ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಶುರುವಾಗುವ ಮುನ್ನಾ ದಿನವಾದ ಇಂದು, ಟೀಮಿನ ನಾಯಕ ವಿರಾಟ್ ಕೊಹ್ಲಿ, ತಮ್ಮ ಡೆಪ್ಯುಟಿ ಅಜಿಂಕ್ಯಾ ರಹಾನೆ ಆಸ್ಟ್ರೇಲಿಯಾದಲ್ಲಿ ಸರಣಿ ಗೆದ್ದ ಸಾಧನೆಯನ್ನು ಮನಸಾರೆ ಕೊಂಡಾಡಿ ಅವರು ಟೀಮನ್ನು ಮುನ್ನಡೆಸಿದ ವಿಧಾನ ಅದ್ಭುತವಾಗಿತ್ತು ಎಂದು ಹೇಳಿದರು. ಆ ಸರಣಿಯ ಮೊದಲ ಟೆಸ್ಟ್ನಲ್ಲಿ ಭಾರತ ಹೀನಾಯ ಸೋಲು ಅನುಭವಿಸಿದ ನಂತರ ಕೊಹ್ಲಿ ಪಿತೃತ್ವ ರಜೆ ಮೇಲೆ ಭಾರತಕ್ಕೆ ವಾಪಸ್ಸಾಗಿದ್ದರು.
ಕೊಹ್ಲಿಯ ಗೈರುಹಾಜರಿಯಲ್ಲಿ ಟೀಮಿನ ನಾಯಕತ್ವ ವಹಿಸಿಕೊಂಡ ರಹಾನೆ ಮೆಲ್ಬರ್ನ್ ಟೆಸ್ಟ್ನಲ್ಲಿ ಮ್ಯಾಚ್ ವಿನ್ನಿಂಗ್ ಶತಕ ಬಾರಿಸುವದರ ಜೊತೆಗೆ ಬ್ರಿಸ್ಬೇನ್ನಲ್ಲಿ ನಡೆದ ಕೊನೆಯ ಟೆಸ್ಟ್ನಲ್ಲಿ ಭಾರತಕ್ಕೆ ಅವಿಸ್ಮರಣಿಯ ಗೆಲುವು ದೊರಕಿಸಿದರು.
ಟೀಮ್ ಇಂಡಿಯಾದ ಎಲ್ಲ ಸದಸ್ಯರ ನಡುವೆ ಬೇರೆಯವರಲ್ಲಿ ಈರ್ಷ್ಯೆ ಹುಟ್ಟಿಸುವಂಥ ಸೌಹಾರ್ದತೆ, ಸಾಮರಸ್ಯ ಮತ್ತು ಹೊಂದಾಣಿಕೆ ಇದೆಯೆಂದು ಚೆನೈಯಲ್ಲಿ ಮಾಧ್ಯಮದವರೊಂದಿಗೆ ವರ್ಚ್ಯುಯಲ್ ಗೋಷ್ಠಿಯಲ್ಲಿ ಮಾತಾಡುವಾಗ ಕೊಹ್ಲಿ ಹೇಳಿದರು. ಎಲ್ಲ ಸದಸ್ಯರ ಗುರಿ ಟೀಮಿಗೆ ಗೆಲುವು ಮತ್ತು ಶ್ರೇಯಸ್ಸು ತಂದುಕೊಡುವುದಾಗಿದೆ ಎಂಬ ಅಂಶವನ್ನು ಅವರು ಒತ್ತಿ ಹೇಳಿದರು.
‘ಕೇವಲ ನನ್ನ ಮತ್ತು ಜಿಂಕ್ಸ್ (ಅಜಿಂಕ್ಯಾ ರಹಾನೆ) ನಡುವಿನ ಸಾಮರಸ್ಯದ ಬಗ್ಗೆ ನಾನು ಮಾತಾಡುತ್ತಿಲ್ಲ. ಎಲ್ಲ ಸದಸ್ಯರ ನಡುವೆ ಅತ್ಯುತ್ತಮ ಹೊಂದಾಣಿಕೆಯಿದೆ. ಆಸ್ಟ್ರೇಲಿಯಾದಲ್ಲಿ ತನಗೆ ನೀಡಿದ ಜವಾಬ್ದಾರಿಯನ್ನು ಜಿಂಕ್ಸ್ ಅಸಾಧಾರಣವಾದ ರೀತಿಯಲ್ಲಿ ನಿಭಾಯಿಸಿದರು. ಟೀಮನ್ನು ಅವರು ನಮ್ಮೆಲ್ಲರ ಗುರಿಯಾಗಿದ್ದ ಗೆಲುವಿನತ್ತ ಮುನ್ನಡೆಸಿದ್ದು ಅವಿಸ್ಮರಣಿಯ’ ಎಂದು ಕೊಹ್ಲಿ ಹೇಳಿದರು.
ತನ್ನ ಮತ್ತು ರಹಾನೆ ನಡುವೆ ಇರುವ ಸಂಬಂಧದ ಬಗ್ಗೆಯೂ ಬೆಳಕು ಚೆಲ್ಲಿದ ಕೊಹ್ಲಿ ಅದು ಹೇಗೆ ಮೈದಾನದಲ್ಲಿ ನೆರವಾಗುತ್ತಿದೆ ಎಂದು ಹೇಳಿದರು.
ನಾನು ಮತ್ತು ಜಿಂಕ್ಸ್ ಜೊತೆಯಾಗಿ ಬ್ಯಾಟ್ ಮಾಡುವುದನ್ನು ಯಾವಾಗಲೂ ಅನಂದಿಸುತ್ತೇವೆ. ನಮ್ಮಲ್ಲಿರುವ ಪರಸ್ಪರ ಗೌರವವನ್ನು ಇದು ಸೂಚಿಸುತ್ತದೆ. ಮೈದಾನದಾಚೆಯೂ ನಮ್ಮ ನಡುವೆ ಗಾಢ ಮತ್ತು ಸೌಹಾರ್ದಯುತ ಸಂಬಂಧವಿದೆ. ನಾವು ಯಾವಾಗಲೂ ಸಂಪರ್ಕದಲ್ಲಿರುತ್ತೇವೆ ಮತ್ತು ನಮ್ಮ ನಡುವೆ ನಿರಂತರವಾಗಿ ಮಾತುಕತೆ ನಡೆಯುತ್ತಲೇ ಇರುತ್ತದೆ. ನಮ್ಮ ಸಂಬಂಧ ವಿಶ್ವಾಸದ ಮೇಲೆ ನೆಲೆಗೊಂಡಿದೆ,’ ಎಂದು ಕೊಹ್ಲಿ ಹೇಳಿದರು.
ಭಾರತ ಮತ್ತು ಇಂಗ್ಲೆಂಡ್ ನಡುವೆ ಮೊದಲೆರಡು ಟೆಸ್ಟ್ಗಳು ಚೆನೈಯಲ್ಲಿ ಮತ್ತು ಕೊನೆಯ ಎರಡು ಅಹಮದಾಬಾದಿನಲ್ಲಿ ನಡೆಯಲಿವೆ.
India vs England Test Series | ಈ ಸರಣಿಯಲ್ಲೂ ನಿರ್ಣಾಯಕರಾಗುತ್ತಾರಾ ಎಡಗೈ ಸ್ಪಿನ್ನರ್ಗಳು
Published On - 9:02 pm, Thu, 4 February 21