Tata Steel Chess: ಟಾಟಾ ಸ್ಟೀಲ್ ಚೆಸ್ ಸ್ಪರ್ಧೆಯಲ್ಲಿ ದಿವ್ಯಾ ದೇಶಮುಖ್ ಕ್ವೀನ್

Tata Steel Chess: ಮೊದಲ ಪಂದ್ಯದ ಮೊದಲು ನಾನು ತುಂಬಾ ನರ್ವಸ್ ಆಗಿದ್ದೆ. ಇದು ನನ್ನ ಆಟದ ಗುಣಮಟ್ಟದ ಮೇಲೆ ಪರಿಣಾಮ ಬೀರಿತ್ತು. ಆದರೆ ಜು ವಿರುದ್ಧ ಪ್ರಾರಂಭದಲ್ಲಿ ನಿರರ್ಗಳವಾಗಿ ಆಡುವುದು, ಮಧ್ಯಮ ಗೇಮ್‌ನಲ್ಲಿ ಒತ್ತಡವನ್ನು ಕಾಯ್ದುಕೊಳ್ಳುವುದು ನನ್ನ ಪ್ಲ್ಯಾನ್ ಆಗಿತ್ತು ಎಂದು ದಿವ್ಯಾ ದೇಶಮುಖ್ ತಿಳಿಸಿದ್ದಾರೆ.

Tata Steel Chess: ಟಾಟಾ ಸ್ಟೀಲ್ ಚೆಸ್ ಸ್ಪರ್ಧೆಯಲ್ಲಿ ದಿವ್ಯಾ ದೇಶಮುಖ್ ಕ್ವೀನ್
Divya Deshmukh
Updated By: ಝಾಹಿರ್ ಯೂಸುಫ್

Updated on: Sep 03, 2023 | 8:06 PM

ಕೋಲ್ಕತ್ತಾದಲ್ಲಿ ನಡೆದ ಟಾಟಾ ಸ್ಟೀಲ್ ಚೆಸ್‌ ಚಾಂಪಿಯನ್​ಶಿಪ್​ನಲ್ಲಿ ಭಾರತದ ದಿವ್ಯಾ ದೇಶಮುಖ್ ಮಹಿಳಾ ರಾಪಿಡ್ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಆರ್. ವೈಶಾಲಿ ಈ ಚಾಂಪಿಯನ್​ಶಿಪ್​ನಿಂದ ಕೊನೆಯ ಘಳಿಗೆಯಲ್ಲಿ ಹಿಂದೆ ಸರಿದ ಕಾರಣ ಅವಕಾಶ ದಿವ್ಯಾ ದೇಶಮುಖ್​ಗೆ ಅವಕಾಶ ನೀಡಲಾಗಿತ್ತು.​ ಇದೀಗ ಸಿಕ್ಕ ಅವಕಾಶವನ್ನು ಬಳಸಿಕೊಂಡಿರುವ 17 ವರ್ಷದ ಯುವ ಚೆಸ್ ತಾರೆ ಚಾಂಪಿಯನ್ ಪಟ್ಟಕ್ಕೇರುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಇದಕ್ಕೂ ಮುನ್ನ ದಿವ್ಯಾ ದೇಶಮುಖ್ ಎರಡನೇ ಶ್ರೇಯಾಂಕದ ಮತ್ತು ಭಾರತದ ನಂ 1 ಕೊನೇರು ಹಂಪಿಯನ್ನು ಕಪ್ಪು ಕಾಯಿಗಳೊಂದಿಗೆ ಸೋಲಿಸಿ ಅಂತಿಮ ಸುತ್ತಿನತ್ತ ಹೆಜ್ಜೆಹಾಕಿದ್ದರು. ಅಲ್ಲದೆ ಅಂತಿಮವಾಗಿ ಹಾಲಿ ವಿಶ್ವ ಚಾಂಪಿಯನ್ ಚೀನಾದ ಜು ವೆಂಜುನ್ ವಿರುದ್ಧ 7/9 ಸ್ಕೋರ್‌ಗಳೊಂದಿಗೆ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾದರು.

ಈ ಗೆಲುವಿನ ಬಗ್ಗೆ ಮಾತನಾಡಿದ ದಿವ್ಯಾ ದೇಶಮುಖ್, ನಾನು ಒತ್ತಡ ಅನುಭವಿಸಿದ್ದೆ. ಮೊದಲ ಪಂದ್ಯದ ಮೊದಲು ನಾನು ತುಂಬಾ ನರ್ವಸ್ ಆಗಿದ್ದೆ. ಇದು ನನ್ನ ಆಟದ ಗುಣಮಟ್ಟದ ಮೇಲೆ ಪರಿಣಾಮ ಬೀರಿತ್ತು. ಆದರೆ ಜು ವಿರುದ್ಧ ಪ್ರಾರಂಭದಲ್ಲಿ ನಿರರ್ಗಳವಾಗಿ ಆಡುವುದು, ಮಧ್ಯಮ ಗೇಮ್‌ನಲ್ಲಿ ಒತ್ತಡವನ್ನು ಕಾಯ್ದುಕೊಳ್ಳುವುದು ನನ್ನ ಪ್ಲ್ಯಾನ್ ಆಗಿತ್ತು. ಇದರ ಜೊತೆಗೆ ಅಂತಿಮ ಆಟಕ್ಕೆ ಪ್ರವೇಶಿಸುವುದು ನನ್ನ ಉದ್ದೇಶವಾಗಿತ್ತು. ಅದರಂತೆ ಅಂತಿಮ ಹಂತದಲ್ಲಿ ಪ್ರಭಾವಶಾಲಿ ನಡೆಯಿಂದಾಗಿ ಜು ವಿರುದ್ಧ ಸುಲಭ ಜಯವನ್ನು ಗಳಿಸಲು ಅನುವು ಮಾಡಿಕೊಟ್ಟಿದೆ ಎಂದು ದಿವ್ಯಾ ದೇಶಮುಖ್ ತಿಳಿಸಿದ್ದಾರೆ.

ಸಂಚಲನ ಸೃಷ್ಟಿಸಿದ ದಿವ್ಯಾ:

ವಿಶ್ವ ಚೆಸ್ ಶ್ರೇಯಾಂಕ ಪಟ್ಟಿಯಲ್ಲಿ ದಿವ್ಯಾ ದೇಶಮುಖ್ ಅವರು 2128ನೇ ಸ್ಥಾನದಲ್ಲಿದ್ದಾರೆ. ಇದೀಗ 333 ಶ್ರೇಯಾಂಕದಲ್ಲಿರುವ ಚೀನಾದ ಮಹಿಳಾ ವಿಶ್ವ ಚಾಂಪಿಯನ್ ಜು ವೆಂಜುನ್ ಅವರನ್ನು ಮಣಿಸಿ ಟಾಟಾ ಸ್ಟೀಲ್ ಚೆಸ್‌ ಸ್ಪರ್ಧೆಯಲ್ಲಿ ಕ್ವೀನ್ (ರಾಣಿ) ಆಗಿರುವುದು ವಿಶೇಷ.

 

 

Published On - 6:35 pm, Sun, 3 September 23