ಭಾರತೀಯ ಕ್ರಿಕೆಟ್ ಮಂಡಳಿಯನ್ನು ಬೇರೆಯವರು ನಿಯಂತ್ರಿಸುತ್ತಿದ್ದಾರೆಯೇ?

|

Updated on: Nov 27, 2020 | 7:51 PM

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ನಿನ್ನೆ ಸಿಡ್ನಿಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಅವರ ಗಾಯ ಮತ್ತು ಚೇತರಿಕೆ ಬಗ್ಗೆ ಬಿಸಿಸಿಐನಿಂದ ತನಗೆ ಯಾವುದೇ ಮಾಹಿತಿ ಸಿಕ್ಕಿಲ್ಲವೆಂದು ಹೇಳಿದ್ದು ಮಂಡಳಿಯ ವ್ಯವಹಾರಗಳು ಹೇಗೆ ನಡೆಯುತ್ತಿವೆ ಎನ್ನುವುದರ ಮೇಲೆ ಬೆಳಕು ಚೆಲ್ಲುತ್ತದೆ.

ಭಾರತೀಯ ಕ್ರಿಕೆಟ್ ಮಂಡಳಿಯನ್ನು ಬೇರೆಯವರು ನಿಯಂತ್ರಿಸುತ್ತಿದ್ದಾರೆಯೇ?
Follow us on

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಯಾರ ನಿಯಂತ್ರಣದಲ್ಲಿರುವುದು ಅಂತ ಭಾರತೀಯ ಕ್ರಿಕೆಟ್ ಪ್ರೇಮಿಗಳಲ್ಲಿ ಗೊಂದಲ ಶುರುವಾಗಿದೆ. ನಿನ್ನೆಯವರಿಗೆ ಇದರ ಬಗ್ಗೆ ಯಾರೆಂದರೆ ಯಾರೂ ಯೋಚಿಸಿರಲಿಲ್ಲ. ಯಾವಾಗ ಗುರುವಾರದಂದು ಸಿಡ್ನಿಯಲ್ಲಿ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಒಂದು ಅನೌಪಚಾರಿಕ (ಯಾಕೆಂದರೆ ಪ್ರಶ್ನೆಗಳನ್ನು ಅವರಿಗೆ ಮೊದಲೇ ಬರೆದು ಕಳಿಸಲಾಗಿತ್ತು) ಸುದ್ದಿಗೋಷ್ಠಿಯೊಂದರಲ್ಲಿ, ತಮಗೆ ರೊಹಿತ್ ಶರ್ಮ ಅವರ ಗಾಯದ ಬಗ್ಗೆ ಸರಿಯಾದ ಮಾಹಿತಿಯೇ ಇಲ್ಲ, ಅವರು ನಮ್ಮೊಂದಿಗೆ ದುಬೈನಲ್ಲಿ ಆಸ್ಟ್ರೇಲಿಯಾಗೆ ಹೊರಟು ನಿಂತ ವಿಮಾನವನ್ನು ಯಾಕೆ ಹತ್ತಲಿಲ್ಲವೆನ್ನುವುದು ನನಗೆ ಗೊತ್ತಿಲ್ಲ, ಅವರು ಗಾಯಗೊಂಡಿದ್ದರೆಂದು ಹೇಳಲಾಗುತ್ತಿದೆ, ಆದರೆ ಚೇತರಿಸಿಕೊಂಡಿದ್ದಾರೆಯೋ ಇಲ್ಲವೋ ಅಂತ ಬಿಸಿಸಿಐನಿಂದ ಮಾಹಿತಿ ಸಿಕ್ಕಿಲ್ಲವೆಂದು ಹೇಳಿದರೋ ಸೌರವ್ ಗಂಗೂಲಿ ನೇತೃತ್ವದ ಮಂಡಳಿಯಲ್ಲೂ ಎಲ್ಲವೂ ಸರಿಯಿಲ್ಲ ಎನ್ನುವುದು ಸ್ಪಷ್ಟವಾಯಿತು.

ರೋಹಿತ್ ಮತ್ತು ಕೊಹ್ಲಿ ಮಧ್ಯೆ ಸಂಬಂಧ ಸರಿಯಿಲ್ಲದಿರುವುದು ಬೇರೆ ಗ್ರಹದ ಜನರಿಗೂ ಗೊತ್ತಿದೆ. ಅವರು ಈಗಲೂ ಕಣ್ಣಲ್ಲಿ ಕಣ್ಣಿಟ್ಟು ಮತಾಡುವುದಿಲ್ಲ. ನಮ್ಮ ಮಧ್ಯೆ ಅಂಥದ್ದೇನೂ ಇಲ್ಲ ಅಂತ ಇಬ್ಬರೂ ಹೇಳುತ್ತಾರೆಯೇ ಹೊರತು ನಿಜಾಂಶ ಅವರ ಹತ್ತಿರದವರಿಗೆಲ್ಲ ಗೊತ್ತಿದೆ. ಪ್ರಾಯಶ: ಭಾರತೀಯ ತಂಡಕ್ಕೆ ಸಂಭಂಧಿಸಿದವರ ಪೈಕಿ ಒಬ್ಬರಿಲ್ಲ್ಲೊಬ್ಬರೊಂದಿಗೆ ಮುನಿಸಿಟ್ಟುಕೊಳ್ಳುವ, ಭಿನ್ನಾಭಿಪ್ರಾಯ ತಳೆಯುವ ಜಾಯಮಾನ ಕೊಹ್ಲಿಯವರದ್ದಾಗಿದೆ ಅಂತ ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ.

