Orleans Masters: ಎರಡು ವರ್ಷಗಳ ನಂತರ ಮೇಜರ್ ಟೂರ್ನಿಯೊಂದರ ಉಪಾಂತ್ಯ ಪ್ರವೇಸಿರುವ ಸೈನಾ ನೆಹ್ವಾಲ್

|

Updated on: Mar 26, 2021 | 11:07 PM

ಓಲಿಯನ್ಸ್: ಬಹಳ ದಿನಗಳಿಂದ ಯಾವುದೇ ಯಾವುದೇ ಪ್ರಮುಖ ಟೂರ್ನಿ ಗೆದ್ದಿರದ ಭಾರತದ ಅಗ್ರಮಾನ್ಯ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಶುಕ್ರವಾರದಂದು ಓಲಿಯನ್ಸ್ ಮಾಸ್ಟರ್ಸ್ ಟೂರ್ನಿಯಲ್ಲಿ ಅಮೇರಿಕಾದ ಐರಿಸ್ ವ್ಯಾಂಗ್ ಅವರನ್ನು ರೋಚಕ ಮೂರು ಗೇಮ್​ಗಳ ಹಣಾಹಣಿಯ ನಂತರ ಸೋಲಿಸಿ ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್ ಹಂತವನ್ನು ತಲುಪಿದ್ದಾರೆ. ಪ್ರಸ್ತುತವಾಗಿ ವಿಶ್ವದ 20 ನೇ ಶ್ರೇಯಾಂಕದ ಆಟಗಾರ್ತಿಯಾಗಿರುವ ಸೈನಾ ಕಳೆದೆರಡು ವರ್ಷಗಳಲ್ಲಿ ಮೊದಲ ಬಾರಿಗೆ ಟೂರ್ನಿಯೊಂದರ ಸೆಮಿಫೈನಲ್ ಹಂತ ಪ್ರವೇಶಿದ್ದಾರೆ. ಸಾಧ್ಯವಾದಷ್ಟು ರ‍್ಯಾಕಿಂಗ್ ಪಾಯಿಂಟ್​ಗಳನ್ನು ಶೇಖರಿಸಿ ಈ ವರ್ಷ ಟೋಕಕಿಯೊದಲ್ಲಿ […]

Orleans Masters: ಎರಡು ವರ್ಷಗಳ ನಂತರ ಮೇಜರ್ ಟೂರ್ನಿಯೊಂದರ ಉಪಾಂತ್ಯ ಪ್ರವೇಸಿರುವ ಸೈನಾ ನೆಹ್ವಾಲ್
ಸೈನಾ ನೆಹ್ವಾಲ್
Follow us on

ಓಲಿಯನ್ಸ್: ಬಹಳ ದಿನಗಳಿಂದ ಯಾವುದೇ ಯಾವುದೇ ಪ್ರಮುಖ ಟೂರ್ನಿ ಗೆದ್ದಿರದ ಭಾರತದ ಅಗ್ರಮಾನ್ಯ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಶುಕ್ರವಾರದಂದು ಓಲಿಯನ್ಸ್ ಮಾಸ್ಟರ್ಸ್ ಟೂರ್ನಿಯಲ್ಲಿ ಅಮೇರಿಕಾದ ಐರಿಸ್ ವ್ಯಾಂಗ್ ಅವರನ್ನು ರೋಚಕ ಮೂರು ಗೇಮ್​ಗಳ ಹಣಾಹಣಿಯ ನಂತರ ಸೋಲಿಸಿ ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್ ಹಂತವನ್ನು ತಲುಪಿದ್ದಾರೆ.

