AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs WI: ಮೊದಲ ಟೆಸ್ಟ್​ನಲ್ಲಿ ನಿರ್ಮಾಣವಾದ 10 ವಿಶೇಷ ದಾಖಲೆಗಳಿವು

India vs West Indies: 1992 ರಲ್ಲಿ ಪ್ರವೀಣ್ ಆಮ್ರೆ ಮೊದಲ ಬಾರಿಗೆ ಈ ಸಾಧನೆ ಮಾಡಿದರು. ಆಮ್ರೆ ನಂತರ, ಆರ್‌ಪಿ ಸಿಂಗ್, ರವಿಚಂದ್ರನ್ ಅಶ್ವಿನ್, ಶಿಖರ್ ಧವನ್, ರೋಹಿತ್ ಶರ್ಮಾ, ಪೃಥ್ವಿ ಶಾ ಮತ್ತು ಶ್ರೇಯಸ್ ಅಯ್ಯರ್ ಚೊಚ್ಚಲ ಪಂದ್ಯದಲ್ಲೇ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದಿದ್ದರು.

IND vs WI: ಮೊದಲ ಟೆಸ್ಟ್​ನಲ್ಲಿ ನಿರ್ಮಾಣವಾದ 10 ವಿಶೇಷ ದಾಖಲೆಗಳಿವು
Team India
TV9 Web
| Edited By: |

Updated on: Jul 15, 2023 | 6:03 PM

Share

India vs West Indies: ಡೊಮಿನಿಕಾದಲ್ಲಿ ನಡೆದ ವೆಸ್ಟ್​ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಅಮೋಘ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಹಾಗೂ ಭಾರತೀಯ ಆಟಗಾರರು ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡರು. ಆ ದಾಖಲೆಗಳ ಸಂಕ್ಷಿಪ್ತ ವಿವರಗಳು ಈ ಕೆಳಗಿನಂತಿದೆ…

1. ಏಷ್ಯಾದ ಹೊರಗಿನ ಅತಿ ದೊಡ್ಡ ಗೆಲುವು: ಭಾರತ ಈ ಪಂದ್ಯವನ್ನು ಇನ್ನಿಂಗ್ಸ್ ಮತ್ತು 141 ರನ್‌ಗಳಿಂದ ಗೆದ್ದುಕೊಂಡಿದೆ. ಇದು ಇನಿಂಗ್ಸ್ ಆಧಾರದ ಮೇಲೆ ಏಷ್ಯಾದ ಹೊರಗೆ ಭಾರತದ ಅತಿದೊಡ್ಡ ಗೆಲುವು. ಈ ಹಿಂದೆ ವೆಸ್ಟ್ ಇಂಡೀಸ್ ತಂಡವನ್ನು ಇನ್ನಿಂಗ್ಸ್ ಮತ್ತು 92 ರನ್‌ಗಳಿಂದ ಸೋಲಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ ಇನಿಂಗ್ಸ್​ ಹಾಗೂ 141 ರನ್​ಗಳ ಜಯ ಸಾಧಿಸಿ ಟೀಮ್ ಇಂಡಿಯಾ ಹೊಸ ಇತಿಹಾಸ ನಿರ್ಮಿಸಿದೆ.

2. ಅತ್ಯುತ್ತಮ ಆರಂಭಿಕ ಜೊತೆಯಾಟ: ಯಶಸ್ವಿ ಜೈಸ್ವಾಲ್ ಮತ್ತು ರೋಹಿತ್ ಶರ್ಮಾ ಈ ಪಂದ್ಯದಲ್ಲಿ 229 ರನ್ ಜೊತೆಯಾಟವನ್ನು ಆಡಿದರು. ಇದರೊಂದಿಗೆ ಯಶಸ್ವಿ ಮತ್ತು ರೋಹಿತ್ ಏಷ್ಯಾದ ಹೊರಗೆ ಅತ್ಯುತ್ತಮ ಜೊತೆಯಾಟವಾಡಿದ ಆರಂಭಿಕ ಜೋಡಿ ಎನಿಸಿಕೊಂಡಿದ್ದಾರೆ. ಈ ಮೊದಲು ಈ ದಾಖಲೆ ಚೇತನ್ ಚೌಹಾಣ್ ಮತ್ತು ಸುನಿಲ್ ಗವಾಸ್ಕರ್ ಹೆಸರಿನಲ್ಲಿತ್ತು. 1979ರಲ್ಲಿ ಈ ಜೋಡಿಯು ಇಂಗ್ಲೆಂಡ್ ವಿರುದ್ಧ ಓವಲ್‌ನಲ್ಲಿ ಮೊದಲ ವಿಕೆಟ್‌ಗೆ 213 ರನ್ ಪೇರಿಸಿದ್ದರು.

