ಹಾಕಿಗೆ ಧ್ಯಾನ್ಚಂದ್, ಕ್ರಿಕೆಟ್ಗೆ ಸಚಿನ್ ತೆಂಡೂಲ್ಕರ್ ಮತ್ತು ಬಿಲಿಯರ್ಡ್ಸ್ ಹಾಗೂ ಸ್ನೂಕರ್ ಪಂಕಜ್ ಅಡ್ವಾಣಿ ಇದ್ದಂತೆ ಭಾರತೀಯ ಚೆಸ್ಗೆ ವಿಶ್ವನಾಥನ್ ಆನಂದ್. ಈ ದಿಗ್ಗಜರು ಮತ್ತು ಇವರಂತೆ ಇನ್ನೂ ಹಲವಾರು ಕ್ರೀಡಾಪಟುಗಳು ತಾವು ಪ್ರತಿನಿಧಿಸುವ ಕ್ರೀಡೆಯಲ್ಲಿ ಭಾರತದ ಪತಾಕೆಯನ್ನು ವಿಶ್ವದಾದ್ಯಂತ ಹಾರಿಸಿದ್ದಾರೆ. ಇವರೆಲ್ಲ ತಮಗೆ ಖ್ಯಾತಿ, ಹಣ, ಪ್ರತಿಷ್ಠೆ ಒದಗಿಸಿದ ಕ್ರೀಡೆಗಳಿಗೆ ತಮ್ಮ ಕೈಲಾದುದನ್ನು ವಾಪಸ್ಸು ನೀಡುತ್ತಿದ್ದಾರೆ.
ಆನಂದ್, ಚೆಸ್ನಲ್ಲಿ ಮಾಡಿರುವ ಸಾಧನೆ ಅದ್ವಿತೀಯವಾದ್ದು. ಹಾಗೆ ನೋಡಿದರೆ, ಆನಂದ್ ರಂಗ ಪ್ರವೇಶಿಸುವ ಮೊದಲು ಭಾರತದಲ್ಲಿ ಚೆಸ್ ಜನಪ್ರಿಯ ಆಟವೆನಿಸರಲಿಲ್ಲ. 5 ಬಾರಿ ವಿಶ್ವ ಚಾಂಪಿಯನ್ಶಿಪ್ ಗೆಲ್ಲುವ ಮೂಲಕ ಅವರು ಭಾರತದ ಯುವಪೀಳಿಗೆಯಲ್ಲಿ, ಕ್ರಿಕೆಟ್ ಹೊರತಾಗಿ ಬೇರೆ ಕ್ರೀಡೆಗಳಲ್ಲೂ ಹೆಸರು ಮಾಡಬಹುದೆನ್ನುವುದನ್ನು ತೋರಿಸಿದರು. ಈಗ ನೋಡಿ, ಅನೇಕ ಯುವ ಆಟಗಾರರು ಚದುರಂದಾಟವನ್ನು ಗಂಭೀರವಾಗಿ ತೆಗದುಕೊಂಡು ಅದರಲ್ಲಿ ಪ್ರಾವೀಣ್ಯತೆ ಸಾಧಿಸಿ ಆನಂದ್ರಂತೆ ಹೆಸರುವಾಸಿಯಾಗುವ, ಚಾಂಪಿಯನ್ಗಳಾಗುವ ಪ್ರಯತ್ನದಲ್ಲಿದ್ದಾರೆ.
ಅಂಥವರಲ್ಲಿ ಪ್ರತಿಭಾವಂತರನ್ನು ಆರಿಸಿಕೊಂಡು, ಅವರನ್ನು ವಿಶ್ವದರ್ಜೆಯ ಚೆಸ್ ಆಟಗಾರರನ್ನಾಗಿ ರೂಪಿಸಲು ಆನಂದ್, ವೆಸ್ಟ್ಬ್ರಿಡ್ಜ್ ಕ್ಯಾಪಿಟಲ್ ಎಂಬ ಸಂಸ್ಥೆಯೊಂದಿಗೆ ಕೈಜೋಡಿಸಿ ಚೆನೈಯಲ್ಲಿ ವೆಸ್ಟ್ಬ್ರಿಡ್ಜ್-ಆನಂದ್ ಚೆಸ್ ಅಕಾಡೆಮಿ ಸ್ಥಾಪಿಸಲಿದ್ದಾರೆ. ಮೊದಲ ಹಂತದಲ್ಲಿ ಆನಂದ್, ಭಾರತದ ಐವರು ಉದಯೋನ್ಮುಖ ಪ್ರತಿಭಾವಂತ ಅಟಗಾರರಿಗೆ ತರಬೇತಿ ನೀಡಲಿದ್ದಾರೆ. 15ರ ಪ್ರಾಯದ ಪ್ರಗ್ನಾನಂದಾ, 16 ವರ್ಷ ವಯಸ್ಸಿನ ನಿಹಾಲ್ ಸರೀನ್, 15 ವರ್ಷದ ರೌನಕ್ ಸಾಧ್ವಾನಿ, 14 ವರ್ಷ ವಯಸ್ಸಿನ ಡಿ ಗುಕೇಶ್ ಮತ್ತು ಪ್ರಗ್ನಾನಂದಾನ ಹಿರಿಯ ಸಹೋದರಿ 19 ವರ್ಷ ವಯಸ್ಸಿನ ಆರ್ ವೈಶಾಲಿ ಮೊದಲಾದವರು ಅನಂದ್ ಅವರಿಂದ ತರಬೇತಿ ಹೊಂದಲು ಆಯ್ಕೆಯಾಗಿದ್ದಾರೆ.
