Wimbledon 2023 Final: ವಿಂಬಲ್ಡನ್ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್ (Novak Djokovic) ಅವರನ್ನು ಸೋಲಿಸಿ 20ರ ಹರೆಯದ ಸ್ಪೇನ್ನ ಕಾರ್ಲೊಸ್ ಅಲ್ಕರಾಝ್ (Carlos Alcaraz) ಚೊಚ್ಚಲ ವಿಂಬಲ್ಡನ್ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಲಂಡನ್ ಸೆಂಟರ್ ಕೋರ್ಟ್ನಲ್ಲಿ ನಡೆದ ಅಂತಿಮ ಹಣಾಹಣಿಯು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಆರಂಭದಲ್ಲೇ ಸರ್ವ್ಗಳ ಮೂಲಕ ತಮ್ಮ ಅನುಭವವನ್ನು ಧಾರೆಯೆರೆದ ನೊವಾಕ್ ಜೊಕೊವಿಚ್, ಯುವ ಆಟಗಾರ ಕಾರ್ಲೊಸ್ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದ್ದರು.
ಜೊಕೊವಿಚ್ ಅವರ ಕ್ರಾಸ್ ಕೋರ್ಟ್ ರಿಟರ್ನ್ ಹೊಡೆತಗಳಿಗೆ ಮರುತ್ತರ ನೀಡುವಲ್ಲಿ ವಿಫಲರಾದ ಕಾರ್ಲೊಸ್ ಆರಂಭದಲ್ಲೇ ಪಾಯಿಂಟ್ ಕಲೆಹಾಕುವಲ್ಲಿ ಹಿಂದೆ ಉಳಿದರು. ಇನ್ನೊಂದೆಡೆ ಎಂದಿನ ಲವಲವಿಕೆಯೊಂದಿಗೆ ಕೋರ್ಟ್ನಲ್ಲಿ ಹೋರಾಟ ಮುಂದುವರೆಸಿದ ನೊವಾಕ್ ಆರಂಭದಲ್ಲೇ 3-0 ಮುನ್ನಡೆ ಪಡೆದರು.
ಆರಂಭಿಕ ಮುನ್ನಡೆಯೊಂದಿಗೆ ಆತ್ಮ ವಿಶ್ವಾಸ ಹೆಚ್ಚಿಸಿಕೊಂಡ ನೊವಾಕ್ ಜೊಕೊವಿಚ್ ಫೋರ್‌ಹ್ಯಾಂಡ್ ಶಾಟ್‌ನೊಂದಿಗೆ ಸರ್ವ್ಗಳಿಗೆ ಅತ್ಯುತ್ತಮವಾಗಿ ಮರುತ್ತರ ನೀಡಿದರು. ಇದರಿಂದ ಒಂದಷ್ಟು ವಿಚಲಿತರಾದ 20ರ ಹರೆಯದ ಕಾರ್ಲೊಸ್ ಅಲ್ಕರಾಝ್ ಸತತ ತಪ್ಪುಗಳನ್ನು ಎಸೆಗಿದರು.
ಇದರ ಸಂಪೂರ್ಣ ಲಾಭ ಪಡೆದ ಜೊಕೊವಿಚ್ 5 ಪಾಯಿಂಟ್ಸ್ ಕಲೆಹಾಕಿದರು. ಈ ವೇಳೆ ಕಾರ್ಲೊಸ್ ಕೇವಲ 1 ಅಂಕ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದ್ದರು. ಅಲ್ಲದೆ ಮೊದಲ ಸೆಟ್ ಅನ್ನು 6-1 ಅಂತರದಿಂದ ಗೆಲ್ಲುವ ಮೂಲಕ ನೊವಾಕ್ ಜೊಕೊವಿಚ್ ಪಾರುಪತ್ಯ ಮೆರೆದರು.
ಆದರೆ ದ್ವಿತೀಯ ಸೆಟ್ನ ಆರಂಭದಲ್ಲೇ ಪ್ರಬಲ ಸರ್ವ್ಗಳ ಮೂಲಕ ಕಾರ್ಲೊಸ್ ಕಂಬ್ಯಾಕ್ ಮಾಡುವ ಸೂಚನೆ ನೀಡಿದ್ದರು. ಇತ್ತ ಬ್ಯಾಕ್‌ಹ್ಯಾಂಡ್ ರಿಟರ್ನ್ ಹೊಡೆತಗಳ ಮೂಲಕ ನೊವಾಕ್ ತಂತ್ರಕ್ಕೆ ಕಾರ್ಲೊಸ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು. ಪರಿಣಾಮ ಜೊಕೊವಿಚ್ ಪಾಯಿಂಟ್ ಖಾತೆ ತೆರೆಯುವ ಮುನ್ನವೇ ಕಾರ್ಲೊಸ್ ಅಲ್ಕರಾಝ್ 0-2 ಮುನ್ನಡೆ ಪಡೆದರು.
