4 ರನ್ಗಳ ಅಗತ್ಯತೆ… ಬ್ಯಾಕ್ ಟು ಬ್ಯಾಕ್ ವಿಕೆಟ್ ಕಬಳಿಸಿ ಜಯ ತಂದುಕೊಟ್ಟ ವೆಂಕಟೇಶ್ ಅಯ್ಯರ್
Venkatesh Iyer: ಭಾರತೀಯ ಕ್ರಿಕೆಟಿಗ ವೆಂಕಟೇಶ್ ಅಯ್ಯರ್ ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಒನ್ ಡೇ ಕಪ್ ಟೂರ್ನಿಯಲ್ಲಿ ಲಂಕಾಶೈರ್ ಪರ ಆಡುತ್ತಿದ್ದಾರೆ. ಇದೇ ಟೂರ್ನಿಯಲ್ಲಿ ಟೀಮ್ ಇಂಡಿಯಾ ಆಟಗಾರರಾದ ಪೃಥ್ವಿ ಶಾ ಹಾಗೂ ಯುಜ್ವೇಂದ್ರ ಚಹಲ್ ಕೂಡ ಕಾಣಿಸಿಕೊಳ್ಳುತ್ತಿದ್ದು, ಇಬ್ಬರು ನಾರ್ಥಾಂಪ್ಟನ್‌ಶೈರ್ ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ.
ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಒನ್ ಡೇ ಕಪ್ನಲ್ಲಿ ವೆಂಕಟೇಶ್ ಅಯ್ಯರ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಮ್ಯಾಚೆಂಸ್ಟರ್ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಲಂಕಾಶೈರ್ ಮತ್ತು ವೋರ್ಸೆಸ್ಟರ್‌ಶೈರ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ವೋರ್ಸೆಸ್ಟರ್‌ಶೈರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟ್ ಲಂಕಾಶೈರ್ ಪರ ನಾಯಕ ಜೋಶ್ ಬೊಹಾನನ್ 87 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನಿಂದ ಲಂಕಾಶೈರ್ ತಂಡವು 50 ಓವರ್ಗಳಲ್ಲಿ 237 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ವೋರ್ಸೆಸ್ಟರ್‌ಶೈರ್ ಪರ ನಾಯಕ ಜೇಕ್ ಲಿಬ್ಬಿ 83 ರನ್ ಬಾರಿಸಿದರೆ, ಟಾಮ್ ಟೇಲರ್ 41 ರನ್ ಸಿಡಿಸಿದರು. ಈ ಮೂಲಕ 45.2 ಓವರ್ಗಳಲ್ಲಿ 198 ರನ್ ಕಲೆಹಾಕಿತು. ಅತ್ತ ಅತ್ಯುತ್ತಮ ದಾಳಿ ಸಂಘಟಿಸಿದ ಲಂಕಾಶೈರ್ ಬೌಲರ್ಗಳು 8 ವಿಕೆಟ್ ಕಬಳಿಸಿದ್ದರು. ಆದರೆ ಕೊನೆಯ ಹಂತದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಟಾಮ್ ಹಿನ್ಗೆ ಹಾಗೂ ಹ್ಯಾರಿ ಡಾರ್ಲಿ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದರು.
ಪರಿಣಾಮ ಕೊನೆಯ 12 ಎಸೆತಗಳಲ್ಲಿ 16 ರನ್ಗಳ ಅಗತ್ಯತೆಯಿತ್ತು. ಈ ಹಂತದಲ್ಲಿ ದಾಳಿಗಿಳಿದ ವೆಂಕಟೇಶ್ ಅಯ್ಯರ್ ಮೊದಲ ನಾಲ್ಕು ಎಸೆತಗಳಲ್ಲಿ 12 ರನ್ ಬಿಟ್ಟುಕೊಟ್ಟರು. ಅಂತಿಮ 8 ಎಸೆತಗಳಲ್ಲಿ ಕೇವಲ 4 ರನ್ಗಳ ಅಗತ್ಯತೆಯಿತ್ತು. ಈ ವೇಳೆ ಬ್ಯಾಕ್ ಟು ಬ್ಯಾಕ್ ಎರಡು ವಿಕೆಟ್ಗಳನ್ನು ಕಬಳಿಸುವ ಮೂಲಕ ವೆಂಟಕೇಶ್ ಅಯ್ಯರ್ ಲಂಕಾಶೈರ್ ತಂಡಕ್ಕೆ 3 ರನ್ಗಳ ರೋಚಕ ಗೆಲುವು ತಂದುಕೊಟ್ಟರು. ಇದೀಗ ವೆಂಕಿಯ ಬೆಂಕಿ ಬೌಲಿಂಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.