IND vs ENG: ಭಾರತದ ಸೋಲಿಗೆ ಶುಭ್​ಮನ್ ಗಿಲ್ ದೂರಿದ್ದು ಯಾರನ್ನ?

India vs England 3rd Test: ಭಾರತದ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು ಜಯ ಸಾಧಿಸಿದೆ. ದ್ವಿತೀಯ ಇನಿಂಗ್ಸ್​ನಲ್ಲಿ ಇಂಗ್ಲೆಂಡ್ ನೀಡಿದ 193 ರನ್​ಗಳ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಕೇವಲ 170 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಆಂಗ್ಲರ ಪಡೆ 22 ರನ್​ಗಳ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

IND vs ENG: ಭಾರತದ ಸೋಲಿಗೆ ಶುಭ್​ಮನ್ ಗಿಲ್ ದೂರಿದ್ದು ಯಾರನ್ನ?
Shubman Gill

Updated on: Jul 15, 2025 | 8:53 AM

ಲಾರ್ಡ್ಸ್‌ನಲ್ಲಿ ನಡೆದ ರೋಚಕ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಜಯಭೇರಿ ಬಾರಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಪ್ರಥಮ ಇನಿಂಗ್ಸ್​ನಲ್ಲಿ 387 ರನ್​ಗಳಿಸಿದರೆ, ಟೀಮ್ ಇಂಡಿಯಾ ಕೂಡ 387 ರನ್​ಗಳೊಂದಿಗೆ ಮೊದಲ ಇನಿಂಗ್ಸ್ ಅಂತ್ಯಗೊಳಿಸಿತ್ತು. ಇನ್ನು ದ್ವಿತೀಯ ಇನಿಂಗ್ಸ್​ನಲ್ಲಿ ಇಂಗ್ಲೆಂಡ್ ಕಲೆಹಾಕಿದ್ದು 192 ರನ್​ಗಳು ಮಾತ್ರ. ಈ ಗುರಿಯನ್ನು ಬೆನ್ನತ್ತಿದ ಭಾರತ ತಂಡವು 170 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಆಂಗ್ಲರ ಪಡೆ 22 ರನ್​ಗಳ ಗೆಲುವು ದಾಖಲಿಸಿತು.

ಈ ಸೋಲಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ಶುಭ್​ಮನ್ ಗಿಲ್, ಇಡೀ ತಂಡದ ಪ್ರಯತ್ನವನ್ನು ಶ್ಲಾಘಿಸಿದರು.  ಐದು ದಿನಗಳ ಕಾಲ ಕಠಿಣ ಕ್ರಿಕೆಟ್ ಆಡಿದ ನಂತರ, ಪಂದ್ಯವು ಕೊನೆಯ ಸೆಷನ್ ಮತ್ತು ಕೊನೆಯ ವಿಕೆಟ್ ವರೆಗೆ ಸಾಗಿದ್ದು ಗ್ರೇಟ್. ತಂಡದ ಪ್ರಯತ್ನಗಳ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಇದಾಗ್ಯೂ ಈ ಗುರಿಯನ್ನು ಬೆನ್ನಟ್ಟುವ ವಿಶ್ವಾಸ ನನಗಿತ್ತು. ಆದರೆ ನಮ್ಮ ಅಗ್ರ ಕ್ರಮಾಂಕದ ಬ್ಯಾಟರ್​ಗಳ ವೈಫಲ್ಯವು ಟೀಮ್ ಇಂಡಿಯಾ ಸೋಲಿಗೆ ಕಾರಣವಾಯಿತು ಎಂದರು.