ಈ ಹಿನ್ನಡೆಯನ್ನು ಸರಿದೂಗಿಸಲು ಜೊಕೊವಿಚ್ ಸ್ಮ್ಯಾಶ್ ಶಾಟ್ಗೆ ಹೆಚ್ಚಿನ ಒತ್ತು ನೀಡಿದರು. ಇದರಿಂದ ತುಸು ವಿಚಲಿತರಾದ ಕಾರ್ಲೊಸ್ ಸತತ ತಪ್ಪುಗಳ ಮೂಲಕ ಪಾಯಿಂಟ್ಸ್ ಕೈಚೆಲ್ಲಿಕೊಂಡರು. ಈ ಮೂಲಕ 2 ಅಂಕಗಳ ಹಿನ್ನಡೆಯೊಂದಿದ್ದ ಜೊಕೊವಿಚ್ 3-3 ಅಂತರದಿಂದ ಸಮಬಲ ಸಾಧಿಸಿದರು.
ಈ ಹಂತದಲ್ಲಿ ಆ್ಯಸ್ ಸರ್ವ್ ಶಾಟ್ ಮೂಲಕ ಜೊಕೊವಿಚ್ರನ್ನು ವಂಚಿಸುವಲ್ಲಿ ಕಾರ್ಲೊಸ್ ಯಶಸ್ವಿಯಾದರು. ಆದರೆ ಈ ಯಶಸ್ಸು ಹೆಚ್ಚು ಕಾಲ ಉಳಿಯಲಿಲ್ಲ. ತಕ್ಷಣವೇ ಅತ್ಯುತ್ತಮ ಶಾಟ್ಗಳ ಮೂಲಕ ಸರ್ಬಿಯಾ ಆಟಗಾರ ಪಾಯಿಂಟ್ಸ್ ಅಂತರವನ್ನು 4-4 ರಂತೆ ಸರಿದೂಗಿಸಿದರು.
ಇದಾಗ್ಯೂ 6 ಪಾಯಿಂಟ್ಸ್ ಗೆಲ್ಲುವ ಮೂಲಕ ಸೆಟ್ ಜಯಿಸುವ ಇರಾದೆಯಲ್ಲಿದ್ದ ಅಲ್ಕರಾಝ್ಗೆ 5 ಪಾಯಿಂಟ್ಸ್ ಕಲೆಹಾಕಿ ಜೊಕೊವಿಚ್ ತೀವ್ರ ಪೈಪೋಟಿ ನೀಡಿದರು. ಅಲ್ಲದೆ 6-6 ಸಮಬಲ ಸಾಧಿಸಿ ದ್ವಿತೀಯ ಸೆಟ್ ಅನ್ನು ಟೈಬ್ರೇಕ್ನತ್ತ ಕೊಂಡೊಯ್ಯುವಲ್ಲಿ ಜೊಕೊವಿಚ್ ಯಶಸ್ವಿಯಾದರು.
ಆದರೆ ಟೈಬ್ರೇಕ್ನಲ್ಲೂ ಉಭಯ ಆಟಗಾರರಿಂದ ಅತ್ಯುತ್ತಮ ಪೈಪೋಟಿ ಕಂಡು ಬಂತು. ಒಂದು ಹಂತದಲ್ಲಿ ಜೊಕೊವಿಚ್ 6-5 ರಿಂದ ಮೇಲುಗೈ ಸಾಧಿಸಿದರೂ, ಅಂತಿಮವಾಗಿ 6-8 ಅಂತರದಿಂದ ಟೈಬ್ರೇಕ್ ಅನ್ನು ಗೆಲ್ಲುವಲ್ಲಿ ಕಾರ್ಲೊಸ್ ಅಲ್ಕರಾಝ್ ಯಶಸ್ವಿಯಾದರು. ಈ ಮೂಲಕ ದ್ವಿತೀಯ ಸೆಟ್ ಅನ್ನು 7-6 ಅಂತರದಿಂದ ಗೆಲ್ಲುವ ಮೂಲಕ ಅಲ್ಕರಾಝ್ ಸೆಟ್ನಲ್ಲಿ (1-1) ಸಮಬಲ ಸಾಧಿಸಿದರು.
