ಕಾದು ಕಾದು ಸುಸ್ತಾದ ಪಾರ್ಥೀವ್ ಕೊನೆಗೆ ವಿದಾಯ ಹೇಳಿಬಿಟ್ಟರು!

|

Updated on: Dec 09, 2020 | 4:46 PM

ಪ್ರತಿಭಾವಂತ ವಿಕೆಟ್​ಕೀಪರ್ ಮತ್ತು ಉತ್ತಮ ಬ್ಯಾಟ್ಸ್​ಮನ್ ಆಗಿದ್ದ ಪಾರ್ಥೀವ್ ಪಟೇಲ್ ಕ್ರಿಕೆಟ್​ನ ಎಲ್ಲ ಆವೃತ್ತಿಗಳಿಗೆ ವಿದಾಯ ಹೇಳಿದ್ದಾರೆ. ಮಹೇಂದ್ರಸಿಂಗ್ ಧೋನಿ ಟೀಮಿಗೆ ಕಾಲಿಟ್ಟ ನಂತರ ಪಾರ್ಥೀವ್ ಸೇರಿದಂತೆ ಹಲವಾರು ವಿಕೆಟ್​ಕೀಪರ್-ಬ್ಯಾಟ್ಸ್​ಮನ್​ಗಳು ತೆರೆಮರೆಗೆ ಸರಿಯಬೇಕಾಯಿತು. ಈ ಹಿನ್ನೆಲೆಯಲ್ಲಿ ಪಾರ್ಥೀವ್ ಅದೃಷ್ಟಹೀನರೆಂದೇ ಹೇಳಬೇಕು.

ಕಾದು ಕಾದು ಸುಸ್ತಾದ ಪಾರ್ಥೀವ್ ಕೊನೆಗೆ ವಿದಾಯ ಹೇಳಿಬಿಟ್ಟರು!
Follow us on

ಪಾರ್ಥೀವ್ ಪಟೇಲ್

ಹದಿನೇಳನೇ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿ 18 ವರ್ಷಗಳ ಕಾಲ ಅ ಮಟ್ಟದಲ್ಲಿ ಅಡಿದ ಭಾರತದ ವಿಕೆಟ್​ಕೀಪರ್-ಬ್ಯಾಟ್ಸ್​ಮನ್ ಪಾರ್ಥೀವ್ ಪಟೇಲ್ ಕ್ರಿಕೆಟ್​ನ ಎಲ್ಲ ಫಾರ್ಮಾಟ್​ಗಳಿಗೆ ವಿದಾಯ ಹೇಳಿದ್ದಾರೆ. ತಮ್ಮ ಟ್ವೀಟ್​ನಲ್ಲಿ ಅವರು ವಿದಾಯ ಘೋಷಿಸುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿಲ್ಲವಾದರೂ ಅವರ ಅಂತರಾಳದಲ್ಲಿ ನೋವಿರುವುದು ಮಾತ್ರ ಸತ್ಯ.

ನೋವು ಯಾಕಿದೆ ಅನ್ನುವುದು ಸ್ಪಷ್ಟ. 18 ವರ್ಷಗಳ ಕಾಲ ಅವರು ರಾಷ್ಟ್ರೀಯ ತಂಡಕ್ಕೆ ವಿವಿಧ ಹಂತಗಳಲ್ಲಿ ಅಲ್ಪ-ಅಲ್ಪ ಅವಧಿಯ ಸೇವೆ ಸಲ್ಲಿಸಿದರೂ ಕೇವಲ 25 ಟೆಸ್ಟ್, 38 ಒಂದು ದಿನದ ಅಂತರರಾಷ್ಟ್ರೀಯ ಪಂದ್ಯ ಮತ್ತು 2 ಟಿ20ಐ ಪಂದ್ಯಗಳಲ್ಲಿ ಮಾತ್ರ ದೇಶವನ್ನು ಪ್ರತಿನಿಧಿಸಿದರು. ಇಂಡಿಯನ್ ಪ್ರಿಮೀಯರ್​ ಲೀಗ್​ 2020 ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯನ್ನು ಪ್ರತಿನಿಧಿಸಿದ್ದ ಪಾರ್ಥೀವ್ ಅವರಿಗೆ ಒಂದು ಪಂದ್ಯದಲ್ಲೂ ಆಡುವ ಅವಕಾಶ ಸಿಗಲಿಲ್ಲ. ಪ್ರಾಯಶಃ ಅಗಲೇ ಅವರು ಕ್ರಿಕೆಟ್​ಗೆ ವಿದಾಯ ಹೇಳುವ ನಿರ್ಧಾರಕ್ಕೆ ಬಂದಿರಬಹುದು.

