Wimbledon 2021: ಚೊಚ್ಚಲ ವಿಂಬಲ್ಡನ್ ಪ್ರಶಸ್ತಿ ಗೆದ್ದ ಆಸ್ಟ್ರೇಲಿಯಾದ ಆಶ್ಲೀಗ್ ಬಾರ್ಟಿ! ಫೈನಲ್‌ನಲ್ಲಿ ಸೋತ ಕರೋಲಿನಾ ಪ್ಲಿಸ್ಕೋವಾ

| Updated By: ಪೃಥ್ವಿಶಂಕರ

Updated on: Jul 10, 2021 | 8:54 PM

Wimbledon 2021: ಮಹಿಳಾ ಸಿಂಗಲ್ಸ್ ಫೈನಲ್‌ನ ಕಠಿಣ ಪಂದ್ಯದಲ್ಲಿ ಜೆಕ್ ಗಣರಾಜ್ಯದ ಕರೋಲಿನಾ ಪ್ಲಿಸ್ಕೋವಾ ಅವರನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯಾದ ಆಶ್ಲೀಗ್ ಬಾರ್ಟಿ ವಿಂಬಲ್ಡನ್ 2021 ರ ಚಾಂಪಿಯನ್ ಆಗಿದ್ದಾರೆ.

Wimbledon 2021: ಚೊಚ್ಚಲ ವಿಂಬಲ್ಡನ್ ಪ್ರಶಸ್ತಿ ಗೆದ್ದ ಆಸ್ಟ್ರೇಲಿಯಾದ ಆಶ್ಲೀಗ್ ಬಾರ್ಟಿ! ಫೈನಲ್‌ನಲ್ಲಿ ಸೋತ ಕರೋಲಿನಾ ಪ್ಲಿಸ್ಕೋವಾ
ಆಸ್ಟ್ರೇಲಿಯಾದ ಆಶ್ಲೀಗ್ ಬಾರ್ಟಿ
Follow us on

