Wimbledon 2023: ಮಹಿಳಾ ಸಿಂಗಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡ ಮಾರ್ಕೆಟಾ
Wimbledon 2023 Women’s Final: ಜಾನಾ ನೊವೊಟ್ನಾ ಮತ್ತು ಪೆಟ್ರಾ ಕ್ವಿಟೋವಾ ನಂತರ ವಿಂಬಲ್ಡನ್‌ನಲ್ಲಿ ಪ್ರಶಸ್ತಿ ಗೆದ್ದ ಮೂರನೇ ಜೆಕ್ ಗಣರಾಜ್ಯದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಮಾರ್ಕೆಟಾ ವೊಂಡ್ರೊಸೊವಾ ಪಾತ್ರರಾಗಿದ್ದಾರೆ.
Wimbledon 2023 Women’s Final: ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಫೈನಲ್ನಲ್ಲಿ ಟುನೀಶಿಯಾದ ಓನ್ಸ್ ಜಬೇರ್ ವಿರುದ್ಧ ಜೆಕ್ ಗಣರಾಜ್ಯದ ಮಾರ್ಕೆಟಾ ವೊಂಡ್ರೊಸೊವಾ ಗೆಲುವು ದಾಖಲಿಸಿದ್ದಾರೆ. ಲಂಡನ್‌ನ ಕ್ರೋಕೆಟ್ ಕ್ಲಬ್ ಸೆಂಟರ್ ಕೋರ್ಟ್‌ನಲ್ಲಿ ನಡೆದ ಫೈನಲ್ ಕಾದಾಟದಲ್ಲಿ ಓನ್ಸ್ ಜಬೇರ್ ಅವರನ್ನು 6-4, 6-4 ಅಂತರದಿಂದ ಸೋಲಿಸಿ ಮಾರ್ಕೆಟಾ ವಿಂಬಲ್ಡನ್ ಕಿರೀಟವನ್ನು ತಮ್ಮದಾಗಿಸಿಕೊಂಡರು. ಭಾರೀ ಪೈಪೋಟಿಯನ್ನು ನಿರೀಕ್ಷಿಸಲಾಗಿದ್ದ ಅಂತಿಮ ಹಣಾಹಣಿಯನ್ನು 24 ವರ್ಷದ ಮಾರ್ಕೆಟಾ ಏಕಪಕ್ಷೀಯವಾಗಿಸಿದ್ದರು.
POV: you just become a Wimbledon champion ?#Wimbledon pic.twitter.com/kf484DhHUt
— Wimbledon (@Wimbledon) July 15, 2023
2022 ರ ವಿಂಬಲ್ಡನ್ ಫೈನಲ್ನಲ್ಲೂ ಸೋತು ರನ್ನರ್ ಅಪ್ ಆಗಿದ್ದ ಒನ್ಸ್ ಜಬೇರ್ ಈ ಕೂಡ ಒತ್ತಡ ಮೀರಿ ಆಡುವಲ್ಲಿ ವಿಫಲರಾದರು. ಇದರ ಸಂಪೂರ್ಣ ಲಾಭ ಪಡೆದ ಮಾರ್ಕೆಟಾ ಮೊದಲ ಸೆಟ್ನಲ್ಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಈ ಮೂಲಕ ಮೊದಲ ಸೆಟ್ ಅನ್ನು 6-4 ಅಂತರದಿಂದ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾದರು.
ಇನ್ನು ದ್ವಿತೀಯ ಸೆಟ್ನಲ್ಲಿ ಒನ್ಸ್ ಜಬೇರ್ ಕಂಬ್ಯಾಕ್ ಅನ್ನು ನಿರೀಕ್ಷಿಸಲಾಗಿತ್ತು. ಆದರೆ ಫಸ್ಟ್ ಸರ್ವ್ ಮೂಲಕವೇ ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ಮಾರ್ಕೆಟಾ ಮತ್ತೊಮ್ಮೆ ಯಶಸ್ವಿಯಾದರು. ಇತ್ತ ಅತ್ಯುತ್ತಮ ಹೊಡೆತಗಳ ಮೂಲಕ ಜೆಕ್ ರಿಪಬ್ಲಿಕ್ ಆಟಗಾರ್ತಿ ಮಾರ್ಕೆಟಾ ಎದುರಾಳಿ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು.
ಇದಾಗ್ಯೂ ಕೆಲ ಅತ್ಯುತ್ತಮ ಶಾಟ್ಗಳ ಮೂಲಕ ಟುನೀಶಿಯಾ ಆಟಗಾರ್ತಿ ಕಂಬ್ಯಾಕ್ ಮಾಡುವ ಪ್ರಯತ್ನ ಮಾಡಿದ್ದರು. ಆದರೆ ಉತ್ತಮ ಹೊಡೆತಗಳಿಗಿಂತ ಒನ್ಸ್ ಜಬೇರ್ ಅವರ ಅನಗತ್ಯ ತಪ್ಪುಗಳನ್ನೇ ಮುಳುವಾದವು. ಮತ್ತೊಂದೆಡೆ ಅನುಭವಕ್ಕಿಂತ ಹೆಚ್ಚಾಗಿ ಒತ್ತಡವನ್ನು ಮೀರಿ ನಿರ್ಭೀತಿಯಿಂದ ಆಡುವಲ್ಲಿ ಮಾರ್ಕೆಟಾ ಯಶಸ್ವಿಯಾದರು. ಇದರೊಂದಿಗೆ 2ನೇ ಸೆಟ್ ಅನ್ನು ಕೂಡ 6-4 ಅಂತರದಿಂದ ಗೆದ್ದುಕೊಂಡರು.
ಈ ಮೂಲಕ ಜಾನಾ ನೊವೊಟ್ನಾ ಮತ್ತು ಪೆಟ್ರಾ ಕ್ವಿಟೋವಾ ನಂತರ ವಿಂಬಲ್ಡನ್‌ನಲ್ಲಿ ಪ್ರಶಸ್ತಿ ಗೆದ್ದ ಮೂರನೇ ಜೆಕ್ ಗಣರಾಜ್ಯದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಮಾರ್ಕೆಟಾ ವೊಂಡ್ರೊಸೊವಾ ಪಾತ್ರರಾದರು.
Published On - 8:43 pm, Sat, 15 July 23