ನಿವೃತ್ತಿ ಬೆನ್ನಲ್ಲೇ ಟೀಮ್ ಇಂಡಿಯಾ ತೊರೆದ ಅಶ್ವಿನ್ಗೆ ಅದ್ಧೂರಿ ಸ್ವಾಗತ
Ravichandran Ashwin retirement: ರವಿಚಂದ್ರನ್ ಅಶ್ವಿನ್ ಟೀಮ್ ಇಂಡಿಯಾ ಪರ 287 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 379 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಅವರು ಒಟ್ಟು 5833.3 ಓವರ್ಗಳನ್ನು ಎಸೆದಿದ್ದಾರೆ. ಇದರ ನಡುವೆ 947 ಮೇಡನ್ ಓವರ್ ಎಸೆದಿರುವ ಅವರು ಒಟ್ಟು 765 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಭಾರತದ ಪರ ಅತ್ಯಧಿಕ ವಿಕೆಟ್ ಪಡೆದ 2ನೇ ಬೌಲರ್ ಎನಿಸಿಕೊಂಡಿದ್ದಾರೆ.
ಟೀಮ್ ಇಂಡಿಯಾ ಆಟಗಾರ ರವಿಚಂದ್ರನ್ ಅಶ್ವಿನ್ ಬುಧವಾರ (ಡಿ.18) ಅಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಬ್ರಿಸ್ಬೇನ್ನಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದ ಬಳಿಕ ನಿವೃತ್ತಿ ಘೋಷಿಸಿದ್ದ ಅಶ್ವಿನ್ ಅಂದೇ ಭಾರತಕ್ಕೆ ಹಿಂತಿರುಗಿದ್ದರು. ಅದರಂತೆ ಗುರುವಾರ ಚೆನ್ನೈಗೆ ಬಂದಿಳಿದ ರವಿಚಂದ್ರನ್ ಅಶ್ವಿನ್ಗೆ ಅದ್ಧೂರಿ ಸ್ವಾಗತ ನೀಡಲಾಗಿದೆ.
ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಆಗಮಿಸಿದ ಅಶ್ವಿನ್ ಅವರನ್ನು ಕುಟುಂಬಸ್ಥರು ಬರ ಮಾಡಿಕೊಂಡರು. ಆ ಬಳಿಕ ಮನೆಗೆ ತೆರಳಿದ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಗಿದೆ. ಡೋಲ್-ಬಜಾನದೊಂದಿಗೆ ಅಶ್ವಿನ್ ಅವರನ್ನು ಸ್ವಾಗತಿಸಿದ ಆಪ್ತರು ಮಾಲಾರ್ಪಣೆ ಮಾಡುವ ಮೂಲಕ ಶುಭಕೋರಿದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ರವಿಚಂದ್ರನ್ ಅಶ್ವಿನ್, ನಾನು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮಾತ್ರ ವಿದಾಯ ಹೇಳಿದ್ದೇನೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲಿದ್ದೇನೆ. ಎಲ್ಲಿಯವರೆಗೆ ಸಾಧ್ಯವೊ ಅಲ್ಲಿಯ ತನಕ ಐಪಿಎಲ್ ಆಡಲಿದ್ದೇನೆ ಎಂದು ತಿಳಿಸಿದ್ದಾರೆ.
ಇನ್ನು ದಿಢೀರ್ ನಿವೃತ್ತಿ ನಿರ್ಧಾರ ಬಗ್ಗೆ ಸ್ಪಷ್ಟನೆ ನೀಡಿದ ಅಶ್ವಿನ್, ನಿವೃತ್ತಿ ವಿಚಾರವು ಕಳೆದ ಕೆಲ ಸಮಯದಿಂದ ತಲೆಯಲ್ಲಿತ್ತು. ಕಳೆದ ನಾಲ್ಕು ದಿನಗಳಿಂದ ನಿವೃತ್ತಿ ಬಗ್ಗೆ ಯೋಚಿಸಿದ್ದೆ. ಹೀಗಾಗಿ 5ನೇ ದಿನ ನಿವೃತ್ತಿಯನ್ನು ಘೋಷಿಸಿದ್ದೇನೆ. ಇದೊಂದು ಭಾವನಾತ್ಮಕವಾದ ವಿಷಯ. ಇದೀಗ ನಿರ್ಧಾರ ಪ್ರಕಟಿಸಿರುವುದು ದೊಡ್ಡ ಸಮಾಧಾನ ಎಂದರು.