ಜುಲೈ 10 ರ ಶನಿವಾರ ನಡೆದ ಮಹಿಳಾ ಸಿಂಗಲ್ಸ್ ಫೈನಲ್‌ನ ಕಠಿಣ ಪಂದ್ಯದಲ್ಲಿ ಜೆಕ್ ಗಣರಾಜ್ಯದ ಕರೋಲಿನಾ ಪ್ಲಿಸ್ಕೋವಾ ಅವರನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯಾದ ಆಶ್ಲೀಗ್ ಬಾರ್ಟಿ ವಿಂಬಲ್ಡನ್ 2021 ರ ಚಾಂಪಿಯನ್ ಆಗಿದ್ದಾರೆ. ವಿಶ್ವ ನಂಬರ್ ಒನ್ ಬಾರ್ಟಿ ಮೊದಲ ಬಾರಿಗೆ ವಿಂಬಲ್ಡನ್ ಪ್ರಶಸ್ತಿಯನ್ನು ಗೆದ್ದರು. ಇದು ಬಾರ್ಟಿಯ ಎರಡನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯಾಗಿದೆ. ಇಬ್ಬರೂ ಆಟಗಾರರು ಮೊದಲ ಬಾರಿಗೆ ವಿಂಬಲ್ಡನ್‌ನ ಫೈನಲ್‌ಗೆ ಪ್ರವೇಶಿಸಿದ್ದರು ಮತ್ತು ಸ್ಪರ್ಧೆಯೂ ಪ್ರಬಲವಾಗಿತ್ತು. ಮೊದಲ ಸೆಟ್‌ನಲ್ಲಿ ಬಲವಾದ ಆಟವನ್ನು ತೋರಿಸಿದ ಬಾರ್ಟಿ, ಎರಡನೇ ಸೆಟ್‌ನಲ್ಲಿ ಪ್ಲಿಸ್ಕೋವಾ ಮುನ್ನಡೆ ಕಾಯ್ದುಕೊಂಡರು ಮತ್ತು ಟೈಬ್ರೇಕರ್ ಅನ್ನು ಗೆದ್ದರು. ಜೊತೆಗೆ ಪಂದ್ಯವನ್ನು ಮೂರನೇ ಸೆಟ್‌ಗೆ ಕೊಂಡೊಯ್ದರು. ಇಲ್ಲಿ ಬಾರ್ಟಿ ಮೊದಲಿನಿಂದಲೂ ತನ್ನ ಪ್ರಾಬಲ್ಯವನ್ನು ತೋರಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಎರಡನೇ ಬಾರಿಗೆ ಗ್ರ್ಯಾಂಡ್ ಸ್ಲ್ಯಾಮ್‌ನ ಫೈನಲ್‌ಗೆ ತಲುಪಿದ್ದರು
2019 ರ ಫ್ರೆಂಚ್ ಓಪನ್ ವಿಜೇತ 25 ವರ್ಷದ ಬಾರ್ಟಿ ಎರಡನೇ ಬಾರಿಗೆ ಗ್ರ್ಯಾಂಡ್ ಸ್ಲ್ಯಾಮ್‌ನ ಫೈನಲ್‌ಗೆ ತಲುಪಿದ್ದರು ಮತ್ತು ಎರಡೂ ಬಾರಿ ಪ್ರಶಸ್ತಿಯನ್ನು ಗೆದ್ದಿದ್ದರು. ಆದಾಗ್ಯೂ, ಇದಕ್ಕಾಗಿ ಅವರು ಬಹಳಷ್ಟು ಬೆವರು ಹರಿಸಬೇಕಾಯಿತು. ಫೈನಲ್‌ನಲ್ಲಿ ಗೆಲುವಿನ ಪ್ರಬಲ ಸ್ಪರ್ಧಿಯೆಂದು ಪರಿಗಣಿಸಲ್ಪಟ್ಟ ಬಾರ್ಟಿ, ಅದೇ ಶೈಲಿಯಲ್ಲಿ ಪ್ರಾರಂಭಿಸಿದರು ಮತ್ತು ಮೊದಲ ಸೆಟ್‌ನಲ್ಲಿ ಪ್ಲಿಸ್ಕೋವಾ ಅವರ ಸರ್ವ್ ಅನ್ನು ಎರಡು ಬಾರಿ ಮುರಿದು 4-0 ಮುನ್ನಡೆ ಸಾಧಿಸಿದರು. ಆದಾಗ್ಯೂ, ಪ್ಲಿಸ್ಕೋವಾ ಮತ್ತೆ ಬಾರ್ಟಿಯ ಸರ್ವ್ ಅನ್ನು ಸತತವಾಗಿ ಎರಡು ಬಾರಿ ಮುರಿಯಲು ಪ್ರಯತ್ನಿಸಿದರು, ಆದರೆ ಬಾರ್ಟಿ 6-3 ಸೆಟ್​ಗಳಿಂದ ಗೆದ್ದರು.

ಎರಡನೇ ಸೆಟ್‌ನಲ್ಲಿ ಪರಿಸ್ಥಿತಿ ಹೀಗಿರಲಿಲ್ಲ. ಈ ಬಾರಿ ಎಂಟನೇ ಶ್ರೇಯಾಂಕದ ಪ್ಲಿಸ್ಕೋವಾ ತನ್ನ ಪ್ರಬಲ ಆಟವನ್ನು ತೋರಿಸಿದರು. ಪ್ಲಿಸ್ಕೋವಾ ಬಾರ್ಟಿಯನ್ನು ದಿಗ್ಭ್ರಮೆಗೊಳಿಸಿ ಮುನ್ನಡೆ ಸಾಧಿಸಿದರು. ಈ ಸೆಟ್‌ನಿಂದ ಪ್ಲಿಸ್ಕೋವಾ ಪಂದ್ಯಕ್ಕೆ ಮರಳುತ್ತಿರುವುದು ಕಂಡುಬಂತು ಮತ್ತು ಪಂದ್ಯವು ಟೈಬ್ರೇಕರ್‌ಗೆ ಹೋಯಿತು. ಇಲ್ಲಿ ಪ್ಲಿಸ್ಕೋವಾ, ಬಾರ್ಟಿಯ ವಿರುದ್ಧ ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿದರು. ಮತ್ತು ಟೈಬ್ರೇಕರ್ ಅನ್ನು 7-4ರಿಂದ ಗೆದ್ದಿದ್ದಲ್ಲದೆ ಸೆಟ್ ಅನ್ನು ಸಹ 7-6ರಿಂದ ಗೆದ್ದುಕೊಂಡರು.