3. ಯಶಸ್ವಿ ಆರಂಭ: ಯಶಸ್ವಿ ಜೈಸ್ವಾಲ್ ಚೊಚ್ಚಲ ಟೆಸ್ಟ್‌ನಲ್ಲಿ 171 ರನ್ ಬಾರಿಸಿದ್ದರು. ಇದು ವಿದೇಶದಲ್ಲಿ ಚೊಚ್ಚಲ ಪಂದ್ಯವಾಡಿದ ಆರಂಭಿಕ ಅತಿದೊಡ್ಡ ಇನ್ನಿಂಗ್ಸ್. ಅಲ್ಲದೆ ಭಾರತದ ಪರ ಚೊಚ್ಚಲ ಪಂದ್ಯದಲ್ಲಿ ಅತ್ಯಧಿಕ ರನ್ ಕಲೆಹಾಕಿದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

4. ಅತಿ ಹೆಚ್ಚು ಎಸೆತಗಳನ್ನು ಆಡಿದ ದಾಖಲೆ: ಯಶಸ್ವಿ ಜೈಸ್ವಾಲ್ ಚೊಚ್ಚಲ ಟೆಸ್ಟ್‌ನಲ್ಲಿ ಭಾರತ ಪರ ಹೆಚ್ಚು ಎಸೆತಗಳನ್ನು ಆಡಿದ ಮತ್ತೊಂದು ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಒಟ್ಟು 387 ಎಸೆತಗಳನ್ನು ಎದುರಿಸಿದರು. ಈ ಮೂಲಕ ಮೊಹಮ್ಮದ್ ಅಝರುದ್ದೀನ್ ದಾಖಲೆಯನ್ನು ಮುರಿದಿದ್ದಾರೆ. ಈ ಹಿಂದೆ ಅಝರ್ ಇಂಗ್ಲೆಂಡ್ ವಿರುದ್ಧದ ಚೊಚ್ಚಲ ಟೆಸ್ಟ್‌ನಲ್ಲಿ ಒಟ್ಟು 322 ಎಸೆತಗಳನ್ನು ಎದುರಿಸಿದ್ದರು.

5. ವೆಸ್ಟ್ ಇಂಡೀಸ್‌ನ ಕಳಪೆ ಪ್ರದರ್ಶನ: ವೆಸ್ಟ್ ಇಂಡೀಸ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 150 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 130 ರನ್ ಗಳಿಸಲಷ್ಟೇ ಶಕ್ತವಾಯಿತು. ಎರಡೂ ಇನಿಂಗ್ಸ್‌ಗಳ ಒಟ್ಟು ಸ್ಕೋರ್​ 280 ರನ್‌ಗಳು. ಇದು ಭಾರತದ ವಿರುದ್ಧ ತವರಿನಲ್ಲಿ ವೆಸ್ಟ್ ಇಂಡೀಸ್‌ ತಂಡದ ಕನಿಷ್ಠ ಮೊತ್ತವಾಗಿದೆ. ಇದಕ್ಕೂ ಮೊದಲು 2016 ರಲ್ಲಿ ಎರಡೂ ಇನ್ನಿಂಗ್ಸ್‌ಗಳಲ್ಲಿ ವೆಸ್ಟ್ ಇಂಡೀಸ್​ ಒಟ್ಟು 322 ರನ್ ಗಳಿಸಿದ್ದು ಅತ್ಯಂತ ಕಳಪೆ ದಾಖಲೆಯಾಗಿತ್ತು.