ಸಭ್ಯರ ಕ್ರೀಡೆ ಎಂದು ಕರೆಸಿಕೊಳ್ಳುವ ಕ್ರಿಕೆಟ್ ಕೆಲವು ಆಟಗಾರರಿಗೆ ಕ್ರೂರಿ ಎಂದೆನಿಸಿದ್ದರೆ ಆಶ್ಚರ್ಯವಿಲ್ಲ.

ಎಮ್ ಎಸ್ ಧೋನಿಯೊಂದಿಗೆ ಪಾರ್ಥೀವ್ ಪಟೇಲ್

ಪಾರ್ಥೀವ್ ಟೆಸ್ಟ್ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದಾಗ ಅವರಿಗಿನ್ನೂ ಮತ ಚಲಾಯಿಸುವ ಹಕ್ಕು ಸಹ ಸಿಕ್ಕಿರಲಿಲ್ಲ. ಹೌದು, ಅವರು 17ನೇ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟು ಭಾರತದ ಪರ ಅತಿ ಕಡಿಮೆ ವಯಸ್ಸಿನಲ್ಲಿ ಟೆಸ್ಟ್ ಆಡಿದ ವಿಕೆಟ್​ಕೀಪರ್ ಎನಿಸಿಕೊಂಡರು. ಅವರ ಸಮಕಾಲೀನ್ ವಿಕೆಟ್​​ಕೀಪರ್​ಗಳಾದ ದಿನೇಶ್ ಕಾರ್ತೀಕ್ 19ನೇ ವಯಸ್ಸಿನಲ್ಲಿ ಭಾರತವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದರೆ, ಅಜಯ್ ರಾತ್ರಾ 20ನೇ ವಯಸ್ಸಿನಲ್ಲಿ ಡೆಬ್ಯು ಮಾಡಿದರು.

ಎಡಗೈ ಬ್ಯಾಟ್ಸ್​ಮನ್ ಮತ್ತು ಉತ್ತಮ ವಿಕೆಟ್​ಕೀಪರ್ ಆಗಿದ್ದ ಪಾರ್ಥೀವ್ 2002ರಲ್ಲಿ, ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್​ ಪಂದ್ಯವನ್ನಾಡಿದರು. ತಾವಾಡಿದ ಮೊದಲ ಇನ್ನಿಂಗ್ಸ್​ನಲ್ಲಿ ಸೊನ್ನೆಗೆ ಔಟಾದರೂ ಎರಡನೇ ಇನ್ನಿಂಗ್ಸ್​ನಲ್ಲಿ ಅಜೇಯ 19 ರನ್ ಬಾರಿಸಿದರು. ಅದೇ ವರ್ಷ ನ್ಯೂಜಿಲೆಂಡ್ ವಿರುದ್ಧ ಅವರು ಒಡಿಐ ಕ್ರಿಕೆಟ್​ಗೂ ಕಾಲಿಟ್ಟರು. ನಂತರದ ಎರಡು ವರ್ಷಗಳ ಕಾಲ 2 ಪಾರ್ಥೀವ್ ಭಾರತವನ್ನು ಎರಡೂ ಆವೃತ್ತಿಗಳಲ್ಲಿ ಪ್ರತಿನಿಧಿಸಿದರು. ಆದರೆ 2004ರಲ್ಲಿ ಮಹೇಂದ್ರಸಿಂಗ್ ಧೋನಿ ಮುನ್ನೆಲೆಗೆ ಬರುತ್ತಿದ್ದಂತೆಯೇ, ಟೀಮಿನಲ್ಲಿ ಪಾರ್ಥೀವ್ ಅವರ ಪ್ರಾಮುಖ್ಯತೆ ಕಡಿಮೆಯಾಗಲಾರಂಭಿಸಿತು. ಧೋನಿ ರಾಷ್ಟ್ರೀಯ ತಂಡಕ್ಕೆ ಕಾಲಿಟ್ಟ ನಂತರ ಹಿಂತಿರುಗಿ ನೋಡಲೇ ಇಲ್ಲ, ಕ್ರಿಕೆಟ್ ಎಲ್ಲ ಫಾರ್ಮಾಟ್​ಗಳಿಗೆ ಅವರು ಅನಿವಾರ್ಯವಾಗಿಬಿಟ್ಟರು. ಪಾರ್ಥೀವ್ ಎದುರಿಸಿದ ಸ್ಥಿತಿಯನ್ನು ಕಾರ್ತೀಕ್ ಸಹ ಅನುಭವಿಸಬೇಕಾಯಿತು. ನಂತರದ ವರ್ಷಗಳಲ್ಲಿ ಪಾರ್ಥೀವ್ ಆಗೊಮ್ಮೆ ಈಗೊಮ್ಮೆ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡರು.

