ಭಾರತೀಯ ಕುಸ್ತಿ ಒಕ್ಕೂಟದ (Wrestling Federation of India) ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ಅವರ ಆಪ್ತ ಸಂಜಯ್ ಸಿಂಗ್ (Sanjay Singh) ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಕುಸ್ತಿಪಟುಗಳ ಅಸಮಾಧಾನದ ಕಟ್ಟೆ ಒಡೆದಿದೆ. ಚುನಾವಣಾ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಒಲಿಂಪಿಕ್ ಪದಕ ವಿಜೇತೆ ಕುಸ್ತಿಪಟು ಸಾಕ್ಷಿ ಮಲಿಕ್ ತಮ್ಮ ಕುಸ್ತಿ ಜಗತ್ತಿಗೆ ವಿದಾಯ ಹೇಳಿದ್ದರು. ಅವರ ಬೆನ್ನಲ್ಲೇ ಇದೀಗ ಮತ್ತೊಬ್ಬ ಪದಕ ವಿಜೇತ ಕುಸ್ತಿಪಟು ಬಜರಂಗ್ ಪುನಿಯಾ (Bajrang Punia) ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಧಾನಿಯವರಿಗೆ ಹಿಂದಿರುಗಿಸುತ್ತಿರುವುದಾಗಿ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ತಮಗೆ ಒಲಿದಿದ್ದ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸುವುದರ ಜೊತೆಗೆ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಸುದೀರ್ಘ ಹೇಳಿಕೆಯನ್ನು ನೀಡಿರುವ ಪುನಿಯಾ, “ಗೌರವಾನ್ವಿತ ಪ್ರಧಾನಮಂತ್ರಿಗಳೇ, ನೀವು ಆರೋಗ್ಯವಾಗಿದ್ದೀರಿ ಎಂದು ಭಾವಿಸುತ್ತೇವೆ. ಸದಾ ದೇಶ ಸೇವೆಯಲ್ಲಿ ನಿರತರಾಗಿದ್ದೀರಿ. ನಿಮ್ಮ ಬಿಡುವಿಲ್ಲದ ವೇಳಾಪಟ್ಟಿಯ ನಡುವೆ, ನಮ್ಮ ಕುಸ್ತಿಯತ್ತ ನಿಮ್ಮ ಗಮನವನ್ನು ಸೆಳೆಯಲು ನಾನು ಬಯಸುತ್ತೇನೆ. ಈ ವರ್ಷದ ಜನವರಿ ತಿಂಗಳಿನಲ್ಲಿ ದೇಶದ ಮಹಿಳಾ ಕುಸ್ತಿಪಟುಗಳು ಕುಸ್ತಿ ಅಸೋಸಿಯೇಷನ್‌ನ ಉಸ್ತುವಾರಿ ವಹಿಸಿದ್ದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಗಂಭೀರ ಆರೋಪ ಮಾಡಿದ್ದರು ಎಂದು ನಿಮಗೆ ತಿಳಿದಿರಬೇಕು.
