ಈ ಸಲ ಕಪ್ ಖಂಡಿತವಾಗಿಯೂ ನಮ್ಮದಾ?

|

Updated on: Sep 15, 2020 | 9:43 PM

ಈ ಸಲ ಕಪ್ ನಮ್ದೇ ಅಂತ ಪ್ರತಿ ಸಲ ಹೇಳುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಜಕ್ಕೂ ಡ್ರೀಮ್ 11 ಐಪಿಎಲ್-13 ಕಪ್ ಅನ್ನು ತೋಟಗಳ ನಗರಿಗೆ ಹೊತ್ತು ತರುವುದೆ? ಟಿ20 ಕ್ರಿಕೆಟ್​ನಲ್ಲಿ ಭವಿಷ್ಯವಾಣಿ ಮಾಡುವುದು ಅಪಾಯದ ಕೆಲಸ. ಹಾಗೆ ನೋಡಿದರೆ, ಕ್ರಿಕೆಟನ್ನು ಅಮೋಘ ಅನಿಶ್ಚಿತತೆಗಳ ಆಟ ಎಂದು ಹೇಳುತ್ತಾರೆ, ಅದು ಯಾವ ಫಾರ್ಮಾಟಾದರೂ ಆಗಿರಲಿ. ಹಾಗಿರುವಲ್ಲಿ, 20:20 ಪಂದ್ಯಗಳಲ್ಲಿ ನಿಖರವಾಗಿ ಇದೇ ತಂಡ ಗೆಲ್ಲುತ್ತೆ ಅಥವಾ ಸೋಲುತ್ತೆ ಅಂತ ಹೇಳುವುದು ಸಾಧ್ಯವೆ? ನಾಯಕ ವಿರಾಟ್ ಕೊಹ್ಲಿಮೇಲೆ […]

ಈ ಸಲ ಕಪ್ ಖಂಡಿತವಾಗಿಯೂ ನಮ್ಮದಾ?
Follow us on

ಈ ಸಲ ಕಪ್ ನಮ್ದೇ ಅಂತ ಪ್ರತಿ ಸಲ ಹೇಳುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಜಕ್ಕೂ ಡ್ರೀಮ್ 11 ಐಪಿಎಲ್-13 ಕಪ್ ಅನ್ನು ತೋಟಗಳ ನಗರಿಗೆ ಹೊತ್ತು ತರುವುದೆ?

ಟಿ20 ಕ್ರಿಕೆಟ್​ನಲ್ಲಿ ಭವಿಷ್ಯವಾಣಿ ಮಾಡುವುದು ಅಪಾಯದ ಕೆಲಸ. ಹಾಗೆ ನೋಡಿದರೆ, ಕ್ರಿಕೆಟನ್ನು ಅಮೋಘ ಅನಿಶ್ಚಿತತೆಗಳ ಆಟ ಎಂದು ಹೇಳುತ್ತಾರೆ, ಅದು ಯಾವ ಫಾರ್ಮಾಟಾದರೂ ಆಗಿರಲಿ. ಹಾಗಿರುವಲ್ಲಿ, 20:20 ಪಂದ್ಯಗಳಲ್ಲಿ ನಿಖರವಾಗಿ ಇದೇ ತಂಡ ಗೆಲ್ಲುತ್ತೆ ಅಥವಾ ಸೋಲುತ್ತೆ ಅಂತ ಹೇಳುವುದು ಸಾಧ್ಯವೆ?

ನಾಯಕ ವಿರಾಟ್ ಕೊಹ್ಲಿಮೇಲೆ ಬೆಂಗಳೂರಿಗರಿಗೆ ಅಪಾರ ವಿಶ್ವಾಸವಿದೆ. ಭಾರತಕ್ಕೆ ಹಲವಾರು ಸರಣಿಗಳನ್ನು, ಕಪ್​ಗಳನ್ನು ಗೆದ್ದು ಕೊಟ್ಟಿರುವವನಿಗೆ ಐಪಿಎಲ್ ಕೂಡ ಗೆಲ್ಲುವುದು ಸಾಧ್ಯ ಅಂತ ಅವರ ಅಚಲ ನಂಬಿಕೆ.

