ಲೆಗ್ಸ್ಪಿನ್ನರ್ ಯುಜುವೇಂದ್ರ ಚಹಲ್ ಕರಾರುವಾಕ್ ಬೌಲಿಂಗ್ ಪ್ರದರ್ಶನ ನೀಡಿ ತಮ್ಮ 4 ಒವರ್ಗಳಲ್ಲಿ ಕೇವಲ 18 ರನ್ ನೀಡಿ 3 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ವೇಗದ ಬೌಲರ್ಗಳಾದ ಶಿವಮ್ ದುಬೆ ಮತ್ತು ನವದೀಪ್ ಸೈನಿ ತಲಾ ವಿಕೆಟ್ 2 ಪಡೆದರು.
ಟಾಸ್ ಸೋತು ಬ್ಯಾಟಿಂಗ್ಗೆ ಕಳಿಸಲ್ಪಟ್ಟ ಆರ್ಸಿಬಿ ತಂಡಕ್ಕೆ ದೇವದತ್ ಪಡಿಕ್ಕಲ್ ತನ್ನ ಮೇಲಿಟ್ಟಿದ್ದ ನಿರೀಕ್ಷೆಯನ್ನು ಹುಸಿ ಹೋಗಲು ಬಿಡದೆ ಐಪಿಎಲ್ನ ಪಾದಾರ್ಪಣೆಯ ಪಂದ್ಯದಲ್ಲೇ ಅರ್ಧಶತಕ ಬಾರಿಸಿದರು. ಆರನ್ ಫಿಂಚ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಪಡಿಕ್ಕಲ್ ಮೊದಲ ವಿಕೆಟ್ಗೆ 11 ಓವರ್ಗಳಲ್ಲಿ 90 ರನ್ ಸೇರಿಸಿದ್ದೂ ಅಲ್ಲದೆ 42 ಎಸೆತಗಳಲ್ಲಿ 56 (8X4) ರನ್ ಚಚ್ಚಿದರು. ಫಿಂಚ್ 29ರನ್ (27, 1X4 2X6) ಗಳಿಸಿ ಔಟಾದರು.
ನಾಯಕ ವಿರಾಟ್ ಕೊಹ್ಲಿ ವಿಫಲರಾದರೂ, ಆರ್ಸಿಬಿಯ ನೆಚ್ಚಿನ ಬ್ಯಾಟ್ಸ್ಮನ್ ಎಬಿ ಡಿ ವಿಲಿಯರ್ಸ್ ಕೇವಲ 30 ಎಸೆತಗಳಲ್ಲಿ 51ರನ್ (4X4 2X6) ಬಾರಿಸಿ ರನೌಟ್ ಆದರು. ಹೈದರಾಬಾದ್ ಪರ ವಿಜಯ್ ಶಂಕರ್, ಟಿ ನಟರಾಜನ್ ಮತ್ತು ಅಭಿಷೇಕ ಶರ್ಮ ತಲಾ ಒಂದು ವಿಕೆಟ್ ಪಡೆದರು.
ಹೈದರಾಬಾದ್ ಪರ ಓಪನರ್ ಜಾನಿ ಬೇರ್ಸ್ಟೋ 43 ಎಸೆತಗಳಲ್ಲಿ 61ರನ್ (6X4 2X6) ಬಾರಿಸಿದರು. ಕರ್ನಾಟಕದವರಾದ ಮನೀಶ್ ಪಾಂಡೆ 33 ಎಸೆತಗಳಲ್ಲಿ 34 (3X4 1X6) ಬಾರಿಸಿದರು. ಚಹಲ್ ಪಂದ್ಯದ ವ್ಯಕ್ತಿ ಪ್ರಶಸ್ತಿಗೆ ಪಾತ್ರರಾದರು.