ಕೊರೊನಾ ವೈರಸ್ ದೇಶದ ಎಲ್ಲಾ ವಲಯಗಳ ಮೇಲೆ ದೊಡ್ಡ ಹೊಡೆತ ನೀಡಿದೆ. ಅವುಗಳಲ್ಲಿ ಕ್ರೀಡಾ ವಿಭಾಗವೂ ಒಂದಾಗಿದೆ. ಅದರಲ್ಲಿ ದೇಶಿ ಕ್ರಿಕೆಟ್ ವಲಯ ತುಂಬಾ ನಷ್ಟಕ್ಕೊಳಗಾಗಿದೆ. ಸಾಂಕ್ರಾಮಿಕ ರೋಗದಿಂದಾಗಿ, ರಣಜಿ ಟ್ರೋಫಿಯನ್ನು ಈ ವರ್ಷ ಭಾರತದಲ್ಲಿ ನಡೆಸಲು ಸಾಧ್ಯವಾಗಲಿಲ್ಲ. ಅಲ್ಲದೆ ಕಿರಿಯ ಮಟ್ಟದ ಪಂದ್ಯಾವಳಿಗಳನ್ನು ನಡೆಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ನೂರಾರು ಕ್ರಿಕೆಟಿಗರು ಆರ್ಥಿಕ ನಷ್ಟದಿಂದ ಬಳಲುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಂತಹವರ ನೆರವಿಗೆ ಬಂದಿದ್ದಾರೆ.
ದೇಶೀಯ ಕ್ರಿಕೆಟಿಗರಿಗೆ ಸೂಕ್ತವಾದ ಪರಿಹಾರ ಸಿಗುತ್ತದೆ
ಕಿರಿಯ ಮತ್ತು ದೇಶೀಯ ಕ್ರಿಕೆಟಿಗರಿಗೆ ಸೂಕ್ತವಾದ ಪರಿಹಾರ ಸಿಗುತ್ತದೆ ಎಂದು ಗಂಗೂಲಿ ಹೇಳಿದ್ದಾರೆ. ಅಕ್ಟೋಬರ್ ವೇಳೆಗೆ ಕೊರೊನಾ ಪ್ರಕರಣಗಳು ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಸೌರವ್ ಗಂಗೂಲಿ ತಿಳಿಸಿದ್ದಾರೆ. ಕೊರೊನಾದ ಕಾರಣದಿಂದಾಗಿ, ಕ್ರೀಡಾ ವಿಭಾಗದಲ್ಲಿ ಸಾಕಷ್ಟು ನಷ್ಟವಾಗಿದೆ. ಹೀಗಾಗಿ ದೇಶೀಯ ಆಟಗಾರರಿಗೆ ಜೂನ್-ಜುಲೈನಲ್ಲಿ ಪರಿಹಾರ ನೀಡಲಾಗುವುದು. ಇದರ ಅಡಿಯಲ್ಲಿ ಕಿರಿಯ ಆಟಗಾರರು, ಅಂಪೈರ್‌ಗಳು ಮತ್ತು ಸ್ಕೋರರ್‌ಗಳಿಗೆ ಅವರ ಶುಲ್ಕವನ್ನು ಸಹ ನೀಡಲಾಗುವುದು ಎಂದು ಗಂಗೂಲಿ ತಿಳಿಸಿದ್ದಾರೆ.
ದೇಶೀಯ ಕ್ರಿಕೆಟ್ ಕುರಿತು ಮಾತನಾಡಿದ ಅವರು, ಈ ಋತುವಿನಲ್ಲಿ ರಣಜಿ ಟ್ರೋಫಿ ನಡೆಯಲಿಲ್ಲ ಆದರೆ ಬಿಸಿಸಿಐ 50 ಓವರ್ ಪಂದ್ಯಾವಳಿ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಪುರುಷರು ಮತ್ತು ಮಹಿಳಾ ತಂಡಗಳಿಗಾಗಿ ಆಡಿಸಲಾಯಿತು. ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಿಂದಾಗಿ, ಬಿಸಿಸಿಐ ಮೇ ಕೊನೆಯಲ್ಲಿ ಜೂನಿಯರ್ ಇಂಟರ್ ಸ್ಟೇಟ್ ಟೂರ್ನಮೆಂಟ್ ಅನ್ನು ಅಮಾನತುಗೊಳಿಸಬೇಕಾಯಿತು. ನಂತರ ಎರಡನೇ ಕೊರೊನಾ 2ನೇ ಅಲೆಯಿಂದಾಗಿ, 16 ವರ್ಷದೊಳಗಿನವರು ಮತ್ತು 23 ವರ್ಷದೊಳಗಿನವರ ಪಂದ್ಯಾವಳಿಗಳನ್ನು ಸಹ ರದ್ದುಗೊಳಿಸಬೇಕಾಯಿತು. ಏಪ್ರಿಲ್ನಲ್ಲಿ, ಅಂಡರ್ -19 ಪಂದ್ಯಾವಳಿ ಜೂನ್-ಜುಲೈನಲ್ಲಿ ನಡೆಯಲಿದೆ ಎಂದು ಎಲ್ಲಾ ರಾಜ್ಯಗಳಿಗೆ ತಿಳಿಸಲಾಯಿತು, ಆದರೆ ಈಗ ಅದು ಕೂಡ ನಡೆಯಲು ಸಾಧ್ಯವಿಲ್ಲ.
ಬಹಳಷ್ಟು ಮಹಿಳಾ ಕ್ರಿಕೆಟ್ ನಡೆಯುತ್ತಿದೆ
ಮಹಿಳಾ ಕ್ರಿಕೆಟ್ ಅನ್ನು ಉತ್ತೇಜಿಸುವುದಿಲ್ಲ ಎಂಬ ಆರೋಪಗಳಿಗೆ ಗಂಗೂಲಿ ಈ ಸಮಯದಲ್ಲಿ ಪ್ರತಿಕ್ರಿಯಿಸಿದರು. ಈ ರೀತಿ ಯೋಚಿಸುವುದು ತಪ್ಪು, ಇದೀಗ ಸಾಕಷ್ಟು ಮಹಿಳಾ ಕ್ರಿಕೆಟ್ ನಡೆಯುತ್ತಿದೆ. ಕೊರೊನಾದಿಂದಾಗಿ ನಾವು ಮಹಿಳಾ ಐಪಿಎಲ್ ಅನ್ನು ರದ್ದುಗೊಳಿಸಬೇಕಾಯಿತ್ತು ಮತ್ತು ಅದನ್ನು ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ನಿಗದಿಪಡಿಸಬೇಕಾಗಿದೆ. ಈಗ ಮಹಿಳಾ ತಂಡ ಜೂನ್ 2 ರಂದು ಇಂಗ್ಲೆಂಡ್‌ಗೆ ಹೋಗಲಿದೆ. ಅವರು ಅಲ್ಲಿ ಸಾಕಷ್ಟು ಪಂದ್ಯಗಳನ್ನು ಆಡಲಿದ್ದಾರೆ ಎಂದು
ಗಂಗೂಲಿ ಹೇಳಿದರು.
ಇದನ್ನೂ ಓದಿ:IPL 2021: ಐಪಿಎಲ್ ಪೂರ್ಣಗೊಳ್ಳದಿದ್ದರೆ ಸುಮಾರು 2500 ಕೋಟಿ ರೂ. ನಷ್ಟವಾಗುತ್ತದೆ; ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