ಪ್ರಸ್ತುತವಾಗಿ ವಿಶ್ವದ 20 ನೇ ಶ್ರೇಯಾಂಕದ ಆಟಗಾರ್ತಿಯಾಗಿರುವ ಸೈನಾ ಕಳೆದೆರಡು ವರ್ಷಗಳಲ್ಲಿ ಮೊದಲ ಬಾರಿಗೆ ಟೂರ್ನಿಯೊಂದರ ಸೆಮಿಫೈನಲ್ ಹಂತ ಪ್ರವೇಶಿದ್ದಾರೆ. ಸಾಧ್ಯವಾದಷ್ಟು ರ‍್ಯಾಕಿಂಗ್ ಪಾಯಿಂಟ್​ಗಳನ್ನು ಶೇಖರಿಸಿ ಈ ವರ್ಷ ಟೋಕಕಿಯೊದಲ್ಲಿ ನಡೆಯಲಿರುವ ಒಲಂಪಿಕ್ಸ್​ಗೆ ಅರ್ಹತೆ ಪಡೆಯುವ ತವಕದಲ್ಲಿ ಸೈನಾ ಇದ್ದಾರೆ. ಅರ್ಹತೆ ಗಿಟ್ಟಿಸಿದ್ದಲ್ಲಿ ಅವರು 4ನೇ ಬಾರಿ ಒಲಂಪಿಕ್ಸ್​ನಲ್ಲಿ ಭಾರತವನ್ನು ಪ್ರತಿನಿಧಿಸಿದಂತಾಗಲಿದೆ. ಸೈನಾ ಕಡೆಯ ಬಾರಿಗೆ ಸೆಮಿಫೈನಲ್ ಹಂತ ಪ್ರವೇಶಿಸಿದ್ದು 2019ರ ಇಂಡೋನೇಶ್ಯಾ ಮಾಸ್ಟರ್ಸ್ 500 ಟೂರ್ನಿಯಲ್ಲಿ. ಅಂತಿಮವಾಗಿ ಈ ಪ್ರಶಸ್ತಿಯನ್ನು ಅವರು ಗೆದ್ದಿದ್ದರು.

ಗಾಯದಿಂದಾಗಿ ಕಳೆದ ವಾರ ನಡೆದ ಆಲ್​ ಇಂಗ್ಲೆಂಡ್​ ಬ್ಯಾಡ್ಮಿಂಟನ್ ಚಾಂಪಿಯನ್​ಶಿಪ್​ನಿಂದ ಹಿಂದೆ ಸರಿದಿದ್ದ ನಾಲ್ಕನೇ ಸೀಡ್​ ಸೈನಾ ಅವರು ವಿಶ್ವದ 36 ನೇ ಶ್ರೇಯಾಂಕದ ಆಟಗಾರ್ತಿ ವ್ಯಾಂಗ್ ಅವರನ್ನು 21-19, 17-21 ಮತ್ತು 21-19 ಗೇಮ್​ಗಳಿಂದ ಪರಾಭವಗೊಳಿಸಲು ಸರಿಯಾಗಿ ಒಂದು ಗಂಟೆ ಕಾಲ ನಡೆದ ಪಂದ್ಯದಲ್ಲಿ ತಮ್ಮೆಲ್ಲ ಅನುಭವವನ್ನು ಉಪಯೋಗಿಸಬೇಕಾಯಿತು.

ಲಂಡನ್ ಒಲಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದಿದ್ದ ಸೈನಾ ಉಪಾಂತ್ಯದಲ್ಲಿ ಡೆನ್ಮಾರ್ಕಿನ ಲಿನ್ ಕ್ರಿಸ್ಟೋಫರ್ಸನ್ ಇಲ್ಲವೇ ತಮ್ಮ ದೇಶದವರೇ ಆಗಿರುವ ಇರಾ ಶರ್ಮ ಅವರನ್ನು ಎದುರಿಸಲಿದ್ದಾರೆ. ಈ ಟೂರ್ನಿಯು ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್ನಿನ ಪರಿಷ್ಕೃತ ಅರ್ಹತಾ ಟೂರ್ನಿಗಳ ಭಾಗವಾಗಿದೆ.

ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಕಾಮನ್​ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತ ಅಶ್ವಿನಿ ಪೊನ್ನಪ್ಪ ಮತ್ತು ಎನ್ ಸಿಕ್ಕಿ ರೆಡ್ಡಿ ಅವರ ಜೋಡಿ ಸಹ ಸೆಮಿಫೈನಲ್ ಹಂತ ಪ್ರವೇಶಿಸಿದ್ದು ಕ್ವಾರ್ಟರ್​ ಫೈನಲ್​ನಲ್ಲಿ ಅವರು ಇಂಗ್ಲೆಂಡ್​ನ ಮೂರನೇ ಸೀಡ್ ಜೋಡಿ ಲೊ ಬರ್ಚ್ ಮತ್ತು ಲಾರನ್ ಸ್ಮಿತ್ ಅವರನ್ನು ಸೋಲಿಸಿ ಅನಿರೀಕ್ಷಿತ ಫಲಿತಾಂಶ ಒದಗಿಸಿದರು.

ವಿಶ್ವದ 25 ನೇ ಶ್ರೇಯಾಂಕದ ಭಾರತೀಯ ಜೋಡಿಯು ಸೆಮಿಫೈನಲ್​ನಲ್ಲಿ ಥೈಲ್ಯಾಂಡಿನ ಜೊಂಗ್​ಕೊಲ್ಫಾನ್ ಕಿಟಿತರಾಕುಲ್ ಮತ್ತು ರವಿಂಡಾ ಪ್ರಜೊಂಗ್​ಝಾಯಿ ಜೋಡಿಯನ್ನು ಎದುರಿಸಲಿದೆ.

ಪರುಷರ ವಿಭಾಗದಲ್ಲಿ ಭಾರತದ ಕೃಷ್ಣ ಪ್ರಸಾದ್ ಗರಗ ಮತ್ತು ವಿಷ್ಣು ವರ್ಧನ್ ಗೌಡ್ ಪಂಜಲ ಅವರ ಜೋಡಿಯು ವಿಶ್ವದ 47 ನೇ ಶ್ರೇಯಾಂಕ ಹೊಂದಿರುವ ಪ್ರೆಂಚ್ ಜೋಡಿ ಕ್ರಿಸ್ಟೊ ಪೊಪೊವ್ ಮತ್ತು ತೊಮಾ ಜ್ಯೂನಿಯರ್ ಪೊಪೊವ್ ಅವರನ್ನು 21-17, 10-21 ಮತ್ತು 22-20 ಗೇಮ್​​ಗಳಿಂದ ಸೋಲಿಸಿ ಸೆಮಿಫೈನಲ್ ಹಂತವನ್ನು ಪ್ರವೇಶಿಸಿದರು.

ಅಷ್ಟೇನೂ ಹೆಸರು ಮಾಡಿರದ ಭಾರತದ ಈ ಜೋಡಿಯು ಶನಿವಾರದಂದು ನಡೆಯಲಿರುವ ಫೈನಲ್ಸ್ ಪ್ರವೇಶಿಸಬೇಕಾದರೆ ಇಂಗ್ಲೆಂಡಿನ ಕ್ಯಾಲಮ್ ಹೆಮ್ಮಿಂಗ್ ಮತ್ತು ಸ್ಟಿವೆನ್ ಸ್ಟಾಲ್​ವುಡ್​ ಅವರ ಜೋಡಿಯನ್ನು ಸೋಲಿಸಬೇಕಿದೆ.

ಇದನ್ನೂ ಓದಿ: ಜ್ವಾಲಾ ಗುಟ್ಟಾ ಜತೆ ಮದುವೆ ಯಾವಾಗ ಎನ್ನುವ ಗುಟ್ಟು ಬಿಟ್ಟುಕೊಟ್ಟ ವಿಷ್ಣು ವಿಶಾಲ್