ಇನ್ನು 2ನೇ ಸೆಟ್ ಗೆದ್ದ ಹುಮ್ಮಸ್ಸಿನಲ್ಲೇ ತೃತೀಯ ಸೆಟ್ ಆರಂಭಿಸಿದ ಅಲ್ಕರಾಝ್ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರು. ಪರಿಣಾಮ 36 ವರ್ಷ ಜೊಕೊವಿಚ್ಗೆ ಯುವ ಆಟಗಾರನ ಚಾಣಕ್ಯ ನಡೆಗಳನ್ನು ತಡೆಯಲು ಸಾಧ್ಯವಾಗಲಿಲ್ಲ. ಪರಿಣಾಮ ಆರಂಭದಲ್ಲೇ 3-1 ಅಂತರ ಪಡೆಯುವಲ್ಲಿ ಅಲ್ಕರಾಝ್ ಯಶಸ್ವಿಯಾದರು.
ಇದೇ ವೇಳೆ 2ನೇ ಪಾಯಿಂಟ್ ಪಡೆಯಲು ಸತತ ಹೋರಾಟ ನಡೆಸಿದ ಜೊಕೊವಿಚ್ಗೆ ಅಲ್ಕರಾಝ್ ಬೆವರಿಳಿಸಿದರು. ಅದ್ಭುತ ಪೈಪೋಟಿಗೆ ಸಾಕ್ಷಿಯಾಗಿದ್ದ ಈ ಹೋರಾಟದಲ್ಲಿ ಕೊನೆಗೂ ಅಲ್ಕರಾಝ್ ಪಾಯಿಂಟ್ ಕಲೆಹಾಕಿದರೆ, ಸರ್ಬಿಯಾ ಆಟಗಾರ ನಿರಾಸೆ ಅನುಭವಿಸಿದರು.
ಇದಾದ ಬಳಿಕ ಬಳಲಿದಂತೆ ಕಂಡು ಬಂದ ನೊವಾಕ್ ವಿರುದ್ಧ ಸಂಪೂರ್ಣ ಹಿಡಿತ ಸಾಧಿಸಿದ ಸ್ಪೇನ್ ಆಟಗಾರ ಬ್ಯಾಕ್ ಟು ಬ್ಯಾಕ್ ಪಾಯಿಂಟ್ಸ್ ಕಲೆಹಾಕಿದರು. ಈ ಮೂಲಕ 3ನೇ ಸೆಟ್ ಅನ್ನು ಅಲ್ಕರಾಝ್ 6-1 ಅಂತರದಿಂದ ಗೆದ್ದುಕೊಂಡರು.
4ನೇ ಸುತ್ತಿನಲ್ಲಿ ಲಯಕ್ಕೆ ಮರಳಿದ ಜೊಕೊವಿಚ್ ಫೋರ್‌ಹ್ಯಾಂಡ್ ಶಾಟ್ ಹಾಗೂ ಹೈಫಿನಿಶ್ ಮೂಲಕ ಯುವ ಆಟಗಾರನನ್ನು ಕಂಗೆಡಿಸಿದರು. ಪರಿಣಾಮ ಅಲ್ಕರಾಝ್ ಈ ಬಾರಿ ಪಾಯಿಂಟ್ಸ್ ಕಲೆಹಾಕಲು ಹೆಚ್ಚಿನ ಬೆವರು ಹರಿಸಬೇಕಾಯಿತು. ಅಲ್ಲದೆ ತನ್ನ ಅನುಭವವನ್ನು ಪ್ರಯೋಗಿಸಿದ ಜೊಕೊವಿಚ್ ಇಡೀ ಸುತ್ತಿನಲ್ಲಿ ಹಿಡಿತ ಸಾಧಿಸಿದರು. ಪರಿಣಾಮ ಸ್ಪೇನ್ ಆಟಗಾರ 3 ಪಾಯಿಂಟ್ಸ್ ಕಲೆಹಾಕುವಷ್ಟರಲ್ಲಿ ಜೊಕೊವಿಚ್ 6 ಅಂಕಗಳೊಂದಿಗೆ 4ನೇ ಸುತ್ತನ್ನು ಅಂತ್ಯಗೊಳಿಸಿದರು.
