ಮೊದಲ ಟೆಸ್ಟ್ ಸೋತ ನಂತರ ಕ್ರಿಕೆಟ್ ಗೊತ್ತಿಲ್ಲದವರೂ ಭಾರತದ ಕಳಾಹೀನ ಪ್ರದರ್ಶನವನ್ನು ತೆಗಳುತ್ತಿದ್ದಾರೆ. ಟೆಸ್ಟ್ ಇತಿಹಾಸದಲ್ಲೇ ಅತ್ಯಂತ ಕನಿಷ್ಠ ಮೊತ್ತ ಗಳಿಸಿದ ಅಪಖ್ಯಾತಿಗೆ ಗುರಿಯಾಗಿರುವ ಟೀಮ್ ಇಂಡಿಯಾದ ಬ್ಯಾಟ್ಸ್ಮನ್ಗಳನ್ನು ಅವರು ಜರಿಯುತ್ತಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ.
ಸೋಲಿನಿಂದ ರೋಸಿ ಹೋಗಿರುವ ಭಾರತೀಯ ಕ್ರಿಕೆಟ್ ಪ್ರೇಮಿಗಳ ಮನಸ್ಸು ತಿಳಿಯಾಗಬೇಕಾದರೆ ಡಿ.26ರಿಂದ ಶುರುವಾಗಲಿರುವ ಎರಡನೇ ಟೆಸ್ಟ್ ಪಂದ್ಯವನ್ನು ಅಜಿಂಕ್ಯಾ ರಹಾನೆ ನೇತೃತ್ವದ ಟೀಮ್ ಗೆಲ್ಲಬೇಕಿದೆ. ಆದರೆ ಅದು ಅಷ್ಟು ಸುಲಭವಲ್ಲ.
ಭಾರತದ ಮಾಜಿ ಕ್ಯಾಪ್ಟನ್ ಮತ್ತು ಕಾಮೆಂಟೇಟರ್ ಸುನಿಲ್ ಗಾವಸ್ಕರ್, ಟೀಮ್ ಇಂಡಿಯಾದ ಆಟಗಾರರು, ಅಡಿಲೇಡ್ನಲ್ಲಿ ಅನುಭವಿಸಿದ ಶೋಚನೀಯ ಸೋಲನ್ನು ಮರೆತು ಸರಣಿಯಲ್ಲಿ ಹೊಸ ಪ್ರಾರಂಭ ಮಾಡಬೇಕು ಎಂದಿದ್ದಾರೆ. ಸ್ಪೋರ್ಟ್ಸ್ ಟಾಕ್ ಕಾರ್ಯಕ್ರಮದಲ್ಲಿ ಮಾತಾಡಿದ ಸನ್ನಿ, ‘ಅಡಿಲೇಡ್ನಲ್ಲಿನ ಸೋಲು ಅವರನ್ನು ಧೃತಿಗೆಡಿಸಿರುವುದು ನಿಜ. ಆದರೆ, ಅವರು ಪಾಸಿಟಿವ್ ಧೋರಣೆಯನ್ನು ತಳೆಯಬೇಕು ಮತ್ತು ಸರಣಿಯನ್ನು ಹೊಸದಾಗಿ ಆರಂಭಿಸಬೇಕು. ಪಾಸಿಟಿವ್ ಧೋರಣೆ ಪ್ರದರ್ಶಿಸದಿದ್ದರೆ ಅವರಿಗೆ ಉಳಿಗಾಲವಿಲ್ಲ, ಸರಣಿಯಲ್ಲಿ 0-4 ಅಂತರದ ಸೋಲು ಕಟ್ಟಿಟ್ಟ ಬುತ್ತಿ. ಅಸ್ಟ್ರೇಲಿಯಾದ ದೌರ್ಬಲ್ಯ ಬ್ಯಾಟಿಂಗ್ ಎನ್ನುವುದು ಅಡಿಲೇಡ್ನಲ್ಲಿ ಸಾಬೀತಾಗಿದೆ. ಅದನ್ನೇ ಭಾರತೀಯರು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಲಬೇಕು’ ಎಂದರು.
