ಟೋಕಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಭಾವಿನಾ ಪಟೇಲ್ ಮೇಲೆ ಬಹುಮಾನಗಳ ಮಳೆ ಶುರುವಾಗಿದೆ. ಭಾವಿನಾ ಟೇಬಲ್ ಟೆನಿಸ್ ಕ್ಲಾಸ್ 4. ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದರು. ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ದೇಶದ ಎರಡನೇ ಮಹಿಳಾ ಆಟಗಾರ್ತಿ ಭಾವಿನಾ. ಅದೇ ಸಮಯದಲ್ಲಿ, ಟೇಬಲ್ ಟೆನಿಸ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯರು ಸಹ ಆಗಿದ್ದಾರೆ. ಗುಜರಾತ್‌ನ ಮೆಹ್ಸಾನಾ ಜಿಲ್ಲೆಯಲ್ಲಿ ಸಣ್ಣ ಕಿರಾಣಿ ಅಂಗಡಿಯನ್ನು ನಡೆಸುತ್ತಿರುವ ಹಸ್ಮುಖಭಾಯಿ ಪಟೇಲ್ ಅವರ ಮಗಳಾದ ಭಾವಿನಾ ಅವರು ಪದಕ ಗೆಲ್ಲುವ ಸ್ಪರ್ಧಿ ಎಂದು ಯಾರು ಪರಿಗಣಿಸಿರಲಿಲ್ಲ. ಆದರೆ ಅವರು ತಮ್ಮ ಅದ್ಭುತ ಪ್ರದರ್ಶನದಿಂದ ಇತಿಹಾಸವನ್ನು ಸೃಷ್ಟಿಸಿದರು. ಈ ವಿಜಯದ ನಂತರ, ದೇಶದಾದ್ಯಂತ, ವಿಶೇಷವಾಗಿ ಭಾವಿನಾ ಅವರ ತವರು ರಾಜ್ಯ ಗುಜರಾತ್‌ನಲ್ಲಿ ಸಂಭ್ರಮದ ವಾತಾವರಣವಿದೆ.
ಬಹುಮಾನ ಘೋಷಿಸಿದ ಗುಜರಾತ್ ಸರ್ಕಾರ
ಈ ಪ್ರತಿಭೆಯನ್ನು ಗೌರವಿಸುವುದಕ್ಕೆ ಈಗ ಗುಜರಾತ್ ಸರ್ಕಾರ ಮುಂದಾಗಿದೆ. ಅವರು ಭಾರತಕ್ಕೆ ಬರುವ ಮುನ್ನವೇ ಸರ್ಕಾರ ಮೂರು ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ. ಇದಲ್ಲದೇ, ಬೆಳ್ಳಿ ಪದಕ ವಿಜೇತೆಗೆ ಸರ್ಕಾರಿ ಉದ್ಯೋಗವನ್ನೂ ನೀಡಲಾಗುವುದು ಎಂದು ಹೇಳಿದೆ. ಭಾವಿನಾ ತನ್ನ ವೃತ್ತಿ ಜೀವನದಲ್ಲಿ ಹಣದ ಕೊರತೆಯಿಂದ ಸಾಕಷ್ಟು ಕಷ್ಟಪಟ್ಟಿದ್ದರು. ಅದೇ ಸಮಯದಲ್ಲಿ, ಅವರು ಕೆಲಸಕ್ಕಾಗಿ ಸಾಕಷ್ಟು ಕಷ್ಟಪಟ್ಟಿದ್ದಾರೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾವಿನಾಬೆನ್ ಅವರನ್ನು ವಿಜಯ್ ರೂಪಾನಿ ಅಭಿನಂದಿಸಿದರು. ಟೋಕಿಯೊ 2020 ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಭಾವಿನಾಬೆನ್ ಅವರಿಗೆ ಅಭಿನಂದನೆಗಳು. ಭಾವಿನಾಬೆನ್‌ಗೆ ಗುಜರಾತ್ ಸರ್ಕಾರದಿಂದ ಮೂರು ಕೋಟಿ ರೂಪಾಯಿಗಳನ್ನು ನೀಡಲಾಗುವುದು ಎಂದು ಅವರು ಟ್ವೀಟ್ ಮಾಡಿದ್ದಾರೆ.
ಭಾವಿನಾ ಮನೆಯಲ್ಲಿ ಹಬ್ಬದ ವಾತಾವರಣ
ಭಾವಿನಾಬೆನ್ ಗೆಲುವಿನ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರ ತಂದೆ, ಭಾವಿನಾ ಅಂಗವಿಕಲೆಯಾಗಿರಬಹುದು ಆದರೆ ನಾವು ಅವಳನ್ನು ಎಂದಿಗೂ ಆ ರೀತಿ ನೋಡಿಲ್ಲ. ನಮಗೆ ಅವರು ದೈವಿಕ. ಅವರು ದೇಶಕ್ಕಾಗಿ ಬೆಳ್ಳಿ ಪದಕ ಗೆದ್ದಿರುವುದಕ್ಕೆ ನಮಗೆ ಅತ್ಯಂತ ಸಂತೋಷವಾಗಿದೆ ಎಂದಿದ್ದಾರೆ. ಭಾವಿನಾಬೆನ್ ಅವರ ಆಟ ವಿಕ್ಷೀಸಲು ಗ್ರಾಮದಲ್ಲಿ ದೊಡ್ಡ ಪರದೆಯನ್ನು ಅಳವಡಿಸಲಾಗಿತ್ತು. ಜನರು ಪಂದ್ಯವನ್ನು ವೀಕ್ಷಿಸಲು ಬೆಳಿಗ್ಗೆಯಿಂದಲೇ ಜಮಾಯಿಸಿದ್ದರು. ಭಾವಿನಾ ಬೆಳ್ಳಿ ಗೆದ್ದ ಬಳಿಕ ಅಲ್ಲಿ ನೆರದಿದ್ದ ಎಲ್ಲರೂ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ದರು.
ಇದನ್ನೂ ಓದಿ:Tokyo Paralympics: ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚೊಚ್ಚಲ ಪದಕ: ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದ ಭಾವಿನಾ