Breaking: ಬ್ರಿಜ್‌ಭೂಷಣ್ ಆಪ್ತನಿಗೆ ಅಧ್ಯಕ್ಷಗಿರಿ; ಕುಸ್ತಿಗೆ ವಿದಾಯ ಹೇಳಿದ ಸಾಕ್ಷಿ ಮಲಿಕ್
ಆ ಮಹಿಳಾ ಕುಸ್ತಿಪಟುಗಳು ತಮ್ಮ ಚಳುವಳಿಯನ್ನು ಪ್ರಾರಂಭಿಸಿದಾಗ, ನಾನು ಕೂಡ ಅವರಿಗೆ ಬೆಂಬಲವಾಗಿ ನಿಂತಿದ್ದೆ. ಆ ಬಳಿಕ ಸರ್ಕಾರವು ಈ ಸಮಸ್ಯಗೆ ಕಾಂಕ್ರೀಟ್ ಕ್ರಮ ಕೈಗೊಳ್ಳುವುದಾಗಿ ನಮಗೆ ತಿಳಿಸಿದಾಗ ಧರಣಿ ನಿರತ ಕುಸ್ತಿಪಟುಗಳು ಜನವರಿಯಲ್ಲಿ ಧರಣಿಯನ್ನು ಕೈಬಿಟ್ಟಿದ್ದೇವು. ಆದರೆ ಮೂರು ತಿಂಗಳ ನಂತರವೂ ಬ್ರಿಜ್‌ಭೂಷಣ್ ವಿರುದ್ಧ ಎಫ್‌ಐಆರ್ ದಾಖಲಾಗದಿದ್ದಾಗ, ಏಪ್ರಿಲ್ ತಿಂಗಳಿನಲ್ಲಿ ನಾವು ಕುಸ್ತಿಪಟುಗಳು ಮತ್ತೆ ಬೀದಿಗಿಳಿದು ಪ್ರತಿಭಟಿಸಿದ್ದೇವು. ಆದರೆ ನಮ್ಮ ಪ್ರತಿಭಟನೆಯ ಹೊರತಾಗಿಯೂ ದೆಹಲಿ ಪೊಲೀಸರು ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸಲಿಲ್ಲ. ಆದ್ದರಿಂದ ನಾವು ನ್ಯಾಯಾಲಯಕ್ಕೆ ಹೋಗಿ ಎಫ್‌ಐಆರ್ ದಾಖಲಿಸಬೇಕಾಯಿತು.
मैं अपना पद्मश्री पुरस्कार प्रधानमंत्री जी को वापस लौटा रहा हूँ. कहने के लिए बस मेरा यह पत्र है. यही मेरी स्टेटमेंट है। 🙏🏽 pic.twitter.com/PYfA9KhUg9
— Bajrang Punia 🇮🇳 (@BajrangPunia) December 22, 2023
ಜನವರಿಯಲ್ಲಿ ನಾವು ದೂರು ನೀಡಿದಾಗ ಅದರಲ್ಲಿ 19 ಮಹಿಳಾ ಕುಸ್ತಿಪಟುಗಳು ಸೇರಿದ್ದರು. ಆದರೆ ಏಪ್ರಿಲ್ ವೇಳೆಗೆ ಕೇವಲ 7 ಕುಸ್ತಿಪಟುಗಳು ಮಾತ್ರ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ತಮ್ಮ ಹೋರಾಟವನ್ನು ಮುಂದುವರೆಸಿದ್ದರು. ಅಂದರೆ, ಈ 3 ತಿಂಗಳಲ್ಲಿ, ಬ್ರಿಜ್ ಭೂಷಣ್ ಸಿಂಗ್ ತಮ್ಮ ಬಲದಿಂದ 12 ಮಹಿಳಾ ಕುಸ್ತಿಪಟುಗಳನ್ನು ಪ್ರತಿಭಟನೆಯಿಂದ ಹಿಂದೆ ಸರಿಯುವಂತೆ ಮಾಡಿದ್ದರು. ಈ ಹಂತದಲ್ಲಿ 40 ದಿನಗಳ ಕಾಲ ನಾವು ಪ್ರತಿಭಟನೆ ಮಾಡಿದೆವು. ಆ ಸಮಯದಲ್ಲಿ ನಮ್ಮೆಲ್ಲರ ಮೇಲೆ ಸಾಕಷ್ಟು ಒತ್ತಡವಿತ್ತು. ನಾವು ಪ್ರತಿಭಟನೆ ಮಾಡುತ್ತಿದ್ದ ಸ್ಥಳವನ್ನು ತೆರವುಗೊಳಿಸಲಾಯಿತು. ನಮ್ಮನ್ನು ದೆಹಲಿಯಿಂದ ಓಡಿಸಿದಲ್ಲದೆ, ಪ್ರತಿಭಟನೆ ಮಾಡದಂತೆ ನಮ್ಮನ್ನು ನಿಷೇಧಿಸಲಾಯಿತು.