ನಿಮಗೆ ಆಶ್ವರ್ಯವಾಗಬಹುದು, ಟೆಸ್ಟ್ ಆಡಿದ 2 ವರ್ಷಗಳ ನಂತರ ಪಾರ್ಥೀವ್ ಗುಜರಾತ್ ಪರ ರಣಜಿ ಟ್ರೋಫಿಯಲ್ಲಿ ಆಡಲಾರಂಭಿಸಿದರು. ಅವರು ಒಟ್ಟು 25ಟೆಸ್ಟ್, 38 ಒಡಿಐ ಮತ್ತು 2 ಟಿ20ಐ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದರು. ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅವರು ಶತಕ ದಾಖಲಿಸದೆ ಹೋದರೂ, ಆಡಿದ 194 ಪ್ರಥಮ ದರ್ಜೆ ಪಂದ್ಯಗಳಲ್ಲಿ 27 ಶತಕಗಳನ್ನು ಬಾರಿಸಿ 43ರನ್ ಸರಾಸರಿಯೊಂದಿಗೆ 11,240 ರನ್ ಕಲೆಹಾಕಿದರು. ವಿಕೆಟ್​ಗಳ ಹಿಂದೆ ಅವರು 486 ಕ್ಯಾಚ್ ಹಿಡಿದು 77 ಸ್ಟಂಪಿಂಗ್​ಗಳನ್ನು ಮಾಡಿದರು.

ಪಾರ್ಥೀವ್ ಪಟೇಲ್ ವಿದಾಯದ ಟ್ವೀಟ್

ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್, ಚೆನೈ ಸೂಪರ್ ಕಿಂಗ್ಸ್ ಮತ್ತು ಆರ್​ಸಿಬಿಯನ್ನು ಪ್ರತಿನಿಧಿಸಿದ ಪಾರ್ಥೀವ್ ಆಡಿದ 139 ಪಂದ್ಯಗಳಲ್ಲಿ 13 ಅರ್ಧ ಶತಕಗಳೊಂದಿಗೆ 22.6 ಸರಾಸರಿಯಲ್ಲಿ 2,848 ರನ್ ಗಳಿಸಿದರು. ಹಾಗೆಯೇ ವಿಕೆಟ್ ಹಿಂದೆ 113 ಕ್ಯಾಚ್​ಗಳನ್ನು ಹಿಡಿದು 31 ಸ್ಟಂಪಿಂಗ್​ಗಳನ್ನು ಮಾಡಿದರು.

ತಮ್ಮ ವಿದಾಯದ ಟ್ವೀಟ್​ನಲ್ಲಿ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ತಾವು ಆಡಿದ ಟೀಮುಗಳ ಕ್ಯಾಪ್ಟನ್​ಗಳು ಅದರಲ್ಲೂ ವಿಶೇಷವಾಗಿ ಅವರು ಪ್ರೀತಿಯಿಂದ ದಾದಾ ಎಂದು ಸಂಬೋಧಿಸಿರುವ ಸೌರವ್ ಗಂಗೂಲಿ ಅವರಿಗೆ ಕೃತಜ್ಞತೆಗಳನ್ನು ಸಮರ್ಪಿಸಿದ್ದಾರೆ.