ಇಡೀ ವಿಶ್ವವೇ ಇದೀಗ ಟೋಕಿಯೊ ಒಲಂಪಿಕ್ಸ್ನತ್ತ ಎಲ್ಲರ ಚಿತ್ತವಿದ್ದು ಭಾರತದ ಕ್ರಿಡಾಪಟುಗಳು ಡಿಟ್ಟತನವನ್ನ ತೋರಿ ಸಾಧನೆ ಮಾಡ್ತಾ ಇಡೀ ದೇಶದ ಜನರ ಮನಗೆದ್ದಿದೆ. ಇದ್ರಲ್ಲಿ ಮಹಿಳಾ ಕ್ರಿಡಾಪಟುಗಳು ಕೂಡ ತಾವೇನೂ ಕಮ್ಮಿ ಇಲ್ಲ ಅನ್ನುವಂತೆ ಮಿಂಚುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕುಂದಾನಗರಿಯ ಮೂರು ಜನ ಕುವರಿಗಳು ಫುಟ್ ಬಾಲ್ನಲ್ಲಿ ಕಮಾಲ್ ಮಾಡಲು ಹೊರಟ್ಟಿದ್ದಾರೆ. ಹೌದು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಮಿನಿ ಫುಟ್ಬಾಲ್ ಮಹಿಳಾ ವಿಶ್ವಕಪ್ ಟೂರ್ನಿಗೆ ಭಾರತೀಯ ತಂಡದಿಂದ ಬೆಳಗಾವಿಯ ಮೂವರು ಯುವತಿಯರು ಆಯ್ಕೆಯಾಗಿದ್ದು ಇಡೀ ಜಿಲ್ಲೆ ಇದೀಗ ಹೆಮ್ಮೆ ಪಡುತ್ತಿದೆ.
ಅವರೆಲ್ಲರೂ ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಅಂತಾ ಕನಸು ಕಂಡವರು. ಚಿಕ್ಕಂದಿನಿಂದ ಫುಟ್‌ಬಾಲ್ ಪ್ರ್ಯಾಕ್ಟೀಸ್ ಮಾಡ್ತಿದ್ದ ಅವರು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನಿ ಫುಟ್ಬಾಲ್ ಮಹಿಳಾ ವಿಶ್ವಕಪ್ ಟೋರ್ನಾಮೆಂಟ್‌ಗೆ ಆಯ್ಕೆಯಾಗಿದ್ದಾರೆ. ಹೌದು 23ವರ್ಷದೊಳಗಿನ ಭಾರತೀಯ ಮಿನಿ ಫುಟ್ಬಾಲ್ ಮಹಿಳಾ ತಂಡದಲ್ಲಿ ಕುಂದಾನಗರಿಯ ಮೂವರು ಕುವರಿಯರು ಸ್ಥಾನ ಪಡೆದಿದ್ದಾರೆ. ಇದೇ ತಿಂಗಳು 11 ರಿಂದ ಉಕ್ರೇನ್‌ನಲ್ಲಿ ನಡೆಯುವ ಮಿನಿ ಫುಟ್ಬಾಲ್ ಮಹಿಳಾ ವಿಶ್ವಕಪ್ ನಲ್ಲಿ ಪಾಲ್ಗೊಳ್ಳಲಿರುವ 11 ಆಟಗಾರರ ಪೈಕಿ ಭಾರತದ ತಂಡದಲ್ಲಿ ಕರ್ನಾಟಕದ ಐವರು ಯುವತಿಯರು ಆಯ್ಕೆಯಾಗಿದ್ದಾರೆ. ಈ ಪೈಕಿ ಮೂವರು ಬೆಳಗಾವಿ ನಗರದವರು ಅನ್ನೋದು ಮತ್ತೊಂದು ವಿಶೇಷ.
