India vs England Test Series | ಈ ಸರಣಿಯಲ್ಲೂ ನಿರ್ಣಾಯಕರಾಗುತ್ತಾರಾ ಎಡಗೈ ಸ್ಪಿನ್ನರ್​ಗಳು

|

Updated on: Feb 04, 2021 | 7:56 PM

ಸಾಮಾನ್ಯವಾಗಿ ಸ್ಪಿನ್ನರ್​ಗಳ ವಿರುದ್ಧ ಚೆನ್ನಾಗಿ ಆಡುವ ಭಾರತದ ಬ್ಯಾಟ್ಸ್​ಮನ್​ಗಳು ಎಡಗೈ ಸ್ಪಿನ್ನರ್​ಗಳ ವಿರುದ್ಧ ಶಸ್ತ್ರ ಚೆಲ್ಲಿರುವ ಸಂದರ್ಭಗಳಿವೆ. ಈಗ ಇಂಗ್ಲೆಂಡ್ ಭಾರತ ಪ್ರವಾಸದಲ್ಲಿರುವುದರಿಂದ ಭಾರತೀಯ ಬ್ಯಾಟ್ಸ್​ಮನ್​ಗಳನ್ನು ಗೋಳುಹೊಯ್ದುಕೊಂಡ ಇಂಗ್ಲಿಷ್ ಬೌಲರ್​ಗಳ ಬಗ್ಗೆ ಸ್ವಲ್ಪ ವಿವರ ಇಲ್ಲಿದೆ.

India vs England Test Series | ಈ ಸರಣಿಯಲ್ಲೂ ನಿರ್ಣಾಯಕರಾಗುತ್ತಾರಾ ಎಡಗೈ ಸ್ಪಿನ್ನರ್​ಗಳು
ಜ್ಯಾಕ್ ಲೀಚ್ ಮತ್ತು ಡಾಮ್ ಬೆಸ್
Follow us on

ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿರುವ 4 ಟೆಸ್ಟ್ ಸರಣಿಯ ಮೊದಲ ಪಂದ್ಯ ನಾಳೆ (ಫೆ.5) ಚೆನೈನ ಚೆಪಾಕ್ ಮೈದಾನದಲ್ಲಿ ಶುರುವಾಗಲಿದೆ. ಎರಡೂ ತಂಡದ ಮ್ಯಾನೇಜ್ಮೆಂಟ್​ಗಳು ಆಡುವ ಎಲೆವೆನ್ ಬಗ್ಗೆ ತಲೆ ಬಿಸಿಮಾಡಿಕೊಂಡಿವೆ. ಉಪಖಂಡದ ಪಿಚ್​ಗಳು ಸಾಮಾನ್ಯವಾಗಿ ಸ್ಪಿನ್​ ಬೌಲಿಂಗ್​ಗೆ ನೆರವಾಗುವುದರಿಂದ ಭಾರತ ಮೂರು ಸ್ಪಿನ್ನರ್​ಗಳನ್ನು (ರವಿಚಂದ್ರನ್ ಅಶ್ವಿನ್, ಕುಲ್​ದೀಪ್ ಯಾದವ್ ಮತ್ತು ಅಕ್ಸರ್ ಪಟೇಲ್) ಆಡಿಸಿದರೆ ಆಶ್ಚರ್ಯವಿಲ್ಲ.

ಕ್ರಿಕೆಟ್ ಪಂದ್ಯಗಳನ್ನು ಬಹಳ ದಿನಗಳಿಂದ ಫಾಲೊ ಮಾಡಿಕೊಂಡು ಬಂದಿರುವವರಿಗೆ ಎಡಗೈ ಸ್ಪಿನ್ನರ್​ಗಳು (left-arm orthodox) ಕ್ರೀಡೆಯ ಮೇಲೆ ಬೀರಿರುವ ಪ್ರಭಾವದ ಬಗ್ಗೆ ಗೊತ್ತಿರುತ್ತದೆ. ಹಿಂದೆ, ಇವರು ಎಲ್ಲ ರಾಷ್ಟ್ರೀಯ ತಂಡಗಳ ಅವಿಭಾಜ್ಯ ಅಂಗವಾಗಿರುತ್ತಿದ್ದರು. ಪ್ರತಿ ಟೀಮು ಕನಿಷ್ಠ ಒಬ್ಬ ಎಡಗೈ ಸ್ಪಿನ್ನರ್​ನನ್ನು ಹೊಂದಿರುತ್ತಿತ್ತು. ಆದರೆ ಈ ಸಮುದಾಯದ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಾ ಬಂದು ಈಗ ಅವರನ್ನು ಹುಡುಕುವುದೇ ಕಷ್ಟವಾಗಿದೆ.

