ಎಲ್ಲಾ ಕ್ಷೇತ್ರಗಳಂತೆ ತಂತ್ರಜ್ಞಾನಕ್ಕೂ (Technology) ಎರಡು ಮುಖಗಳಿವೆ. ಒಂದು ಮುಖ ನಮ್ಮ ಆರೋಗ್ಯ ಹದಗೆಡಿಸಿ, ನಮ್ಮ ವೇಗ, ಕಾರ್ಯಕ್ಷಮತೆ ಹಾಗೂ ಉದ್ಯೋಗಗಳನ್ನು ಕೊಂದರೆ, ಇನ್ನೊಂದು ಜೀವನದಿಂದ ಹೆಚ್ಚಿನದನ್ನು ಪಡೆಯಲು ನಮಗೆ ಸಹಾಯ ಮಾಡುತ್ತದೆ. ಸದ್ಯ, ನಾವು ಮಾಡುವ ಹೆಚ್ಚಿನ ದೈನಂದಿನ ಕಾರ್ಯಗಳು ಸಂಪೂರ್ಣವಾಗಿ ತಂತ್ರಜ್ಞಾನವನ್ನು ಅವಲಂಭಿಸಿವೆ. ತಂತ್ರಜ್ಞಾನವು ಸಹ ಅನೇಕ ಬಾರಿ ಜೀವ ಉಳಿಸಿರುವ ಉದಾಹರಣೆಗಳಿವೆ. ಈಗ ತನ್ನ ವಿಶಿಷ್ಟ ತಂತ್ರಜ್ಞಾನದ ಮೂಲಕ ಹೆಸರುವಾಸಿಯಾಗಿರುವ ಆ್ಯಪಲ್‌ನ (Apple) ಸಾಧನವೊಂದು ಹರಿಯಾಣದ ವ್ಯಕ್ತಿಯೊಬ್ಬರ ಜೀವ ಉಳಿಸಿದೆ. ಜನಪ್ರಿಯ ಆ್ಯಪಲ್ ಕಂಪನಿಯ ಆ್ಯಪಲ್ ವಾಚ್ (Apple Watch)ನಲ್ಲಿರುವ ECG ಫೀಚರ್ ವ್ಯಕ್ತಿಯೊಬ್ಬರ ಜೀವ ಉಳಿಸಲು ಸಹಾಯಕವಾಗಿದೆ. ಈ ಘಟನೆ ಹರಿಯಾಣದಲ್ಲಿ ನಡೆದಿದ್ದು, 34 ವರ್ಷದ ನಿತೇಶ್ ಚೋಪ್ರಾ ತಮ್ಮ ವೈಯಕ್ತಿಕ ಅನುಭವವನ್ನು ವಿವರಿಸಿದ್ದಾರೆ.
ಆ್ಯಪಲ್ ವಾಚ್ ವಿಶ್ವದಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಸ್ಮಾರ್ಟ್ ವಾಚ್ ಆಗಿದ್ದು, ಇತ್ತೀಚಿನ ವರ್ಷಗಳಲ್ಲಿ ಕಂಪನಿ ಸಾಕಷ್ಟು ಆರೋಗ್ಯ ಮತ್ತು ಫಿಟ್ನೆಸ್ ಫೀಚರ್‌ಗಳನ್ನು ಸ್ಮಾರ್ಟ್‌ವಾಚ್‌ನಲ್ಲಿ ಪರಿಚಯಿಸಿದೆ. ಅಂತಹ ಫೀಚರ್‌ಗಳಲ್ಲಿ ಇಸಿಜಿ ಕೂಡ ಒಂದಾಗಿದ್ದು, ಇದುವೇ ನಿತೇಶ್ ಅವರ ಜೀವ ಉಳಿಸಿದೆ. ಮಾರ್ಚ್ 12 ರಂದು, ಚೋಪ್ರಾ ಅವರು ತಮ್ಮ ಎದೆಯಲ್ಲಿ ಅಸ್ವಸ್ಥತೆಯನ್ನು ಅನುಭವಿಸಿದರು. ಹೀಗಾಗಿ ತಕ್ಷಣವೆ ಆ್ಯಪಲ್ ವಾಚ್ ಮೂಲಕ ತಮ್ಮ ಇಸಿಜಿಯನ್ನು ಪರಿಶೀಲಿಸಿದ್ದಾರೆ. ಈ ವೇಳೆ ಆ್ಯಪಲ್ ವಾಚ್ ಅನಿಯಮಿತ ಹೃದಯದ ಲಯ (Afib) ಎಚ್ಚರಿಕೆಯನ್ನು ತೋರಿಸಿದೆ.
