India vs Australia Test Series | ಬುಮ್ರಾ ಕೂಡ ಕೊನೆಯ ಟೆಸ್ಟ್​ನಿಂದ ಔಟ್, ವೇಗದ ದಾಳಿ ನೇತೃತ್ವ ಸಿರಾಜ್​ ಹೆಗಲಿಗೆ

ಪ್ರಮುಖ ವೇಗದ ಬೌಲರ್​ಗಳ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾಗೆ ಬ್ರಿಸ್ಬೇನ್​ನಲ್ಲಿ ಕೇವಲ ಮೂರನೇ ಟೆಸ್ಟ್ ಆಡಲಿರುವ ಮೊಹಮ್ಮದ್ ಸಿರಾಜ್ ವೇಗದ ದಾಳಿಯ ನೇತೃತ್ವವನ್ನು ವಹಿಸಲಿದ್ದಾರೆ. ತಂಗರಸು ನಟರಾಜನ್​ಗೆ ಟೆಸ್ಟ್​ ಕ್ರಿಕೆಟ್​ಗೆ​ ಪಾದಾರ್ಪಣೆ ಮಾಡುವ ಅವಕಾಶ ಉಜ್ವಲವಾಗಿದೆ.

India vs Australia Test Series | ಬುಮ್ರಾ ಕೂಡ ಕೊನೆಯ ಟೆಸ್ಟ್​ನಿಂದ ಔಟ್, ವೇಗದ ದಾಳಿ ನೇತೃತ್ವ ಸಿರಾಜ್​ ಹೆಗಲಿಗೆ
ಜಸ್ಪ್ರೀತ್ ಬುಮ್ರಾ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Jan 12, 2021 | 7:34 PM

ಸುಮಾರು ಒಂದೂವರೆ ತಿಂಗಳಿಂದ ಅಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತೀಯ ಕ್ರಿಕೆಟ್ ತಂಡಕ್ಕೆ ಇದುವರೆಗಿನ ಅತಿ ದೊಡ್ಡ ಆಘಾತ ಎದುರಾಗಿದೆ. ಟೀಮಿನ ಪ್ರಮುಖ ಬೌಲರ್ ಜಸ್ಪ್ರೀತ್ ಬುಮ್ರಾ ಉದರದ ಸ್ನಾಯು ಸೆಳೆತಕ್ಕೊಳಗಾಗಿದ್ದು, ಜನವರಿ 15ರಿಂದ ಬ್ರಿಸ್ಬೇನ್​ನಲ್ಲಿ ಶುರುವಾಗಲಿರುವ ನಾಲ್ಕನೆ ಮತ್ತು ನಿರ್ಣಾಯಕ ಟೆಸ್ಟ್​ನಲ್ಲಿ ಅಡುವುದಿಲ್ಲ. ಅವರು ಬ್ರಿಸ್ಬೇನ್ ಪಂದ್ಯದಲ್ಲಿ ಆಡಿದರೆ, ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆ ಇದ್ದು, ಈ ಸರಣಿಯ ನಂತರ ಭಾರತದಲ್ಲಿ ಇಂಗ್ಲೆಂಡ್​ ವಿರುದ್ಧ ನಡೆಯಲಿರುವ ಸರಣಿಯಲ್ಲಿ ಬಾಗವಹಿಸದಂಥ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಭಾರತೀಯ ಕ್ರಿಕೆಟ್ ಮಂಡಳಿಯ ಮೂಲಗಳು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿವೆ.

ಟೀಮ್ ಇಂಡಿಯಾದ ಸದಸ್ಯರು ಒಬ್ಬರ ನಂತರ ಮತ್ತೊಬ್ಬರು ಗಾಯಗೊಂಡು ಟೆಸ್ಟ್​ಗಳಿಂದ, ಇನ್ನೂ ಕೆಲವರು ಸರಣಿಯಿಂದ ಹೊರಬಿದ್ದಿರುವುದು ಮ್ಯಾನೇಜ್ಮೆಂಟ್ ಅನ್ನು ಇಕ್ಕಟ್ಟು ಮತ್ತು ಸಂಕಷ್ಟಕ್ಕೆ ಸಿಲುಕಿಸಿದೆ. ಓದುಗರಿಗೆ ಗೊತ್ತಿದೆ, ಸರಣಿ ಶುರುವಾಗುವ ಮೊದಲೇ ಅನುಭವಿ ಬೌಲರ್ ಇಶಾಂತ್ ಶರ್ಮ ಗಾಯದಿಂದಾಗಿ ಡೌನ್ ಅಂಡರ್ ಪ್ರವಾಸಕ್ಕೆ ಅಲಭ್ಯರಾದರು. ಅಡಿಲೇಡ್​ ಟೆಸ್ಟ್​ನಲ್ಲಿ ಪ್ಯಾಟ್ ಕಮ್ಮಿನ್ಸ್ ಅವರ ದಾಳಿಯಲ್ಲಿ ಬಲಗೈ ಮೊಣಕೈಗೆ ಪೆಟ್ಟು ತಿಂದ ವೇಗದ ಬೌಲರ್ ಮೊಹಮ್ಮದ್ ಶಮಿ ಸರಣಿಯಿಂದ ಹೊರಬಿದ್ದರು. ಮೆಲ್ಬರ್ನ್​ನಲ್ಲಿ ನಡೆದ ಎರಡನೆ ಟೆಸ್ಟ್​ನಲ್ಲಿ ಮತ್ತೊಬ್ಬ ವೇಗದ ಬೌಲರ್ ಉಮೇಶ್ ಯಾದವ್ ಬಲಗಾಲಿನ ಮೀನಖಂಡದ ಸ್ನಾಯು ಸೆಳೆತಕ್ಕೊಳಗಾಗಿ ಅವರು ಸಹ ಸರಣಿಯಿಂದ ಹೊರಬಿದ್ದರು.

