ಸಿಂಗಾಪುರದ ರೆಸಾರ್ಟ್ಸ್ ವರ್ಲ್ಡ್ ಸೆಂಟೋಸಾದಲ್ಲಿರುವ ಈಕ್ವೇರಿಯಸ್ ಹೋಟೆಲ್‌ನಲ್ಲಿ ನಡೆಯುತ್ತಿರುವ 2024 ರ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಮೂರನೇ ಗೇಮ್ನಲ್ಲಿ ಅದ್ಭುತ ಪುನರಾಗಮನವನ್ನು ಮಾಡಿರುವ ಭಾರತದ 18 ವರ್ಷದ ಗ್ರ್ಯಾಂಡ್‌ಮಾಸ್ಟರ್ ಡಿ ಗುಕೇಶ್, ಹಾಲಿ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ಸ್ಕೋರ್ ಅನ್ನು 1.5-1.5 ರಲ್ಲಿ ಸಮಗೊಳಿಸಿದ್ದಾರೆ. ವಾಸ್ತವವಾಗಿ ನವೆಂಬರ್ 25 ರಿಂದ ಆರಂಭವಾಗಿರುವ ಈ ಫೈನಲ್ ಪಂದ್ಯದ ಮೊದಲ ಗೇಮ್ನಲ್ಲಿ ಗುಕೇಶ್ ಅವರನ್ನು ಲಿರೆನ್ 1.5-0.5 ರಿಂದ ಸೋಲಿಸಿದ್ದರು. ಆ ಬಳಿಕ ಮಂಗಳವಾರ ನಡೆದಿದ್ದ ಎರಡನೇ ಪಂದ್ಯ ಡ್ರಾ ಆಗಿತ್ತು. ಇದೀಗ ಇಂದು ನಡೆದ ಮೂರನೇ ಪಂದ್ಯದಲ್ಲಿ ಗೆಲುವು ದಾಖಲಿಸುವ ಮೂಲಕ ಗುಕೇಶ್ ಜಯದ ಹಾದಿಗೆ ಮರಳಿದ್ದಾರೆ.
ವಿಶ್ವ ಚೆಸ್ ಚಾಂಪಿಯನ್ಶಿಪ್ನಲ್ಲಿ ಒಟ್ಟು 14 ಸುತ್ತುಗಳು ನಡೆಯಲಿವೆ. ಇದು ಡಿಸೆಂಬರ್ 12 ರವರೆಗೆ ನಡೆಯಲಿದೆ. ಅಗತ್ಯ ಬಿದ್ದರೆ ಡಿಸೆಂಬರ್ 13 ರಂದು ಟೈಬ್ರೇಕರ್ ಸುತ್ತು ನಡೆಯಲಿದೆ. ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನ ಇತಿಹಾಸದಲ್ಲಿ ಇಬ್ಬರು ಏಷ್ಯನ್ ಆಟಗಾರರು ವಿಶ್ವ ಚಾಂಪಿಯನ್ ಆಗಲು ಮುಖಾಮುಖಿಯಾಗುತ್ತಿರುವುದು ಇದೇ ಮೊದಲು. ಗುಕೇಶ್ ಮತ್ತು ಡಿಂಗ್ ಒಂದು ಗೇಮ್ ಗೆದ್ದರೆ 1 ಅಂಕ ಮತ್ತು ಡ್ರಾಗೆ 0.5 ಅಂಕಗಳನ್ನು ಪಡೆಯುತ್ತಾರೆ. ಚಾಂಪಿಯನ್‌ಶಿಪ್ ಗೆಲ್ಲಲು 7.5 ಅಂಕಗಳ ಅಗತ್ಯವಿದ್ದು, 14 ಸುತ್ತುಗಳ ನಂತರ ಸ್ಕೋರ್ ಟೈ ಆಗಿದ್ದರೆ, ಟೈಬ್ರೇಕರ್ ಮೂಲಕ ವಿಜೇತರನ್ನು ಘೋಷಿಸಲಾಗುತ್ತದೆ.
ಇನ್ನು ಈ ಚಾಂಪಿಯನ್ಶಿಪ್ನಲ್ಲಿ ಗುಕೇಶ್‌ನತ್ತ ಎಲ್ಲರ ದೃಷ್ಟಿ ನೆಟ್ಟಿದ್ದು, ಒಂದು ವೇಳೆ ಈ ಪಂದ್ಯದಲ್ಲಿ ಅವರು ಗೆದ್ದರೆ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದ ಅತ್ಯಂತ ಕಿರಿಯ ಚೆಸ್ ಚೆತುರ ಎಂಬ ದಾಖಲೆ ಬರೆಯಲಿದ್ದಾರೆ. ಇದರ ಜೊತೆಗೆ ಈ ಸಾಧನೆ ಮಾಡಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಗುಕೇಶ್ಗೂ ಮೊದಲು ವಿಶ್ವನಾಥನ್ ಆನಂದ್ 5 ಬಾರಿ ವಿಶ್ವ ಚಾಂಪಿಯನ್ ಆಗಿದ್ದಾರೆ.
ವಿಶ್ವ ಚೆಸ್ ಚಾಂಪಿಯನ್ಶಿಪ್ಗೂ ಮುನ್ನ ಏಪ್ರಿಲ್‌ನಲ್ಲಿ ಟೊರೊಂಟೊದಲ್ಲಿ ನಡೆದ ಕ್ಯಾಂಡಿಡೇಟ್ಸ್ ಚೆಸ್ ಪಂದ್ಯಾವಳಿಯನ್ನು ಗೆಲ್ಲುವ ಮೂಲಕ ಗುಕೇಶ್, ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಆಟಗಾರ (17 ವರ್ಷ) ಎನಿಸಿಕೊಂಡಿದ್ದರು. ಗುಕೇಶ್‌ಗಿಂತ ಮೊದಲು, ರಷ್ಯಾದ ಆಟಗಾರ ಗ್ಯಾರಿ ಕಾಸ್ಪರೋವ್ 1984 ರಲ್ಲಿ ತನ್ನ 22 ನೇ ವಯಸ್ಸಿನಲ್ಲಿ ಈ ಪಂದ್ಯಾವಳಿಯನ್ನು ಗೆದ್ದಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:05 pm, Wed, 27 November 24