ಕ್ರಿಕೆಟ್​ ವಿಶೇಷ: ಟೆಸ್ಟ್​ ಕ್ರಿಕೆಟ್​ ಆರಂಭವಾಗಿ ಇಂದಿಗೆ 144 ವರ್ಷ.. ಮೊದಲ ಟೆಸ್ಟ್​ ಪಂದ್ಯದ ರೋಚಕ ಕಹಾನಿ ನೀವೊಮ್ಮೆ ಓದಲೇಬೇಕು!

|

Updated on: Mar 15, 2021 | 6:38 PM

ಈ ಗೆಲುವಿನ ನಂತರ ಆಸ್ಟ್ರೇಲಿಯಾದ ಎಲ್ಲಾ ಆಟಗಾರರು ಚಿನ್ನದ ಕೈಗಡಿಯಾರಗಳನ್ನು ಪಡೆದರು. ಆದರೆ ಮುಂದಿನ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ತಂಡ ಗೆದ್ದುಕೊಂಡಿತು

ಕ್ರಿಕೆಟ್​ ವಿಶೇಷ: ಟೆಸ್ಟ್​ ಕ್ರಿಕೆಟ್​ ಆರಂಭವಾಗಿ ಇಂದಿಗೆ 144 ವರ್ಷ.. ಮೊದಲ ಟೆಸ್ಟ್​ ಪಂದ್ಯದ ರೋಚಕ ಕಹಾನಿ ನೀವೊಮ್ಮೆ ಓದಲೇಬೇಕು!
ಮೊದಲ ಟೆಸ್ಟ್​ ಪಂದ್ಯ
Follow us on

ಈ ದಿನ, ಕ್ರಿಕೆಟ್ ಜಗತ್ತಿನಲ್ಲಿ ಸಾಕಷ್ಟು ಪ್ರಾಮುಖ್ಯತೆಯನ್ನು ಹೊಂದಿದೆ. ಈ ದಿನದಿಂದಲೇ ಅಂತರರಾಷ್ಟ್ರೀಯ ಟೆಸ್ಟ್​ ಕ್ರಿಕೆಟ್ ಪ್ರಾರಂಭವಾಗಿದ್ದು. ಅಂದರೆ ಮಾರ್ಚ್ 15 ರಂದು ಟೆಸ್ಟ್ ಕ್ರಿಕೆಟ್‌ನ ಜನನವಾಯಿತು. ಮೊದಲ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಮಾರ್ಚ್ 15,1877 ರಂದು ಆಡಲಾಯಿತು. ಅಂದಿನಿಂದ, 2021 ರ ಮಾರ್ಚ್ 15 ರವರೆಗೆ, ಒಟ್ಟು 2415 ಟೆಸ್ಟ್ ಪಂದ್ಯಗಳನ್ನು ಆಡಲಾಗಿದೆ. ಇದೀಗ 12 ದೇಶಗಳು ಟೆಸ್ಟ್ ಕ್ರಿಕೆಟ್ ಆಡುತ್ತಿವೆ. ಟೆಸ್ಟ್ ಪಂದ್ಯಗಳನ್ನು ಆಡಲು ಹೊಸದಾಗಿ ಸೇರ್ಪಡೆಗೊಂಡ ದೇಶ ಅಫ್ಘಾನಿಸ್ತಾನವಾಗಿದೆ. ಇಂಗ್ಲೆಂಡ್ ತಂಡ ಹೆಚ್ಚು (1034) ಟೆಸ್ಟ್ ಪಂದ್ಯಗಳನ್ನು ಆಡಿದ್ದರೆ, ಐರ್ಲೆಂಡ್ ಕೇವಲ ಮೂರು ಟೆಸ್ಟ್ ಪಂದ್ಯಗಳನ್ನು ಆಡಿದ ದೇಶವಾಗಿದೆ. ಹೀಗಾಗಿ ಟೆಸ್ಟ್ ಕ್ರಿಕೆಟ್‌ನ ಜನ್ಮದಿನದಂದು ಮೊದಲ ಟೆಸ್ಟ್ ಪಂದ್ಯದ ಕಥೆ, ಈ ಪಂದ್ಯವನ್ನು ಯಾವಾಗ, ಹೇಗೆ ಆಡಲಾಯಿತು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

