India vs England Test Series: ಕಳಂಕರಹಿತ ಶತಕದೊಂದಿಗೆ ಮೊದಲ ದಿನದ ಗೌರವವನ್ನು ಇಂಗ್ಲಿಷರಿಗೆ ದೊರಕಿಸಿದ ಜೋ ರೂಟ್!

|

Updated on: Feb 05, 2021 | 10:38 PM

ಟೆಸ್ಟ್ ಪ್ರಾರಂಭವಾಗುವ ಮೊದಲು ಭಾರತೀಯ ಸ್ಪಿನ್ನರ್​ಗಳು ಆಂಗ್ಲ ಬ್ಯಾಟ್ಸ್​ಮನ್​ಗಳನ್ನು ಸುಲಭವಾಗಿ ಮಣಿಸುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ರೂಟ್ ಮತ್ತು ಸಿಬ್ಲೀ ಅಂಥ ಸಾಧ್ಯತೆಯನ್ನು ತಮ್ಮ ದಿಟ್ಟತನದ ಬ್ಯಾಟಿಂಗ್ ಮೂಲಕ ಇಲ್ಲವಾಗಿಸಿದರು.

India vs England Test Series: ಕಳಂಕರಹಿತ ಶತಕದೊಂದಿಗೆ ಮೊದಲ ದಿನದ ಗೌರವವನ್ನು ಇಂಗ್ಲಿಷರಿಗೆ ದೊರಕಿಸಿದ ಜೋ ರೂಟ್!
ಜೋ ರೂಟ್
Follow us on

ಆಧುನಿಕ ಶ್ರೇಷ್ಠ ಬ್ಯಾಟ್ಸ್​ಮನ್​ಗಳಲ್ಲಿ ತನ್ನನ್ನೂ ಒಬ್ಬ ಎಂದು ಯಾಕೆ ಪರಿಗಣಿಸಲಾಗುತ್ತದೆ ಎನ್ನುವುದನ್ನು ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಇಂದು ಚೆನ್ನೈನ ಚೆಪಾಕ್ ಮೈದಾನದಲ್ಲಿ ಸಾಬೀತು ಮಾಡಿದರು. ತಮ್ಮ ನೂರನೇ ಟೆಸ್ಟ್​ನಲ್ಲಿ ಅವರು ಬಾರಿಸಿದ ಆಕರ್ಷಕ ಮತ್ತು ಅಧಿಕಾರಯುತ ಅಜೇಯ ಶತಕ ಕ್ರಿಕೆಟ್ ಪ್ರೇಮಿಗಳ ಮನಸ್ಸಿನಲ್ಲಿ ಬಹಳ ದಿನ ಉಳಿಯಲಿದೆ. ಅವರ ಶತಕ (128*) ಮತ್ತು ಮೂರನೇ ವಿಕೆಟ್​ಗೆ ಡಾಮಿನಿಕ್ ಸಿಬ್ಲೀ ಜೊತೆ (87, 286 ಎಸೆತಗಳು, 12X4) ಸೇರಿಸಿದ ಬರೋಬ್ಬರಿ 200 ರನ್​ಗಳು ಮೊದಲ ದಿನದಾಟದ ನಂತರ ಪ್ರವಾಸಿಗರನ್ನು ಅತ್ಯುತ್ತಮ ಸ್ಥಿತಿಯಲ್ಲಿರಿಸಿವೆ.

ಟೆಸ್ಟ್​ ಕರೀಯರ್​ನಲ್ಲಿ 20ನೇ ಶತಕವನ್ನು ಪೂರೈಸಿದ ರೂಟ್, ತಮ್ಮ100ನೇ ಟೆಸ್ಟ್​ನಲ್ಲಿ ಶತಕ ದಾಖಲಿಸಿದ ವಿಶ್ವದ 9ನೇ ಆಟಗಾರನೆನಿಸಿಕೊಂಡರು.

