ಕ್ರಿಕೆಟ್ಗೆ ಹಾರ್ದಿಕ್ ಪಾಂಡ್ಯರಂಥ ಸೂಪರ್ ಸ್ಟಾರ್ಗಳ ಅವಶ್ಯಕತೆಯಿದೆ: ಶೇನ್ ವಾರ್ನ್
ಹಾರ್ದಿಕ್ ಪಾಂಡ್ಯ ಅಭಿಮಾನಿ ವೃಂದಕ್ಕೆ ಲೇಟೆಸ್ಟ್ ಎಂಟ್ರಿಯೆಂದರೆ ಅಸ್ಟ್ರೇಲಿಯಾದ ಲೆಜೆಂಡರಿ ಲೆಗ್ ಸ್ಪಿನ್ನರ್ ಶೇನ್ ವಾರ್ನ್.
ಭಾರತದ ಸವ್ಯಸಾಚಿ ಆಟಗಾರ ಹಾರ್ದಿಕ್ ಪಾಂಡ್ಯ ಸೂಪರ್ ಸ್ಟಾರ್ ಪಟ್ಟಕ್ಕೇರುತ್ತಿದ್ದಂತೆ ಅವರ ಅಭಿಮಾನಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಆ ಅಭಿಮಾನಿ ವೃಂದಕ್ಕೆ ಲೇಟೆಸ್ಟ್ ಎಂಟ್ರಿಯೆಂದರೆ ಅಸ್ಟ್ರೇಲಿಯಾದ ಲೆಜೆಂಡರಿ ಲೆಗ್ ಸ್ಪಿನ್ನರ್ ಶೇನ್ ವಾರ್ನ್.
ಪದೇಪದೆ ಮರುಕಳಿಸುತ್ತಿರುವ ಬೆನ್ನುನೋವಿನಿಂದಾಗಿ ಬೌಲಿಂಗ್ ಮಾಡುವುದನ್ನು ನಿಲ್ಲಿಸಿರುವ ಪಾಂಡ್ಯ ಸೀಮಿತ ಓವರ್ಗಳ ಪಂದ್ಯಗಳಿಗೆ ಟೀಮ್ ಇಂಡಿಯಾದಲ್ಲಿ ಈಗ ಪರಿಣಿತ ಬ್ಯಾಟ್ಸ್ಮನ್ ಆಗಿ 6ನೇ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. ಅಪಾರ ಪ್ರತಿಭಾವಂತ ಮತ್ತು ಅಪ್ಪಟ ಬ್ಯಾಟ್ಸ್ಮನ್ಗಳು ಈ ಸ್ಥಾನಕ್ಕಾಗಿ ಲಭ್ಯರಿದ್ದರೂ ಬಿಸಿಸಿಐ ಮತ್ತು ನಾಯಕ ವಿರಾಟ್ ಕೊಹ್ಲಿ, ಪಾಂಡ್ಯ ಅವರೇ ಸೂಕ್ತ ಎಂದು ಪರಿಗಣಿಸಿ ಆಡಿಸುತ್ತಿರುವುದು ಅವರಲ್ಲಿರುವ ಬ್ಯಾಟಿಂಗ್ ಪ್ರತಿಭೆಗೆ ಸಾಕ್ಷಿಯಾಗಿದೆ.
