ನ್ಯೂಜಿಲೆಂಡ್ ತಂಡದಲ್ಲಿ ಕನ್ನಡಿಗನ ಪರಾಕ್ರಮ; ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಭಾರತದ ವಿರುದ್ಧ ಕಣಕ್ಕೆ?

|

Updated on: May 19, 2021 | 8:52 PM

Rachin Ravindra: ಭಾರತೀಯ ಮೂಲದ ಅದರಲ್ಲೂ ಕನ್ನಡದ ಹುಡುಗ ರಚಿನ್ ರವೀಂದ್ರ (21) ಸ್ಥಾನ ಪಡೆದಿದ್ದಾರೆ. ವಿಶೇಷವೆಂದರೆ ರಚಿನ್ ಇದುವರೆಗೂ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲಿಲ್ಲ.

ನ್ಯೂಜಿಲೆಂಡ್ ತಂಡದಲ್ಲಿ ಕನ್ನಡಿಗನ ಪರಾಕ್ರಮ; ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಭಾರತದ ವಿರುದ್ಧ ಕಣಕ್ಕೆ?
ರಚಿನ್ ರವೀಂದ್ರ
Follow us on

ಪ್ರಸ್ತುತ ಯುಕೆಯಲ್ಲಿರುವ 20 ಮಂದಿಯ ನ್ಯೂಜಿಲೆಂಡ್ ತಂಡದಲ್ಲಿ ಭಾರತೀಯ ಮೂಲದ ಅದರಲ್ಲೂ ಕನ್ನಡದ ಹುಡುಗ ರಚಿನ್ ರವೀಂದ್ರ (21) ಸ್ಥಾನ ಪಡೆದಿದ್ದಾರೆ. ವಿಶೇಷವೆಂದರೆ ರಚಿನ್ ಇದುವರೆಗೂ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲಿಲ್ಲ. ಬೆಂಗಳೂರು ಮೂಲದ ಆಲ್​ರೌಂಡರ್ ರಚಿನ್ ರವೀಂದ್ರ ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ನ್ಯೂಜಿಲೆಂಡ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ರಚಿನ್ ರವೀಂದ್ರ ತಂದೆ ರವಿ ಕೃಷ್ಣಮೂರ್ತಿ ಹಾಗೂ ತಾಯಿ ದೀಪಾ ಕೃಷ್ಣಮೂರ್ತಿ ಮೂಲತಃ ಬೆಂಗಳೂರಿನವರಾಗಿದ್ದು, ಸದ್ಯ ನ್ಯೂಜಿಲೆಂಡ್‌ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

1990 ರಲ್ಲಿ ನ್ಯೂಜಿಲೆಂಡ್‌ಗೆ ತೆರಳಿದ ಬೆಂಗಳೂರಿನ ಸಾಫ್ಟ್‌ವೇರ್ ಉದ್ಯೋಗಿ ರವೀಂದ್ರ ಅವರ ತಂದೆ ರವಿ ಕೃಷ್ಣಮೂರ್ತಿ, ನ್ಯೂಜಿಲೆಂಡ್‌ನ ಹಟ್ ಹಾಕ್ಸ್ ಕ್ಲಬ್‌ನ ಸ್ಥಾಪಕರಾಗಿದ್ದು, ಪ್ರತಿ ಬೇಸಿಗೆಯಲ್ಲಿ ಆಟಗಾರರನ್ನು ಭಾರತಕ್ಕೆ ಕರೆತರುತ್ತಾರೆ. ಕೆಲವು ಅಂತರರಾಷ್ಟ್ರೀಯ ಕಿವಿ ಕ್ರಿಕೆಟಿಗರಾದ ಜೇಮ್ಸ್ ನೀಶಮ್ ಮತ್ತು ಟಾಮ್ ಬ್ಲುಂಡೆಲ್ ಕೂಡ ಈ ಪ್ರವಾಸಗಳ ಭಾಗವಾಗಿದ್ದಾರೆ.

ಎಡಗೈ ಬ್ಯಾಟ್ ಮತ್ತು ಎಡಗೈ ಸ್ಪಿನ್ನರ್
ಕಳೆದ ನಾಲ್ಕು ವರ್ಷಗಳಲ್ಲಿ ನಾನು ಪ್ರತಿ ವರ್ಷ ಆರ್‌ಡಿಟಿ (ಅನಂತಪುರ, ಆಂಧ್ರಪ್ರದೇಶ) ಯಲ್ಲಿ ತರಬೇತಿ ಪಡೆದಿದ್ದೇನೆ ಮತ್ತು ಆಡಿದ್ದೇನೆ ಎಂದು ರವೀಂದ್ರ ಹೇಳಿದ್ದಾರೆ.

