ಕ್ವೀನ್ಸ್ಲೆಂಡ್ ಸರ್ಕಾರ ಟೀಮ್ ಇಂಡಿಯಾದೆಡೆ ಇನ್ನೂ ಬಿಗಿ ನಿಲುವು ತಳೆದಿರುವಂತಿದೆ. ಟೀಮಿನ ಸದಸ್ಯರು ಇಂದು ಕ್ವೀನ್ಸ್ಲೆಂಡ್ ರಾಜಧಾನಿ ಬ್ರಿಸ್ಬೇನ್ ತಲುಪಿ ಅವರಿಗಾಗಿ ನಿಗದಿ ಮಾಡಿರುವ ಹೋಟೆಲನ್ನು ತಲುಪಿದಾಗ ಆಘಾತ ಎದುರಾಗಿತ್ತು. ಮೂಲ ಸವಲತ್ತುಗಳು ಸಹ ಇಲ್ಲದ ಹೊಟೆಲ್ ರೂಮುಗಳನ್ನು ನೀಡಲಾಗಿದೆ ಎಂದು ಅವರು ದೂರಿದ ಕೂಡಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಉನ್ನತಾಧಿಕಾರಿಗಳು ಕಾರ್ಯ ಪ್ರವೃತ್ತಗೊಂಡು ಕ್ರಿಕೆಟ್ ಆಸ್ಟ್ರೇಲಿಯಾದ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ, ಬಿಸಿಸಿಐ ಆಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ, ಮತ್ತು ಸಿಈಒ ಹೆಮಂಗ್ ಅಮಿನ್, ಅಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರ ಕ್ರಿಕೆಟ್ ಆಸ್ಟ್ರೇಲಿಯಾ ಸವಲತ್ತುಗಳನ್ನು ಒದಗಿಸುವ ಭರವಸೆ ನೀಡಿದೆ. ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಎರಡು ರಾಷ್ಟ್ರಗಳು ಒಂದೊಂದರಲ್ಲಿ ಜಯಿಸಿದ್ದು ಸಿಡ್ನಿಯಲ್ಲಿ ನಿನ್ನೆ ಕೊನೆಗೊಂಡ ಮೂರನೇ ಟೆಸ್ಟ್ ಡ್ರಾನಲ್ಲಿ ಮುಕ್ತಾಯಗೊಂಡಿತ್ತು.
ಸುದ್ದಿಸಂಸ್ಥೆಯೊಂದರ ಜೊತೆ ಮಾತಾಡಿರುವ ಬಿಸಿಸಿಐ ಅಧಿಕಾರಿಯೊಬ್ಬರು, ‘ಭಾರತೀಯ ಆಟಗಾರರಿಗೆ ಒದಗಿಸಿರುವ ಹೋಟೆಲ್ನಲ್ಲಿ ರೂಮ್ ಸರ್ವಿಸ್ ಮತ್ತು ಹೌಸ್ ಕೀಪಿಂಗ್ ಸೌಲಭ್ಯಗಳಿಲ್ಲ. ಅಲ್ಲಿರುವ ಜಿಮ್ ಅಂತರರಾಷ್ಟ್ರೀಯ ದರ್ಜೆಯದಾಗಿರದೆ, ಕೇವಲ ಬೇಸಿಕ್ ಸ್ವರೂಪದ್ದಾಗಿದೆ. ಸ್ವಿಮ್ಮಿಂಗ್ ಪೂಲ್ ಆಟಗಾರರಿಗೆ ಸುಲಭಕ್ಕೆ ಸಿಗದಷ್ಟು ದೂರದಲ್ಲಿದೆ. ಅವರು ನಮಗೆ ಪ್ರಾಮಿಸ್ ಮಾಡಿದ ಸೌಲಭ್ಯಗಳಾವೂ ಆ ಹೊಟೆಲ್ನಲ್ಲಿಲ್ಲ’ ಎಂದು ಹೇಳಿದ್ದಾರೆ.