ಈ ಸಮಯದಲ್ಲಿ ನಮಗೆ ಏನು ಮಾಡಬೇಕೆಂದು ತೋಚಲಿಲ್ಲ. ಹಾಗಾಗಿ ನಾವು ನಮ್ಮ ವೃತ್ತಿಜೀವನದಲ್ಲಿ ಜಯಿಸಿದ್ದ ಪದಕಗಳನ್ನು ಗಂಗೆಯಲ್ಲಿ ವಿಸರ್ಜಿಸಲು ಮುಂದಾದೆವು. ಆದರೆ ಅಲ್ಲಿಗೆ ಹೋದಾಗ ನಮ್ಮ ಕೋಚ್ ಸಾಹಿಬಾನ್ ಮತ್ತು ರೈತರು ಅದಕ್ಕೆ ಅವಕಾಶ ನೀಡಲಿಲ್ಲ. ಅದೇ ಸಮಯದಲ್ಲಿ, ನಿಮ್ಮ ಜವಾಬ್ದಾರಿಯುತ ಸಚಿವರೊಬ್ಬರು ಕರೆ ಮಾಡಿ ಪದಕಗಳನ್ನು ಗಂಗೆಯಲ್ಲಿ ವಿಸರ್ಜಿಸದಂತೆ ಕೇಳಿಕೊಂಡರು. ಗೌರವಾನ್ವಿತ ಗೃಹ ಸಚಿವರು ನಮಗೆ ಕರೆ ಮಾಡಿ ನ್ಯಾಯ ಒದಗಿಸುವುದಾಗಿ ಹೇಳಿದ್ದರು. ಹಾಗಾಗಿ ನಾವು ಅಲ್ಲಿಂದ ವಾಪಸ್ಸಾಗಿದ್ದೇವು.
ಆದರೆ ಇದೀಗ ನಡೆದ ಮುಖ್ಯಸ್ಥರ ಚುನಾವಣೆಯಲ್ಲಿ ಬ್ರಿಜ್ ಭೂಷಣ್ ಸಿಂಗ್ ಅವರ ಆಪ್ತರಾದ ಸಂಜಯ್ ಸಿಂಗ್ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆಯೇ ಬ್ರಿಜ್ ಭೂಷಣ್ ಅವರು ಚುನಾವಣೆಯಲ್ಲಿ ನಾವೇ ಎಂದಿನಂತೆ ಒಕ್ಕೂಟದ ಮೇಲೆ ಮೇಲುಗೈ ಸಾಧಿಸುವುದಾಗಿ ಹೇಳಿದ್ದರು. ಈಗ ಅವರ ಹೇಳಿಕೆಯಂತೆಯೇ ಆಗಿದೆ. ಏನು ಮಾಡಬೇಕೆಂದು ಅಥವಾ ಎಲ್ಲಿಗೆ ಹೋಗಬೇಕೆಂದು ನಮಗೆ ಅರ್ಥವಾಗಲಿಲ್ಲ. ಸರ್ಕಾರ ನಮಗೆ ಸಾಕಷ್ಟು ನೀಡಿದೆ. ನನಗೆ 2019 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು. ನಾನು ಅರ್ಜುನ, ಖೇಲ್ ರತ್ನ ಪ್ರಶಸ್ತಿಯನ್ನು ಸಹ ಪಡೆದಿದ್ದೇನೆ. ಈ ಪ್ರಶಸ್ತಿಗಳನ್ನು ಪಡೆದಾಗ, ನಾನು ಆಗಸದಲ್ಲಿ ತೇಲಿದ್ದೆ. ಆದರೆ ಇಂದು ದುಃಖವು ಹೆಚ್ಚು ಭಾರವಾಗಿದೆ. ಮಹಿಳಾ ಕುಸ್ತಿಪಟು ಅಭದ್ರತೆಯಿಂದಾಗಿ ಈ ಕ್ರೀಡೆಯನ್ನು ತೊರೆಯುತ್ತಿದ್ದಾರೆ.”. ಎಂದು ಬರೆದುಕೊಂಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:14 pm, Fri, 22 December 23