ಕೊಹ್ಲಿಯಂತೆ ಪಿತೃತ್ವದ ರಜೆ ಪಡೆದ ಕೇನ್ ವಿಲಿಯಮ್ಸನ್: ವಿಂಡೀಸ್ ವಿರುದ್ಧ ಎರಡನೇ ಟೆಸ್ಟ್​ಗೆ ಗೈರು

ಗರ್ಭಿಣಿ ಪತ್ನಿಯನ್ನು ನೋಡಿಕೊಂಡು ಬರಲು ಅಲ್ಪಾವಧಿಯ ರಜೆ ಪಡೆದು ಎರಡನೇ ಟೆಸ್ಟ್ ಶುರುವಾಗುವ ಮೊದಲು ತಂಡವನ್ನು ಸೇರಿಕೊಳ್ಳುವುದಾಗಿ ಹೇಳಿ ತಮ್ಮ ಊರಿಗೆ ತೆರಳಿದ್ದ ನ್ಯೂಜಿಲೆಂಡ್ ಕ್ರಿಕೆಟ್ ಟೀಮಿನ ನಾಯಕ ಪತ್ನಿಯೊಂದಿಗಿರುವ ನಿರ್ಧಾರ ತೆಗೆದುಕೊಂಡಿರುವುದು ಕೋಚ್ ಗ್ಯಾರಿ ಸ್ಟೆಡ್​ರನ್ನು ನಿರಾಶೆಗೊಳಿಸಿದೆ.

ಕೊಹ್ಲಿಯಂತೆ ಪಿತೃತ್ವದ ರಜೆ ಪಡೆದ ಕೇನ್ ವಿಲಿಯಮ್ಸನ್: ವಿಂಡೀಸ್ ವಿರುದ್ಧ ಎರಡನೇ ಟೆಸ್ಟ್​ಗೆ ಗೈರು
ಕೇನ್ ವಿಲಿಯಮ್ಸನ್
Arun Belly

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 10, 2020 | 6:36 PM

ಬೇರೆಬೇರೆ ದೇಶಗಳ ಕ್ರಿಕೆಟ್ ಟೀಮಿನ ನಾಯಕರ ಪತ್ನಿಯರು ಗರ್ಭಿಣಿಯಾರಾಗಿರುವುದು, ಅವರ ಜೊತೆಗಿರಲು ಈ ಕ್ಯಾಪ್ಟನ್​ಗಳು ಪಿತೃತ್ವ ರಜೆ ಪಡೆಯುತ್ತಿರುವುದು ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಸಾಮಾನ್ಯವಾದಂತಿದೆ. ಟೀಮ್ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ಆಸ್ಟ್ರೇಲಿಯ ವಿರುದ್ಧ ಅಡಿಲೇಡ್​ನಲ್ಲಿ ಮೊದಲ ಟೆಸ್ಟ್ ಆಡಿದ ನಂತರ, ತುಂಬು ಗರ್ಭಿಣಿಯಾಗಿರುವ ಅವರ ಪತ್ನಿ ಅನುಷ್ಕಾ ಶರ್ಮ ಅವರ ಹೆರಿಗೆ ಸಮಯದಲ್ಲಿ ಜೊತೆಗಿರಲು ಬಾರತಕ್ಕೆ ಮರಳುತ್ತಿರುವುದು ಎಲ್ಲರಿಗೂ ಗೊತ್ತಿದೆ ಮತ್ತು ಈ ಕುರಿತು ಸಾಕಷ್ಟು ಚರ್ಚೆಗಳೂ ಆಗಿವೆ.

ಕೊಹ್ಲಿಯಂತೆ ವಿಶ್ವದ ಅಗ್ರಮಾನ್ಯ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರಾಗಿರುವ ನ್ಯೂಜಿಲೆಂಡ್ ಟೀಮಿನ ನಾಯಕ ಕೇನ್ ವಿಲಿಯಮ್ಸನ್ ಅವರ ಪತ್ನಿ ಸಾರಾ ಸಹ ತುಂಬು ಗರ್ಭಿಣಿಯಾಗಿದ್ದು ವಿಲಿಯಮ್ಸನ್ ಪ್ರಕಾರ ಡಿಸೆಂಬರ್ 15ರಿಂದ 25ರೊಳಗೆ ಆಕೆ ಮಗುವನ್ನು ಹೆರಲಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್​ನಲ್ಲಿ ಇನ್ನಿಂಗ್ಸ್ ಜಯಗಳಿಸಿದ ನಂತರ ವಿಲಿಯಮ್ಸನ್; ವೈದ್ಯರೊಂದಿಗೆ ಸಾರಾ ಅವರ ಅಪಾಯಿಂಟ್​ಮೆಂಟ್​ ಇದ್ದ ಕಾರಣ ಅಲ್ಪಾವಧಿಗೆ ಪಿತೃತ್ವದ ರಜೆ ಗುಜರಾಯಿಸಿ ತಮ್ಮ ಹೋಮ್ ಟೌನ್ ತೌರಂಗಕ್ಕೆ ತೆರಳಿದ್ದರು. ಕಿವೀಸ್ ಟೀಮಿನ ಕೋಚ್ ಗ್ಯಾರಿ ಸ್ಟೆಡ್ ಜೊತೆ ಮಾಡಿಕೊಂಡ ಒಪ್ಪಂದದ ಪ್ರಕಾರ ವಿಲಿಯಮ್ಸನ್ ಗುರುವಾರದಂದು ಟೀಮನ್ನು ಸೇರಿಕೊಳ್ಳಬೇಕಿತ್ತು. ಪ್ರವಾಸಿ ವಿಂಡೀಸ್ ವಿರುದ್ಧ ಎರಡನೇ ಟೆಸ್ಟ್ ನಾಳೆಯಿಂದ ವೆಲ್ಲಿಂಗ್​ಟನ್​ನಲ್ಲಿ ಶುರುವಾಗಲಿದೆ.