ಟೆಸ್ಟ್ ಪ್ರಾರಂಭವಾಗುವ ಮೊದಲು ಭಾರತೀಯ ಸ್ಪಿನ್ನರ್​ಗಳು ಆಂಗ್ಲ ಬ್ಯಾಟ್ಸ್​ಮನ್​ಗಳನ್ನು ಸುಲಭವಾಗಿ ಮಣಿಸುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ರೂಟ್ ಮತ್ತು ಸಿಬ್ಲೀ ಅಂಥ ಸಾಧ್ಯತೆಯನ್ನು ತಮ್ಮ ದಿಟ್ಟತನದ ಬ್ಯಾಟಿಂಗ್ ಮೂಲಕ ಇಲ್ಲವಾಗಿಸಿದರು. ದಿನದಾಟದ ಕೊನೆ ಓವರಿನಲ್ಲಿ ಜಸ್ಪ್ರೀತ್ ಬುಮ್ರಾ, ಸಿಬ್ಲೀಯನ್ನು ಎಲ್​ಬಿ ಬಲೆಗೆ ಕೆಡವಿರದಿದ್ದರೆ, ಇಂಗ್ಲೆಂಡ್ ಸ್ಥಿತಿ ಇನ್ನಷ್ಟು ಪ್ರಭಾವಶಾಲಿ ಎನಿಸುತ್ತಿತ್ತು.

ನಿಷ್ಕಳಂಕ ಮತ್ತು ಅಷ್ಟೇ ಮನಮೋಹಕ ಹೊಡೆತಗಳನ್ನಾಡಿದ ರೂಟ್ ಸ್ವೀಪ್ ಶಾಟ್​ಗಳಿಂದ ಹೆಚ್ಚಿನ ರನ್ ಶೇಖರಿಸಿದರು. ದಿನದಾಟದ ಕೊನೆಯಲ್ಲಿ ರವಿಚಂದ್ರನ್ ಅಶ್ವಿನ್ ಬೌಲಿಂಗ್​ನಲ್ಲಿ ಅವರು ಬಾರಿಸಿದ ಸಿಕ್ಸ್ ಅವರು ಇಂದು ಕ್ರೀಸ್ ಮೇಲೆ ತೋರಿದ ಪಾರಮ್ಯಕ್ಕೆ ಸಾಕ್ಷಿಯಾಗಿತ್ತು. ಚೆನೈ ನಗರದ ತಾಪಮಾನಕ್ಕೆ ಒಗ್ಗಿಕೊಳ್ಳುವುದು ಬಹಳ ಕಷ್ಟವಾಗಿದ್ದರೂ ರೂಟ್ ಒಂದಿಷ್ಟೂ ಎದೆಗುಂದದೆ ದಿನವಿಡೀ ಬ್ಯಾಟ್ ಮಾಡಿದರು.

ಇಂದು ದಾಳಿ ನಿರ್ವಹಿಸಿದ ಭಾರತದ ಬೌಲರ್​ಗಳು

ಹಾಗೆ ನೋಡಿದರೆ, ಪಿಚ್​ ವೇಗದ ಬೌಲರ್​ಗಳಿಗಾಗಲೀ, ಸ್ಪಿನ್ನರ್​ಗಳಿಗಾಗಲೀ ನೆರವು ನೀಡಲಿಲ್ಲ. ಹಾಗಂತ ರೂಟ್ಮತ್ತು ಸಿಬ್ಲೀ ತೋರಿದ ಸಂಕಲ್ಪ, ಶಿಸ್ತು ಮತ್ತು ಬದ್ಧತೆಯನ್ನು ಅಲ್ಲಗಳೆಯುವಂತಿಲ್ಲ.

ವಿದೇಶಗಳ ಬೇರೆ ಬ್ಯಾಟ್ಸ್​ಮನ್​ಗಳಂತೆ ಸ್ಪಿನ್ನರ್​ಗಳ ಮೇಲೆ ಹಿಡಿತ ಸಾಧಿಸಲು ಕ್ರೀಸ್​ನಿಂದ ಹೊರಬಂದು ಚೆಂಡನ್ನು ಎತ್ತಿ ಬಾರಿಸುವ ಪ್ರಯತ್ನವನ್ನು ಇವರಿಬ್ಬರೂ ಮಾಡದೆ, ಭಾರತೀಯ ಬೌಲರ್​ಗಳ ಫ್ಲೈಟೆಡ್ ಎಸೆತಗಳಿಗೆ ತಾಳ್ಮೆಯಿಂದ ಕಾಯ್ದರು. ರೂಟ್ ಬಾರಿಸಿದ ಎಲ್ಲ 14 ಬೌಂಡರಿಗಳು ಅದ್ಭುತವಾದ ಟೈಮಿಂಗ್​ನೊಂದಿಗೆ ಚಚ್ಚಿದವಾಗಿದ್ದವು.

