ಕಾದು ಕಾದು ಸುಸ್ತಾದ ಪಾರ್ಥೀವ್ ಕೊನೆಗೆ ವಿದಾಯ ಹೇಳಿಬಿಟ್ಟರು!
ಪ್ರತಿಭಾವಂತ ವಿಕೆಟ್ಕೀಪರ್ ಮತ್ತು ಉತ್ತಮ ಬ್ಯಾಟ್ಸ್ಮನ್ ಆಗಿದ್ದ ಪಾರ್ಥೀವ್ ಪಟೇಲ್ ಕ್ರಿಕೆಟ್ನ ಎಲ್ಲ ಆವೃತ್ತಿಗಳಿಗೆ ವಿದಾಯ ಹೇಳಿದ್ದಾರೆ. ಮಹೇಂದ್ರಸಿಂಗ್ ಧೋನಿ ಟೀಮಿಗೆ ಕಾಲಿಟ್ಟ ನಂತರ ಪಾರ್ಥೀವ್ ಸೇರಿದಂತೆ ಹಲವಾರು ವಿಕೆಟ್ಕೀಪರ್-ಬ್ಯಾಟ್ಸ್ಮನ್ಗಳು ತೆರೆಮರೆಗೆ ಸರಿಯಬೇಕಾಯಿತು. ಈ ಹಿನ್ನೆಲೆಯಲ್ಲಿ ಪಾರ್ಥೀವ್ ಅದೃಷ್ಟಹೀನರೆಂದೇ ಹೇಳಬೇಕು.
ಹದಿನೇಳನೇ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿ 18 ವರ್ಷಗಳ ಕಾಲ ಅ ಮಟ್ಟದಲ್ಲಿ ಅಡಿದ ಭಾರತದ ವಿಕೆಟ್ಕೀಪರ್-ಬ್ಯಾಟ್ಸ್ಮನ್ ಪಾರ್ಥೀವ್ ಪಟೇಲ್ ಕ್ರಿಕೆಟ್ನ ಎಲ್ಲ ಫಾರ್ಮಾಟ್ಗಳಿಗೆ ವಿದಾಯ ಹೇಳಿದ್ದಾರೆ. ತಮ್ಮ ಟ್ವೀಟ್ನಲ್ಲಿ ಅವರು ವಿದಾಯ ಘೋಷಿಸುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿಲ್ಲವಾದರೂ ಅವರ ಅಂತರಾಳದಲ್ಲಿ ನೋವಿರುವುದು ಮಾತ್ರ ಸತ್ಯ.
ನೋವು ಯಾಕಿದೆ ಅನ್ನುವುದು ಸ್ಪಷ್ಟ. 18 ವರ್ಷಗಳ ಕಾಲ ಅವರು ರಾಷ್ಟ್ರೀಯ ತಂಡಕ್ಕೆ ವಿವಿಧ ಹಂತಗಳಲ್ಲಿ ಅಲ್ಪ-ಅಲ್ಪ ಅವಧಿಯ ಸೇವೆ ಸಲ್ಲಿಸಿದರೂ ಕೇವಲ 25 ಟೆಸ್ಟ್, 38 ಒಂದು ದಿನದ ಅಂತರರಾಷ್ಟ್ರೀಯ ಪಂದ್ಯ ಮತ್ತು 2 ಟಿ20ಐ ಪಂದ್ಯಗಳಲ್ಲಿ ಮಾತ್ರ ದೇಶವನ್ನು ಪ್ರತಿನಿಧಿಸಿದರು. ಇಂಡಿಯನ್ ಪ್ರಿಮೀಯರ್ ಲೀಗ್ 2020 ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯನ್ನು ಪ್ರತಿನಿಧಿಸಿದ್ದ ಪಾರ್ಥೀವ್ ಅವರಿಗೆ ಒಂದು ಪಂದ್ಯದಲ್ಲೂ ಆಡುವ ಅವಕಾಶ ಸಿಗಲಿಲ್ಲ. ಪ್ರಾಯಶಃ ಅಗಲೇ ಅವರು ಕ್ರಿಕೆಟ್ಗೆ ವಿದಾಯ ಹೇಳುವ ನಿರ್ಧಾರಕ್ಕೆ ಬಂದಿರಬಹುದು.