ಬಾಪು ನಾಡಕರ್ಣಿ, ಸಲೀಮ್ ದುರಾನಿ ಮೊದಲಾದವರಿಂದ ಹಿಡಿದು ಈಗಿನ ರವೀಂದ್ರ ಜಡೇಜಾವರೆಗೆ ಹಲವಾರು ವಿಶ್ವ ದರ್ಜೆಯ ಎಡಗೈ ಸ್ಪಿನ್ನರ್​ಗಳು ಭಾರತಕ್ಕಾಗಿ ಆಡಿದ್ದಾರೆ.

ಇದನ್ನೂ ಓದಿ: ಫೆ.5ರಿಂದ ಆರಂಭವಾಗುವ ಟೆಸ್ಟ್​ ಪಂದ್ಯದ ನೇರ ಪ್ರಸಾರ ಯಾವ ಚಾನೆಲ್​ನಲ್ಲಿ?

ಅಕ್ಸರ್ ಪಟೇಲ್ ಮತ್ತು ಕುಲ್​ದೀಪ್ ಯಾದವ್

ಹಲವು ಖ್ಯಾತನಾಮರು
ಬಿಷನ್ ಸಿಂಗ್ ಬೇಡಿ, ದಿಲಿಪ್ ದೋಷಿ, ರವಿ ಶಾಸ್ತ್ರೀ, ಮಣೀಂದರ್ ಸಿಂಗ್, ವೆಂಕಟಪತಿರಾಜು, ಸುನಿಲ್ ಜೋಷಿ, ಕಾರ್ತೀಕ್ ಮುರಳಿ ಮೊದಲಾದವರೆಲ್ಲ ಭಾರತವನ್ನು ಪ್ರತಿನಿಧಿಸಿದ ಖ್ಯಾತ ಲೆಫ್ಟ್ ಆರ್ಮ್ ಸ್ಪಿನ್ನರ್​ಗಳಲ್ಲಿ ಪ್ರಮುಖರು. ಬಲಗೈ ಬ್ಯಾಟ್ಸ್​ಮನ್​ಗಳು ಎಡಗೈ ಸ್ಪಿನ್ನರ್​ಗಳನ್ನು ಎದುರಿಸಿ ಆಡುವಾಗ ಸ್ವಲ್ಪ ಪರದಾಡುತ್ತಾರೆ. ಯಾಕೆಂದರೆ ಅವರು ಬೌಲ್ ಮಾಡುವಾಗ ಸೃಷ್ಟಿಸುವ ಆ್ಯಂಗಲ್ ಬಲಗೈ ಬ್ಯಾಟ್ಸ್​ಮನ್​ನನ್ನು ತೊಂದರೆಗೆ ಈಡುಮಾಡುತ್ತದೆ. ಅಲ್ಲದೆ ಎಡಗೈ ಸ್ಪಿನ್ನರ್​ಗಳು ಬೌಲಿಂಗ್​ ಕ್ರೀಸನ್ನು ಆದ್ಭುತವಾಗಿ ಉಪಯೋಗಿಸಿಕೊಳ್ಳುತ್ತಾರೆ. ಹಾಗಾಗೇ, ಅವರು ಬ್ಯಾಟ್ಸ್​ಮನ್​ಗಳನ್ನು ಇಕ್ಕಟ್ಟಿಗೆ ಸಿಲುಕಿಸುವ ಕೋನವನ್ನು ಸೃಷ್ಟಿಸಿತ್ತಾರೆ. ಬಲಗೈ ಬ್ಯಾಟ್ಸ್​ಮನ್​ಗಳಿಗೆ ಪಿಚ್ ಆಗಿ ತಮ್ಮತ್ತ ಬರುವ ಎಸೆತವನ್ನು ಎದುರಿಸಿ ಆಡುವುದು ಸುಲಭ, ಆದರೆ ಅವರಿಂದ ದೂರಕ್ಕೆ ಸ್ಪಿನ್ ಆಗುವ ಎಸೆತಗಳನ್ನು ಬಹಳ ಜಾಗರೂಕತೆಯಿಂದ ಆಡಬೇಕಾಗುತ್ತದೆ.

