ಮೊದಲ ಭೇಟಿಯಲ್ಲಿ ಸಚಿನ್ ಕಾಲಿಗೆ ಬಿದ್ದಿದ್ದ ಕೊಹ್ಲಿ; ಯುವಿ, ಬಜ್ಜಿ, ಪಠಾಣ್ ಕುಚೇಷ್ಟೆಗೆ ಬಲಿಯಾಗಿದ್ದ ವಿರಾಟ್

|

Updated on: May 17, 2021 | 3:47 PM

ಈ ಹಿರಿಯ ಆಟಗಾರರ ಕುಚೇಷ್ಟೆ ಅರ್ಥ ಮಾಡಿಕೊಳ್ಳದ ಕೊಹ್ಲಿ, ಡ್ರೆಸ್ಸಿಂಗ್ ಕೋಣೆಯಲ್ಲಿ ಸಚಿನ್ ಅವರನ್ನು ನೋಡಿದ ಕೂಡಲೇ ಅವರ ಪಾದಕ್ಕೆ ಎರಗಿದ್ದರಂತೆ.

ಮೊದಲ ಭೇಟಿಯಲ್ಲಿ ಸಚಿನ್ ಕಾಲಿಗೆ ಬಿದ್ದಿದ್ದ ಕೊಹ್ಲಿ; ಯುವಿ, ಬಜ್ಜಿ, ಪಠಾಣ್ ಕುಚೇಷ್ಟೆಗೆ ಬಲಿಯಾಗಿದ್ದ ವಿರಾಟ್
ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್
Follow us on

ರನ್ ಮಷಿನ್ ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಅವರನ್ನು ತಮ್ಮ ಸ್ಫೂರ್ತಿ ಎಂದು ಯಾವಾಗಲೂ ಹೇಳುತ್ತಿರುತ್ತಾರೆ. ಸಚಿನ್ ಆಟವನ್ನು ನೋಡಿದ ನಂತರವೇ ಕೊಹ್ಲಿ ಕ್ರಿಕೆಟ್ ಆಡಲು ನಿರ್ಧರಿಸಿದ್ದರು ಎಂಬ ವಿಷಯವನ್ನು ಬಹಿರಂಗಪಡಿಸಿದ್ದರು. 2008 ರಲ್ಲಿ ಚೊಚ್ಚಲ ಪಂದ್ಯದ ನಂತರ, ವಿರಾಟ್ ಅವರ ವೃತ್ತಿಜೀವನವು ಮುಂದುವರೆದಂತೆ, ಅವರು ಸಚಿನ್ ದಾಖಲೆಗಳನ್ನು ಒಂದರ ಮೇಲೆ ಒಂದಂತೆ ಮುರಿಯುತ್ತಿದ್ದಾರೆ. ಹೀಗಾಗಿ ಕ್ರಿಕೆಟ್ ಪಂಡಿತರು ಮತ್ತು ಅಭಿಮಾನಿಗಳು ಕೊಹ್ಲಿಯನ್ನು ಸಚಿನ್ ತೆಂಡೂಲ್ಕರ್ ಅವರೊಂದಿಗೆ ಹೋಲಿಸಲು ಪ್ರಾರಂಭಿಸಿದ್ದಾರೆ, ಆದರೆ ಕೊಹ್ಲಿ ಯಾವಾಗಲೂ ಮಾಸ್ಟರ್ ಬ್ಲಾಸ್ಟರ್ ಅವರನ್ನು ಎಲ್ಲರಿಗಿಂತಲೂ ಅತ್ಯುತ್ತಮರೆಂದು ಪರಿಗಣಿಸಿದ್ದಾರೆ. ಸಚಿನ್ ಕೂಡ ಕೊಹ್ಲಿಯನ್ನು ತುಂಬಾ ಇಷ್ಟಪಡುತ್ತಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ, ಸಚಿನ್ ಅವರು ಕೊಹ್ಲಿಯೊಂದಿಗಿನ ತಮ್ಮ ಮೊದಲ ಭೇಟಿಯನ್ನು ನೆನಪಿಸಿಕೊಂಡಿದ್ದಾರೆ. ಜೊತೆಗೆ ಹಾಲಿ ಭಾರತದ ನಾಯಕ ಮಾಡಿದ ಕೆಲಸದಿಂದ ಸಚಿನ್ ಆಶ್ಚರ್ಯಕ್ಕೊಳಗಾಗಿದ್ದನ್ನು ಬಿಚ್ಚಿಟ್ಟಿದ್ದಾರೆ.

ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಮೊದಲ ಬಾರಿಗೆ ಭೇಟಿಯಾದಾಗ, ಸಚಿನ್ ಕಾಲಿಗೆ ಬಿದ್ದು ನಮಸ್ಕರಿಸಿದ್ದರಂತೆ. ಇದನ್ನು ನೋಡಿ ಸಚಿನ್ ಅಂದು ಆಶ್ಚರ್ಯಚಕಿತರಾದರು. ಕೊಹ್ಲಿ ಹೀಗೆ ಮಾಡುವಲ್ಲಿನ ಹಿಂದಿನ ಕಾರಣವು ತುಂಬಾ ಆಸಕ್ತಿದಾಯಕವಾಗಿದೆ. ವಿರಾಟ್ ಕೊಹ್ಲಿ ಕೂಡ ಈ ಬಗ್ಗೆ ಹೇಳಿಕೊಂಡಿದ್ದಾರೆ, ಆದರೆ ಸಚಿನ್ ಮತ್ತೊಮ್ಮೆ 13 ವರ್ಷಗಳ ಹಿಂದಿನ ಕಥೆಯನ್ನು ನೆನಪಿಸಿಕೊಂಡಿದ್ದಾರೆ.

ಹಿರಿಯ ಆಟಗಾರರ ಚೇಷ್ಟೆಗೆ ವಿರಾಟ್ ಬಲಿ
2008 ರಲ್ಲಿ ವಿರಾಟ್ ಕೊಹ್ಲಿ ಟೀಮ್ ಇಂಡಿಯಾಕ್ಕೆ ಆಯ್ಕೆಯಾದಾಗ ಅವರು ತುಂಬಾ ಸಂತೋಷಪಟ್ಟರು. ಜೊತೆಗೆ ಡ್ರೆಸ್ಸಿಂಗ್ ಕೋಣೆಯಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಯಾವಾಗ ಭೇಟಿಯಾಗುತ್ತೇನೆ ಎಂದು ಕಾಯುತ್ತಿದ್ದರಂತೆ. ಆ ವೇಳೆ ಈ ವಿಷಯ ತಿಳಿದ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್ ಮತ್ತು ಮುನಾಫ್ ಪಟೇಲ್ ಸೇರಿ ಕೊಹ್ಲಿಯ ಕಾಲು ಎಳೆಯಲು ಯೋಜನೆ ಒಂದನ್ನು ರೂಪಿಸಿದ್ದರು. ಅದರ ಪ್ರಕಾರ ನಾಲ್ವರು ಒಟ್ಟಾಗಿ ಸೇರಿ ವಿರಾಟ್‌ಗೆ, ಡ್ರೆಸ್ಸಿಂಗ್ ಕೋಣೆಯಲ್ಲಿ ಸಚಿನ್ ಪಾಜಿಯನ್ನು ನೋಡಿದ ಕೂಡಲೇ ನೀವು ಅವರ ಪಾದಕ್ಕೆ ಬಿದ್ದು ಆರ್ಶೀವಾದ ಪಡೆಯಬೇಕು. ಅಲ್ಲದೆ ಮೊದಲ ಬಾರಿಗೆ ತಂಡವನ್ನು ಸೇರಿದ ಎಲ್ಲಾ ಆಟಗಾರರು ಸಚಿನ್ ತೆಂಡೂಲ್ಕರ್ ಅವರಿಂದ ಇಂತಹ ಆಶೀರ್ವಾದವನ್ನು ಪಡೆಯುತ್ತಾರೆ. ಇದು ನಮ್ಮ ಸಂಪ್ರದಾಯ. ಎಲ್ಲರೂ ಇದನ್ನು ಮಾಡಿದ್ದಾರೆ. ಈಗ ಅದು ನಿಮ್ಮ ಸರದಿ ಎಂದಿದ್ದರಂತೆ.