1877 ರ ಪ್ರವಾಸವು ಅಧಿಕೃತ ಪ್ರವಾಸವಾಗಿತ್ತು..
ಕ್ರಿಕೆಟ್ ಬಹಳ ಹಿಂದೆಯೇ ಇಂಗ್ಲೆಂಡ್‌ನಲ್ಲಿ ಪ್ರಾರಂಭವಾಗಿತ್ತು. ಅಂದಿನಿಂದ, ಈ ಆಟವನ್ನು ಇತರ ಕೆಲವು ದೇಶಗಳಲ್ಲಿಯೂ ಆಡಲಾಗುತ್ತಿತ್ತು. ಈ ದೇಶಗಳು ಆ ಸಮಯದಲ್ಲಿ ಇಂಗ್ಲೆಂಡ್‌ನ ಆಡಳಿತದಲ್ಲಿದ್ದವು. ಆದ್ದರಿಂದ 1877 ರಲ್ಲಿ ಅಧಿಕೃತವಾದ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಆಸ್ಟ್ರೇಲಿಯಾಕ್ಕೆ ಇಂಗ್ಲೆಂಡ್ ಹೋಗುವುದಕ್ಕೂ ಮುಂಚೆಯೇ, ಇಂಗ್ಲೆಂಡ್ ತಂಡವು ನಾಲ್ಕು ಬಾರಿ ಆಸ್ಟ್ರೇಲಿಯಾಕ್ಕೆ ಪ್ರವಾಸ ಬೆಳೆಸಿತ್ತು. ಆದರೆ ಈ ನಾಲ್ಕು ಭೇಟಿಗಳು ಆಹ್ವಾನಗಳ ಆಧಾರದ ಮೇಲೆ ನಡೆದಿದ್ದವು.

ಆದರೆ 1877 ರ ಪ್ರವಾಸವು ಅಧಿಕೃತ ಪ್ರವಾಸವಾಗಿತ್ತು. ಆರಂಭದಲ್ಲಿ, ಮೆಲ್ಬೋರ್ನ್‌ನಲ್ಲಿ ನಡೆದ ಇಂಗ್ಲೆಂಡ್-ಆಸ್ಟ್ರೇಲಿಯಾ ಟೆಸ್ಟ್ ಅನ್ನು ಆಲ್ ಇಂಗ್ಲೆಂಡ್ vs ಯುನೈಟೆಡ್ ನ್ಯೂ ಸೌತ್ ವೇಲ್ಸ್ ಮತ್ತು ವಿಕ್ಟೋರಿಯಾ ಇಲೆವೆನ್ ಪಂದ್ಯ ಎಂದು ಕರೆಯಲಾಯಿತು. ಆ ಸಮಯದಲ್ಲಿ ಎರಡೂ ತಂಡಗಳು ಯಾವುದೇ ಹೆಸರಾಂತ ಆಟಗಾರರನ್ನು ಹೊಂದಿರಲಿಲ್ಲ. ಅಲ್ಲದೆ ಆ ಸಮಯದಲ್ಲಿ ಆಸ್ಟ್ರೇಲಿಯಾ ತಂಡವು ಮೆಲ್ಬೋರ್ನ್ ಮತ್ತು ಸಿಡ್ನಿ ಆಟಗಾರರಿಂದ ತುಂಬಿ ಹೋಗಿತ್ತು.