ಸಿಡ್ನಿ ಟೆಸ್ಟ್ ಆರಂಭಕ್ಕೆ ಮೊದಲು ಟೀಮಿನ ಪ್ರಮುಖ ಬ್ಯಾಟ್ಸ್​ಮನ್ ಕೆ.ಎಲ್.ರಾಹುಲ್ ಅಭ್ಯಾಸ ಮಾಡುವ ಸಂದರ್ಭದಲ್ಲಿ ಬಲ ಮುಂಗೈ ಟ್ವಿಸ್ಟ್​ ಮಾಡಿಕೊಂಡು ಭಾರತಕ್ಕೆ ವಾಪಸ್ಸಾದರು. ವಿರಾಟ್​ ಕೊಹ್ಲಿ ಅನುಪಸ್ಥಿತಿಯಲ್ಲಿ ಎರಡನೆ ಟೆಸ್ಟ್​ನಲ್ಲಿ ಭಾರತದ ಬ್ಯಾಟಿಂಗ್ ದುರ್ಬಲವೆನಿಸಿದ್ದರಿಂದ, ಅದರಲ್ಲಿ ರಾಹುಲ್​ರನ್ನು ಆಡಿಸುವುದು ಖಚಿತವಾಗಿತ್ತು.

ರವೀಂದ್ರ ಜಡೇಜಾ ಬೆರಳು ಜಜ್ಜಿಹೋಗಿದೆ

ಆಮೇಲೆ, ಗಾಯಗೊಂಡವರ ಪಟ್ಟಿಗೆ ಸೇರಿದ್ದು ಅಲ್​ರೌಡರ್ ರವೀಂದ್ರ ಜಡೇಜಾ ಮತ್ತು ವಿಕೆಟ್​ಕೀಪರ್ ಬ್ಯಾಟ್ಸ್​ಮನ್ ರಿಷಬ್ ಪಂತ್. ಇವರಿಬ್ಬರೂ ನಿನ್ನೆ ಕೊನೆಗೊಂಡ ಸಿಡ್ನಿ ಟೆಸ್ಟ್​​ನಲ್ಲಿ ಬ್ಯಾಟಿಂಗ್ ಮಾಡುವಾಗ ಗಾಯಗೊಂಡರು, ಜಡೇಜಾ ಅವರ ಹೆಬ್ಬೆರಳು ಡಿಸ್​ಲೊಕೇಟ್ ಅಗಿದ್ದು ಶಸ್ತ್ರಚಿಕಿತ್ಸೆ ನಂತರ ಚೇತರಿಸಿಕೊಳ್ಳುತ್ತಿದ್ದಾರೆ. ಟೀಮ್ ಮ್ಯಾನೇಜ್​ಮೆಂಟ್ ಪ್ರಕಾರ ಅವರ ಪುನಃ ಕ್ರಿಕೆಟ್ ಮೈದಾನಕ್ಕಿಳಿಯಲು ಕನಿಷ್ಠ ನಾಲ್ಕು ವಾರಗಳ ಅವಶ್ಯಕತೆಯಿದೆ. ಅಂದರೆ ಇಂಗ್ಲೆಂಡ್ ವಿರುದ್ಧ ನಡೆಯುವ ಮೊದಲಿನರೆಡು ಟೆಸ್ಟ್​ಗಳಲ್ಲಿ ಅವರು ಆಡುವುದಿಲ್ಲ.

ಸಮಾಧಾನಕರ ಸಂಗತಿಯೆಂದರೆ. ಪಂತ್ ಚೇತರಿಸಿಕೊಂಡಿದ್ದು, ನಾಲ್ಕನೇ ಟೆಸ್ಟ್​ನಲ್ಲಿ ಆವರು ಕೇವಲ ಬ್ಯಾಟ್ಸ್​ಮನ್ ಸಾಮರ್ಥ್ಯದಲ್ಲಿ ಆಡಬಹುದು. ಅವರ ವಿಕೆಟ್​ಕೀಪಿಂಗ್ ಕಳಪೆಯಾಗಿದೆ ಎಂದು ಮಾಜಿ ಆಟಗಾರರು ಹೇಳುತ್ತಿರುವುದರಿಂದ ವೃದ್ಧಿಮಾನ್ ಸಹಾಗೆ ವಿಕೆಟ್​ಕೀಪಿಂಗ್ ಜವಾಬ್ದಾರಿ ವಹಿಸಿ ಪಂತ್ ಅವರನ್ನು ಪರಿಣಿತ ಬ್ಯಾಟ್ಸ್​ಮನ್ ಆಗಿ ಆಡಿಸಬಹುದು.