ಸಾಮಾನ್ಯವಾಗಿ ಸ್ಪಿನ್ನರ್​ಗಳ ವಿರುದ್ಧ ಚೆನ್ನಾಗಿ ಆಡುವ ಭಾರತದ ಬ್ಯಾಟ್ಸ್​ಮನ್​ಗಳು ಸಹ ಎಡಗೈ ಸ್ಪಿನ್ನರ್​ಗಳ ವಿರುದ್ಧ ಶಸ್ತ್ರ ಚೆಲ್ಲಿದ ಸಂದರ್ಭಗಳಿವೆ. ಈಗ ಇಂಗ್ಲೆಂಡ್ ಭಾರತ ಪ್ರವಾಸದಲ್ಲಿರುವುದರಿಂದ ಭಾರತೀಯ ಬ್ಯಾಟ್ಸ್​ಮನ್​ಗಳನ್ನು ಗೋಳುಹೊಯ್ದುಕೊಂಡ ಇಂಗ್ಲಿಷ್ ಬೌಲರ್​ಗಳ ಬಗ್ಗೆ ಒಂದಿಷ್ಟು ಚರ್ಚಿಸುವ.

ಬಿಷನ್ ಸಿಂಗ್ ಬೇಡಿ

ಬಾರತಕ್ಕೆ ಸ್ವಾತಂತ್ರ್ಯ ದೊರಕಿದ ನಂತರ ಇಂಗ್ಲೆಂಡ್ ಮೂರು ಬಾರಿ ಭಾರತದಲ್ಲಿ ಸರಣಿ ಜಯ ಸಾಧಿಸಿದೆ. 1976-77ರಲ್ಲಿ (3-1), 1984-85ರಲ್ಲಿ (2-1) ಮತ್ತು 2012-13ರಲ್ಲಿ ಇಂಗ್ಲೀಷರು ಭಾರತದ ನೆಲದ ಮೇಲೆ ಸರಣಿ ಗೆದ್ದಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ ಈ ಜಯಗಳಲ್ಲಿ ಇಂಗ್ಲೆಂಡ್​ನ ಎಡಗೈ ಸ್ಪಿನ್ನರ್​ಗಳು ನಿರ್ಣಾಯಕ ಪಾತ್ರ ನಿರ್ವಹಿಸಿರುವುದು.

ಅದು ಈ ಸಮುದಾಯದ ಬೌಲರ್​ಗಳ ವಿರುದ್ಧ ಬಾರತೀಯ ಬ್ಯಾಟ್ಸ್​ಮನ್​ಗಳ ದೌರ್ಬಲ್ಯವನ್ನು ತೋರಿಸುತ್ತದೆ. 1976-77 ಸರಣಿಯಲ್ಲಿ ಇಂಗ್ಲೆಂಡ್​ನ ವಿಖ್ಯಾತ ಎಡಗೈ ಸ್ಪಿನ್ನರ್ ಡೆರಿಕ್ ಅಂಡರ್​ವುಡ್ 29 ವಿಕೆಟ್​ಗಳನ್ನು ಪಡೆದಿದ್ದರು, 1984-85ರಲ್ಲಿ ಫಿಲ್ ಎಡ್ಮಂಡ್ಸ್ 14 ಮತ್ತು 2012-13 ರಲ್ಲಿ ಭಾರತೀಯ ಮೂಲದ ಮಾಂಟಿ ಪನೆಸಾರ್ 17 ವಿಕೆಟ್ ಕಬಳಿಸಿದ್ದರು.

