
ಜಾರ್ಜಿಯಾದ ಬಟುಮಿಯಲ್ಲಿ ನಡೆದ ಮಹಿಳಾ ಚೆಸ್ ವಿಶ್ವಕಪ್ (Women’s Chess World Cup) ಫೈನಲ್ ಇಬ್ಬರು ಭಾರತೀಯ ಮಹಿಳಾ ಚೆಸ್ ಚತುರೆಯರ ಚಾಣಾಕ್ಷತನಕ್ಕೆ ಸಾಕ್ಷಿಯಾಯಿತು. ಒಂದೆಡೆ 38 ವರ್ಷದ ಅನುಭವಿ ಕೊನೆರು ಹಂಪಿ (Koneru Humpy) ಇದ್ದರೆ, ಮತ್ತೊಂದೆಡೆ 19 ವರ್ಷದ ಯುವ ಆಟಗಾರ್ತಿ ದಿವ್ಯಾ ದೇಶಮುಖ್ (Divya Deshmukh) ಪ್ರಶಸ್ತಿಗಾಗಿ ಎದುರು ಬದುರಾಗಿದ್ದರು. ಉಭಯರ ನಡುವೆ ನಡೆದ ಮೊದಲೆರಡು ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿದ್ದರಿಂದ ಟೈ-ಬ್ರೇಕರ್ ಮೂಲಕ ವಿಜೇತರನ್ನು ನಿರ್ಧರಿಸಬೇಕಾಯಿತು. ಅದರಂತೆ ಇಂದು ನಡೆದ ಟೈ-ಬ್ರೇಕರ್ ಸುತ್ತಿನಲ್ಲಿ ಕೊನೆರು ಹಂಪಿ ಅವರನ್ನು ಮಣಿಸಿದ ದಿವ್ಯಾ ದೇಶಮುಖ್ ಮಹಿಳಾ ಚೆಸ್ ವಿಶ್ವಕಪ್ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ದಾಖಲೆ ನಿರ್ಮಿಸಿದ್ದಾರೆ. ಅಷ್ಟಕ್ಕೂ ಕಳೆದ ಕೆಲವು ವರ್ಷಗಳಿಂದ ಭಾರತ ಚೆಸ್ ಲೋಕದಲ್ಲಿ ಸಂಚಲನ ಮೂಡಿಸಿರುವ ದಿವ್ಯಾ ದೇಶಮುಖ್ ಯಾರು ಎಂಬುದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹುಡುಕಾಟ ಜೋರಾಗಿದೆ. ಅದಕ್ಕೆಲ್ಲ ಉತ್ತರ ಇಲ್ಲಿದೆ.
ಡಿಸೆಂಬರ್ 9, 2005 ರಂದು ನಾಗ್ಪುರದಲ್ಲಿ ಜನಿಸಿದ ದಿವ್ಯಾ ಅವರ ಪೋಷಕರು ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ಅವರ ತಂದೆಯ ಹೆಸರು ಜಿತೇಂದ್ರ ಮತ್ತು ತಾಯಿಯ ಹೆಸರು ನಮ್ರತಾ. ಇನ್ನು ದಿವ್ಯಾ ಅವರ ವೃತ್ತಿಜೀವನದ ಆರಂಭಿಕ ದಿನಗಳ ಬಗ್ಗೆ ನೋಡುವುದಾದರೆ,, ಐದನೇ ವಯಸ್ಸಿನಲ್ಲಿಯೇ ಚೆಸ್ ಆಡಲು ಪ್ರಾರಂಭಿಸಿದ ದಿವ್ಯಾ ಚೆನ್ನೈನ ಚೆಸ್ ಗುರುಕುಲದಲ್ಲಿ ಜಿಎಂ ಆರ್‌ಬಿ ರಮೇಶ್ ಅವರ ಅಡಿಯಲ್ಲಿ ತರಬೇತಿ ಪಡೆದಿದ್ದು, 2012 ರಲ್ಲಿ, ಅಂದರೆ ತಮ್ಮ ಏಳನೇ ವಯಸ್ಸಿನಲ್ಲಿಯೇ 7 ವರ್ಷದೊಳಗಿನವರ ರಾಷ್ಟ್ರೀಯ ಚಾಂಪಿಯನ್‌ಶಿಪ್ ಗೆದ್ದರು. ಇದರ ನಂತರ, ಅವರು 10 ವರ್ಷದೊಳಗಿನವರ (ಡರ್ಬನ್, 2014) ಮತ್ತು 12 ವರ್ಷದೊಳಗಿನವರ (ಬ್ರೆಜಿಲ್, 2017) ವಿಭಾಗಗಳಲ್ಲಿ ವಿಶ್ವ ಯುವ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡರು. ಇದರ ಜೊತೆಗೆ 2014 ರಲ್ಲಿ ಡರ್ಬನ್‌ನಲ್ಲಿ ನಡೆದ 10 ವರ್ಷದೊಳಗಿನವರ ವಿಶ್ವ ಯುವ ಪ್ರಶಸ್ತಿಯನ್ನು ಗೆದ್ದ ದಿವ್ಯಾ, 2017 ರಲ್ಲಿ ಬ್ರೆಜಿಲ್‌ನಲ್ಲಿ ನಡೆದ 12 ವರ್ಷದೊಳಗಿನವರ ವಿಭಾಗದಲ್ಲಿಯೂ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಈ ಎಲ್ಲಾ ಸಾಧನೆಗಳ ಫಲವಾಗಿ 2021 ರಲ್ಲಿ ಮಹಿಳಾ ಗ್ರ್ಯಾಂಡ್‌ಮಾಸ್ಟರ್ ಆಗಿ ಹೊರಹೊಮ್ಮಿದ ದಿವ್ಯಾ ಇದರೊಂದಿಗೆ ಈ ಸಾಧನೆ ಮಾಡಿದ ವಿದರ್ಭದ ಮೊದಲ ಮಹಿಳಾ ಆಟಗಾರ್ತಿ ಮತ್ತು ದೇಶದ 22 ನೇ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
Chess World Cup 2025: ಕೊನೆರು ಹಂಪಿಯವರನ್ನು ಮಣಿಸಿ ಚೆಸ್ ವಿಶ್ವಕಪ್ ಗೆದ್ದ 19 ವರ್ಷದ ದಿವ್ಯಾ ದೇಶಮುಖ್
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:24 pm, Mon, 28 July 25