2-2 ಸೆಟ್ಗಳ ಸಮಬಲದೊಂದಿಗೆ ಪಂದ್ಯವು ಫೈನಲ್ ಸುತ್ತಿನ ಪೈಪೋಟಿಗೆ ಸಾಗಿತು. 5ನೇ ಸುತ್ತಿನ ಆರಂಭದಲ್ಲೇ ಫೋರ್‌ಹ್ಯಾಂಡ್ ಆಟಕ್ಕೆ ಇಬ್ಬರು ಆಟಗಾರರು ಒತ್ತು ನೀಡಿದರು. ಆದರೆ ಇದರಲ್ಲಿ ಆರಂಭದಲ್ಲೇ 1 ಪಾಯಿಂಟ್ಗಳಿಸುವಲ್ಲಿ ಜೊಕೊವಿಚ್ ಯಶಸ್ವಿಯಾದರು. ಇದರ ಬೆನ್ನಲ್ಲೇ ಕಂಬ್ಯಾಕ್ ಮಾಡಿದ ಸ್ಪೇನ್ ಯುವ ಆಟಗಾರ ಫೋರ್‌ಹ್ಯಾಂಡ್ ಶಾಟ್ ಹಾಗೂ ಚಾಣಾಕ್ಷ ಪಾಸಿಂಗ್ ಮೂಲಕ ಬ್ಯಾಕ್ ಟು ಬ್ಯಾಕ್ 3 ಅಂಕಗಳನ್ನು ಕಲೆಹಾಕಿದರು. ಈ ಹಂತದಲ್ಲಿ ಕಂಬ್ಯಾಕ್ ಪ್ರಯತ್ನ ಮಾಡಿದ ಜೊಕೊವಿಚ್ 3 ಪಾಯಿಂಟ್ಸ್ ಕಲೆಹಾಕಿದರು.
ಆದರೆ ಅತ್ತ ಕಾರ್ಲೊಸ್ ಅಲ್ಕರಾಝ್ ಅದಾಗಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು. ಅಲ್ಲದೆ ಬ್ಯಾಕ್ ಟು ಬ್ಯಾಕ್ 2 ಪಾಯಿಂಟ್ಸ್ಗಳಿಸುವ ಮೂಲಕ ಐದನೇ ಸುತ್ತನ್ನು 6-4 ಅಂತರದಿಂದ ಗೆದ್ದುಕೊಂಡರು. ಈ ಮೂಲಕ 20ನೇ ವಯಸ್ಸಿನಲ್ಲೇ ವಿಂಬಲ್ಡನ್ ಚಾಂಪಿಯನ್ ಪಟ್ಟವನ್ನು ಕಾರ್ಲೊಸ್ ಅಲ್ಕರಾಝ್ ತಮ್ಮದಾಗಿಸಿಕೊಂಡರು.
Dream ? achieved ?#Wimbledon | @carlosalcaraz pic.twitter.com/BPQfWe3qF9
— Wimbledon (@Wimbledon) July 16, 2023
ಸಂಕ್ಷಿಪ್ತ ಪಾಯಿಂಟ್ಸ್ ಟೇಬಲ್:
Leaving it all out there ?#Wimbledon pic.twitter.com/EsqCiU55gu
— Wimbledon (@Wimbledon) July 16, 2023
ವಿಶ್ವ ಟೆನಿಸ್ ಶ್ರೇಯಾಂಕ:
ಇದೀಗ 7 ಬಾರಿಯ ವಿಲಂಬ್ಡನ್ ಚಾಂಪಿಯನ್ ನೊವಾಕ್ ಜೊಕೊವಿಚ್ಗೆ ಸೋಲುಣಿಸಿ ತಾನೇಕೆ ವಿಶ್ವದ ನಂಬರ್ 1 ಟೆನಿಸ್ ತಾರೆ ಎಂಬುದನ್ನು ಕಾರ್ಲೊಸ್ ಅಲ್ಕರಾಝ್ ನಿರೂಪಿಸಿದ್ದಾರೆ. ಈ ಸೋಲಿನೊಂದಿಗೆ ಅತೀ ಹೆಚ್ಚು ಗ್ರ್ಯಾಂಡ್ಸ್ಲಾಮ್ ಗೆದ್ದ ಸೆರೆನಾ ವಿಲಿಯಮ್ಸ್ (24) ಅವರ ವಿಶ್ವ ದಾಖಲೆಯನ್ನು ಸರಿಗಟ್ಟುವ ಅವಕಾಶವನ್ನು ನೊವಾಕ್ ಜೊಕೊವಿಕ್ (23) ಕೈಚೆಲ್ಲಿಕೊಂಡಿದ್ದಾರೆ.
Published On - 11:23 pm, Sun, 16 July 23