
ಅತ್ಯುತ್ತಮ ಪ್ರದರ್ಶನದ ಹೊರತಾಗಿಯೂ, ಭಾರತದ ಕುಸ್ತಿಪಟುಗಳು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕದಿಂದ ವಂಚಿತರಾಗಿದ್ದರು. ಅದರಲ್ಲೂ ಚಿನ್ನ ಅಥವಾ ಬೆಳ್ಳಿ ಪದಕವನ್ನು ಖಚಿತಪಡಿಸಿಕೊಂಡಿದ್ದ ವಿನೇಶ್ ಫೋಗಟ್ ಅವರ ಅನರ್ಹತೆ ಭಾರತಕ್ಕೆ ಆಘಾತ ನೀಡಿತ್ತು. ಇದೆಲ್ಲದರ ಹೊರತಾಗಿಯೂ ಭಾರತ ಕುಸ್ತಿ ತಂಡ ಎರಡು ಕಂಚಿನ ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಆದಾಗ್ಯೂ ಕುಸ್ತಿಯಿಂದ ಭಾರತ ಕನಿಷ್ಠ 5 ಪದಕಗಳನ್ನು ನಿರೀಕ್ಷಿಸಿತ್ತು. ಅಂತಿಮವಾಗಿ ನಿರೀಕ್ಷೆ ಹುಸಿಯಾದ ನಿರಾಸೆ ಭಾರತೀಯರಿಗೆ ಎದುರಾಗಿತ್ತು. ಆದರೆ, ಇದೀಗ ಜೋರ್ಡಾನ್‌ನಲ್ಲಿ ನಡೆಯುತ್ತಿರುವ 17 ವರ್ಷದೊಳಗಿನವರ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಕುಸ್ತಿಪಟುಗಳು, ಪ್ಯಾರಿಸ್ ಒಲಿಂಪಿಕ್ಸ್ನ ಕೊರತೆಯನ್ನು ನೀಗಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಭಾರತದ ಮಹಿಳಾ ಕುಸ್ತಿಪಟುಗಳು ಒಂದಲ್ಲ, ಎರಡಲ್ಲ.. 4 ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.
ಜೋರ್ಡಾನ್ ರಾಜಧಾನಿ ಅಮ್ಮನ್‌ನಲ್ಲಿ ನಡೆದ 17 ವರ್ಷದೊಳಗಿನವರ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಭಾರತೀಯರ ಪ್ರಾಬಲ್ಯ ಎದ್ದು ಕಾಣುತ್ತಿತ್ತು. ನಾಲ್ವರು ಮಹಿಳಾ ಕುಸ್ತಿಪಟುಗಳಾದ ಅದಿತಿ ಕುಮಾರಿ, ನೇಹಾ ಸಾಂಗ್ವಾನ್, ಮಾನ್ಸಿ ಮತ್ತು ಪುಲ್ಕಿತ್ ವಿವಿಧ ವಿಭಾಗಗಳಲ್ಲಿ ಚಿನ್ನದ ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಈ ನಾಲ್ವರ ಪೈಕಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಗೆದ್ದುಕೊಟ್ಟ ಅದಿತಿ ಕುಮಾರಿ, ಏಕಪಕ್ಷೀಯ ಪಂದ್ಯದಲ್ಲಿ 7-0 ಅಂತರದಿಂದ ಗ್ರೀಕ್ ಕುಸ್ತಿಪಟು ಮರಿಯಾ ಲೂಯಿಜಾ ಅವರನ್ನು ಸೋಲಿಸಿ ಚಿನ್ನಕ್ಕೆ ಕೊರಳೊಡ್ಡಿದರು.