ಟೆಸ್ಟ್ ಕ್ರಿಕೆಟ್‌ನ ಮೊದಲ ಎಸೆತ, ರನ್, ವಿಕೆಟ್, ಶತಕ
ಆಸ್ಟ್ರೇಲಿಯಾದ ನಾಯಕ ಡೇವ್ ಗ್ರೆಗೊರಿ ಆಗಿದ್ದರೆ, ಇಂಗ್ಲೆಂಡ್ ನೇತೃತ್ವವನ್ನು ಜೇಮ್ಸ್ ಲಿಲ್ವೈಟ್ ಜೂನಿಯರ್ ವಹಿಸಿದ್ದರು. ಗ್ರೆಗೊರಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಇಂಗ್ಲೆಂಡ್‌ನ ಆಲ್ಫ್ರೆಡ್ ಶಾ ಮೊದಲ ಎಸೆತವನ್ನು ಎಸೆದರೆ, ಚಾರ್ಲ್ಸ್ ಬ್ಯಾನರ್ಮನ್ ಟೆಸ್ಟ್ ಕ್ರಿಕೆಟ್‌ನ ಮೊದಲ ಎಸೆತವನ್ನು ಎದುರಿಸಿದ ಬ್ಯಾಟ್ಸ್‌ಮನ್ ಆದರು. ಪಂದ್ಯದ ಎರಡನೇ ಎಸೆತದಲ್ಲಿ ಮೊದಲ ರನ್ ಗಳಿಸಲಾಯಿತು. ನಾಲ್ಕನೇ ಓವರ್‌ನಲ್ಲಿ ಒಂದು ರನ್ ಗಳಿಸಿದ್ದ ನೇಟ್ ಥಾಮ್ಸನ್ ಔಟಾಗುವ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ ಔಟಾದ ಮೊದಲ ಆಟಗಾರನಾದರೆ, ಅಲೆನ್ ಹಿಲ್ ಅವರನ್ನು ಔಟ್​ ಮಾಡಿದ ಬೌಲರ್​ ಆಗಿದ್ದಾರೆ. ಅದೇ ಸಮಯದಲ್ಲಿ, ಟೆಸ್ಟ್ ಕ್ರಿಕೆಟ್​ನಲ್ಲಿ ಆಸ್ಟ್ರೇಲಿಯಾದ ನೆಡ್ ಗ್ರೆಗೊರಿ ಮೊದಲ ಬಾರಿಗೆ ಡಕ್ ಔಟಾದ ಆಟಗಾರನಾದರು. ಆತಿಥೇಯರು ಮೊದಲ ಇನ್ನಿಂಗ್ಸ್‌ನಲ್ಲಿ 245 ರನ್ ಗಳಿಸಿದರು.

ಆಸಿಸ್​ನ ಆರಂಭಿಕ ಆಟಗಾರ ಬ್ಯಾನರ್ಮನ್ 165 ರನ್ ಗಳಿಸುವ ಮೂಲಕ ಮೊದಲ ಟೆಸ್ಟ್ ಶತಕವನ್ನು ಬಾರಿಸಿದ ಮೊದಲ ಆಟಗಾರನಾದರು.ಆದರೆ ಬ್ಯಾನರ್ಮನ್ ಪಂದ್ಯದ ವೇಳೆ ಬೆರಳು ಮುರಿದ ಕಾರಣದಿಂದಾಗಿ ಆಟವನ್ನು ಅರ್ಧಕ್ಕೆ ಮೊಟಕುಗೊಳಿಸಿ ಪೆವಿಲಿಯನ್​ಗೆ ಸೇರಿಕೊಂಡರು. ಆದರೆ ಈ ಪಂದ್ಯಲ್ಲಿ ಬ್ಯಾನರ್ಮನ್ ತಮ್ಮ ತಂಡದ ಒಟ್ಟು ಸ್ಕೋರ್‌ನ 67.3 ಶೇಕಡ ರನ್​ಗಳನ್ನು ತಮ್ಮ ಬ್ಯಾಟ್​ನಿಂದ ನೀಡಿದ್ದರು. ಇಂಗ್ಲೆಂಡ್‌ ಪರ ಮಿಂಚಿದ ಶಾ ಮತ್ತು ಜೇಮ್ಸ್ ಸೌಟರ್ಟನ್ ತಲಾ ಮೂರು ವಿಕೆಟ್ ಪಡೆದರು.

ಆಟಗಾರರಿಗೆ ಚಿನ್ನದ ಕೈಗಡಿಯಾರ..
ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್ ಕೇವಲ 196 ರನ್‌ಗಳಿಗೆ ಕೊನೆಗೊಂಡಿತು. ವಿಕೆಟ್ ಕೀಪರ್ ಹ್ಯಾರಿ ಜುಪ್ ಇಂಗ್ಲೆಂಡ್​ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾದರು. ಉಳಿದ ಬ್ಯಾಟ್ಸ್‌ಮನ್‌ಗಳಿಗೆ ಮೈದಾನದಲ್ಲಿ ಹೆಚ್ಚು ಕಾಲ ಉಳಿಯಲು ಸಾಧ್ಯವಾಗಲಿಲ್ಲ. ಬಿಲ್ಲಿ ಮಿಡ್‌ವಿಂಟರ್ ಆಸ್ಟ್ರೇಲಿಯಾಕ್ಕೆ ಅತ್ಯಂತ ಯಶಸ್ವಿಯಾ ಬೌಲರ್​ ಆದರು. ಅವರು ಐದು ವಿಕೆಟ್ ಪಡೆಯುವುದರ ಜೊತೆಗೆ ಟೆಸ್ಟ್ ಕ್ರಿಕೆಟ್​ನಲ್ಲಿ ಮೊದಲ ಐದು ವಿಕೆಟ್ ಪಡೆದ ಆಟಗಾರನಾದರು.

ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ಬೌಲರ್‌ಗಳು ಪ್ರಾಬಲ್ಯ ಮೆರೆದರು. ಆಲ್ಫ್ರೆಡ್ ಶಾ ಅವರ ನೇತೃತ್ವದಲ್ಲಿ ಬ್ರಿಟಿಷರು, ಆಸ್ಟ್ರೇಲಿಯಾವನ್ನು 104 ರನ್‌ಗಳಿಗೆ ಆಲ್ಔಟ್​ ಮಾಡಿದರು. 2ನೇ ಇನ್ನಿಂಗ್ಸ್​ನಲ್ಲಿ ಯಾವುದೇ ಕಾಂಗರೂ ಬ್ಯಾಟ್ಸ್‌ಮನ್​ಗಳು 20 ಕ್ಕಿಂತ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. ಇಂಗ್ಲೆಂಡ್​ನ ಆಲ್ಫ್ರೆಡ್ ಶಾ ಐದು ವಿಕೆಟ್ ಪಡೆದು ಮಿಂಚಿದರು.

ಗೆಲುವು ಸಾಧಿಸಲು ಇಂಗ್ಲೆಂಡ್‌ಗೆ 154 ರನ್‌ಗಳ ಗುರಿ ಸಿಕ್ಕಿತು. ಆದರೆ ಕಡಿಮೆ ರನ್​ ಬೆನ್ನತ್ತುವಲ್ಲಿ ವಿಫಲವಾದ ಇಂಗ್ಲೆಂಡ್, 45 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಹೀಗಾಗಿ ಇತಿಹಾಸದಲ್ಲಿ ಆಸ್ಟ್ರೇಲಿಯಾ ತಂಡ ಮೊದಲ ಟೆಸ್ಟ್ ಗೆದ್ದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಈ ಗೆಲುವಿನ ನಂತರ ಆಸ್ಟ್ರೇಲಿಯಾದ ಎಲ್ಲಾ ಆಟಗಾರರು ಚಿನ್ನದ ಕೈಗಡಿಯಾರಗಳನ್ನು ಪಡೆದರು. ಆದರೆ ಮುಂದಿನ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ತಂಡ ಗೆದ್ದುಕೊಂಡಿತು ಮತ್ತು ಸರಣಿಯು 1-1ರಿಂದ ಸಮಗೊಂಡಿತ್ತು.

1877ರ ಇಂಗ್ಲೆಂಡ್ ತಂಡ
ಟಾಮ್ ಆರ್ಮಿಟೇಜ್, ಹೆನ್ರಿ ಚಾರ್ಲ್‌ವುಡ್‌, ಟಾಮ್ ಎಮ್ಮೆಟ್, ಆಂಡ್ರ್ಯೂ ಗ್ರೀನ್ವುಡ್, ಹ್ಯಾರಿ ಜುಪ್, ಜೇಮ್ಸ್ ಲಿಲ್ಲಿವೈಟ್, ಜಾನ್ ಸೆಲ್ಬಿ, ಆಲ್ಫ್ರೆಡ್ ಶಾ, ಜೇಮ್ಸ್ ಸೌದರ್ಟನ್, ಜಾರ್ಜ್ ಯುಲಿ

1877ರ ಆಸ್ಟ್ರೇಲಿಯಾ ತಂಡ
ಚಾರ್ಲ್ಸ್ ಬ್ಯಾನರ್ಮನ್, ನ್ಯಾಟ್ ಥಾಮ್ಸನ್, ಟಾಮ್ ಹೊರನ್, ಡೇವ್ ಗ್ರೆಗೊರಿ, ಬ್ರಾನ್ಸ್ಬಿ ಕೂಪರ್, ಬಿಲ್ಲಿ ಮಿಡ್‌ವಿಂಟರ್, ನೆಡ್ ಗ್ರೆಗೊರಿ, ಜ್ಯಾಕ್ ಬ್ಲ್ಯಾಕ್‌ಹ್ಯಾಮ್, ಟಾಮ್ ಗ್ಯಾರೆಟ್, ಟಾಮ್ ಕೆಂಡಾಲ್, ಜಾನ್ ಹಾಡ್ಜಸ್

Published On - 6:16 pm, Mon, 15 March 21