ಕರ್ನಾಟಕ ಮತ್ತು ಭಾರತದ ಲೆಜೆಂಡರಿ ಲೆಗಸ್ಪಿನ್ನರ್ ಅನಿಲ್ ಕುಂಬ್ಳೆ ಟೀಮ್ ಇಂಡಿಯಾದ ಕೋಚ್ ಆಗಿದ್ದಾಗ ಅವರ ಮತ್ತು ಕೊಹ್ಲಿ ನಡುವಿನ ಸಂಬಂಧ ಹೇಗಿತ್ತು ಮತ್ತು ಕನ್ನಡಿಗ ಯಾಕೆ ತಮ್ಮ ಸ್ಥಾನದಿಂದ ನಿರ್ಗಮಿಸಬೇಕಾಯಿತು ಎನ್ನುವುದನ್ನು ನೆನಪು ಮಾಡಿಕೊಂಡರೆ ಭಾರತದ ನಾಯಕನಲ್ಲಿ ಅಡಗಿರುವ ಅಹಂಭಾವ ಗೊತ್ತಾಗುತ್ತದೆ. ಕುಂಬ್ಳೆ ಕೇವಲ ಒಂದು ವರ್ಷದ ಅವಧಿಗೆ ಮಾತ್ರ (2016-17) ಮಾತ್ರ ಟೀಮಿನ ಕೋಚ್ ಆಗಿದ್ದರು. ಈ ಒಂದು ವರ್ಷದ ಅವಧಿಯಲ್ಲಿ 9 ತಿಂಗಳು ಅವರಿಬ್ಬರ (ಕುಂಬ್ಳೆ-ಕೊಹ್ಲಿ) ನಡುವೆ ಮಾತುಕತೆಯೇ ಇರಲಿಲ್ಲವೆಂದರೆ ನೀವು ನಂಬುತ್ತೀರಾ?

ರೊಹಿತ್ ಕುರಿತ ವಿಷಯವನ್ನು ಗಮನಿಸೋಣ. ಐಪಿಎಲ್ 2020 ಅಂತಿಮ ಹಂತಕ್ಕೆ ಬಂದಾಗ ಅಂದರೆ ಅಕ್ಟೋಬರ್ 18ರಂದು ಅವರು ಗಾಯಗೊಂಡರು. ಅಕ್ಟೋಬರ್ 26 ರಂದು ಬಿಸಿಸಿಐ ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತದ ಟೀಮುಗಳನ್ನು ಘೋಷಿಸಿತು. ಗಾಯದ ಕಾರಣ ರೋಹಿತ್ ಅವರನ್ನು ಆರಿಸಿಲ್ಲ, ಎಂದು ಬಿಸಿಸಿಐ ಕಾರ್ಯದರ್ಶಿ ಜಯಂತ್ ಶಾಹ ಹೇಳಿದರು. ನವೆಂಬರ್ 3ರಂದು ಗಂಗೂಲಿ ಮಾಧ್ಯದವರಿಗೆ ಹೇಳಿಕೆಯೊಂದನ್ನು ನೀಡಿ ರೊಹಿತ್​ಗೆ ತೀವ್ರ ಸ್ವರೂಪದ ಗಾಯವಾಗಿದೆ ಎಂದರು. ತಮಾಷೆಯೆಂದರೆ ಅದೇ ದಿನ, ಮುಂಬೈ ಇಂಡಿಯನ್ಸ್ ಮತ್ತು ಸನ್​ರೈಸರ್ಸ್ ನಡುವೆ ನಡೆದ ಪಂದ್ಯದಲ್ಲಿ ರೋಹಿತ್ ಆಡಿದರು. ಪಂದ್ಯ ಮುಗಿದ ನಂತರ ಸುದ್ದಿಗಾರರು ಗಾಯದ ಬಗ್ಗೆ ಕೇಳಿದಾಗ; ರೋಹಿತ್, ಅದು ಪೂರ್ತಿಯಾಗಿ ವಾಸಿಯಾಗಿದೆ, ಯಾವುದೇ ತೊಂದರೆಯಿಲ್ಲವೆಂದರು. ಬಿಸಿಸಿಐಯನ್ನು ಇಕ್ಕಟ್ಟಿಗೆ ಸಿಲುಕಿಸಬಾರದೆಂದು ಅವರು ಹಾಗೆ ಹೇಳಿದರೆ? ಇರಬಹುದು.

