India vs England Test Series | ಮೊದಲ ಟೆಸ್ಟ್ನಲ್ಲಿ ಕುಲ್ದೀಪ್ ಕಡೆಗಣನೆ: ಗೌತಮ್ ಗಂಭೀರ್ ಆಕ್ಷೇಪ
ಮೊದಲೆರಡು ಟೆಸ್ಟ್ಗಳಿಗೆ ಬಿಸಿಸಿಐ ಆಯ್ಕೆ ಮಾಡಿರುವ ತಂಡದಲ್ಲಿ ನದೀಮ್ ಇರಲಿಲ್ಲ. ಅಕ್ಸರ್ ಪಟೇಲ್ ಗುರುವಾರದಂದು ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದರಿಂದ ನದೀಮ್ರನ್ನು ತುರ್ತಾಗಿ ಟೀಮಿಗೆ ಕರೆಸಿಕೊಂಡು ಮೊದಲ ಟೆಸ್ಟ್ನಲ್ಲಿ ಆಡುವ ಅವಕಾಶ ಕಲ್ಪಿಸಲಾಗಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದು ಚೆನೈಯಲ್ಲಿ ಶುರುವಾದ ಸರಣಿಯ ಮೊದಲ ಟೆಸ್ಟ್ನಲ್ಲಿ ಎಡಗೈ ರಿಸ್ಟ್ ಸ್ಪಿನ್ನರ್ ಕುಲ್ದೀಪ್ ಯಾದವ್ರನ್ನು ಕಡೆಗಣಿಸಿ ಶಾಬಾಜ್ ನದೀಮ್ರನ್ನು ಅಡಿಸುತ್ತಿರುವುದು ದುರದೃಷ್ಟಕರ ಮತ್ತು ಆಶ್ಚರ್ಯಕರ ಎಂದು ಭಾರತದ ಮಾಜಿ ಅರಂಭ ಆಟಗಾರ ಮತ್ತು ಸಕ್ರಿಯ ರಾಜಕಾರಣಿ ಗೌತಮ್ ಗಂಭೀರ ಅಭಿಪ್ರಾಯಪಟ್ಟಿದ್ದಾರೆ.
ಹಾಗೆ ನೋಡಿದರೆ ಭಾರತ ಮತ್ತು ಇಂಗ್ಲೆಂಡ್ ನಡುವೆ ನದೀಮ್ ಮೊದಲೆರಡು ಟೆಸ್ಟ್ಗಳಿಗೆ ಬಿಸಿಸಿಐ ಆಯ್ಕೆ ಮಾಡಿರುವ ತಂಡದ ಭಾಗವಾಗಿರಲಿಲ್ಲ. ರವೀಂದ್ರ ಜಡೇಜಾ ಗಾಯಗೊಂಡಿರುವುದರಿಂದ ಅವರ ಸ್ಥಾನದಲ್ಲಿ ಆಯ್ಕೆಯಾಗಿರುವ ಅಕ್ಷರ್ ಪಟೇಲ್ ಗುರುವಾರದಂದು ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದರಿಂದ ನದೀಮ್ರನ್ನು ತುರ್ತಾಗಿ ಟೀಮಿಗೆ ಕರೆಸಿಕೊಂಡು ಮೊದಲ ಟೆಸ್ಟ್ನಲ್ಲಿ ಆಡುವ ಅವಕಾಶ ಕಲ್ಪಿಸಲಾಗಿದೆ. ಅವರೊಂದಿಗೆ ರವಿಚಂದ್ರನ್ ಅಶ್ವಿನ್ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಸಹ ಆಡುವ ಇಲೆವೆನ್ನಲ್ಲಿ ಆರಿಸಲಾಗಿದೆ.
ನದೀಮ್ ಸ್ಥಾನದಲ್ಲಿ ಕುಲ್ದೀಪ್ರನ್ನು ಆಡಿಸಿದ್ದರೆ, ಅವರು ಸರಣಿಯ ಅರಂಭದಲ್ಲೇ ಇಂಗ್ಲೀಷ್ ಆಟಗಾರರ ಮೇಲೆ ಪ್ರಭಾವ ಬೀರುತ್ತಿದ್ದರು ಎಂದು ಗಂಭೀರ್ ಒಂದು ಕ್ರೀಡಾ ವೆಬ್ಸೈಟ್ನೊಂದಿಗೆ ಮಾತಾಡುವಾಗ ಹೇಳಿದ್ದಾರೆ.
ಇದನ್ನೂ ಓದಿ: India vs England 1st Test, Day 1 LIVE Score
‘ಕುಲ್ದೀಪ್ ನಿಜಕ್ಕೂ ದುರದೃಷ್ಟಶಾಲಿ, ಭಾರತದ ಟೀಮ್ ಮ್ಯಾನೇಜ್ಮೆಂಟ್ ಅವರನ್ನು ಈ ಪಂದ್ಯದಲ್ಲಿ ಆಡಿಸಬೇಕಿತ್ತು. ಎಡಗೈ ರಿಸ್ಟ್ ಸ್ಪಿನ್ನರ್ ಅಪರೂಪಕ್ಕೊಮ್ಮೆ ಸಿಗುತ್ತಾರೆ, ಅವರ ಬೌಲಿಂಗ್ ಭಾರತಕ್ಕೆ ಬಹಳಷ್ಟು ನೆರವಾಗುತ್ತಿತ್ತು. ಕುಲ್ದೀಪ್ ಯಾವಾಗಲೂ ಟೀಮಿನ ಭಾಗವಾಗಿರುತ್ತಾರೆ ಆದರೆ ಅಡುವ ಇಲೆವೆನ್ನಲ್ಲಿ ಮಾತ್ರ ಸ್ಥಾನ ಪಡೆಯುವುದಿಲ್ಲ’ ಎಂದು ಗಂಭೀರ್ ಹೇಳಿದ್ದಾರೆ.
