ಗೆಲ್ಲಲು 217ರನ್ಗಳ ಬೃಹತ್ ಮೊತ್ತದ ಬೆನ್ನಟ್ಟಿದ ಚೆನೈ 200/6ಗಳಿಸುವಲ್ಲಿ ಮಾತ್ರಯಶ ಕಂಡಿತು. ಮೂರನೇ ಕ್ರಮಾಂಕದಲ್ಲಿ ಆಡಿದ ಫಫ್ ಡು ಪ್ಲೆಸ್ಸಿಸ್ ಅವರ ಶರವೇಗದ ಅರ್ಧ ಶತಕದ (72ರನ್, 37ಎಸೆತ 1X4 7X6) ಹೊರತಾಗಿಯೂ ಪಂದ್ಯವನ್ನು ಸೋತಿತು. ಶೇನ್ ವಾಟ್ಸನ್ 33 (21 1X4 4X6), ಮುರಳಿ ವಿಜಯ್ 21 (21 3X4), ಕೇದಾರ್ ಜಾಧವ್ 22 (16 3X4) ರನ್ಗಳ ಕಾಣಿಕೆ ನೀಡಿದರು. ಇನ್ನಿಂಗ್ಸ್ ಕೊನೆಯಲ್ಲಿ ನಾಯಕ ಎಮ್ ಎಸ್ ಧೋನಿ ಲಾಂಗ್ ಹ್ಯಾಂಡಲ್ ಉಪಯೋಗಿಸಿ ಅಜೇಯ 29 (17 3X6) ರನ್ ಬಾರಿಸಿದರಾದರೂ ಅದು ಸೋಲಿನ ಅಂತರವನ್ನು ಕಡಿಮೆ ಮಾಡುವಲ್ಲಿ ಮಾತ್ರ ನೆರವಾಯಿತು.
ರಾಜಸ್ತಾನದ ಪರ ತೆವಾಟಿಯಾ 37 ರನ್ ನೀಡಿ 3 ವಿಕೆಟ್ ಪಡೆದರೆ, ಜೊಫ್ರಾ ಆರ್ಚರ್, ಶ್ರೇಯಸ್ ಗೋಪಾಲ ಮತ್ತು ಟಾಮ್ ಕರನ್ ತಲಾ ಒಂದು ವಿಕೆಟ್ ಪಡೆದರು.
ಅಪಾರ ಪ್ರತಿಭಾವಂತನಾದರೂ ಸದಾ ರಾಷ್ಟ್ರೀಯ ಆಯ್ಕೆ ಸಮಿತಿಯ ಅವಕೃಪೆಗೊಳಗಾಗಿರುವ ಸಂಜು ಸ್ಯಾಮ್ಸನ್ ಇಂದು ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಬಗ್ಗೆ ಮತ್ತೊಂದು ಸ್ಟೇಟ್ಮೆಂಟ್ ಹೊರಡಿಸಿದರು. ಯುವ ಆಟಗಾರ ಯಶಸ್ವೀ ಜೈಸ್ವಾಲ್ ಔಟಾದ ನಂತರ ಕ್ರೀಸಿಗೆ ಆಗಮಿಸಿದ 25ರ ಪ್ರಾಯದ ಸ್ಯಾಮ್ಸನ್ ಕೇವಲ 19 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು. ಲೆಗ್ ಸ್ಪಿನ್ನರ್ ಪಿಯುಷ್ ಚಾವ್ಲಾ ಅವರ ಒಂದು ಓವರ್ನಲ್ಲಿ ಸ್ಯಾಮ್ಸನ್ ಮತ್ತು ಸ್ಮಿತ್ 28 ರನ್ಗಳನ್ನು ಚಚ್ಚಿದರು. ಬಿರುಗಾಳಿ ವೇಗದಲ್ಲಿ ಬ್ಯಾಟ್ ಮಾಡಿದ ಸ್ಯಾಮ್ಸನ್ 32 ಎಸೆತಗಳಲ್ಲಿ 74 ರನ್ ಬಾರಿಸಿ ಔಟಾಗುವ ಮುನ್ನ 9 ಬಾರಿ ಚೆಂಡನ್ನು ಬೌಂಡರಿ ಗೆರೆ ಮೇಲಿಂದ ಆಚೆ ಕಳಿಸಿದ್ದರು. ಅವರ ಇನ್ನಿಂಗ್ಸ್ನಲ್ಲಿದ್ದಿದ್ದ್ದು ಕೇವಲ ಒಂದು ಬೌಂಡರಿ ಮಾತ್ರ. ಸ್ಯಾಮ್ಸನ್ ಅಕ್ಷರಶಃ ಸಿಎಸ್ಕೆ ಬೌಲರ್ಗಳ ಮಾರಣ ಹೋಮ ನಡೆಸಿದರು.
ಸಿಎಸ್ಕೆ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಸ್ಯಾಮ್ ಕರನ್ 33 ರನ್ ನೀಡಿ 3 ವಿಕೆಟ್ ಪಡೆದರೆ, ದೀಪಕ್ ಚಹರ್, ಎನ್ಗಿಡಿ ಮತ್ತು ಚಾವ್ಲಾ ತಲಾ ಒಂದು ವಿಕೆಟ್ ಪಡೆದರು.