ಆಸ್ಟ್ರೇಲಿಯಾದ 41 ವರ್ಷಗಳ ಕಾಯುವಿಕೆಗೆ ಅಂತ್ಯ ಸಿಕ್ಕಿದೆ
ಮೂರನೇ ಸೆಟ್‌ನಲ್ಲಿ ಬಾರ್ಟಿ, ಪ್ಲಿಸ್ಕೋವಾ ಅವರ ಸರ್ವ್ ಅನ್ನು ಆರಂಭದಲ್ಲಿಯೇ ಮುರಿಯುವ ಮೂಲಕ ಮುನ್ನಡೆ ಸಾಧಿಸಿದರು. ಅದರ ನಂತರ ಪಂದ್ಯಕ್ಕೆ ಮರಳಲು ಅವರಿಗೆ ಯಾವುದೇ ಅವಕಾಶವನ್ನು ನೀಡಲಿಲ್ಲ. ನಿರ್ಣಾಯಕ ಸೆಟ್ ಅನ್ನು 6-3ರಿಂದ ಗೆಲ್ಲುವ ಮೂಲಕ ಬಾರ್ಟಿ ಮೊದಲ ಬಾರಿಗೆ ವಿಂಬಲ್ಡನ್ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವಿಂಬಲ್ಡನ್ ಮಹಿಳಾ ಸಿಂಗಲ್ಸ್‌ನಲ್ಲಿ ಆಸ್ಟ್ರೇಲಿಯಾದ 41 ವರ್ಷಗಳ ಕಾಯುವಿಕೆಯನ್ನು ಬಾರ್ಟಿ ಹೀಗೆ ಕೊನೆಗೊಳಿಸಿದರು. ಅವರ ಮೊದಲು, ಕೊನೆಯ ಬಾರಿಗೆ ಆಸ್ಟ್ರೇಲಿಯಾದ ಇವಾನ್ ಗೂಲಾಗೊಂಗ್ ಕೋಲಿ 1980 ರಲ್ಲಿ ಪ್ರಶಸ್ತಿಯನ್ನು ಗೆದ್ದಿದ್ದರು. ಕೋಲಿ ಈ ಪ್ರಶಸ್ತಿಯನ್ನು ಎರಡು ಬಾರಿ ಗೆದ್ದಿದ್ದರು. ಇದರೊಂದಿಗೆ, ಬಾರ್ಟಿ ಮಹಿಳಾ ಸಿಂಗಲ್ಸ್‌ನಲ್ಲಿ ವಿಂಬಲ್ಡನ್ ಪ್ರಶಸ್ತಿಯನ್ನು ಗೆದ್ದ ಮೂರನೇ ಆಸ್ಟ್ರೇಲಿಯಾದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಾರ್ಟಿ ಮತ್ತು ಕೊಲ್ಲಿ ಅವರಲ್ಲದೆ, ಶ್ರೇಷ್ಠ ಆಟಗಾರ್ತಿ ಮಾರ್ಗರೇಟ್ ಕೋರ್ಟ್ ಈ ಪ್ರಶಸ್ತಿಯನ್ನು 3 ಬಾರಿ ಗೆದ್ದಿದ್ದರು.

Published On - 8:46 pm, Sat, 10 July 21