ಕುಲ್ದೀಪ್ ಶೇಕಡಾ ನೂರರಷ್ಟು ಫಿಟ್ ಆಗಿದ್ದರೂ, ಕೇವಲ ಅವರು ಮಾತ್ರ ಆಸ್ಟ್ರೇಲಿಯಾದಲ್ಲಿ ಒಂದೂ ಟೆಸ್ಟ್ ಆಡದೆ ಸ್ವದೇಶಕ್ಕೆ ಮರಳಿದರು. ಅವರು ಕೊನೆಯ ಬಾರಿ ಟೆಸ್ಟ್ವೊಂದರಲ್ಲಿ ಭಾರತದ ಪರ ಕಾಣಿಸಿಕೊಂಡಿದ್ದು 2019ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಸರಣಿಯಲ್ಲಿ. ಓದುಗರಿಗೆ ನೆನಪಿರಬಹುದು, ಆ ಪಂದ್ಯದಲ್ಲಿ ಅವರು ಇನ್ನಿಂಗ್ಸ್ ಒಂದರಲ್ಲಿ 5 ವಿಕೆಟ್ ಪಡೆಯುವ ಸಾಧನೆ ಮಾಡಿದ್ದರು.
‘ಕುಲ್ದೀಪ್ರನ್ನು ಸರಣಿಯ ಆರಂಭದಲ್ಲೇ ಉಪಯೋಗಿಸಬೇಕಿತ್ತು, ಎರಡನೇ ಇಲ್ಲವೇ ಮೂರನೇ ಟೆಸ್ಟ್ನಲ್ಲಿ ಅವರನ್ನು ಉಪಯೋಗಿಸಿದರಾಯಿತು ಅಂತ ಅಂದುಕೊಳ್ಳುವುದು ನಿರರ್ಥಕ. ಅವರು ರಿಸ್ಟ್ ಸ್ಪಿನ್ನರ್ ಆಗಿರುವುದರಿಂದ ಪಂದ್ಯದ ಮೇಲೆ ದೊಡ್ಡ ಪರಿಣಾಮ ಬೀರಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಆಡಿಸದಿರುವುದು ದುರದೃಷ್ಟಕರ ಮತ್ತು ಆಶ್ಚರ್ಯಕರ’ ಎಂದು ಗಂಭೀರ್ ಹೇಳಿದ್ದಾರೆ.
ಇದನ್ನೂ ಓದಿ: ಪರಸ್ಪರ ಗೌರವ, ವಿಶ್ವಾಸವೇ ನಮ್ಮ ಸ್ನೇಹಕ್ಕೆ ಆಧಾರ: ರಹಾನೆ ಬಗ್ಗೆ ವಿರಾಟ್ ಕೊಹ್ಲಿ
‘ಇಬ್ಬರು ಆಫ್-ಸ್ಪಿನ್ನರ್ಗಳನ್ನು ಆವರು ಆಡಿಸುತ್ತಿದ್ದಾರೆ. ನಾನಂದುಕೊಳ್ಳುವ ಹಾಗೆ, 7 ಮತ್ತು 8 ನೇ ಕ್ರಮಾಂಕದಲ್ಲಿ ಆಡುವವವರು ಆಲ್ರೌಂಡರ್ಗಳಾಗಿರಲಿ ಎನ್ನುವುದು ಅವರ ಉದ್ದೇಶವಾಗಿರಬಹುದು. ಆದರೆ, ಅವರ ನಡೆ ನನ್ನಲ್ಲಿ ಸೋಜಿಗ ಮೂಡಿಸಿದೆ. ನಾನು ನಾಯಕನಾಗಿದ್ದರೆ ಕುಲ್ದೀಪ್ರನ್ನು ಪ್ರತಿ ಟೆಸ್ಟ್ನಲ್ಲಿಯೂ ಆಡಿಸುತ್ತಿದ್ದೆ. ಎದುರಾಳಿ ತಂಡದಲ್ಲಿ ಎಡಚರಿದ್ದಾರೆಯೇ, ಬಲಗೈ ಬ್ಯಾಟ್ಸ್ಮನ್ಗಳಿದ್ದಾರೆಯೇ ಎಂದು ನಾನು ಯೋಚಿಸುತ್ತಿರಲಿಲ್ಲ. ಯಾಕೆಂದರೆ, ಬ್ಯಾಟ್ಸ್ಮನ್ ಆಡುವ ಶೈಲಿ ಯಾವುದೇ ಆಗಿದ್ದರೂ ಅವರನ್ನು ಔಟ್ ಮಾಡುವ ಸಾಮರ್ಥ್ಯ ಕುಲ್ದೀಪ್ ಅವರಲ್ಲಿರುವುದರಿಂದ ಮರುಯೋಚನೆಗೆ ಆಸ್ಪದ ನೀಡದೆ ಅವರನ್ನು ಆಡಿಸುತ್ತಿದ್ದೆ’ ಎಂದು ಗಂಭೀರ್ ಹೇಳಿದ್ದಾರೆ.
Published On - 5:03 pm, Fri, 5 February 21