ಗಾಬರಿಯಾದ ಸಚಿನ್
ಈ ಹಿರಿಯ ಆಟಗಾರರ ಕುಚೇಷ್ಟೆ ಅರ್ಥ ಮಾಡಿಕೊಳ್ಳದ ಕೊಹ್ಲಿ, ಡ್ರೆಸ್ಸಿಂಗ್ ಕೋಣೆಯಲ್ಲಿ ಸಚಿನ್ ಅವರನ್ನು ನೋಡಿದ ಕೂಡಲೇ ಅವರ ಪಾದಕ್ಕೆ ಎರಗಿದ್ದರಂತೆ. ಆದರೆ ಇವರ ಕುತಂತ್ರದ ಬಗ್ಗೆ ಅರಿವೆ ಇಲ್ಲದ ಸಚಿನ್​ಗೆ ವಿರಾಟ್ ಮಾಡಿದ ಕೆಲಸದಿಂದ ಬಹಳ ಆಶ್ಚರ್ಯಗೊಂಡಿದ್ದರಂತೆ. ಇದನ್ನು ಕುರಿತು ಮಾತಾನಾಡಿದ ಸಚಿನ್, ಅಂದು ಕೊಹ್ಲಿ ನನ್ನ ಕಾಲುಗಳಲ್ಲಿ ಬಿದ್ದಾಗ ನನಗೆ ಆಘಾತವಾಯಿತು. ಅಲ್ಲದೆ ಇಲ್ಲಿ ಏನಾಗುತ್ತಿದೆ ಎಂದು ನನಗೆ ತಿಳಿಯಲಿಲ್ಲ. ಹೀಗಾಗಿ ಕೂಡಲೇ ನಾನು ನೀವು ಏನು ಮಾಡುತ್ತಿದ್ದೀರಿ ಎಂದು ಕೊಹ್ಲಿನ್ನು ಕೇಳಿದೆ. ಕೊಹ್ಲಿ ಹೇಳಿದ್ದೆಲ್ಲವನ್ನು ಕೇಳಿಸಿಕೊಂಡ ನಾನು ಇದರ ಅಗತ್ಯವಿಲ್ಲ ಮತ್ತು ಇಂತಹ ಘಟನೆಗಳು ಎಂದು ನಡೆದಿಲ್ಲ ಎಂದರಂತೆ. ಆದರೆ ಈ ಸಂಪೂರ್ಣ ಘಟನೆಗೆ ಚಿತ್ರಕತೆ ಬರೆದಿದ್ದ ಆ ನಾಲ್ವರು ಹಿರಿಯ ಆಟಗಾರರು ಕೊಹ್ಲಿ ಮಾಡಿದ್ದನ್ನು ನೋಡಿ ಬಿದ್ದು ಬಿದ್ದು ನಕ್ಕಿದ್ದರಂತೆ.

ಇದನ್ನೂ ಓದಿ:ರಾತ್ರಿ ನಿದ್ದೆ ಬರುತ್ತಿರಲಿಲ್ಲ, 24 ವರ್ಷಗಳ ಕ್ರಿಕೆಟ್​ನಲ್ಲಿ ಭಾಗಶಃ ಜೀವನವನ್ನು ಒತ್ತಡದಲ್ಲೇ ಕಳೆದೆ: ಸಚಿನ್ ತೆಂಡೂಲ್ಕರ್