ಸಭ್ಯರ ಕ್ರೀಡೆ ಎಂದು ಕರೆಸಿಕೊಳ್ಳುವ ಕ್ರಿಕೆಟ್ ಕೆಲವು ಆಟಗಾರರಿಗೆ ಕ್ರೂರಿ ಎಂದೆನಿಸಿದ್ದರೆ ಆಶ್ಚರ್ಯವಿಲ್ಲ.
ಪಾರ್ಥೀವ್ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದಾಗ ಅವರಿಗಿನ್ನೂ ಮತ ಚಲಾಯಿಸುವ ಹಕ್ಕು ಸಹ ಸಿಕ್ಕಿರಲಿಲ್ಲ. ಹೌದು, ಅವರು 17ನೇ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟು ಭಾರತದ ಪರ ಅತಿ ಕಡಿಮೆ ವಯಸ್ಸಿನಲ್ಲಿ ಟೆಸ್ಟ್ ಆಡಿದ ವಿಕೆಟ್ಕೀಪರ್ ಎನಿಸಿಕೊಂಡರು. ಅವರ ಸಮಕಾಲೀನ್ ವಿಕೆಟ್ಕೀಪರ್ಗಳಾದ ದಿನೇಶ್ ಕಾರ್ತೀಕ್ 19ನೇ ವಯಸ್ಸಿನಲ್ಲಿ ಭಾರತವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದರೆ, ಅಜಯ್ ರಾತ್ರಾ 20ನೇ ವಯಸ್ಸಿನಲ್ಲಿ ಡೆಬ್ಯು ಮಾಡಿದರು.
ಎಡಗೈ ಬ್ಯಾಟ್ಸ್ಮನ್ ಮತ್ತು ಉತ್ತಮ ವಿಕೆಟ್ಕೀಪರ್ ಆಗಿದ್ದ ಪಾರ್ಥೀವ್ 2002ರಲ್ಲಿ, ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನಾಡಿದರು. ತಾವಾಡಿದ ಮೊದಲ ಇನ್ನಿಂಗ್ಸ್ನಲ್ಲಿ ಸೊನ್ನೆಗೆ ಔಟಾದರೂ ಎರಡನೇ ಇನ್ನಿಂಗ್ಸ್ನಲ್ಲಿ ಅಜೇಯ 19 ರನ್ ಬಾರಿಸಿದರು. ಅದೇ ವರ್ಷ ನ್ಯೂಜಿಲೆಂಡ್ ವಿರುದ್ಧ ಅವರು ಒಡಿಐ ಕ್ರಿಕೆಟ್ಗೂ ಕಾಲಿಟ್ಟರು. ನಂತರದ ಎರಡು ವರ್ಷಗಳ ಕಾಲ 2 ಪಾರ್ಥೀವ್ ಭಾರತವನ್ನು ಎರಡೂ ಆವೃತ್ತಿಗಳಲ್ಲಿ ಪ್ರತಿನಿಧಿಸಿದರು. ಆದರೆ 2004ರಲ್ಲಿ ಮಹೇಂದ್ರಸಿಂಗ್ ಧೋನಿ ಮುನ್ನೆಲೆಗೆ ಬರುತ್ತಿದ್ದಂತೆಯೇ, ಟೀಮಿನಲ್ಲಿ ಪಾರ್ಥೀವ್ ಅವರ ಪ್ರಾಮುಖ್ಯತೆ ಕಡಿಮೆಯಾಗಲಾರಂಭಿಸಿತು. ಧೋನಿ ರಾಷ್ಟ್ರೀಯ ತಂಡಕ್ಕೆ ಕಾಲಿಟ್ಟ ನಂತರ ಹಿಂತಿರುಗಿ ನೋಡಲೇ ಇಲ್ಲ, ಕ್ರಿಕೆಟ್ ಎಲ್ಲ ಫಾರ್ಮಾಟ್ಗಳಿಗೆ ಅವರು ಅನಿವಾರ್ಯವಾಗಿಬಿಟ್ಟರು. ಪಾರ್ಥೀವ್ ಎದುರಿಸಿದ ಸ್ಥಿತಿಯನ್ನು ಕಾರ್ತೀಕ್ ಸಹ ಅನುಭವಿಸಬೇಕಾಯಿತು. ನಂತರದ ವರ್ಷಗಳಲ್ಲಿ ಪಾರ್ಥೀವ್ ಆಗೊಮ್ಮೆ ಈಗೊಮ್ಮೆ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡರು.