ಕ್ವೀನ್ಸ್ಲೆಂಡ್ನ ನೆರೆ ರಾಜ್ಯವಾಗಿರುವ ನ್ಯೂ ಸೌತ್ ವೇಲ್ಸ್ನಲ್ಲಿ ಇದ್ದಕ್ಕಿದ್ದಂತೆ ಕೊವಿಡ್-19 ಪ್ರಕರಣಗಳು ಹೆಚ್ಚಾಗಿದ್ದರಿಂದ ಕ್ವೀನ್ಸ್ಲೆಂಡ್ ಸರ್ಕಾರ ಕಠಿಣ ಕ್ವಾರಂಟೈನ್ ನಿಯಮಗಳನ್ನು ಜಾರಿಗೆ ತಂದಿದ್ದು, ಭಾರತೀಯ ಅಟಗಾರರು ಮತ್ತೊಮ್ಮೆ ಐಸೊಲೇಷನ್ಗೆ ಒಳಗಾಗಬೇಕೆಂದು ಹಟ ಹಿಡಿದಿದೆ.
ಟೀಮ್ ಇಂಡಿಯಾದ ಸದಸ್ಯರಿಗೆ ಹೊಟೆಲ್ನಲ್ಲಿ ಪರಸ್ಪರ ಬೆರೆಯುವ ಅವಕಾಶ ಕಲ್ಪಿಸಲಾಗಿದೆಯೇ ಎಂದು ಕೇಳಿದ ಪ್ರಶ್ನೆಗೆ ಬಿಸಿಸಿಐ ಅಧಿಕಾರಿ, ‘ಹೌದು, ಅವರು ಜೊತೆಗೂಡಿ ಹರಟಲು, ಸಮಯ ಕಳೆಯಲು ಇಲ್ಲವೇ ಟೀಮ್ ಮೀಟಿಂಗ್ಗಳನ್ನು ನಡೆಸಲು ಒಂದು ಪ್ರತ್ಯೇಕವಾದ ರೂಮನ್ನು ಒದಗಿಸಲಾಗಿದೆ. ಹೊಟೆಲ್ನ ಒಳಭಾಗದಲ್ಲಿ ಆಟಗಾರರು ಪರಸ್ಪರ ಭೇಟಿಯಾಗಬಹುದು’ ಎಂದು ಹೇಳಿದ್ದಾರೆ.
ಭಾರತೀಯ ಆಟಗಾರರು ಹೋಟೆಲ್ ಆಡಳಿತ ವರ್ಗಕ್ಕೆ ಆಕ್ಷೇಪಣೆಯನ್ನು ಸಲ್ಲಿಸಿರುವರೇ ಎಂದ ಕೇಳಲಾದ ಪ್ರಶ್ನೆಗೆ, ಅಧಿಕಾರಿಯು, ‘ಟೀಮಿನ ಮ್ಯಾನೇಜರ್ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಕೇಳಿದಾಗ, ಅಸ್ಟ್ರೇಲಿಯ ಮತ್ತು ಇಂಡಿಯಾ ಎರಡು ತಂಡದ ಆಟಗಾರರಿರಗೂ ಒಂದೇ ನಿಯಮ ಅನ್ವಯಿಸುತ್ತದೆ. ಯಾವುದಾದರೂ ಒಂದು ಟೀಮನ್ನು ಮಾತ್ರ ಹಾರ್ಡ್ ಕ್ವಾರಂಟೈನ್ಗೆ ಒಳಪಡಿಸಿಲ್ಲ, ಅಂತ ಹೇಳಿದರು’ ಎಂದು ಅಧಿಕಾರಿ ತಿಳಿಸಿದರು.
ಗಂಗೂಲಿ ಮತ್ತು ಶಾ ಸೌಹಾರ್ದಯುತ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುವ ಆಶಯವನ್ನು ಅಧಿಕಾರಿ ವ್ಯಕ್ತಪಡಿಸಿದರು.
India vs Australia Test Series | ಟ್ರೋಲ್ಗೊಳಗಾಗಿರುವ ಸ್ಮಿತ್ ರಕ್ಷಣೆಗೆ ಧಾವಿಸಿದ ಟಿಮ್ ಪೈನ್