ಇನ್ನು ಒಲಿಂಪಿಕ್ಸ್ ಪದಕ ವಂಚಿತೆ ವಿನೇಶ್ ಫೋಗಟ್ ಅವರ ಹಳ್ಳಿಯಿಂದ ಸ್ಪರ್ಧಿಸಿದ್ದ ಕುಸ್ತಿಪಟು ನೇಹಾ ಸಾಂಗ್ವಾನ್ 57 ಕೆಜಿ ತೂಕ ವಿಭಾಗದಲ್ಲಿ 10-0 ಅಂತರದಿಂದ ಫೈನಲ್ ಪಂದ್ಯವನ್ನು ಗೆದ್ದು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರು. ಇದಲ್ಲದೇ 65 ಕೆಜಿ ವಿಭಾಗದಲ್ಲಿ ಪುಲ್ಕಿತ್ 6-3ರಿಂದ ಫೈನಲ್ ಪಂದ್ಯವನ್ನು ಗೆದ್ದು ಚಿನ್ನ ಗೆದ್ದರೆ, 73 ಕೆಜಿ ವಿಭಾಗದಲ್ಲಿ ಮಾನ್ಸಿ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾದರು. ಇದಕ್ಕೂ ಮುನ್ನ ಸಾಯಿನಾಥ್ ಪಾರ್ಧಿ 51 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರೆ, ರೋನಕ್ ದಹಿಯಾ 110 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ಇದರೊಂದಿಗೆ ಭಾರತ ಇದುವರೆಗ ಒಟ್ಟು 6 ಪದಕಗಳನ್ನು ಗೆದ್ದುಕೊಂಡಿದೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವಿನೇಶ್ ಫೋಗಟ್, ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಯಾವ ದೇಶದ ಕುಸ್ತಿಪಟುವನ್ನು ಮಣಿಸಿ ಸೆಮಿಫೈನಲ್‌ಗೇರಿದ್ದರೋ ಅದೇ ದೇಶದ ಕುಸ್ತಿಪಟುವನ್ನು ಮಣಿಸಿ ವಿನೇಶ್ ಫೋಗಟ್ ಅವರ ಗ್ರಾಮದ ಬಲಾಲಿ ನಿವಾಸಿ ನೇಹಾ ಸಾಂಗ್ವಾನ್ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ವಾಸ್ತವವಾಗಿ ವಿನೇಶ್ ಫೋಗಟ್ ತಮ್ಮ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಪಾನ್‌ನ ವಿಶ್ವದ ನಂಬರ್ 1 ಕುಸ್ತಿಪಟು ಯುಯಿ ಸುಸಾಕಿ ಅವರನ್ನು ಸೋಲಿಸಿದ್ದರು. ಇದೀಗ 17 ವರ್ಷದ ನೇಹಾ, ಜಪಾನ್‌ನ ಸೊ ಸುಸುಟ್ಸಿ ಅವರನ್ನು 10-0 ಅಂತರದಿಂದ ಸೋಲಿಸಿ ಚಿನ್ನದ ಪದಕ ಗೆದ್ದಿದ್ದಾರೆ.
ಭಾರತ ಈಗಾಗಲೇ 4 ಚಿನ್ನದ ಪದಕಗಳನ್ನು ಗೆದ್ದಿದ್ದು, ಇನ್ನೂ 2 ಪದಕಗಳ ನಿರೀಕ್ಷೆ ಇದೆ. ಭಾರತದ ಇನ್ನಿಬ್ಬರು ಕುಸ್ತಿಪಟುಗಳಾದ ಕಾಜಲ್ ಮತ್ತು ಶ್ರುತಿಕಾ ಪಾಟೀಲ್ 69 ಕೆಜಿ ತೂಕ ಮತ್ತು 46 ಕೆಜಿ ತೂಕ ವಿಭಾಗದಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಈ ಇಬ್ಬರ ಚಿನ್ನದ ಪದಕದ ಪಂದ್ಯಗಳು ಇಂದು ಅಂದರೆ ಶುಕ್ರವಾರ ಆಗಸ್ಟ್ 23 ರಂದು ನಡೆಯಲ್ಲಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:27 pm, Fri, 23 August 24