Rafael Nadal: ಟೆನಿಸ್ ತಾರೆ ರಾಫೆಲ್ ನಡಾಲ್ಗೆ ಕೊರೊನಾ ಸೋಂಕು ದೃಢ! ಮನೆಯಲ್ಲಿ ಕ್ವಾರಂಟೈನ್
Rafael Nadal: ಯುಎಇಯಲ್ಲಿ ಇತ್ತೀಚೆಗೆ ನಡೆದ ಪ್ರದರ್ಶನ ಸಮಾರಂಭದಲ್ಲಿ ಗಾಯಗೊಂಡ ನಡಾಲ್ ಸ್ಪೇನ್‌ಗೆ ಹಿಂದಿರುಗಿದ್ದರು. ಈ ವೇಳೆ ಅವರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದ್ದು ವರದಿಯಲ್ಲಿ ನಡಾಲ್ಗೆ ಕೊರೊನಾ ತಗುಲಿರುವುದು ಖಚಿತವಾಗಿದೆ.
ಟೆನಿಸ್ ದಿಗ್ಗಜ ರಾಫೆಲ್ ನಡಾಲ್ ಅವರಿಗೆ ಕೊರೊನಾ ಸೋಂಕು ತಗುಲಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ಇತ್ತೀಚೆಗೆ ನಡೆದ ಪ್ರದರ್ಶನ ಸಮಾರಂಭದಲ್ಲಿ ಗಾಯಗೊಂಡ ನಡಾಲ್ ಸ್ಪೇನ್‌ಗೆ ಹಿಂದಿರುಗಿದ್ದರು. ಈ ವೇಳೆ ಅವರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದ್ದು ವರದಿಯಲ್ಲಿ ನಡಾಲ್ಗೆ ಕೊರೊನಾ ತಗುಲಿರುವುದು ಖಚಿತವಾಗಿದೆ. ಸ್ವತಃ ನಡಾಲ್ ಅವರೇ ಕೊರೊನಾ ಸೋಂಕು ತಗುಲಿರುವುದನ್ನು ಖಚಿತಪಡಿಸಿದ್ದಾರೆ.
ಈ ಮಾಹಿತಿಯನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ನಡಾಲ್, ಅಬುಧಾಬಿ ಪಂದ್ಯಾವಳಿಯಲ್ಲಿ ಸ್ಪರ್ಧಿಸಿ ನಾನು ಮನೆಗೆ ಆಗಮಿಸಿದ ನಂತರ ನಡೆಸಿದ ಆರ್ಟಿ ಪಿಸಿಆರ್ ಪರೀಕ್ಷೆಯಲ್ಲಿ ನನಗೆ ಕೋವಿಡ್ ತಗುಲಿರುವುದು ಖಚಿತವಾಗಿದೆ. ಹೀಗಾಗಿ ನನ್ನ ಸಂಪರ್ಕಕ್ಕೆ ಬಂದವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ.
Hola a todos. Quería anunciaros que en mi regreso a casa tras disputar el torneo de Abu Dhabi, he dado positivo por COVID en la prueba PCR que se me ha realizado al llegar a España.
— Rafa Nadal (@RafaelNadal) December 20, 2021
ಮೆಲ್ಬೋರ್ನ್‌ಗೆ ಹಾರಬೇಕಿತ್ತು ಸ್ಪ್ಯಾನಿಷ್‌ನ ಮಾಜಿ ವಿಶ್ವ ನಂಬರ್ ಒನ್ ಆಟಗಾರ ಈ ತಿಂಗಳ ಕೊನೆಯಲ್ಲಿ ಆಸ್ಟ್ರೇಲಿಯನ್ ಓಪನ್‌ಗೆ ಮುಂಚಿತವಾಗಿ ATP ಈವೆಂಟ್‌ನಲ್ಲಿ ಸ್ಪರ್ಧಿಸಲು ಮೆಲ್ಬೋರ್ನ್‌ಗೆ ಹಾರಬೇಕಿತ್ತು. 20 ಬಾರಿಯ ಮೇಜರ್ ಚಾಂಪಿಯನ್ ಕಳೆದ ಆರು ತಿಂಗಳುಗಳಿಂದ ಕಾಲಿನ ಗಾಯದಿಂದ ಬಳಲುತ್ತಿದ್ದರು. ಇದರಿಂದ ಅವರು ವಿಂಬಲ್ಡನ್ ಮತ್ತು US ಓಪನ್ ಎರಡರಿಂದಲೂ ಹಿಂದೆ ಸರಿಯಬೇಕಾಯಿತು.
ನಡಾಲ್ ಅಬುಧಾಬಿಯಲ್ಲಿ ಶುಕ್ರವಾರ ನಡೆದ ಪ್ರದರ್ಶನ ಪಂದ್ಯದಲ್ಲಿ ವಿಶ್ವದ ಮಾಜಿ ನಂಬರ್ ಒನ್ ಆಂಡಿ ಮುರ್ರೆ ವಿರುದ್ಧ ಸೋತರು, ಇದು ಆಗಸ್ಟ್ ನಂತರ ಅವರ ಮೊದಲ ಪಂದ್ಯವಾಗಿದೆ. ನಂತರ ಶನಿವಾರ ನಡೆದ ಪಂದ್ಯದಲ್ಲಿ ವಿಂಬಲ್ಡನ್ ಸೆಮಿಫೈನಲಿಸ್ಟ್ ಕೆನಡಾದ ಡೆನಿಸ್ ಶಪೊವಾಲೊವ್ ವಿರುದ್ಧ ಕೂಡ ನಡಾಲ್ಗೆ ಗೆಲುವು ಸಿಗಲಿಲ್ಲ.
ಅನಾರೋಗ್ಯದಿಂದ ಸುಮಾರು ಅರ್ಧದಷ್ಟು ಋತುವನ್ನು ಕಳೆದುಕೊಂಡಿದ್ದರೂ, ಬಾರ್ಸಿಲೋನಾ ಮತ್ತು ರೋಮ್‌ನಲ್ಲಿ ಎರಡು ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ನಡಾಲ್ ಯಶಸ್ವಿಯಾಗಿದ್ದಾರೆ. ನಂತರ ಫ್ರೆಂಚ್ ಓಪನ್‌ನಲ್ಲಿ ಸೆಮಿ-ಫೈನಲ್ ಮತ್ತು ಆಸ್ಟ್ರೇಲಿಯನ್ ಓಪನ್‌ನಲ್ಲಿ ಕ್ವಾರ್ಟರ್ಸ್ ಹಂತಕ್ಕೂ ತಲುಪಿದರು. ಹೀಗಾಗಿ 2021 ರ ವಿಶ್ವ ರ್ಯಾಕಿಂಗ್ನಲ್ಲಿ ಅವರು 6ನೇ ಸ್ಥಾನಕ್ಕೇರಿದ್ದಾರೆ.
Published On - 5:01 pm, Mon, 20 December 21