6. ಪಂದ್ಯ ಶ್ರೇಷ್ಠ ಪ್ರಶಸ್ತಿ: ಯಶಸ್ವಿ ಜೈಸ್ವಾಲ್ ಚೊಚ್ಚಲ ಪಂದ್ಯದಲ್ಲೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಎಂಟನೇ ಭಾರತೀಯ ಎನಿಸಿಕೊಂಡಿದ್ದಾರೆ. 1992 ರಲ್ಲಿ ಪ್ರವೀಣ್ ಆಮ್ರೆ ಮೊದಲ ಬಾರಿಗೆ ಈ ಸಾಧನೆ ಮಾಡಿದರು. ಆಮ್ರೆ ನಂತರ, ಆರ್‌ಪಿ ಸಿಂಗ್, ರವಿಚಂದ್ರನ್ ಅಶ್ವಿನ್, ಶಿಖರ್ ಧವನ್, ರೋಹಿತ್ ಶರ್ಮಾ, ಪೃಥ್ವಿ ಶಾ ಮತ್ತು ಶ್ರೇಯಸ್ ಅಯ್ಯರ್ ಚೊಚ್ಚಲ ಪಂದ್ಯದಲ್ಲೇ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದಿದ್ದರು.

7. ಅಶ್ವಿನ್ ನಾಗಾಲೋಟ: ಈ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ 12 ವಿಕೆಟ್ ಕಬಳಿಸಿ ಟೀಮ್ ಇಂಡಿಯಾ ಪರ ಅತ್ಯಧಿಕ ವಿಕೆಟ್ ಪಡೆದ 2ನೇ ಬೌಲರ್ ಎನಿಸಿಕೊಂಡರು. ಅಶ್ವಿನ್ ಒಟ್ಟು 709 ಅಂತಾರಾಷ್ಟ್ರೀಯ ವಿಕೆಟ್​ಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದರೆ, 956 ವಿಕೆಟ್‌ಗಳೊಂದಿಗೆ ಅನಿಲ್ ಕುಂಬ್ಳೆ ಅಗ್ರಸ್ಥಾನದಲ್ಲಿದ್ದಾರೆ.

8. ಅಶ್ವಿನ್-ಕುಂಬ್ಳೆ ಸಮಬಲ: ಅಶ್ವಿನ್ ಪಂದ್ಯದಲ್ಲಿ ಒಟ್ಟು 12 ವಿಕೆಟ್ ಪಡೆದರು. ಟೆಸ್ಟ್ ಪಂದ್ಯವೊಂದರಲ್ಲಿ ಅಶ್ವಿನ್ 10 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದದ್ದು ಇದು ಎಂಟನೇ ಬಾರಿ. ಈ ವಿಚಾರದಲ್ಲಿ ಅಶ್ವಿನ್ ಅವರು ಅನಿಲ್ ಕುಂಬ್ಳೆ (8 ಬಾರಿ) ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

9. ಮುನ್ನುಗ್ಗಿದ ವಿರಾಟ್ ಕೊಹ್ಲಿ: ಈ ಪಂದ್ಯದಲ್ಲಿ 76 ರನ್ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್​ಗಳಿಸಿದ ಆಟಗಾರರ ಪಟ್ಟಿಯಲ್ಲಿ ವಿವಿಯನ್ ರಿಚರ್ಡ್ಸ್ ಅವರನ್ನು ಹಿಂದಿಕ್ಕಿದ್ದಾರೆ. ವೆಸ್ಟ್ ಇಂಡೀಸ್​ನ ವಿವಿಯನ್ ರಿಚರ್ಡ್ಸ್ 121 ಪಂದ್ಯಗಳಲ್ಲಿ 8540 ರನ್ ಗಳಿಸಿದ್ದರೆ, ವಿರಾಟ್ ಕೊಹ್ಲಿ 110 ಟೆಸ್ಟ್‌ಗಳಲ್ಲಿ 8555 ರನ್ ಕಲೆಹಾಕಿದ್ದಾರೆ.

ಇದನ್ನೂ ಓದಿ: India T20 Squad: ಟೀಮ್ ಇಂಡಿಯಾದಲ್ಲಿ ಇಬ್ಬರೇ ಆಲ್​ರೌಂಡರ್​ಗಳು..!

10. ರೋಹಿತ್ ಶರ್ಮಾ ಶತಕ: ಈ ಪಂದ್ಯದಲ್ಲಿ ರೋಹಿತ್ ಶರ್ಮಾ (103) ಶತಕ ಸಿಡಿಸಿ ಮಿಂಚಿದ್ದರು. ವಿಶೇಷ ಎಂದರೆ ಇದು ರೋಹಿತ್ ಶರ್ಮಾ ಅವರ 7ನೇ ಡಬ್ಲ್ಯೂಟಿಸಿ ಶತಕ. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅತಿ ಹೆಚ್ಚು 7 ಶತಕ ಬಾರಿಸಿದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.