ಮಧ್ಯಮವರ್ಗದ ಆಟಗಾರರು ಆಯ್ಕೆಯಾಗಿದ್ದೇ ಬಲು ರೋಚಕ
ಹೌದು ಬೆಳಗಾವಿ ನಗರದ ಮೂರು ಜನ ಕ್ರಿಡಾಪಟುಗಳು ಬಡತನದಲ್ಲಿ ಬೆಳೆದು ಬಂದವರೇ ಆಗಿದ್ದಾರೆ. ಸದ್ಯ ಬೆಳಗಾವಿಯ ಕೆಎಲ್ಇ ಸಂಸ್ಥೆಯ ಲಿಂಗರಾಜ ಕಾಲೇಜಿನ ಬಿಎ ನಾಲ್ಕನೇ ಸೆಮಿಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಆದಿತಿ ಪ್ರತಾಪ್ ಜಾಧವ್, ಬಿಕಾಂ ಆರನೇ ಸೆಮಿಸ್ಟರ್ ನಲ್ಲಿ ಓದುತ್ತಿರುವ ಅಂಜಲಿ ಹಿಂಡಲಗೇಕರ ಹಾಗೂ ಉಜರೆಯ ಎಸ್.ಡಿಎಂ ಕಾಲೇಜಿನಲ್ಲಿ ಬಿಕಾಂ ಆರನೇ ಸೆಮಿಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಬೆಳಗಾವಿಯ ಪ್ರಿಯಂಕಾ ಕಂಗ್ರಾಳ್ಕರ್ ಭಾರತೀಯ ಮಹಿಳಾ ಮಿನಿ ಫುಟ್ಬಾಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇಂದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದ ಮೂಲಕ ಮೂವರು ಯುವತಿಯರು ಹೈದರಾಬಾದ್‌ಗೆ ಪ್ರಯಾಣ ಬೆಳೆಸಿದ್ರು. ಇಡೀ ತಂಡ ನಾಳೆ ಉಕ್ರೇನ್ ಗೆ ತೆರಳಲಿದೆ. ಭಾರತೀಯ ತಂಡಕ್ಕೆ ಆಯ್ಕೆಯಾದ 11 ಜನರು ಜುಲೈ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ಎಂಟು ದಿನಗಳ ಕಾಲ ವಿಶೇಷ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು.
ಭಾರತೀಯ ತಂಡ ಪ್ರತಿನಿಧಿಸುತ್ತಿದ್ದಾರೆ ಬಡ ಕಾರು ಚಾಲಕನ ಮಗಳು
ಅಂಜಲಿ, ಅದಿತಿ ಮತ್ತು ಪ್ರಿಯಾಂಕಾ ಬೆಳಗಾವಿ ಯುನೈಟೆಡ್ ಫುಟ್ಬಾಲ್ ಅಕಾಡೆಮಿಯಲ್ಲಿ ಅಭ್ಯಾಸ ಮಾಡಿದ್ದು ಮತಿನ್ ಇನಾಮದಾರ್ ಇವರ ಕೋಚ್ ಆಗಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ತಂಡ ಪ್ರತಿನಿಧಿಸುತ್ತಿರೋದಕ್ಕೆ ಫುಲ್ ಖುಷ್ ಆಗಿರುವ ಈ ಮೂವರು ಯುವತಿಯರು ಬಡ, ಮಧ್ಯಮ ವರ್ಗದ ಕುಟುಂಬದಿಂದ ಬಂದವರಾಗಿದ್ದಾರೆ. ಅದ್ರಲ್ಲೂ ಪ್ರಿಯಾಂಕಾ ತಂದೆ ದಿವ್ಯಾಂಗರಾಗಿದ್ದರೂ ಖಾಸಗಿ ಕಾರು ಚಾಲಕರಾಗಿ ಕೆಲಸ ಮಾಡುತ್ತಾ ಕಷ್ಟಪಟ್ಟು ಮಗಳನ್ನು ಬೆಳೆಸಿದ್ದಾರೆ. ಓದಿನ ಜತೆಗೆ ಫುಟ್ ಬಾಲ್ ಆಡಲು ಪ್ರೋತ್ಸಾಹ ನೀಡಿ ಆರ್ಥಿಕ ಸಂಕಷ್ಟದ ನಡುವೆಯೂ ನನಗೆ ಸಹಾಯ ಮಾಡಿ ಆಟವಾಡಲು ಅವಕಾಶ ಮಾಡಿದ್ದಾರೆ. ತಂದೆ, ತಾಯಿ ಆಶೀರ್ವಾದ ಪ್ರೋತ್ಸಾಹ ನಮಗೆ ಶ್ರೀರಕ್ಷೆ ಹಾಗೂ ತರಬೇತುದಾರರ ಸಹಕಾರದಿಂದ ಇಂದು ಈ ಮಟ್ಟಕ್ಕೆ ಬಂದಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ತಂಡ ಪ್ರತಿನಿಧಿಸುತ್ತಿರೋದಕ್ಕೆ ಹೆಮ್ಮೆಯಾಗುತ್ತಿದ್ದು ಶಕ್ತಿಮೀರಿ ಎಫರ್ಟ್ ಹಾಕಿ ಗೆಲ್ಲಲು ಪ್ರಯತ್ನಿಸುವೆ ಅಂತಾ ಪ್ರಿಯಾಂಕಾ ಹೇಳಿದ್ದಾಳೆ.