2000ನೇ ವರ್ಷದಿಂದೀಚೆಗೆ 4ಬಾರಿ ಭಾರತ ಪ್ರವಾಸ ಬಂದಿರುವ ಇಂಗ್ಲೆಂಟ್ ಕೇವಲ ಒಮ್ಮೆ ಮಾತ್ರ (2016-17 ರ ಸರಣಿ) ಎಡಗೈ ಸ್ಪಿನ್ನರ್​ನನ್ನು ಕರೆತಂದಿರಲಿಲ್ಲ. ಆ ಸರಣಿಯನ್ನು ವಿರಾಟ್​ ಕೊಹ್ಲಿ ನೇತೃತ್ವದ ಭಾರತದ ತಂಡ 4-0 ಅಂತರದಿಂದ ಸುಲಭವಾಗಿ ಗೆದ್ದಿತ್ತು. ಆಗ ಮೋಯಿನ್ ಅಲಿ (ಆಫ್​ ಸ್ಫಿನ್ನ​ರ್ ) ಮತ್ತು ಅದಿಲ್ ರಶೀದ್ (ಲೆಗ್ ಸ್ಪಿನ್ನರ್) ಇಂಗ್ಲೆಂಡ್ ತಂಡದ ಭಾಗವಾಗಿದ್ದರು.

ಈ ಹಿನ್ನೆಲೆಯಲ್ಲಿ ಭಾರತದ ಆಟಗಾರರು ಎಡಗೈ ಸ್ಪಿನ್ನರ್​ಗಳನ್ನು ಅಷ್ಟು ಚೆನ್ನಾಗಿ ಅಡಲಾರರು ಎನ್ನುವುದನ್ನು ಮನಗಂಡಿರುವ ಇಂಗ್ಲೆಂಡ್, ಜ್ಯಾಕ್ ಲೀಚ್ ಹೆಸರಿನ ಅಷ್ಟೇನೂ ಅನುಭವಿಯಲ್ಲದ (12 ಟೆಸ್ಟ್​ ಆಡಿದ್ದಾರೆ) ಎಡಗೈ ಸ್ಪಿನ್ನರ್​ನನ್ನು ಕರೆತಂದಿದೆ. ಅವರಿಗೆ ಜೊತೆಗಾರರಾಗಿ ಆಫ್-ಸ್ಪಿನ್ನರ್ ಡಾಮ್ ಬೆಸ್ ಆಡಲಿದ್ದಾರೆ. ಮೊನ್ನೆಯಷ್ಟೇ ಮುಕ್ತಾಯಗೊಂಡ 2-ಟೆಸ್ಟ್​ಗಳ ಶ್ರೀಲಂಕಾ ಸರಣಿಯಲ್ಲಿ ಲೀಚ್ 10 ವಿಕೆಟ್ ಪಡೆದರೆ, ಬೆಸ್ 12 ವಿಕೆಟ್​ಗಳನ್ನು ಕಬಳಿಸಿದರು. ಪಿಚ್ ಸ್ವಲ್ಪ ಹಳೆಯದಾದ ನಂತರ ಅದನ್ನು ಟೀಮಿನ ಪ್ರಯೋಜನಕ್ಕೆ ಬಳಸುವ ಕ್ಷಮತೆಯನ್ನು ಇವರಿಬ್ಬರು ಶ್ರೀಲಂಕಾದಲ್ಲಿ ಪ್ರದರ್ಶಿಸಿದರು. ಆಫ್-ಸ್ಪಿನ್ ಮತ್ತು ಎಡಗೈ ಸ್ಪಿನ್ನರ್​ಗಳ ಜೋಡಿಯಾಗಿದ್ದ ಪನೆಸಾರ್ ಮತ್ತು ಗ್ರೇಮ್ ಸ್ವ್ಯಾನ್ ಜೋಡಿಯು 2012-13 ಸರಣಿಯಲ್ಲಿ ಭಾರತದ ಬ್ಯಾಟ್ಸ್​ಮನ್​ಗಳ ವಿರುದ್ಧ ಮೇಲುಗೈ ಸಾಧಿಸಿದ್ದರಿಂದ ಇಂಗ್ಲೆಂಡ್, ಲೀಚ್ ಮತ್ತು ಬೆಸ್ ಮೇಲೆ ಹೆಚ್ಚು ವಿಶ್ವಾಸವಿಟ್ಟು ಎಲ್ಲ ಪಂದ್ಯಗಳಲ್ಲೂ ಆಡಿಸಬೇಕಿದೆ.