ಇತ್ತೀಚಿಗೆ ಕೊಹ್ಲಿ ತಂಡದ ಸಾಮರ್ಥ್ಯದ ಬಗ್ಗೆ ಮಾತಾಡಿದ್ದ ಭಾರತದ ಮಾಜಿ ಆಟಗಾರ ಮತ್ತು ಹಿಂದೆ ಕೆಕೆಆರ್ ತಂಡದ ನಾಯಕನಾಗಿದ್ದ ಗೌತಮ್ ಗಂಭೀರ್ ಅದೊಂದು ಸಮತೋಲಿತ ತಂಡಕ್ಕಿಂತ ಜಾಸ್ತಿ ಬ್ಯಾಟಿಂಗ್ ಬಲಾಢ್ಯವಾಗಿರುವ ತಂಡವೆನಿಸುತ್ತದೆ ಎಂದಿದ್ದರು. ಅಂದರೆ ಗಂಭೀರ್ ಹೇಳುತ್ತಿರುವುದು ಆರ್ ಸಿ ಬಿಯ ಬೌಲಿಂಗ್ ಪ್ರಬಲವಾಗಿಲ್ಲ.

ಈ ತಂಡದ ಕಾಂಪೊಸಿಷನ್ ಒಮ್ಮೆ ನೋಡಿಬಿಡೋಣ. ಇದರಲ್ಲಿ 5 ಜನ ಪ್ಯೂರ್ ಬ್ಯಾಟ್ಸ್​ಮನ್​ಗಳು (ಕೊಹ್ಲಿ, ಎಬಿ ಡಿ ವಿಲಿಯರ್ಸ್, ಆರನ್ ಫಿಂಚ್, ದೇವದತ್ ಪಡಿಕ್ಕಲ್, ಗುರುಕೀರತ್ ಸಿಂಗ್) 4 ಆಲ್​ರೌಂಡರ್​ಗಳು (ಮೊಯಿನ್ ಅಲಿ, ಶಿವಂ ದುಬೆ, ಇಸುರು ಉಡಾನಾ, ಪವನ್ ದೇಶಪಾಂಡೆ) 2 ವಿಕೆಟ್ ಕೀಪರ್​ಗಳು (ಪಾರ್ಥೀವ್ ಪಟೇಲ್, ಜೋಷ್ ಫಿಲಿಪ್) 5 ಸ್ಪಿನ್ನರ್​ಗಳು (ಯುಜವೇಂದ್ರ ಚಹಲ್, ವಾಷಿಂಗ್ಟನ್ ಸುಂದರ್, ಆಡಂ ಜಂಪಾ, ಪವನ್ ನೇಗಿ, ಶಾಬಾಜ್ ಅಹ್ಮದ್) ಮತ್ತು 5 ವೇಗದ ಬೌಲರ್​ಗಳು (ಡೇಲ್ ಸ್ಟೀನ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್, ಕ್ರಿಸ್ ಮೊರಿಸ್, ನವದೀಪ್ ಸೈನಿ) ಇದ್ದಾರೆ. ಆಸ್ಟ್ರೇಲಿಯಾದ ವೇಗದ ಬೌಲರ್ ಕೇನ್ ರಿಚರ್ಡ್​ಸನ್ ಅವರ ಪತ್ನಿ ಗರ್ಭಿಣಿಯಾಗಿರುವುದರಿಂದ ಅವರೊಂದಿಗೆ ಇರಬಯಸಿ ವಾಪಸ್ಸು ಹೋಗಿದ್ದಾರೆ.

ಗಂಭೀರ್ ಹೇಳಿರುವಂತೆ ಅರ್ ಸಿ ಬಿಯ ಬ್ಯಾಟಿಂಗ್ ಶಕ್ತಿಯುತವಾಗಿದೆ. ಕೊಹ್ಲಿ, ಫಿಂಚ್ ಮತ್ತು ಎಬಿಡಿ, ಯಾವುದೇ ಆಕ್ರಮಣವನ್ನು ನಿರ್ದಯಿಗಳಂತೆ ಸದೆಬಡಿಯಬಲ್ಲರು. ಟಾಪ್ ಆರ್ಡರ್​ನಲ್ಲಿ ಪಟೇಲ್ ಮತ್ತು ಗುರಕೀರತ್ ಮೇಲೆ ನಂಬಿಕೆಯಿಡಬಹುದಾಗಿದೆ. ಪಡಿಕ್ಕಲ್ ಹೊಸಬರಾದರೂ ಅಪಾರ ಪ್ರತಿಭಾವಂತ, ಅದನ್ನವರು ಕೆಪಿಎಲ್​ನಲ್ಲಿ ಸಾಬೀತು ಮಾಡಿದ್ದಾರೆ. ಆಲ್​ರೌಂಡರ್​ಗಳಾಗಿರುವ ದುಬೆ, ಅಲಿ, ಮೊರಿಸ್ ಚೆಂಡನ್ನು ದೂರಕ್ಕೆ ಬಾರಿಸುವ ಸಾಮರ್ಥ್ಯವುಳ್ಳವರಾಗಿದ್ದಾರೆ. ಫಿಲಿಪ್ ಅವರ ಬ್ಯಾಟಿಂಗ್ ಕ್ಷಮತೆ ಇನ್ನೂ ಗೊತ್ತಾಗಬೇಕಿದೆ.