ನಿಮಗೆ ಆಶ್ವರ್ಯವಾಗಬಹುದು, ಟೆಸ್ಟ್ ಆಡಿದ 2 ವರ್ಷಗಳ ನಂತರ ಪಾರ್ಥೀವ್ ಗುಜರಾತ್ ಪರ ರಣಜಿ ಟ್ರೋಫಿಯಲ್ಲಿ ಆಡಲಾರಂಭಿಸಿದರು. ಅವರು ಒಟ್ಟು 25ಟೆಸ್ಟ್, 38 ಒಡಿಐ ಮತ್ತು 2 ಟಿ20ಐ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದರು. ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅವರು ಶತಕ ದಾಖಲಿಸದೆ ಹೋದರೂ, ಆಡಿದ 194 ಪ್ರಥಮ ದರ್ಜೆ ಪಂದ್ಯಗಳಲ್ಲಿ 27 ಶತಕಗಳನ್ನು ಬಾರಿಸಿ 43ರನ್ ಸರಾಸರಿಯೊಂದಿಗೆ 11,240 ರನ್ ಕಲೆಹಾಕಿದರು. ವಿಕೆಟ್ಗಳ ಹಿಂದೆ ಅವರು 486 ಕ್ಯಾಚ್ ಹಿಡಿದು 77 ಸ್ಟಂಪಿಂಗ್ಗಳನ್ನು ಮಾಡಿದರು.
ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್, ಚೆನೈ ಸೂಪರ್ ಕಿಂಗ್ಸ್ ಮತ್ತು ಆರ್ಸಿಬಿಯನ್ನು ಪ್ರತಿನಿಧಿಸಿದ ಪಾರ್ಥೀವ್ ಆಡಿದ 139 ಪಂದ್ಯಗಳಲ್ಲಿ 13 ಅರ್ಧ ಶತಕಗಳೊಂದಿಗೆ 22.6 ಸರಾಸರಿಯಲ್ಲಿ 2,848 ರನ್ ಗಳಿಸಿದರು. ಹಾಗೆಯೇ ವಿಕೆಟ್ ಹಿಂದೆ 113 ಕ್ಯಾಚ್ಗಳನ್ನು ಹಿಡಿದು 31 ಸ್ಟಂಪಿಂಗ್ಗಳನ್ನು ಮಾಡಿದರು.
ತಮ್ಮ ವಿದಾಯದ ಟ್ವೀಟ್ನಲ್ಲಿ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ತಾವು ಆಡಿದ ಟೀಮುಗಳ ಕ್ಯಾಪ್ಟನ್ಗಳು ಅದರಲ್ಲೂ ವಿಶೇಷವಾಗಿ ಅವರು ಪ್ರೀತಿಯಿಂದ ದಾದಾ ಎಂದು ಸಂಬೋಧಿಸಿರುವ ಸೌರವ್ ಗಂಗೂಲಿ ಅವರಿಗೆ ಕೃತಜ್ಞತೆಗಳನ್ನು ಸಮರ್ಪಿಸಿದ್ದಾರೆ.