ಓಕೆ, ಎಡಗೈ ಸ್ಪಿನ್ನರುಗಳ ಪ್ರಸಕ್ತ ಚಿತ್ರಣವನ್ನು ಒಮ್ಮೆ ಗಮನಿಸಿದರೆ, ಈ ಕಲೆಯನ್ನು ಅಳವಡಸಿಕೊಂಡವರ ಸಂಖ್ಯೆ ತೀವ್ರವಾಗಿ ಇಳಮುಖಗೊಂಡಿರುವುದು ವೇದ್ಯವಾಗುತ್ತದೆ. 2010 ರಿಂದೀಚೆಗೆ ಶ್ರೀಲಂಕಾದ ರಂಗನಾ ಹೆರಾತ್ ಅವರನ್ನು ಹೊರತುಪಡಿಸಿ ಭಾರತದ ರವೀಂದ್ರ ಜಡೇಜಾ ಮತ್ತು ದಕ್ಷಿಣ ಆಫ್ರಿಕಾದ ಕೇಶವ್ ಮಹಾರಾಜ್- ಇವರಿಬ್ಬರನ್ನು ಬಿಟ್ಟರೆ ಗಮನಸೆಳೆಯುವಂಥ ಪ್ರದರ್ಶನಗಳನ್ನು ಯಾವುದೇ ಎಡಗೈ ಸ್ಪಿನ್ನರ್ ನೀಡಿಲ್ಲ.

ಇಂಗ್ಲೆಂಡಿನ ಖ್ಯಾತ ಎಡಗೈ ಸ್ಪಿನ್ನರ್ ಡೆರೆಕ್ ಅಂಡರ್​ವುಡ್

ಇಂಗ್ಲೆಂಡ್ ಆಟಗಾರರೂ ಎಡಗೈ ಸ್ಪಿನ್​ರ್​ಗಳನ್ನು ಸಮರ್ಥವಾಗಿ ಆಡುವುದಿಲ್ಲವಾದ್ದರಿಂದ, ಭಾರತ ಗಾಯಗೊಂಡಿರುವ ಜಡೇಜಾ ಸ್ಥಾನದಲ್ಲಿ ಅಕ್ಸರ್ ಪಟೇಲ್​ರನ್ನು ಆಡಿಸಲು ನಿರ್ಧರಿಸಿದೆ. ಓದುಗರು ಒಂದು ಸಂಗತಿಯನ್ನು ನೆನಪಿಟ್ಟಕೊಳ್ಳಬೇಕು, ಕುಲ್​ದೀಪ್ ಯಾದವ್ ಸಹ ಎಡಗೈ ಸ್ಪಿನರ್ ಎನ್ನುವುದು ನಿಜವಾದರೂ ಅವರು ಚೈನಾಮನ್​ಗಳನ್ನು ಬೌಲ್ ಮಾಡುತ್ತಾರೆ.

ಎರಡೂ ತಂಡಗಳಿಗೆ ವಿಶ್ವ ಕ್ರಿಕೆಟ್ ಟೆಸ್ಟ್ ಚಾಂಪಿಯನ್​ಶಿಪ್ (ಡಬ್ಲ್ಯುಟಿಸಿ) ದೃಷ್ಟಿಯಿಂದ ಈ ಸರಣಿ ಬಹಳ ಮಹತ್ವಪೂರ್ಣದ್ದಾಗಿದೆ. ಪ್ರಸಕ್ತ ಸೈಕಲ್​ನ ಫೈನಲ್ ಜೂನ್​ನಲ್ಲಿ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದ್ದು ನ್ಯೂಜಿಲೆಂಡ್ ಈಗಾಗಲೇ ಫೈನಲ್ ಆಡುವ ಅರ್ಹತೆ ಗಿಟ್ಟಿಸಿದೆ. ಅದರೊಂದಿಗೆ ಸೆಣೆಸಲು ಭಾರತ-ಇಂಗ್ಲೆಂಡ್-ಆಸ್ಟ್ರೇಲಿಯ ನಡುವೆ ತ್ರಿಕೋನದ ಪೈಪೋಟಿ ಜಾರಿಯಲ್ಲಿದೆ.

India vs England Test Series | ವಿರಾಟ್ ಕೊಹ್ಲಿ​ಗೆ ಸಲಹೆ ನೀಡುತ್ತಾ ನೆರವಾಗುವುದೇ ನನ್ನ ಕೆಲಸ: ಅಜಿಂಕ್ಯಾ ರಹಾನೆ

 

Published On - 6:49 pm, Thu, 4 February 21