Satwiksairaj and Chirag Shetty: ದುಬೈನಲ್ಲಿ ನಡೆದ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿ ಇತಿಹಾಸ ಸೃಷ್ಟಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಮಲೇಷ್ಯಾದ ಓಂಗ್ ಯೂ ಸಿನ್ ಮತ್ತು ಟಿಯೊ ಇಯೊ ಯೀ ಜೋಡಿಯನ್ನು ಸೋಲಿಸಿ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮೊಟ್ಟ ಮೊದಲ ಚಿನ್ನದ ಪದಕ ತಂದುಕೊಟ್ಟ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಓಂಗ್ ಯೂ ಸಿನ್ ಮತ್ತು ಟಿಯೊ ಇಯೊ ಯೀ ಜೋಡಿ ವಿರುದ್ಧ ನಡೆದ ಫೈನಲ್ ಫೈಟ್ನಲ್ಲಿ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಭರ್ಜರಿ ಪ್ರದರ್ಶನ ನೀಡಿದ್ದರು. ಮೊದಲ ಗೇಮ್ ಅನ್ನು 16-21 ರಲ್ಲಿ ಕಳೆದುಕೊಂಡಿದ್ದ ಭಾರತೀಯ ಜೋಡಿ ಆ ಬಳಿಕ ಬಲಿಷ್ಠವಾಗಿ ಕಮ್ ಬ್ಯಾಕ್ ಮಾಡಿದರು. ಅಲ್ಲದೆ ಎರಡನೇ ಗೇಮ್ ಅನ್ನು 21-17 ಮತ್ತು ಮೂರನೇ ಗೇಮ್ ಅನ್ನು 21-19 ಅಂತರಲ್ಲಿ ಗೆದ್ದು ಇತಿಹಾಸ ಸೃಷ್ಟಿಸಿದರು.
ಭಾರತಕ್ಕೆ ಮೊದಲ ಚಿನ್ನದ ಪದಕ:
ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಡಬಲ್ಸ್ ವಿಭಾಗದಲ್ಲಿ ಭಾರತಕ್ಕೆ ಇದು ಮೊದಲ ಚಿನ್ನದ ಪದಕವಾಗಿದೆ. ಇದಕ್ಕೂ ಮುನ್ನ ದೀಪ್ ಘೋಸ್ ಮತ್ತು ರಾಮನ್ ಘೋಸ್ ಜೋಡಿ 1971ರಲ್ಲಿ ನಡೆದ ಈ ಟೂರ್ನಿಯಲ್ಲಿ ಸೆಮಿಫೈನಲ್‌ವರೆಗೆ ತಲುಪಿತ್ತು. ಆದರೆ, ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿ ಕಂಚಿನ ಪದಕಕ್ಕೆ ತೃಪ್ತಿಪಡಬೇಕಾಯಿತು.
ಇದಕ್ಕೂ ಮುನ್ನ 1965 ರಲ್ಲಿ, ಭಾರತದ ದಿನೇಶ್ ಖನ್ನಾ ಅವರು ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಸಿಂಗಲ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕವನ್ನು ಗೆದ್ದು ಕೊಟ್ಟಿದ್ದರು. ಆದಾಗ್ಯೂ, ಡಬಲ್ಸ್‌ನಲ್ಲಿ ಇದುವರೆಗೆ ಭಾರತದ ಯಾವುದೇ ಜೋಡಿ ಫೈನಲ್ಗೆ ತಲುಪಿರಲಿಲ್ಲ. ಇದೀಗ ಫೈನಲ್ ಪ್ರವೇಶಿಸಿದ ಮೊದಲ ಜೋಡಿಯಾಗಿ ಸಾತ್ವಿಕ್ ಮತ್ತು ಚಿರಾಗ್ ಪದಕದೊಂದಿಗೆ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ:
ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿ ಇತಿಹಾಸ ಸೃಷ್ಟಿಸುತ್ತಿದ್ದಂತೆ, ಪ್ರಧಾನಿ ಮೋಡಿ ಇಬ್ಬರು ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
Proud of @satwiksairaj and @Shettychirag04 for scripting history by becoming the first Indian Men’s Doubles pair to win the Badminton Asia Championships Title. Congratulations to them and wishing them the very best for their future endeavours. pic.twitter.com/i0mES2FuIL
— Narendra Modi (@narendramodi) April 30, 2023
ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಪುರುಷರ ಡಬಲ್ಸ್ ಜೋಡಿಗೆ ಅಭಿನಂದನೆಗಳು. ನಿಮ್ಮ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ ಎಂದು ಪ್ರಧಾನಿ ಟ್ವಿಟರ್ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
Published On - 9:37 pm, Sun, 30 April 23