‘ನನಗೆ ಯಾವುದೇ ಸಮಸ್ಯೆಯಿಲ್ಲ,’ ಎಂದು ರೋಹಿತ್ ಹೇಳಿದ್ದು ನಿಜವೇ ಆಗಿದ್ದರೆ ಅವರನ್ನು ಆಸ್ಟ್ರೇಲಿಯಾಗೆ ಯಾಕೆ ಕಳಿಸಲಿಲ್ಲ? ಈ ಪ್ರಶ್ನೆಗೆ ಗಂಗೂಲಿಯಲ್ಲಾಗಲೀ, ಶಾಹ ಅವರಲ್ಲಾಗಲೀ ಉತ್ತರವಿಲ್ಲ. ನಿಮಗೆ ನೆನಪಿರಬಹುದು, ನವೆಂಬರ್ ಮೊದಲ ವಾರದಲ್ಲಿ ಹೇಳಿಕೆಯೊಂದನ್ನು ನೀಡಿದ್ದ ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ, ರೊಹಿತ್ ಆಡುವುದನ್ನು ಮುಂದುವರಿಸಿದರೆ ಅವರ ಗಾಯ ಉಲ್ಬಣಗೊಂಡು ಅವರ ಕರೀಯರ್ ಮೇಲೆ ಪರಿಣಾಮ ಬೀರಬಹುದು ಅಂತ ಹೇಳಿ, ಹೇಗೆ ತಮ್ಮ ನಿರ್ಲಕ್ಷ್ಯ ಆಟಗಾರನಾಗಿ ತಮ್ಮ ಕರೀಯರ್​ರನ್ನು ಅರ್ಧಕ್ಕೆ ಕೊನೆಗಾಣಿಸಿತು ಎಂಬುದನ್ನು ವಿವರಿಸಿದ್ದರು. ಆಮೇಲೆ ಶಾಸ್ತ್ರಿ, ರೋಹಿತ್ ಮತ್ತು ಇಶಾಂತ್ ಶರ್ಮ ಆದಷ್ಟು ಬೇಗ ಆಸ್ಟ್ರೇಲಿಯಾಗೆ ಬರದಿದ್ದರೆ ಅವರು ಟೆಸ್ಟ್​ಗಳನ್ನು ಆಡುವ ಆವಕಾಶ ಕಳೆದುಕೊಳ್ಳಲಿದ್ದಾರೆ ಎಂದು ಹೇಳಿದ್ದರು. ಈ ಜನರ ಹೇಳಿಕೆಗಳೆಲ್ಲ ಗೊಂದಲಮಯವಾಗಿಲ್ಲವೇ? ಪ್ರಾಯಶಃ ಈ ಗೊಂದಲಗಳನ್ನು ಮುಚ್ಚಲೆಂದೇ ರೋಹಿತ್ ಅವರನ್ನು ಟೆಸ್ಟ್ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು.

ಮತ್ತೊಂದು ವಿಷಯವನ್ನು ಗಮನಿಸಿ. ವೃದ್ಧಿಮಾನ ಸಹಾ ಕೂಡ ಗಾಯಾಳುಗಳ ಪಟ್ಟಿಯಲ್ಲಿದ್ದರು. ಗಾಯದಿಂದಾಗಿಯೇ ಅವರು ಐಪಿಎಲ್​ನಲ್ಲಿ ಬಹಳಷ್ಟು ಪಂದ್ಯಗಳನಾಡಲಿಲ್ಲ. ಗಾಯದ ಹೊರತಾಗಿಯೂ ಅವರನ್ನು ಟೆಸ್ಟ್ ತಂಡದಲ್ಲಿ ಆಯ್ಕೆ ಮಾಡಲಾಗಿದೆ. ಅವರನ್ನು ಆರಿಸಬಹುದಾಗಿದ್ದರೆ, ರೊಹಿತ್ ಅವರಿಗ್ಯಾಕೆ ಬೇರೆ ಮಾನದಂಡ?