ಆಸ್ಟ್ರೇಲಿಯಾದ ವಿರುದ್ಧ ಮಂಗಳವಾರದಂದು ಕೊನೆಗೊಂಡ 3 ಪಂದ್ಯಗಳ ಟಿ20ಐ ಸರಣಿ ಮತ್ತು ಅದಕ್ಕೆ ಮೊದಲು ನಡೆದ ಮೂರು-50 ಒವರ್ ಪಂದ್ಯಗಳ ಸರಣಿಯಲ್ಲಿ ಪಾಂಡ್ಯ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಒಂದು ದಿನದ ಪಂದ್ಯಗಳಲ್ಲಿ 210 ರನ್ ಬಾರಿಸಿದರೆ, ಟಿ20 ಪಂದ್ಯಗಳಲ್ಲಿ 78 ರನ್ ಚಚ್ಚಿ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಅವರು ಟೆಸ್ಟ್ ಪಂದ್ಯಗಳನ್ನಾಡುವ ತಂಡದಲ್ಲಿ ಇಲ್ಲದಿರುವುದರಿಂದ ಭಾರತಕ್ಕೆ ವಾಪಸ್ಸಾಗುವ ಸಿದ್ಧತೆಯಲ್ಲಿದ್ದಾರೆ.
ಪಾಂಡ್ಯ ಟೆಸ್ಟ್ ಟೀಮ್ಗೆ ಆಯ್ಕೆಯಾಗದಿರುವುದು ವಾರ್ನ್ಗೆ ಸೋಜಿಗವನ್ನುಂಟು ಮಾಡಿದೆ. ಪಾಂಡ್ಯರನ್ನು ಭಾರತ ತಂಡದ ಕೋಲ್ಮಿಂಚು ಎಂದಿರುವ ವಾರ್ನ್, ತಮ್ಮ ಮಿಂಚಿನ ಗತಿಯ ಬ್ಯಾಟಿಂಗ್ನಿಂದ ಅವರು ಟೀಮ್ನ ಇತರ ಅಟಗಾರರಲ್ಲಿ ಸ್ಫೂರ್ತಿ ತುಂಬುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.
‘ಹಾರ್ದಿಕ್ ಪಾಂಡ್ಯ ಅವರನ್ನು ಇಂಡಿಯಾದ ಟೆಸ್ಟ್ ಟೀಮಿನಲ್ಲಿ ಸೇರಿಸಲೇಬೇಕು. ಜೊತೆ ಆಟಗಾರರಲ್ಲಿ ಸ್ಥೈರ್ಯ ತುಂಬುವ ಜತೆಗೆ ಇಡೀ ತಂಡವನ್ನು ಮೇಲೆತ್ತುವ ವಿಶಿಷ್ಟವಾದ ಸಾಮರ್ಥ್ಯ ಅವರಲ್ಲಿದೆ. ಅವರಂಥ ಸೂಪರ್ ಸ್ಟಾರ್ಗಳ ಅವಶ್ಯಕತೆ ಕ್ರಿಕೆಟ್ಗಿದೆ! ಇದು ಅಕ್ಷರಶಃ ಸತ್ಯ’ ಎಂದು ವಾರ್ನ್ ಹೇಳಿದ್ದಾರೆ.
ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದ ಭಾರತದ ಮಾಜಿ ಆಟಗಾರ ಮಹ್ಮದ್ ಕೈಫ್ ಸಹ ಪಾಂಡ್ಯರನ್ನು ಸ್ವದೇಶಕ್ಕೆ ಕಳಿಸದೆ ಅಲ್ಲೇ ಉಳಿಸಿಕೊಂಡು ಟೆಸ್ಟ್ ಪಂದ್ಯಗಳಲ್ಲಿ ಆಡಿಸಬೇಕೆಂದು ಹೇಳಿದ್ದಾರೆ.
They should !!!!! @hardikpandya7 should be in India’s test team. He has the unique ability to energise his teammates and lift all the team around his vibe. Cricket needs characters and superstars like him ! Fact ? https://t.co/GaWQMVysP1
— Shane Warne (@ShaneWarne) December 8, 2020
ಟಿ20 ಕ್ರಿಕೆಟ್ ನನ್ನ ಬ್ಯಾಟಿಂಗ್ ಮೇಲೆ ದೊಡ್ಡ ಪ್ರಭಾವ ಬೀರಿದೆ: ಸ್ಟೀವ್ ಸ್ಮಿತ್
Published On - 10:23 pm, Wed, 9 December 20