ಸೂಪರ್ ಲೀಗ್ ಪಂದ್ಯದಲ್ಲೂ ಬೊಂಬಾಟ್ ಪ್ರದರ್ಶನ
ಇನ್ನೂ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸೂಪರ್ ಡಿವಿಷನ್ ಲೀಗ್ ಪಂದ್ಯಗಳಲ್ಲಿ ಇವರೆಲ್ಲರೂ ಭಾಗವಹಿಸಿ ಉತ್ತಮ ಪ್ರದರ್ಶನ ತೋರಿದ್ದರು. ಹೀಗಾಗಿ ರಾಷ್ಟ್ರೀಯ ತಂಡಕ್ಕೆ ಈ ಎಲ್ಲರನ್ನೂ ಆಯ್ಕೆ ಮಾಡಲಾಗಿದೆ. ಇತ್ತ ಭಾರತೀಯ ತಂಡದಲ್ಲಿ ಸ್ಥಾನ ಪಡೆದಿದಕ್ಕೆ ಕುಟುಂಬಸ್ಥರು ಅಷ್ಟೇ ಅಲ್ಲದೇ ಕಾಲೇಜು ಪ್ರಾಂಶುಪಾಲರು, ದೈಹಿಕ ಶಿಕ್ಷಕರು ಹೆಮ್ಮೆ ಪಡುತ್ತಿದ್ದಾರೆ. ಲಿಂಗರಾಜ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ರಾಮರಾವ್ ಮಾತನಾಡಿ, ಭಾರತ ತಂಡಕ್ಕೆ ಆಯ್ಕೆ ಆಗಿರುವ ಮೂವರು ಭರವಸೆಯ ಆಟಗಾರರೇ. ಸ್ಕೂಲ್ ಸಮಯದಿಂದ ಮೂವರು ಫುಟ್ಬಾಲ್ ಅಭ್ಯಾಸ ಮಾಡುತ್ತಿದ್ದಾರೆ. ಕೆಎಲ್ಇ ಸಂಸ್ಥೆ ಕೂಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಮೂವರು ಭಾರತ ತಂಡಕ್ಕೆ ಆಯ್ಕೆ ಆಗಿರುವುದು ಬೆಳಗಾವಿಗೆ ಹೆಮ್ಮೆ. ಫುಟ್ಬಾಲ್ ರಾಷ್ಟ್ರೀಯ ತಂಡದಲ್ಲಿ ಬೆಳಗಾವಿಗರು ಸ್ಥಾನ ಪಡೆದಿರುವುದು ಇದೆ ಮೊದಲು. ಮಿನಿ ವಿಶ್ವಕಪ್ ನಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆಲ್ ದಿ ಬೆಸ್ಟ್ ಫುಟ್ ಬಾಲ್ ಕ್ರೀಡಾಪಟುಗಳಿಗೆ
ಒಟ್ಟಾರೆಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲಿರುವ ಈ ಮೂವರು ಕುವರಿಯರ ಸಾಧನೆಗೆ ಇಂದು ಇಡೀ ಕುಂದಾನಗರಿ ಜನ ಹೆಮ್ಮೆ ಪಡುತ್ತಿದ್ದಾರೆ. ಸ್ಪಷ್ಟ ಗುರಿ ನಿರಂತರ ಅಭ್ಯಾಸ ಇದ್ರೆ ಯಾವುದೂ ಅಸಾಧ್ಯವಲ್ಲ ಅಂತಾ ಸಾಧಿಸಿ ತೋರಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯಿತ್ತಿರುವ ಮಿನಿ ಫುಟ್‌ಬಾಲ್ ಮಹಿಳೆಯರ ವಿಶ್ವಕಪ್‌ನಲ್ಲಿ ಭಾರತ ಗೆದ್ದು ಬರಲಿ ಕರುನಾಡಿಗೆ ಕುಂದಾನಗರಿಗೆ ಗೆದ್ದು ಬಂದು, ಕರುನಾಡ ಕೀರ್ತಿ ಪತಾಕೆ ಹಾರಿಸಲಿ ಎಂಬುವುದು ಸಾರ್ವಜನಿಕರ ಆಶಯ. ಈ ಎಲ್ಲ ಕ್ರೀಡಾಪಟುಗಳಿಗೂ ಇದೀಗ ರಾಜ್ಯದ ಜನರು ಕೂಡ ಆಲ್ ದಿ ಬೆಸ್ಟ್ ಹೇಳ್ತಿದ್ದಾರೆ. -ಸಹದೇವ ಮಾನೆ, ಬೆಳಗಾವಿ