
2025 ರ ಐಪಿಎಲ್‌ನಲ್ಲಿ ಕಳಪೆ ಆರಂಭದ ಹೊರತಾಗಿಯೂ ಸತತ ಪಂದ್ಯಗಳನ್ನು ಗೆದ್ದು ಪ್ಲೇ ಆಫ್ ರೇಸ್ಗೆ ಎಂಟ್ರಿಕೊಟ್ಟಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಯುವ ಎಡಗೈ ಸ್ಪಿನ್ನರ್ ವಿಘ್ನೇಶ್ ಪುತ್ತೂರು ಗಾಯದ ಕಾರಣದಿಂದಾಗಿ ಇಡೀ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಅಂದರೆ ವಿಘ್ನೇಶ್ ಐಪಿಎಲ್‌ನಲ್ಲಿ ಉಳಿದ ಪಂದ್ಯಗಳನ್ನು ಆಡಲು ಸಾಧ್ಯವಾಗುವುದಿಲ್ಲ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ತಂಡದ ಪರವಾಗಿ ಆಡುವ ಅವಕಾಶ ಪಡೆದು ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದ ವಿಘ್ನೇಶ್ ತನ್ನ ಮೊದಲ ಪಂದ್ಯದಲ್ಲೇ ಭರ್ಜರಿ ಪ್ರದರ್ಶನ ನೀಡಿದ್ದರು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿದ್ದ ವಿಘ್ನೇಶ್ 3 ಪ್ರಮುಖ ವಿಕೆಟ್ ಕಬಳಿಸಿದ್ದರು.

ಸ್ವತಃ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಕೂಡ ವಿಘ್ನೇಶ್ ಪುತ್ತೂರು ಅವರ ಬೌಲಿಂಗ್‌ನಿಂದ ತುಂಬಾ ಪ್ರಭಾವಿತರಾಗಿದ್ದರು. ಪಂದ್ಯದ ನಂತರ, ಧೋನಿ ವಿಘ್ನೇಶ್ ಅವರ ಬಳಿಗೆ ಹೋಗಿ ಅವರನ್ನು ಹೊಗಳಿದ್ದರು. ಆದರೀಗ ಗಾಯಗೊಂಡಿರುವ ವಿಘ್ನೇಶ್ ಇದೀಗ ತನ್ನ ಪ್ರತಿಭೆ ತೋರುವ ಮುಂಚೆಯೇ ಲೀಗ್ನಿಂದ ಹೊರಬಿದಿದ್ದಾರೆ.

ವಿಘ್ನೇಶ್ ಪುತ್ತೂರು ಅವರ ಗಾಯದ ಕುರಿತು ಹೇಳಿಕೆ ನೀಡಿರುವ ಮುಂಬೈ ಇಂಡಿಯನ್ಸ್, ವಿಘ್ನೇಶ್ ಪುತ್ತೂರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ, ಅವರನ್ನು ಇಡೀ ಸೀಸನ್ನಿಂದ ಹೊರಗಿಡಲಾಗಿದೆ. ಈ ಕಷ್ಟದ ಸಮಯದಲ್ಲಿ ಫ್ರಾಂಚೈಸಿ ವಿಘ್ನೇಶ್ ಪುತ್ತೂರು ಅವರಿಗೆ ತನ್ನ ಬೆಂಬಲವನ್ನು ನೀಡಿದೆ.

ವಿಘ್ನೇಶ್ ಪುತ್ತೂರು ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದರೂ ಅವರು ಇನ್ನೂ ತಂಡದೊಂದಿಗೆ ಸಂಬಂಧ ಹೊಂದಿರುತ್ತಾರೆ. ಈಗ ವಿಘ್ನೇಶ್ ಮುಂಬೈ ಇಂಡಿಯನ್ಸ್‌ನ ವೈದ್ಯಕೀಯ ಮತ್ತು ಶಕ್ತಿ ಮತ್ತು ಕಂಡೀಷನಿಂಗ್ ತಂಡದ ಮೇಲ್ವಿಚಾರಣೆಯಲ್ಲಿ ತನ್ನ ಚೇತರಿಕೆ ಮತ್ತು ಪುನರ್ವಸತಿ ಕಡೆಗೆ ಗಮನ ಹರಿಸಲಿದ್ದಾರೆ. ಈ ಸೀಸನ್‌ನಲ್ಲಿ 5 ಪಂದ್ಯಗಳನ್ನು ಆಡಿದ್ದ ವಿಘ್ನೇಶ್ 18.17 ರ ಸರಾಸರಿಯಲ್ಲಿ 6 ವಿಕೆಟ್‌ಗಳನ್ನು ಪಡೆದಿದ್ದರು.

ಐಪಿಎಲ್ 2025 ರ ಉಳಿದ ಪಂದ್ಯಗಳಿಗೆ ಗಾಯಗೊಂಡ ವಿಘ್ನೇಶ್ ಪುತ್ತೂರ್ ಬದಲಿಗೆ ಮುಂಬೈ ಇಂಡಿಯನ್ಸ್ ಲೆಗ್ ಸ್ಪಿನ್ನರ್ ರಘು ಶರ್ಮಾ ಅವರನ್ನು ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಂಡಿದೆ. ಜಲಂಧರ್‌ನ 32 ವರ್ಷದ ಬಲಗೈ ಲೆಗ್ ಸ್ಪಿನ್ನರ್ ರಘು ಪಂಜಾಬ್ ಮತ್ತು ಪುದುಚೇರಿ ಪರ ಆಡಿದ್ದಾರೆ. ಪ್ರಸ್ತುತ ಅವರು ದೇಶೀಯ ಕ್ರಿಕೆಟ್‌ನಲ್ಲಿ ಪುದುಚೇರಿಯನ್ನು ಪ್ರತಿನಿಧಿಸುತ್ತಿದ್ದಾರೆ.

ರಘು ಶರ್ಮಾ 11 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 19.59 ರ ಸರಾಸರಿಯಲ್ಲಿ 57 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು 9 ಲಿಸ್ಟ್ ಎ ಪಂದ್ಯಗಳಲ್ಲಿ 14 ವಿಕೆಟ್‌ಗಳು ಮತ್ತು 9 ಟಿ20 ಪಂದ್ಯಗಳಲ್ಲಿ 3 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದೀಗ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡಲಿರುವ ರಘು ಅವರನ್ನು 30 ಲಕ್ಷ ಮೂಲ ಬೆಲೆಗೆ ಮುಂಬೈ ತಂಡಕ್ಕೆ ಸೇರಿಸಿಕೊಂಡಿದೆ.
Published On - 4:22 pm, Thu, 1 May 25