ಮುಂಬರುವ ದಿನಗಳಲ್ಲಿ ಅರ್ಹ ಮತ್ತು ಪ್ರತಿಭಾವಂತ ಎಳೆಯರನ್ನು ಗುರುತಿಸಿ ಅವರನ್ನು ಅಕಾಡೆಮಿಗೆ ಸೇರಿಸುವುದರ ಜತೆಗೆ ಫೆಲೋಶಿಪ್ ಕೂಡ ಒದಗಿಸಲಾಗುತ್ತದೆ ಎಂದು ಆನಂದ್ ಹೇಳಿದ್ದಾರೆ.
ಅಕಾಡೆಮಿ ಸ್ಥಾಪಿಸುವ ಹಿಂದಿನ ಉದ್ದೇಶದ ಬಗ್ಗೆ ಮಾತಾಡಿದ ಆನಂದ್, ‘ ಕಳೆದೆರಡು ದಶಕಗಳಿಂದ ಚೆಸ್ ಭಾರತದಲ್ಲಿ ಬಹಳ ಪ್ರಗತಿ ಸಾಧಿಸಿದೆ. ವಿಶ್ವ ಚಾಂಪಿಯನ್ಗಳಾಗಿ ಹೊರಹೊಮ್ಮಬಹುದಾದ ಪ್ರತಿಭಾವಂತ ಯುವಕರು ದೇಶದಲ್ಲಿದ್ದಾರೆ. ಅವರಿಗೆ ಸರಿಯಾದ ಮಾರ್ಗದರ್ಶನ ದೊರೆತರೆ, ವಿಶ್ವದ ಟಾಪ್-10 ಆಟಗಾರರಲ್ಲಿ ಸ್ಥಾನ ಪಡೆದುಕೊಳ್ಳುವುದರಲ್ಲಿ ಅನುಮಾನವಿಲ್ಲ,’ ಎಂದರು.
ಕೊವಿಡ್-19 ಸೃಷ್ಟಿಸಿರುವ ಸ್ಥಿತಿಯಿಂದಾಗಿ ತರಬೇತಿಯ ಆರಂಭಿಕ ಹಂತ ವರ್ಚ್ಯುಯಲ್ ಆಗಿ ನಡೆಯಲಿದೆ. ಈಗಿನ ಸ್ಥಿತಿಯನ್ನು ಯುವ ಆಟಗಾರರು ಸದುಪಯೋಗಪಡಿಸಿಕೊಳ್ಳಬಹುದೆಂದು ಆನಂದ್ ಹೇಳುತ್ತಾರೆ.
‘‘ದೇಶದಲ್ಲಿ ಈಗ ಜಾರಿಯಲ್ಲಿರುವ ಸ್ಥಿತಿ ಉದಯೋನ್ಮುಖ ಆಟಗಾರರಿಗೆ ತಮ್ಮ ಏಕಾಗ್ರತೆಯನ್ನು ಬಲಪಡಿಸಿಕೊಳ್ಳಲು ನೆರವಾಗುತ್ತದೆ. ಈ ಆವಧಿಯಲ್ಲಿ ಅವರು ತಮ್ಮ ದೌರ್ಬಲ್ಯಗಳನ್ನು ದೂರ ಮಾಡಿಕೊಳ್ಳಬಹುದು. ತಮ್ಮ ದೀರ್ಘಾವಧಿಯ ಗುರಿಯ ಮೇಲೆ ಫೋಕಸ್ ಮಾಡಲು ಅವರಗೀಗ ಒಳ್ಳೆಯ ಅವಕಾಶ,’’ ಎಂದು ಆನಂದ್ ಹೇಳಿದರು.
ಇದೇ ಸಂದರ್ಭದಲ್ಲಿ ಮಾತಾಡಿದ ವೆಸ್ಟ್ಬ್ರಿಡ್ಜ್ ಕ್ಯಾಪಿಟಲ್ ಸಂಸ್ಥೆಯ ಸಹ-ಸಂಸ್ಥಾಪಕ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಸಿಂಘಲ್, ‘ಲೆಜೆಂಡರಿ ಆಟಗಾರ ಆನಂದ್ ಅವರ ಸಹಭಾಗಿತ್ವದಲ್ಲಿ ಅಕಾಡೆಮಿಯನ್ನು ಶುರುಮಾಡಿರುವುದು ಥ್ರಿಲ್ಲಿಂಗ್ ಅನಿಸುತ್ತಿದೆ,’ ಎಂದು ಹೇಳಿದರು.
ಆನಂದ್ ಅವರಲ್ಲದೆ, ಜರ್ಮನ್ ಗ್ರ್ಯಾಂಡ್ ಮಾಸ್ಟರ್ ಆರ್ಥರ್ ಜುಸ್ಸುಪೊ, ಪೊಲಿಶ್ ಜಿಎಮ್ ಗ್ರೆಗೊರ್ ಗಜೆವ್ಸ್ಕಿ ಮತ್ತು ಭಾರತದ ಜಿಎಮ್ ಸಂದೀಪನ್ ಚಂದಾ ಯುವ ಅಟಗಾರರಿಗೆ ತರಬೇತಿ ನೀಡಲಿದ್ದಾರೆ.