ಆಂಧ್ರಪ್ರದೇಶದ ಕ್ರಿಕೆಟ್ ಅಕಾಡೆಮಿಯ ತರಬೇತುದಾರರಲ್ಲಿ ಒಬ್ಬರಾದ ಖತೀಬ್ ಸೈಯದ್ ಶಹಾಬುದ್ದೀನ್ ರವೀಂದ್ರ ಅವರನ್ನು ಉಲ್ಲೇಖಿಸಿ, ರಚಿನ್ ರವೀಂದ್ರ ಹಟ್ ಹಾಕ್ಸ್ ಕ್ಲಬ್‌ನ ಭಾಗವಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ ಅನಂತಪುರದ ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ನಲ್ಲಿ ತರಬೇತಿ ಪಡೆಯುತ್ತಿದ್ದರು. ಅವರು ಭರವಸೆಯ ಕ್ರಿಕೆಟಿಗ. ಯುವ ಕ್ರಿಕೆಟಿಗನಾಗಿ, ಎಡಗೈ ಬ್ಯಾಟ್ ಮತ್ತು ಎಡಗೈ ಸ್ಪಿನ್ನರ್ ಆಗಿ ಉತ್ತಮ ಸಾಧನೆ ಮಾಡಲು ಅವರು ಸಾಕಷ್ಟು ಭರವಸೆ ಮತ್ತು ಹಸಿವನ್ನು ತೋರಿಸಿದರು ಎಂದು ಹೇಳಿದ್ದಾರೆ.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 3 ಶತಕ ಮತ್ತು 9 ಅರ್ಧಶತಕ
21 ವರ್ಷದ ಯುವ ಪ್ರತಿಭೆ ರಚಿನ್ ರವೀಂದ್ರ ನ್ಯೂಜಿಲೆಂಡ್‌ನ ಅತ್ಯಂತ ಪ್ರತಿಭಾನ್ವಿತ ಯುವ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಎಡಗೈ ಬ್ಯಾಟ್ಸ್‌ಮನ್‌ ಹಾಗೂ ಎಡಗೈ ಸ್ಪಿನ್ನರ್‌ ವೆಲ್ಲಿಂಗ್ಟನ್ ಪ್ರಾಂತೀಯ ತಂಡದ ಪರ 18 ವರ್ಷವಿದ್ದಾಗಲೇ ಆಡಿ ಈವರೆಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 3 ಶತಕ ಮತ್ತು 9 ಅರ್ಧಶತಕಗಳನ್ನು ಬಾರಿಸಿದ್ದಾರೆ. ವೆಸ್ಟ್‌ ಇಂಡೀಸ್‌ ವಿರುದ್ಧ ನ್ಯೂಜಿಲೆಂಡ್‌ ‘ಎ’ ತಂಡದ ಪರವೂ ಶತಕ ದಾಖಲಿಸಿದ್ದಾರೆ.

ಎಡಗೈ ಸ್ಪಿನರ್ ಆಗಿರುವ ರಚಿನ್ 26 ಪ್ರಥಮ ದರ್ಜೆ ಪಂದ್ಯಗಳಿಂದ 144 ವೈಯಕ್ತಿಕ ಗರಿಷ್ಠ ಮೊತ್ತದೊಂದಿಗೆ 1470 ರನ್ ಗಳಿಸಿ 22 ವಿಕೆಟ್ ಕಬಳಿಸಿದ್ದಾರೆ. ದೇಶೀಯ ಟೂರ್ನಿಗಳಲ್ಲಿ ಗಮನಾರ್ಹ ನಿರ್ವಹಣೆ ತೋರಿದ ರಚಿನ್‌ಗೆ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿ ಮಣೆಹಾಕಿದೆ.

ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಅವರ ಹೆಸರಿನಿಂದ ಪ್ರೇರಿತರಾಗಿರುವ ರವೀಂದ್ರ ಅವರು 2016 ರ ಅಂಡರ್ -19 ವಿಶ್ವಕಪ್ಗಾಗಿ ನ್ಯೂಜಿಲೆಂಡ್ ತಂಡದೊಂದಿಗೆ ಭಾರತಕ್ಕೆ ಬಂದಿದ್ದರು. ನಂತರ ಅವರು ರಿಷಭ್ ಪಂತ್ ಮತ್ತು ವಾಷಿಂಗ್ಟನ್ ಸುಂದರ್ ಅವರಿಂದ ಸಾಕಷ್ಟು ವಿಚಾರಗಳನ್ನು ಕಲಿತಿದ್ದಾರೆ. ಐದು ವರ್ಷಗಳ ನಂತರ, ಅವರು ಟೀಂ ಇಂಡಿಯಾದ ವಿರುದ್ಧ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಮಿಂಚುವ ಮೊದಲ ಅವಕಾಶವನ್ನು ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

Published On - 7:52 pm, Wed, 19 May 21