ಸಿಡ್ನಿ ಪಂದ್ಯ ಡ್ರಾನಲ್ಲಿ ಕೊನೆಗೊಳ್ಳುವಂತೆ ಮಾಡಲು ರವಿಚಂದ್ರನ್ ಆಶ್ವಿನ್​ರೊಂದಿಗೆ ವೀರೋಚಿತ ಬ್ಯಾಟಿಂಗ್ ಪ್ರದರ್ಶನ ನೀಡಿದ ಮಧ್ಯಮ ಕ್ರಮಾಂಕದ ಆಟಗಾರ ಹನುಮ ವಿಹಾರಿ ಸಹ ತೊಡೆ ಮಾಂಸಖಂಡದ ಸೆಳೆತಕ್ಕೆ ಒಳಗಾಗಿರುವುದರಿಂದ ಬ್ರಿಸ್ಬೇನ್ ಟೆಸ್ಟ್​ನಿಂದ ಹೊರಬಿದ್ದಿದ್ದಾರೆ.

ಮೆಡಿಕಲ್ ಟೀಮಿನಿಂದ ಹನುಮ ವಿಹಾರಿಗೆ ನೆರವು

ಇದೆಲ್ಲದಕ್ಕೆ ಮಿಗಿಲಾಗಿ ಟೀಮಿನ ನಾಯಕ ವಿರಾಟ್ ಕೊಹ್ಲಿ ಮೊದಲ ಟೆಸ್ಟ್​ ನಂತರ ಪಿತೃತ್ವದ ರಜೆ ಮೇಲೆ ಸ್ವದೇಶಕ್ಕೆ ವಾಪಸ್ಸಾದರು. ಅಲ್ಲಿಗೆ ಟೆಸ್ಟ್ ಆಯ್ಕೆಯಾಗಿದ್ದ 15-ಸದಸ್ಯರ ಪೈಕಿ 7 ಆಟಗಾರರ ಸೇವೆ ಟೀಮ್ ಇಂಡಿಯಾಗೆ ಲಭ್ಯವಿಲ್ಲದಂತಾಯಿತು. ಉಳಿದಿರುವ ಫಿಟ್​ ಆಗಿರುವ ಅಟಗಾರರೊಂದಿಗೆ ಭಾರತ ನಾಲ್ಕನೆ ಟೆಸ್ಟ್ ಆಡಬೇಕಿದೆ. ಕೊವಿಡ್-19 ಹಿನ್ನೆಲೆಯಲ್ಲಿ ಬಿಸಿಸಿಐ ಬದಲೀ ಆಟಗಾರರನ್ನು ಆಸ್ಟ್ರೇಲಿಯಾಗೆ ಕಳಿಸುವಂತಿಲ್ಲ.

ಪ್ರಮುಖ ವೇಗದ ಬೌಲರ್​ಗಳ ಅನುಪಸ್ಥಿತಿಯಲ್ಲಿ ಬ್ರಿಸ್ಬೇನ್​ನಲ್ಲಿ ಕೇವಲ ಮೂರನೇ ಟೆಸ್ಟ್ ಆಡಲಿರುವ ಮೊಹಮ್ಮದ್ ಸಿರಾಜ್ ವೇಗದ ದಾಳಿಯ ನೇತೃತ್ವವನ್ನು ವಹಿಸಲಿದ್ದಾರೆ. ತಂಗರಸು ನಟರಾಜನ್ ಅವರಿಗೆ ಟೆಸ್ಟ್​ ಕ್ರಿಕೆಟ್​ ಪದಾರ್ಪಣೆ ಮಾಡುವ ಅವಕಾಶವಿದ್ದು, ಇವರೊಬ್ಬರೊಂದಿಗೆ ನವದೀಪ್ ಸೈನಿ ಮತ್ತು ಶಾರ್ದಲ್ ಠಾಕೂರ್ ವೇಗದ ದಾಳಿಯನ್ನು ನಿಭಾಯಿಸಲಿದ್ದಾರೆ.

ಬ್ರಿಸ್ಬೇನ್​ನಲ್ಲಿ ಭಾರತದ ಎದುರು ಖಂಡಿತವಾಗಿಯೂ ದೊಡ್ಡ ಸವಾಲಿದೆ, ನಾಯಕ ಅಜಿಂಕ್ಯಾ ರಹಾನೆ ಹೇಗೆ ಟೀಮನ್ನು ಮುನ್ನಡೆಸಲಿದ್ದಾರೆ ಎನ್ನುವುದು ಕುತೂಹಲಕಾರಿ ಸಂಗತಿಯಾಗಿದೆ.

India vs Australia Test Series | ಟ್ರೋಲ್​ಗೊಳಗಾಗಿರುವ ಸ್ಮಿತ್ ರಕ್ಷಣೆಗೆ ಧಾವಿಸಿದ ಟಿಮ್ ಪೈನ್

Published On - 6:46 pm, Tue, 12 January 21