ವಾಷಿಂಗ್ಟನ್ ಸುಂದರ್ ಮತ್ತು ಶಾಬಾಜ್ ನದೀಮ್ ಅವರಲ್ಲಿನ ಅನುಭವದ ಕೊರತೆಯೂ ಇಂಗ್ಲಿಷ್ ಬ್ಯಾಟ್ಸ್​ಮನ್​ಗಳಿಗೆ ನೆರವಾಗಿದ್ದು ಸುಳ್ಳಲ್ಲ. ಸರಿಯಾದ ಲೆಂಗ್ತ್ ಕಾಯ್ದುಕೊಳ್ಳುವುದು ಇವರಿಬ್ಬರಿಗೂ ಸಾಧ್ಯವಾಗಲಿಲ್ಲ. ಬ್ಯಾಟ್ಸ್​ಮನ್​ಗಳಿಗೆ ನೆರವಾದ ಮತ್ತೊಂದು ಸಂಗತಿಯೆಂದರೆ ಈ ಪಂದ್ಯದಲ್ಲಿ ಉಪಗಯೋಗಿಸಲ್ಪಡುತ್ತಿರುವ ಕೆಂಪು ಎಸ್​ಜಿ ಬಾಲ್. ಕೇವಲ 40ಓವರ್​ಗಳಾಗುಷ್ಟರಲ್ಲಿ ಅದು ಹೊಳಪು, ಸೀಮ್ ಮತ್ತು ಗಟ್ಟಿತನವನ್ನು ಕಳೆದುಕೊಂಡು ಮೆತ್ತಗಾಗಿಬಿಟ್ಟಿತ್ತು. ಚೆಂಡಿನ ಸ್ಥಿತಿ ಇಂಗ್ಲಿಷ್ ಆಟಗಾರರಿಗೆ ಹೊಡೆತ ಬಾರಿಸಿಲು ಹೆಚ್ಚಿನ ಸಮಯವನ್ನು ಒದಗಿಸಿತು.

ಬೆಳಗ್ಗೆ ಎಕ್ಸ್​ಪರ್ಟ್​ ಅಗಿ ಟಿವಿ ಸ್ಟುಡಿಯೊದಲ್ಲಿ ಕಾಣಿಸಿಕೊಂಡ ವಿವಿಎಸ್ ಲಕ್ಷಣ್ ನುಡಿದ ಭವಿಷ್ಯವಾಣಿ ಸ್ಪಾಟ್ಆನ್ ಆಗಿತ್ತು. ಲಂಚ್ ಸಮಯಕ್ಕೆ ಮೊದಲಿನ ಸೆಷನ್​ನಲ್ಲಿ ಭಾರತ ಎಷ್ಟು ವಿಕೆಟ್​ ಪಡೆಯಲಿದೆ ಎಂದು ನಿರೂಪಕ ಕೇಳಿದ ಪ್ರಶ್ನೆಗೆ ಲಕ್ಷ್ಮಣ್ ಎರಡು ವಿಕೆಟ್​ಗಳು ಮತ್ತು ಅವುಗಳನ್ನು ಆಶ್ವಿನ್ ಮತ್ತು ಬುಮ್ರಾ ಪಡೆಯಲಿದ್ದಾರೆ ಅಂತ ಹೇಳಿದ್ದರು. ಅವರ ಹೇಳಿದಂತೆಯೇ ಆಯಿತಾದರೂ ನಂತರದ ಎರಡು ಸೆಷನ್​ಗಳು ಪ್ರವಾಸಿಗರ ಪಾಲಾದವು.

ಪಿಚ್ ನಿರ್ಜೀವವಾಗಿದೆ, ಆದರೆ ಮೂರನೇ ದಿನದಿಂದ ಅದು ಬಿರಕುಗಳನ್ನು ಕಾಣಲಿದೆ. ಭಾರತ ಈ ಪಿಚ್ ಮೇಲೆ ನಾಲ್ಕನೇ ಇನ್ನಿಂಗ್ಸ್ ಆಡಬೇಕಿರುವವುದರಿಂದ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ದೊಡ್ಡ ಮೊತ್ತ ಗಳಿಸಲೇಬೇಕಿದೆ.

ಇದುವರೆಗಿನ ಸಂಕ್ಷಿಪ್ತ ಸ್ಕೋರ್:

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್: 263/3 (ರೋರಿ ಬರ್ನ್ಸ್ 33, ಡಾಮಿನಿಕ್ ಸಿಬ್ಲೀ 87, ಜೋ ರೂಟ್ ಬ್ಯಾಟಿಂಗ್ 128, ಬುಮ್ರಾ 40/2 ಮತ್ತು ಅಶ್ವಿನ್ 68/1)