ಒಂದು ವೇಳೆ ನಮ್ಮ ಅಗ್ರ ಕ್ರಮಾಂಕದ ಬ್ಯಾಟರ್​ಗಳು ಕನಿಷ್ಠ 50 ರನ್​ಗಳ ಜೊತೆಯಾಟವಾಡಿದ್ದರೆ, ಚೇಸಿಂಗ್ ತುಂಬಾ ಸುಲಭವಾಗುತ್ತಿತ್ತು. ಆದರೆ ಟಾಪ್ ಆರ್ಡರ್​​ಗಳ ವೈಫಲ್ಯದಿಂದಾಗಿ ಗುರಿ ತಲುಪಲು ವಿಫಲವಾದೆವು. ಇದಾಗ್ಯೂ ಅಂತಿಮ ಹಂತದಲ್ಲಿ ರವೀಂದ್ರ ಜಡೇಜಾ ಅವರ ಆಟದಿಂದ ನಾವು ಪಂದ್ಯ ಗೆಲ್ಲುವ ನಿರೀಕ್ಷೆಯಲ್ಲಿದ್ದೆವು.  ಆದರೆ ನಮ್ಮ ಕೊನೆಯ ಎರಡು ವಿಕೆಟ್​ಗಳು ಬೇಗನೆ ಬಿದ್ದವು.

ಈ ಸೋಲಿನ ಹೊರತಾಗಿಯೂ ತಂಡದ ಪ್ರದರ್ಶನದ ಬಗ್ಗೆ ಹೆಮ್ಮೆ ಇದೆ. ಅಲ್ಲದೆ ಸರಣಿಯ ಉಳಿದ ಪಂದ್ಯಗಳಲ್ಲಿ ಜಯ ಸಾಧಿಸುವ ವಿಶ್ವಾಸವಿದೆ ಎಂದು ಶುಭ್​ಮನ್ ಗಿಲ್ ಹೇಳಿದ್ದಾರೆ. ಅದರಲ್ಲೂ ಮ್ಯಾಂಚೆಸ್ಟರ್​ನಲ್ಲಿ ನಡೆಯಲಿರುವ 4ನೇ ಟೆಸ್ಟ್ ಪಂದ್ಯದಲ್ಲಿ ಗೆಲ್ಲುವ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿರುವ ಗಿಲ್, ಈ ಸರಣಿಯನ್ನು ನಾವು ಕೊನೆಯ ಪಂದ್ಯದತ್ತ ಕೊಂಡೊಯ್ಯಲಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ವಿಶ್ವ ದಾಖಲೆ… ಮುಂಬೈ ಇಂಡಿಯನ್ಸ್​ ಮುಡಿಗೆ 13ನೇ ಟ್ರೋಫಿ

ಸದ್ಯ 5 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 2 ಮ್ಯಾಚ್​ಗಳಲ್ಲಿ ಜಯ ಸಾಧಿಸಿದರೆ, ಟೀಮ್ ಇಂಡಿಯಾ ಒಂದು ಪಂದ್ಯವನ್ನು ಗೆದ್ದುಕೊಂಡಿದೆ. ಇದೀಗ ಸರಣಿಯಲ್ಲಿ ಇಂಗ್ಲೆಂಡ್ ತಂಡವು 2-1 ಅಂತರದಿಂದ ಮುನ್ನಡೆ ಸಾಧಿಸಿದ್ದು, ಸರಣಿ ಗೆಲ್ಲುವ ಆಸೆಯನ್ನು ಜೀವಂತವರಿಸಿಕೊಳ್ಳಬೇಕಿದ್ದರೆ ಟೀಮ್ ಇಂಡಿಯಾ ತನ್ನ ಮುಂದಿನ ಪಂದ್ಯದಲ್ಲಿ ಜಯಗಳಿಸಲೇಬೇಕು. ಅದರಂತೆ ಮ್ಯಾಂಚೆಸ್ಟರ್​​ ಟೆಸ್ಟ್​ನಲ್ಲಿ ಭಾರತ ತಂಡ ಆತಿಥೇಯರಿಗೆ 2ನೇ ಸೋಲುಣಿಸಲಿದ್ದಾರಾ ಕಾದು ನೋಡಬೇಕಿದೆ.