‘ಟೀಮ್ ಇಂಡಿಯಾದ ಸದಸ್ಯರು ಯಾವ ಹಂತದಲ್ಲೂ ನೈತಿಕ ಸ್ಥೈರ್ಯವನ್ನು ಕಳೆದುಕೊಳ್ಳಬಾರದು, ನಾವು ಕಮ್ಬ್ಯಾಕ್ ಮಾಡಬಲ್ಲೆವು ಎಂಬ ವಿಶ್ವಾಸ ಅವರಲ್ಲಿರಬೇಕು. ಸರಣಿಯಲ್ಲಿ ಮೇಲೆದ್ದು ಬರಲು ಅವಕಾಶವಿದೆ ಮತ್ತು ಆ ಸಾಮರ್ಥ್ಯವೂ ಅವರಲ್ಲಿದೆ. ಮೊದಲ ಟೆಸ್ಟ್ನ ಹೀನಾಯ ಸೋಲು ಕ್ರಿಕೆಟ್ ಪ್ರೇಮಿಗಳಲ್ಲಿ ಕೋಪ ತರಿಸಿದೆ. ಬ್ಯಾಟಿಂಗ್ ವೈಫಲ್ಯದ ಜತೆ ಕಳಪೆಮಟ್ಟದ ಫೀಲ್ಡಿಂಗ್ ಸಹ ಭಾರತದ ಸೋಲಿಗೆ ಕಾರಣವಾಯಿತು. 100 ರನ್ಗಳ ಲೀಡ್ ದೊರಕಿದ್ದರೆ, ಪಂದ್ಯದ ಫಲಿತಾಂಶ ಬೇರೆಯಾಗುವ ಸಾಧ್ಯತೆಯಿತ್ತು. ಮಾರ್ನಸ್ ಲಬುಶೆನ್ ಮತ್ತು ಟಿಮ್ ಪೈನ್ ತಮಗೆ ದೊರೆತ ಜೀವದಾನಗಳ ಲಾಭ ಪಡೆದು ಲೀಡನ್ನು 50 ರನ್ಗಳಿಗೆ ಇಳಿಸುವಲ್ಲಿ ಸಫಲರಾದರು’ ಎಂದು ಗಾವಸ್ಕರ್ ಹೇಳಿದರು.
ಮೊದಲ ಟೆಸ್ಟ್ನಲ್ಲಿ ಕಳಪೆ ಬ್ಯಾಟಿಂಗ್ ಟೆಕ್ನಿಕ್ ಪ್ರದರ್ಶಿಸಿದ ಓಪನರ್ ಪೃಥ್ವಿ ಶಾ ಅವರನ್ನು ತಂಡದಿಂದ ಕೈಬಿಟ್ಟು ಕೆ.ಎಲ್.ರಾಹುಲ್ರನ್ನು ಆ ಸ್ಥಾನದಲ್ಲಿ ಆಡಿಸಬೇಕೆಂದು ಗಾವಸ್ಕರ್ ಸಲಹೆ ಮಾಡಿದರು.
‘ಮೆಲ್ಬರ್ನ್ ಟೆಸ್ಟ್ಗೆ ಭಾರತ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡುವ ಅವಶ್ಯಕತೆಯಿದೆ. ಪೃಥ್ವಿ ಶಾರನ್ನು ಡ್ರಾಪ್ ಮಾಡಿ ರಾಹುಲ್ ಅವರನ್ನು ಓಪನರ್ ಆಗಿ ಆಡಿಸಬೇಕು ಮತ್ತು ಸಾಂಪ್ರದಾಯಿಕ ಶೈಲಿಯಲ್ಲಿ ಬ್ಯಾಟ್ ಮಾಡುವ ಶುಭ್ಮನ್ ಗಿಲ್ಗೆ 5 ಇಲ್ಲವೇ 6ನೇ ಕ್ರಮಾಂಕದಲ್ಲಿ ಆಡುವ ಅವಕಾಶ ಕಲ್ಪಿಸಬೇಕು. ಇವರಿಬ್ಬರನ್ನು ಆಡುವ ಇಲೆನೆನ್ನಲ್ಲಿ ಸೇರಿಸಿದರೆ, ಭಾರತದ ಬ್ಯಾಟಿಂಗ್ ಸದೃಢವಾಗಲಿದೆ’ ಎಂದು ಸನ್ನಿ ಹೇಳಿದರು.
Published On - 6:05 pm, Mon, 21 December 20