ಹೋರಾಟ ಎದುರಿಸಬೇಕಾಯಿತು. ಮೊದಲ ಗೇಮ್ ಅನ್ನು ಥಾಯ್ ಆಟಗಾರ್ತಿ ಗೆದ್ದಿದ್ದರು. ಒಮ್ಮೆ ಇಂಡಿಯಾ ಓಪನ್‌ನ ನೆನಪುಗಳು ಮರುಕಳಿಸಿದವು. ಕಳೆದ ವಾರ ಇಂಡಿಯಾ ಓಪನ್‌ನಲ್ಲಿ ಸುಪಾನಿಡಾ ಕೆಥಾಂಗ್ ಸೆಮಿಫೈನಲ್‌ನಲ್ಲಿ ಸಿಂಧು ಅವರನ್ನು ಸೋಲಿಸಿದ್ದರು. ಆದರೆ ಸಿಂಧು ಈ ಬಾರಿ ಕಮ್ ಬ್ಯಾಕ್ ಮಾಡಿ ಥಾಯ್ಲೆಂಡ್ ಆಟಗಾರ್ತಿಯ ನಿರೀಕ್ಷೆಯನ್ನು ಹುಸಿಗೊಳಿಸಿದರು. ಅವರು ಸುಮಾರು ಒಂದು ಗಂಟೆ ಐದು ನಿಮಿಷಗಳ ನಂತರ ಗೆದ್ದರು. ಪಿವಿ ಸಿಂಧು ಸೆಮಿಫೈನಲ್‌ನಲ್ಲಿ ರಷ್ಯಾದ ಎವ್ಗೆನಿಯಾ ಕೊಸೆಟ್ಸ್ಕಾಯಾ ಅವರನ್ನು ಎದುರಿಸಲಿದ್ದಾರೆ. ಅವರು ಕ್ವಾರ್ಟರ್ ಫೈನಲ್‌ನಲ್ಲಿ ಜೆಕ್ ಗಣರಾಜ್ಯದ ತೆರೆಜಾ ಸ್ವಾಬಿಕೋವಾ ಅವರನ್ನು 21-8, 21-14 ರಿಂದ ಸೋಲಿಸಿದರು.
ಮಹಿಳಾ ವಿಭಾಗದ ಎರಡನೇ ಸೆಮಿಫೈನಲ್‌ನಲ್ಲಿ ಮಾಳವಿಕಾ ಬನ್ಸೋಡ್ ಮತ್ತು ಅನುಪಮಾ ಉಪಾಧ್ಯಾಯ ಪೈಪೋಟಿ ನಡೆಸಲಿದ್ದಾರೆ. ಮಾಳವಿಕಾ 21-11, 21-11ರಲ್ಲಿ ಭಾರತದ ಆಕರ್ಷಿ ಕಶ್ಯಪ್ ಅವರನ್ನು ಸೋಲಿಸಿದರು. ಇಂಡಿಯಾ ಓಪನ್‌ನಲ್ಲಿ ಆಕರ್ಷಿ ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಂಡರು. ಮತ್ತೊಂದೆಡೆ, ಅನುಪಮಾ ಅವರು ಸಮಿಯಾ ಇಮಾದ್ ಫಾರೂಕಿ ಅವರನ್ನು 24-22, 23-21 ರಿಂದ ಕಠಿಣ ಪಂದ್ಯದಲ್ಲಿ ಸೋಲಿಸಿದರು.
ಡಬಲ್ಸ್ ಪಂದ್ಯಗಳ ಪಲಿತಾಂಶ
ಮಿಶ್ರ ಡಬಲ್ಸ್ ವಿಭಾಗದಲ್ಲಿ ಎಂಆರ್ ಅರ್ಜುನ್ ಮತ್ತು ತ್ರಿಶಾ ಜಾಲಿ ಅವರು 42 ನಿಮಿಷಗಳ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಎಂಟನೇ ಶ್ರೇಯಾಂಕದ ಫ್ರೆಂಚ್ ಜೋಡಿ ವಿಲಿಯಂ ವಿಲ್ಲೆಗರ್ ಮತ್ತು ಆನ್ನೆ ಟ್ರಾನ್ ಅವರನ್ನು 24-22 21-17 ರಿಂದ ಸೋಲಿಸಿದರು. ಅರ್ಜುನ್ ಮತ್ತು ಜಾಲಿ ಜೋಡಿ ಸೆಮಿಫೈನಲ್‌ನಲ್ಲಿ ದೇಶವಾಸಿ ಮತ್ತು ಏಳನೇ ಶ್ರೇಯಾಂಕದ ಇಶಾನ್ ಭಟ್ನಾಗರ್ ಮತ್ತು ತನಿಶಾ ಕ್ರೆಸ್ಟೊ ಅವರನ್ನು ಎದುರಿಸಲಿದೆ. ಮಹಿಳೆಯರ ಡಬಲ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದ ರಮ್ಯಾ ವೆಂಕಟೇಶ್ ಚಿಕ್ಕಮೇನಹಳ್ಳಿ ಮತ್ತು ಅಪೇಕ್ಷಾ ನಾಯಕ್ ಎಂಟನೇ ಶ್ರೇಯಾಂಕದ ಮಲೇಷ್ಯಾದ ಜೋಡಿ ಅನ್ನಾ ಚಿಂಗ್ ಯಿಕ್ ಚಿಯೋಂಗ್ ಮತ್ತು ಟಿಯೋಹ್ ಮೇ ಜಿಂಗ್‌ಗೆ ವಾಕ್‌ಓವರ್ ನೀಡಿದರು.