ವಿಶ್ವದಲ್ಲೇ ಅತಿಹೆಚ್ಚು ಒಂದು ದಿನದ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಿದ ದಾಖಲೆ ಹೊಂದಿರುವ ಯುನೈಟೆಡ್ ಅರಬ್ ಎಮಿರೇಟ್ಸ್ನ (ಯುಎಈ) ಶಾರ್ಜಾ ಕ್ರಿಕೆಟ್ ಮೈದಾನದ ಹೊಸ ಸ್ವರೂಪವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಮನಸಾರೆ ಕೊಂಡಾಡಿದ್ದಾರೆ.
ಕೇವಲ 40 ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಇದುವರೆಗೆ ದಾಖಲೆಯ 236 ಒಂದು ದಿನದ ಆಂತರರಾಷ್ಟ್ರೀಯ ಪಂದ್ಯಗಳು ನಡೆದಿವೆ. ಎರಡನೇ ಸ್ಥಾನದಲ್ಲಿರುವ ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ (ಎಸ್ಸಿಜಿ) ಇಲ್ಲಿಯವರೆಗೆ 154 ಪಂದ್ಯಗಳು ನಡೆದಿವೆ. ಸಂಖ್ಯೆಗಳ ಆಧಾರದಲ್ಲಿ ಈ ಎರಡು ಮೈದಾನಗಳಲ್ಲಿ ನಡೆದಿರುವ ಪಂದ್ಯಗಳ ವ್ಯತ್ಯಾಸವನ್ನು ಗಮನಿಸಿ.
ಇಂಡಿಯನ್ ಪ್ರೀಮಿಯರ್ ಲೀಗ್ನ 13 ನೇ ಆವೃತಿಯು, ಯುಎಈಯ ಮೂರು ಪ್ರಮುಖ ನಗರಗಳಾಗಿರುವ ಶಾರ್ಜಾ, ಅಬು ಧಾಬಿ ಮತ್ತು ದುಬೈಯಲ್ಲಿ ನಡೆಯಲಿವೆ. ಐಪಿಎಲ್ ಪಂದ್ಯಗಳ ಆಯೋಜನೆಗೆ ಸಿದ್ಧತೆಗಳನ್ನು ವೀಕ್ಷಿಸಲು ಹೋಗಿರುವ ಗಂಗೂಲಿ, ಶಾರ್ಜಾ ಕ್ರಿಕೆಟ್ ಮೈದಾನ ಮಾಡಿಕೊಂಡಿರುವ ತಯಾರಿಗಳನ್ನು ನೋಡಿ ತುಂಬಾ ಪ್ರಭಾವಿತರಾಗಿದ್ದಾರೆ.
ಕೊವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಶಾರ್ಜಾ ಮೈದಾನದಲ್ಲಿ ಶಿಷ್ಟಾಚಾರಕ್ಕನುಗುಣವಾಗಿ ಹಲವು ಮಾರ್ಪಾಟುಗಳನ್ನು ಮಾಡಲಾಗಿದೆ. ಹೊಸ ಟೆಂಟ್ಗಳು (ಕ್ಯಾನೊಪಿ), ನವೀಕರಿಸಲಾಗಿರುವ ಕೋಣೆ, ವಿಐಪಿ ಸ್ಯೂಟ್, ಕಾಮೆಂಟರಿ ಬಾಕ್ಸ್, ವಿಐಪಿಗಳಿಗಾಗಿ ಪ್ರತ್ಯೇಕಿಸಲ್ಪಟ್ಟ ಬಾಕ್ಸ್ ಮೊದಲಾದವುಗಳನ್ನು ನೋಡಿ ಗಂಗೂಲಿ ಬೆರಗಾಗಿದ್ದಾರೆ.
ಅಂದಹಾಗೆ, ಶಾರ್ಜಾದಲ್ಲಿ ಒಟ್ಟು 12 ಐಪಿಎಲ್ ಪಂದ್ಯಗಳು ನಡೆಯಲಿವೆ.