India vs England Test Series | ವಿರಾಟ್ ಕೊಹ್ಲಿ​ಗೆ ಸಲಹೆ ನೀಡುತ್ತಾ ನೆರವಾಗುವುದೇ ನನ್ನ ಕೆಲಸ: ಅಜಿಂಕ್ಯಾ ರಹಾನೆ

| Updated By: ಪೃಥ್ವಿಶಂಕರ

Updated on: Feb 04, 2021 | 12:48 PM

ಉಪನಾಯಕನಾದವನು ಸ್ಥಿತಿಯನ್ನು ಅರ್ಥಮಾಡಿಕೊಂಡು ಮುಂದೇನಾಗಬಹುದೆಂದು ಗ್ರಹಿಸಿಕೊಂಡು ಕ್ಯಾಪ್ಟನ್​ಗೆ ಸಲಹೆ ನೀಡಬೇಕಾಗುತ್ತದೆ. ನನ್ನ ಕೆಲಸ ಬಹಳ ಸುಲಭವಾದದ್ದು ಎಂದು ಅಜಿಂಕ್ಯಾ ರಹಾನೆ ಹೇಳುತ್ತಾರೆ.

India vs England Test Series | ವಿರಾಟ್ ಕೊಹ್ಲಿ​ಗೆ ಸಲಹೆ ನೀಡುತ್ತಾ ನೆರವಾಗುವುದೇ ನನ್ನ ಕೆಲಸ: ಅಜಿಂಕ್ಯಾ ರಹಾನೆ
ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯಾ ರಹಾನೆ
Follow us on

ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಮಿನ ನಾಯಕತ್ವ ವಹಿಸಿಕೊಂಡು ಅಸ್ಟ್ರೇಲಿಯಾವನ್ನು ಅದರ ನೆಲದಲ್ಲೇ ಸೋಲಿಸಿ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಮೈಲಿಗಲ್ಲು ಸ್ಥಾಪಿಸಿದ ಅಜಿಂಕ್ಯಾ ರಹಾನೆ, ಇಂಗ್ಲೆಂಡ್ ವಿರುದ್ಧ ಫೆಬ್ರುವರಿ 5ರಿಂದ ಶುರುವಾಲಿರುವ 4-ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಹಿಂಬದಿಯ ಆಸನಕ್ಕೆ ಜಾರಿ ಅಗತ್ಯ ಬಿದ್ದಾಗಲೆಲ್ಲ ಕೊಹ್ಲಿಗೆ ನೆರವಾಗುವುದು ಬಹಳ ಸಂತಸದ ವಿಷಯ ಎಂದು ಹೇಳಿದ್ದಾರೆ.

ಮಗುವಿನ ಜನನದ ನಂತರ ತಂಡಕ್ಕೆ ವಾಪಸ್ಸಾಗಿರುವ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಸರಣಿಗೆ ಟೀಮಿನ ನಾಯಕತ್ವ ವಹಿಸಲಿದ್ದಾರೆ.

‘ಹಿಂಬದಿಯ ಆಸನಕ್ಕೆ ಸರಿದು ನಾಯಕ ವಿರಾಟ್​ಗೆ ನೆರವಾಗುವುದು ನನ್ನ ಕೆಲಸವಾಗಿದೆ. ಕ್ಯಾಪ್ಟನ್ ತಲೆಯಲ್ಲಿ ನೂರೆಂಟು ಯೋಚನೆಗಳಿರುತ್ತವೆ. ಹಾಗಾಗಿ, ಉಪನಾಯಕನಾದವನು ಸ್ಥಿತಿಯನ್ನು ಅರ್ಥಮಾಡಿಕೊಂಡು ಮುಂದೇನಾಗಬಹುದೆಂದು ಗ್ರಹಿಸಿಕೊಂಡು ಕ್ಯಾಪ್ಟನ್​ಗೆ ಸಲಹೆ ನೀಡಬೇಕಾಗುತ್ತದೆ. ನನ್ನ ಕೆಲಸ ಬಹಳ ಸುಲಭವಾದದ್ದು. ನಾನು ಹಿಂಬದಿಯಲ್ಲಿದ್ದುಕೊಂಡು, ಅವರು (ವಿರಾಟ್) ಕೇಳಿದಾಗ ನಿರ್ದಿಷ್ಟವಾದ ಸಲಹೆಗಳನ್ನು ನೀಡುತ್ತೇನೆ. ಕೊಹ್ಲಿ ನಾಯಕನಾಗಿರುವಾಗಲೆಲ್ಲ ನಾನು ಹಿಂದಿನ ಆಸನದಲ್ಲಿಯೇ ಇರುತ್ತೇನೆ’ ಎಂದು ಬುಧವಾರದಂದು ಮಾಧ್ಯಮದವರೊಂದಿಗೆ ಮಾತಾಡುವಾಗ ರಹಾನೆ ಹೇಳಿದರು.

ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ ಭಾರತದ ಜಯ ಖಚಿತ: ಇದು ಡೇವಿಡ್ ಲಾಯ್ಡ್ ನುಡಿದ ಭವಿಷ್ಯ

ಮೆಲ್ಬರ್ನ್​ನಲ್ಲಿ ಶತಕ ಬಾರಿಸಿದಾಗ ಅಜಿಂಕ್ಯಾ ರಹಾನೆ ಹೊಡೆತದ ಒಂದು ಭಂಗಿ

‘ತಂಡದ ನಾಯಕ ವಿರಾಟ್ ಆಗಿದ್ದಾರೆ. ಕೌಟುಂಬಿಕ ಕಾರಣಗಳಿಗಾಗಿ ಅವರು ಆಸ್ಟ್ರೇಲಿಯಾದಿಂದ ಸ್ವದೇಶಕ್ಕೆ ಮರಳಿದ್ದರಿಂದ ನಾನು ನಾಯಕನಾಗಬೇಕಾಯಿತು. ಸ್ಪಷ್ಟವಾಗಿ ಹೇಳಬೇಕೆಂದರೆ ವಿರಾಟ್​ ಕ್ಯಾಪ್ಟನ್ ಅಗಿದ್ದಾರೆ ಮತ್ತು ನಾನು ವೈಸ್ ಕ್ಯಾಪ್ಟನ್. ಅವರು ವಾಪಸ್ಸಾಗಿರುವುದು ನನ್ನನ್ನು ಖುಷಿಯಾಗಿಸಿದೆ. ಇದು ನಿಜಕ್ಕೂ ಸಕಾರಾತ್ಮಕ ಧೋರಣೆ. ಒಂದು ತಂಡವಾಗಿ ನಾವು ಸಂಘಟಿತ ಮತ್ತು ನಮ್ಮ ಸಾಮರ್ಥ್ಯಕ್ಕೆ ಮೀರಿದ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇವೆ’ ಎಂದು ರಹಾನೆ ಹೇಳಿದರು.

ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್​ನಲ್ಲಿ ಅವಮಾನಕರ ಸೋಲು ಅನುಭವಿಸಿದ ನಂತರ ಮೆಲ್ಬರ್ನ್​ನಲ್ಲಿ ಅಮೋಘ ಶತಕ ಬಾರಿಸಿ ಭಾರತದ ಪುನಶ್ಚೇತನದಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದ 32 ವರ್ಷ ವಯಸ್ಸಿನ ರಹಾನೆ ಆ ಪಂದ್ಯ ಸೇರಿದಂತೆ ಉಳಿದರೆಡು ಟೆಸ್ಟ್​ಗಳಲ್ಲಿ ವಿರಾಟ್ ಅವರ ಸ್ಥಾನದಲ್ಲಿ ಅಂದರೆ 4ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರು. ಆದರೀಗ ಕೊಹ್ಲಿ ವಾಪಸ್ಸಾಗಿರವುದರಿಂದ ಅವರು ತಮ್ಮ ಎಂದಿನ 5 ನೇ ಕ್ರಮಾಂಕಕ್ಕೆ ವಾಪಸ್ಸು ಹೋಗಬೇಕಾಗುತ್ತದೆ. ಕ್ರಮಾಂಕಗಳು ಬದಲಾದಾಗ ಒಂದಷ್ಟು ಅಡ್ಜಸ್ಟ್​ಮೆಂಟ್​ಗಳನ್ನು ಮಾಡಿಕೊಳ್ಳಬೇಕಾಗುತ್ತದೆ ಎನ್ನುವುದನ್ನು ರಹಾನೆ ಅಂಗೀಕರಿಸಿದರು.

‘ಹೌದು ಸ್ವಲ್ಪಮಟ್ಟಿನ ಅಡ್ಜಸ್ಟ್​ಮೆಂಟ್​ ಮಾಡಿಕೊಳ್ಳಬೇಕಾಗುತ್ತದೆ. ಟೀಮಿನ ಅಗತ್ಯಕ್ಕೆ ತಕ್ಕಂತೆ ಕ್ರಮಾಂಕಗಳು ಬದಲಾಗುತ್ತಿರುತ್ತವೆ. ನಾವು ಅವುಗಳಿಗೆ ಹೊಂದಿಕೊಳ್ಳಬೇಕಾಗುತ್ತದೆ. ವೈಯಕ್ತಿಕವಾಗಿ ಹೇಳಬೇಕೆಂದರೆ ನಾನು ಯಾವ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತೇನೆ ಅನ್ನುವುದು ನನಗೆ ಮುಖ್ಯವಲ್ಲ, ಟೀಮಿಗೆ ಹೇಗೆ ಮತ್ತು ಎಷ್ಟು ಕಾಂಟ್ರಿಬ್ಯೂಷನ್ ನೀಡುತ್ತೇನೆ ಎನ್ನುವುದು ಮುಖ್ಯವಾಗುತ್ತದೆ. ಯಾವುದೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರೂ ನಾನು ಟೀಮಿಗೆ 100% ನೀಡಲು ಪ್ರಯತ್ನಿಸುತ್ತೇನೆ,’ ಎಂದು ರಹಾನೆ ಹೇಳಿದರು

‘ವಿರಾಟ್ ಟೀಮಿಗೆ ವಾಪಸ್ಸಾಗಿರುವುದೇ ಒಂದು ದೊಡ್ಡ ಪಾಸಿಟಿವ್. ಅವರು ಉತ್ತಮವಾಗಿ ಬ್ಯಾಟ್ ಮಾಡುತ್ತಿದ್ದಾರೆ ಮತ್ತು ಅವರ ದಾಖಲೆ ಶ್ರೇಷ್ಠಮಟ್ಟದ್ದಾಗಿದೆ,’ ಅಂತ ರಹಾನೆ ಹೇಳಿದರು.

India vs England: ಕೋಚ್ ರವಿ ಶಾಸ್ತ್ರಿ ಹುರಿದುಂಬಿಸುವಿಕೆಯೊಂದಿಗೆ ಅಭ್ಯಾಸವಾರಂಭಿಸಿದ ಟೀಮ್ ಇಂಡಿಯಾ ಸದಸ್ಯರು

Published On - 9:56 pm, Wed, 3 February 21