ಬೌಲಿಂಗ್ ವಿಷಯಕ್ಕೆ ಬರುವ. ಸ್ಟೀನ್ ಅವರಿಗೆ ವಯಸ್ಸಾಗುತ್ತಿದೆ (37), ಅವರ ಎಸೆತಗಳಲ್ಲಿ ಮೊದಲಿನ ನಿಖರತೆಯಿಲ್ಲ, ವೇಗವೂ ತಗ್ಗಿದೆ. ಅವರು ಹೆಚ್ಚು ಪಂದ್ಯಗಳನ್ನಾಡಲಿಕ್ಕಿಲ್ಲ. ಅದಕ್ಕೆ ಮಿಗಿಲಾಗಿ ಬಹಳ ದಿನಗಳಿಂದ ಅವರು ಸ್ಫರ್ಧಾತ್ಮಕ ಕ್ರಿಕೆಟ್​ನಿಂದ ದೂರವಿದ್ದಾರೆ. ಯಾದವ್ ನಿರ್ಣಾಯಕ ಹಂತದಲ್ಲಿ ಒತ್ತಡಕ್ಕೊಳಗಾಗುತ್ತಾರೆ. ಸೈನಿಗೆ ಅನುಭವದ ಕೊರತೆಯಿದೆಯಾದರೂ ನಂಬಿಕಸ್ಥ ಬೌಲರ್. ಸಿರಾಜ್ ತನ್ನ ಪ್ರತಿಭೆಗೆ ತಕ್ಕ ಪ್ರದರ್ಶನ ನೀಡುವಲ್ಲಿ ಪದೇಪದೆ ವಿಫಲರಾಗುತ್ತಿದ್ದಾರೆ. ಸ್ಪಿನ್ನರ್​ಗಳಲ್ಲಿ ಕೊಹ್ಲಿ ಎಂದಿನಂತೆ ಚಹಲ್​ರನ್ನು ಜಾಸ್ತಿ ನೆಚ್ಚಿಕೊಳ್ಳಲಿದ್ದಾರೆ. ಸಧ್ಯ ಇಂಗ್ಲೆಂಡ್ ವಿರುದ್ಧ ಆಡುತ್ತಿರುವ ಜಂಪಾ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವುದು ಕೊಹ್ಲಿಯ ವಿಶ್ವಾಸವನ್ನು ಹೆಚ್ಚಿಸಿರುತ್ತದೆ. ನೇಗಿ ಮತ್ತು ಶಾಬಾಜ್ ನಿಸ್ಸಂದೇಹವಾಗಿ ಈ ಫಾರ್ಮಾಟ್​ನ ಉತ್ತಮ ಬೌಲರ್​ಗಳೆನ್ನುವುದನ್ನು ತೋರಿಸಿದ್ದಾರೆ. ಸುಂದರ್ ತನ್ನ ಖ್ಯಾತಿಗೆ ತಕ್ಕ ಪ್ರದರ್ಶನ ನೀಡಿದರೆ ಕೊಹ್ಲಿ ಕೊಂಚ ನಿರಾಳವಾಗಬಹುದು.

ಆರ್ ಸಿ ಬಿಯ ಒಟ್ಟಾರೆ ಸಾಮರ್ಥ್ಯವನ್ನು ಗಮನಿಸಿದರೆ ಗಂಭೀರ್ ಹೇಳಿರುವಂತೆ ಬೌಲಿಂಗ್ ಸ್ವಲ್ಪ ದುರ್ಬಲವೆನಿಸುತ್ತಿದೆ. ಆದರೆ, ಆಗಲೇ ಹೇಳಿದಂತೆ ಟಿ20 ಕ್ರಿಕೆಟ್​ನಲ್ಲಿ ಯಾವುದನ್ನೂ ಪ್ರಿಡಿಕ್ಟ್ ಮಾಡಲಾಗದು. ಈ ಸಲ ಕಪ್ ನಮ್ಮದೇ ಅನ್ನೋದು ಸಾಬೀತಾದರೂ ಆಶ್ಚರ್ಯಪಡಬೇಕಿಲ್ಲ.