ಪತ್ನಿ ಸಾರಾಳೊಂದಿಗೆ ವಿಲಿಯಮ್ಸನ್

ಇಂದು ಬೆಳಗ್ಗೆವರೆಗೆ ವಿಲಿಯಮ್ಸನ್ ವಾಪಸ್ಸು ಬರುವ ಬಗ್ಗೆ ಖಚಿತವಾಗಿ ಮಾತಾಡುತ್ತಿದ್ದ ಸ್ಟೆಡ್ ಮಧ್ಯಾಹ್ನ ಹೇಳಿಕೆಯೊಂದನ್ನು ನೀಡಿ, ವಿಲಿಯಮ್ಸನ್ ಮನೆಯಲ್ಲೇ ಉಳಿಯುವ ನಿರ್ಧಾರ ತೆಗೆದುಕೊಂಡಿರುವರೆಂದು ತಿಳಿಸಿದ್ದಾರೆ.

‘ಪತ್ನಿಯ ಹೆರಿಗೆ ಸಮಯದಲ್ಲಿ ಟೆಸ್ಟ್ ಪಂದ್ಯವೊಂದನ್ನು ಮಿಸ್ ಮಾಡಿಕೊಳ್ಳುತ್ತಿರುವ ಮೊದಲ ಆಟಗಾರನೇನೂ ವಿಲಿಯಮ್ಸನ್ ಅಲ್ಲ. ಆದರೆ ಅವರಂಥ ಕ್ಯಾಲಿಬರ್ ಮತ್ತು ಕ್ಲಾಸ್​ನ ಆಟಗಾರನನ್ನು ಟೆಸ್ಟ್ ಪಂದ್ಯಕ್ಕೆ ಕಳೆದುಕೊಂಡಿರುವುದು ನಿರಾಶೆ ಮೂಡಿಸಿದೆ. ಇಂಥ ಆಪತ್ಕಾಲೀನ ಪರಿಸ್ಥಿತಿಗಳನ್ನು ಎದುರಿಸಲು ನಾವು ಪ್ಲ್ಯಾನ್ ಮಾಡಿಕೊಂಡಿರಬೇಕಾಗುತ್ತದೆ’ ಎಂದು ಸ್ಟೆಡ್ ಹೇಳಿದ್ದಾರೆ. ವಿಲಿಯಮ್ಸನ್ ಅವರ ಸ್ಥಾನದಲ್ಲಿ ವಿಲ್ ಯಂಗ್ ಆಡುತ್ತಾರೆಂದು ಕೋಚ್ ಹೇಳಿದರು.

ನ್ಯೂಜಿಲೆಂಡ್ ಕೋಚ್ ಗ್ಯಾರಿ ಸ್ಟೆಡ್

‘ವಿಲ್ ಯಾವಾಗಲೂ 3ನೇ ಸ್ಥಾನದಲ್ಲಿ ಆಡಲು ಇಷ್ಟಪಡುತ್ತಾರೆ, ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಲು ಅವರಿಗಿದು ಒಳ್ಳೆಯ ಅವಕಾಶ. ವೆಸ್ಟ್ ಇಂಡೀಸ್ ಟೀಮನ್ನು ನಾವು ಯಾವ ಕಾರಣಕ್ಕೂ ಹಗುರವಾಗಿ ಪರಿಗಣಿಸುತ್ತಿಲ್ಲ. ಮೊದಲ ಟೆಸ್ಟ್​ನಲ್ಲಿ ನಮ್ಮ ಹುಡುಗರು ಅದ್ಭುತವಾಗಿ ಆಡಿದರು, ಆದರಲ್ಲೂ ಕೇನ್ (ವಿಲಿಯಮ್ಸನ್) ಅವರ ಇನ್ನಿಂಗ್ಸ್ ಉತ್ಕೃಷ್ಟವಾಗಿತ್ತು’ ಎಂದು ಸ್ಟೆಡ್ ಹೇಳಿದರು.

ಹ್ಯಾಮಿಲ್ಟನ್​ನ ಸ್ನೆಡೆನ್ ಪಾರ್ಕ್​ನಲ್ಲಿ ನಡೆದ ಮೊದಲ ಟೆಸ್ಟ್​ನಲ್ಲಿ ವಿಲಿಯಮ್ಸನ್ ತಮ್ಮ ಕರೀಯರ್​ನ ಗರಿಷ್ಠ ಸ್ಕೋರ್ (251) ಗಳಿಸಿದ್ದರು.

14 ವರ್ಷಗಳ ನಂತರ ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಲು ಬರುತ್ತಿದೆ ದಕ್ಷಿಣ ಆಫ್ರಿಕ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada