ಟೋಕಿಯೋ: ನೋಡಿ ಸ್ವಾಮಿ ನಾವಿರೋದೆ ಹೀಗೆ……ಎನ್ನುವಂತಿದೆ ಪಾಕಿಸ್ತಾನೀ ಅಥ್ಲೀಟ್ಗಳ ಧೋರಣೆ. ಶುಕ್ರವಾರದಂದು ನಡೆದ ಟೊಕಿಯೋ ಒಲಂಪಿಕ್ಸ್ 2020 ಉದ್ಘಾಟನಾ ಸಮಾರಂಭದ ಮಾರ್ಚ್ ಪಾಸ್ಟ್ನಲ್ಲಿ ಭಾಗವಹಿಸಿದ ಹೆಚ್ಚುಕಡಿಮೆ ಎಲ್ಲ ದೇಶಗಳ ಅಥ್ಲೀಟ್ಗಳು ಮಾಸ್ಕ್ ಧರಿಸಿ ಪಾಲ್ಗೊಂಡಿದ್ದರೆ, ಪಾಕಿಸ್ತಾನದ ಧ್ವಜ ಹೊತ್ತಿದ್ದ ಇಬ್ಬರು ಅಥ್ಲೀಟ್ಗಳು ನಮಗ್ಯಾಕೆ ಮಾಸ್ಕ್ ಎಂಬಂತೆ ಸ್ಟೇಡಿಯಂ ಪ್ರವೇಶಿಸಿದರು. ಗಮನಿಸಬೇಕಾದ ಸಂಗತಿಯೆಂದರೆ ಇತರ ಪಾಕಿಸ್ತಾನಿ ಅಥ್ಲೀಟ್ಗಳೆಲ್ಲ ಮಾಸ್ಕ್ ಧರಿಸಿದ್ದರು. ಬ್ಯಾಡ್ಮಿಂಟನ್ ಆಟಗಾರ ಮಹೂರ್ ಶಹಜಾದ ಅವರ ಮಾಸ್ಕ್ ಗದ್ದದ ಕೆಳಗಡೆಗೆ ಜಾರಿದ್ದರೆ, ಶೂಟರ್ ಖಲೀಲ್ ಅಖ್ತರ್ ಅವರ ಮಾಸ್ಕ್ ಮೂಗನ್ನು ಬಿಟ್ಟು ಕೇವಲ ಬಾಯನ್ನು ಮಾತ್ರ ಕವರ್ ಮಾಡಿತ್ತು. ಅಂದಹಾಗೆ, ಕೇವಲ ಪಾಕಿಸ್ತಾನದ ಅಥ್ಲೀಟ್ಗಳ ಮಾತ್ರ ಕೋವಿಡ್ ಸುರಕ್ಷಾ ನಿಯಮ ಉಲ್ಲಂಘಿಸಲಿಲ್ಲ, ಅವರಿಗೆ ಸಾತ್ ನೀಡಲು ಕಿರ್ಗಿಸ್ತಾನ ಮತ್ತು ತಜಿಕಿಸ್ತಾನದ ಅಥ್ಲೀಟ್ಗಳು ಸಹ ಮಾಸ್ಕ್ ಧರಿಸದೆ ಸ್ಟೇಡಿಯಂ ಪ್ರವೇಶಿಸಿದರು.
ಟೊಕಿಯೋ ಒಲಂಪಿಕ್ಸ್ 2020 ನಿಯಮಾವಳಿ ಮತ್ತು ಕೊವಿಡ್-19 ಸುರಕ್ಷತೆ ಮಾರ್ಗಸೂಚಿಗಳ ಪ್ರಕಾರ, ಅಥ್ಲೀಟ್ಗಳು, ಕ್ರೀಡಾ ನಿರೂಪಕರು ಮತ್ತು ಸ್ವಯಂ ಸೇವಕರು ಎಲ್ಲ ಸಮಯದಲ್ಲೂ ಕಡ್ಡಾಯವಾಗಿ ಮಾಸ್ಕ್ ಧರಿಸಿರಲೇಬೇಕು.
ಈವೆಂಟ್ಗಳಲ್ಲಿ ಗೆಲ್ಲುವ ಅಥ್ಲೀಟ್ಗಳಿಗೆ ಸ್ವರ್ಣ, ಬೆಳ್ಳಿ ಮತ್ತು ಕಂಚಿನ ಪದಕ ನೀಡುವಾಗಲೂ ದೈಹಿಕ ಅಂತರ ಕಾಯ್ದುಕೊಳ್ಳುವುದು ಸಾಧ್ಯವಾಗುವಂತೆ ಪೋಡಿಯಂಗಳ ನಡುವೆ ಜಾಸ್ತಿ ಅಂತರ ಇರುವಂತೆ ವ್ಯವಸ್ಥೆ ಮಾಡಲಾಗಿದೆ.
ಅಥ್ಲೀಟ್ಗಳು ಪದಕ ವಿತರಣಾ ಸಮಾರಂಭ ಮುಗಿಯುವವರೆಗೆ ತಮ್ಮ ತಮ್ಮ ಪೋಡಿಯಂಗಳ ಮೇಲೆಯೇ ನಿಂತಿರಬೇಕು ಎಂದು ಸೂಚಿಸಲಾಗಿದೆ.
ಟೊಕಿಯೋ ಒಲಂಪಿಕ್ಸ್ 2020 ಅಯೋಜಿಸಬೇಕೋ, ಬೇಡವೋ ಎಂಬ ಗೊಂದಲದ ನಡುವೆಯೇ ಶುಕ್ರವಾರದಂದು ಜಪಾನ್ ನ್ಯಾಶನಲ್ ಸ್ಟೇಡಿಯಂನಲ್ಲಿ ಕ್ರೀಡಾಕೂಟಕ್ಕೆ ವಿದ್ಯುಕ್ತವಾಗಿ ಚಾಲನೆ ಸಿಕ್ಕಿತು.
ಕೊವಿಡ್-19 ಪಿಡುಗಿನ ಹಿನ್ನೆಲೆಯಲ್ಲಿ ಹೆಚ್ಚು ಕಡಿಮೆ ಎಲ್ಲ ಅಥ್ಲೀಟ್ಗಳು ಈ ಮೆಗಾ ಈವೆಂಟ್ಗೆ ಸಿದ್ದರಾಗಲು ಒಳಾಂಗಣಗಳಲ್ಲೇ ತರಬೇತಿ ನಡೆಸಿದ್ದರು. ಶುಕ್ರವಾರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಎಲ್ಲ ಅಥ್ಲೀಟ್ಗಳ ಮುಖದಲ್ಲಿ ಕೊನೆಗೂ ಒಲಂಪಿಕ್ ಸ್ಟೇಡಿಯಂನಲ್ಲಿ ತಮ್ಮ ಪ್ರತಿಭೆ ತೋರುವಂಥ ಅವಕಾಶ ಸಿಕ್ಕಿತಲ್ಲ ನಿರಾಳ ಭಾವ ಗೋಚರಿಸುತಿತ್ತು.
ಉದ್ಘಾಟನಾ ಸಮಾರಂಭ ನಡೆಯುವಾಗ ಪರೇಡ್ನಲ್ಲಿ ಭಾಗವಹಿಸಿದ್ದ ಅಥ್ಲೀಟ್ಗಳು ದೈಹಿಕ ಅಂತರವನ್ನು ಕಾಯ್ದುಕೊಂಡರು. ಸಮಾರಂಭದ ಆರಂಭದಲ್ಲಿ ಜಪಾನಿನ ರಾಷ್ಟ್ರಧ್ವಜ ಒಲಂಪಿಕ್ ಸ್ಟೇಡಿಯಂ ಪ್ರವೇಶಿಸುತ್ತಿದ್ದಂತೆ ವಿದ್ಯುದ್ದೀಪಗಳ ಶೋ ಆರಂಭವಾಯಿತು.
ಐದು ಬಾರಿ ವಿಶ್ವ ಚಾಂಪಿಯನ್ಶಿಪ್ ಗೆದ್ದಿರುವ ಮೇರಿ ಕೋಮ್ ಮತ್ತು ಪುರುಷರ ಹಾಕಿ ಟೀಮಿನ ನಾಯಕ ಮನ್ಪ್ರೀತ್ ಸಿಂಗ್ ಉದ್ಘಾಟನಾ ಸಮಾರಂಭದ ಪರೇಡ್ನಲ್ಲಿ ಭಾರತ ಕಂಟಿಂಜೆಂಟ್ನ ನೇತೃತ್ವ ವಹಿಸಿದ್ದರು.
ಅತ್ತ ಟೋಕಿಯೋನಲ್ಲಿ ಭಾರತದ ಅಥ್ಲೀಟ್ಗಳು ಒಲಂಪಿಕ್ ಸ್ಟೇಡಿಯಂ ಪ್ರವೇಶಿಸುತ್ತಿದ್ದಂತೆ ಇತ್ತ ಭಾರತದಲ್ಲಿ ಕೇಂದ್ರ ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಅನುರಾಗ ಠಾಕೂರ್ ಸಹ ಭಾರತ ಧ್ವಜವನ್ನು ಬೀಸುವುದು ಟಿವಿಗಳಲ್ಲಿ ಕಂಡಿತು. ಸಮಾರಂಭದಲ್ಲಿ ಟೋಕಿಯೋಗೆ ತೆರಳಿರುವ ಭಾರತೀಯ ಅಥ್ಲೀಟ್ಗಳ ಪೈಕಿ ಕೇವಲ 25 ಜನ ಮಾತ್ರ ಭಾಗವಹಿಸಿದ್ದರು.
ಜಪಾನಿನ ರಾಜಧಾನಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದರಿಂದ ಪ್ರತಿ ದೇಶದ ಕೆಲ ಅಥ್ಲೀಟ್ಗಳಿಗೆ ಮಾತ್ರ ಸಮಾರಂಭದಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗಿತ್ತು.
ಪಟಾಕಿ ಸಿಡಿತ ಮತ್ತು ವಿದ್ಯುದ್ದೀಪಗಳ ಶೋ ನಂತರ ಅಂತರರಾಷ್ಟ್ರೀಯ ಒಲಂಪಿಕ್ ಸಮಿತಿಯ (ಐಒಸಿ) ಅಧ್ಯಕ್ಷ ಥಾಮಸ್ ಬಾಕ್ ಅವರು ವೇದಿಕೆಗೆ ಬರಮಾಡಿಕೊಳ್ಳಲಾಯಿತು. ಪ್ರತಿ ಕಂಟಿಂಜೆಂಟ್ನಿಂದ 6 ಅಧಿಕಾರರಿಗಳಿಗೆ ಮಾತ್ರ ಅವಕಾಶ ನೀಡುವ ನಿರ್ಧಾರ ಐಒಸಿ ತೆಗದುಕೊಂಡಿತು.