ನಿನ್ನೆ ಕೊಹ್ಲಿಯವರ ಪ್ರೆಸ್ಸರ್ ಬಿಸಿಸಿಐನ ಢಾಂಬಿಕತನವನ್ನು ಹೊರಹಾಕಿದೆ. ಟೀಮಿನ ನಾಯಕನಿಗೆ ತನ್ನ ಉಪನಾಯಕ ಎಲ್ಲಿದ್ದಾನೆ, ಏನು ಮಾಡುತ್ತಿದ್ದಾನೆ ಬಗ್ಗೆ ಏನೂ ಗೊತ್ತಿರಲಿಲ್ಲವೆಂದರೆ ಬಿಸಿಸಿಐ ವ್ಯವಹಾರಗಳು ಹೇಗೆ ನಡೆಯುತ್ತಿವೆ ಎನ್ನುವುದು ಗೊತ್ತಾಗುತ್ತದೆ. ಐಪಿಎಲ್​ನ ಉಳಿದ ಪಂದ್ಯಗಳಲ್ಲಿ ಬಿಸಿಸಿಐ ಆಡಬೇಡವೆಂದರೂ ರೋಹಿತ್ ಆಡಿದ್ದು ಅವರಿಗೆ ದೇಶಕ್ಕಿಂತ ಕ್ಲಬ್ ಮುಖ್ಯ ಎನ್ನುವುದು ಸಾಬೀತಾಗುತ್ತದೆ.

ಮತ್ತೊಂದು ವಿಧದಲ್ಲಿ ಹೇಳಬೇಕೆಂದರೆ ಮುಂಬೈ ಇಂಡಿಯನ್ಸ್ ಟೀಮಿನ ಧಣಿಗಳಾಗಿರುವ ಅಂಬಾನಿಗಳು ಬಿಸಿಸಿಐಯನ್ನು ನಿಯಂತ್ರಿಸುತ್ತಿದ್ದಾರೆ ಎನ್ನುವುದು ವಿದಿತವಾಗುತ್ತದೆ. ಅದು ನಿಜವೇ ಆದರೆ ಅದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ

.ರೋಹಿತ್ ಗಾಯದ ವಿಷಯ ವಿವಾದಕ್ಕೆ ತಿರುಗುತ್ತಿದ್ದಂತೆ ಬಿಸಿಸಿಐ ಅದಕ್ಕೆ ತ್ಯಾಪೆ ಹಚ್ಚುವ ಪ್ರಯತ್ನ ಮಾಡುತ್ತಿದೆ. ಅವಸವಸರದಲ್ಲಿ ಅವರಿಗೆ ಟಿಕೆಟ್ ಮಾಡಿಸಿ ಆಸ್ಟ್ರೇಲಿಯಾಗೆ ರವಾನಿಸುತ್ತಿದೆ. ಅವರ ತಂದೆಗೆ ಕೊವಿಡ್ ಸೋಂಕು ತಾಕಿತ್ತು, ಹೃದಯ ಬೇನೆಯಿಂದಲೂ ಅವರು ಬಳಲುತ್ತಿರುವುದರಿಂದ, ರೋಹಿತ್ ಅವರೊಂದಿಗೆ ಇರುವುದು ಅನಿವಾರ್ಯವಾಗಿತ್ತು ಎಂದು ಬಿಸಿಸಿಐ ಆಧಿಕಾರಿಯೊಬ್ಬರಿಂದ ಹೇಳಿಕೆ ನೀಡಿಸಲಾಗಿದೆ.

ಕೊಹ್ಲಿ ನಿನ್ನೆ ಪೆಸ್ಸರ್ ನಡೆಸದಿದ್ದರೆ, ರೊಹಿತ ಭಾರತದಲ್ಲೇ ಉಳಿದುಬಿಡುತ್ತಿದ್ದರೇನೋ? ಅಸಲಿಗೆ ಸಮಸ್ಯೆಯೇನು, ಮಂಡಳಿಯಲ್ಲಿ ಯಾರ ಮರ್ಜಿ ನಡೆಯುತ್ತಿದೆ, ಕೊಹ್ಲಿಯನ್ನು ಯಾಕೆ ಕತ್ತಲೆಯಲ್ಲಿ ಇಡಲಾಗಿತ್ತು, ಕೊಹ್ಲಿ ಮತ್ತು ರೋಹಿತ್ ಮಧ್ಯೆ ಭಿನ್ನಾಭಿಪ್ರಾಯಗಳಿದ್ದರೆ ಮಂಡಳಿ ಅವರಿಬ್ಬರನ್ನು ಕೂರಿಸಿಕೊಂಡು ಯಾಕೆ ಮಾತಾಡುತ್ತಿಲ್ಲ ಮೊದಲಾದ ಪ್ರಶ್ನೆಗಳಿಗೆ ಮುಂದೆ ಉತ್ತರ ಸಿಗಬಹುದು.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಲಿ, ಅಂಬಾನಿ ನಿಯಂತ್ರಿತ ಕ್ರಿಕೆಟ್ ಮಂಡಳಿ ಅಗುವ ಮೊದಲು ಮಂಡಳಿಗೆ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳುವುದು ಒಳಿತು.

ಅನಿಲ್ ಕುಂಬ್ಳೆ

ಸೌರವ್ ಗಂಗೂಲಿ