ಈ ಸಂದರ್ಭ ಹೆಚ್ಚು ಹೊತ್ತು ಮಾಡದೆ ನಿತೇಶ್ ಮತ್ತು ಅವರ ಹೆಂಡತಿ ನೇಹಾ ತಕ್ಷಣ ಹತ್ತಿರದ ಆಸ್ಪತ್ರೆಗೆ ತೆರಳಿ, ಅಲ್ಲಿ ಅವರು ತಮ್ಮ ಆ್ಯಪಲ್ ವಾಚ್‌ನಿಂದ ಪಡೆದ ಇಸಿಜಿ ವರದಿಯನ್ನು ವೈದ್ಯರಿಗೆ ತೋರಿಸಿದ್ದಾರೆ. ಇದನ್ನು ಗಮನಿಸಿದ ವೈದ್ಯರು ಇಸಿಜಿ ಮಾಡಿಸಿದ್ದಾರೆ. ವೈದ್ಯರು ನಡೆಸಿದ ಇಸಿಜಿ ಪರೀಕ್ಷೆಗಳು ಆ್ಯಪಲ್ ವಾಚ್ ನೀಡಿದ್ದ ಫಲಿತಾಂಶಗಳನ್ನು ದೃಢಪಡಿಸಿವೆ. ಅದೇ ಸಂಜೆ ವೈದ್ಯರು ಕಾರ್ಯಪ್ರವೃತ್ತರಾಗಿ ತುರ್ತು ಆಂಜಿಯೋಗ್ರಫಿಯನ್ನು ಮಾಡಿದ್ದಾರೆ. ಚಿಕಿತ್ಸೆ ವೇಳೆ ಚೋಪ್ರಾ ಅವರ ಮುಖ್ಯ ಪರಿಧಮನಿ ಸಂಪೂರ್ಣವಾಗಿ ಬ್ಲಾಕ್ ಆಗಿತ್ತು ಎಂದು ತಿಳಿದುಬಂದಿದ್ದು, ಇದು ಸಂಭಾವ್ಯ ಹೃದಯ ಸ್ತಂಭನಕ್ಕೆ ಕಾರಣವಾಗಬಹುದಿತ್ತು ಎಂದು ವೈದ್ಯರು ಹೇಳಿದ್ದಾರೆ.
ಸದ್ಯ ಆ್ಯಪಲ್ ವಾಚ್ ಫೀಚರ್ಸ್ ಮೂಲಕ ವ್ಯಕ್ತಿಯೊಬ್ಬರ ಜೀವ ಉಳಿಸದಿರೋದು ಟೆಕ್ನಾಲಜಿಯ ಅವಶ್ಯಕತೆ ಎಷ್ಟಿದೆ ಅನ್ನೊದು ತಿಳಿಯುತ್ತೆ. ಹಾಗಂತ ಆ್ಯಪಲ್ ವಾಚ್ ಫೀಚರ್ಸ್ ಮೂಲಕ ವ್ಯಕ್ತಿಯೊಬ್ಬರ ಜೀವ ಉಳಿದಿರೋದು ಇದೇ ಮೊದಲೇನಲ್ಲ. ಆದರೆ ಆ್ಯಪಲ್ ವಾಚ್ ಫೀಚರ್ಸ್ ಈ ರೀತಿ ಸಾಕಷ್ಟು ಉಪಯುಕ್ತ ವಾಗುತ್ತಿರೋದು ನಿಜಕ್ಕೂ ಆ್ಯಪಲ್ ವಾಚ್ ಬಳಕೆದಾರರಿಗೆ ಇನ್ನಷ್ಟು ಖುಷಿ ನೀಡಿದೆ.
ತನ್ನ ಗಂಡನ ಪ್ರಾಣವನ್ನು ಉಳಿಸಿದ್ದಕ್ಕಾಗಿ ಪತ್ನಿ ಆ್ಯಪಲ್ ಕಂಪನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಆ್ಯಪಲ್‌ನ ಸಿಇಒ ಟಿಮ್ ಕುಕ್‌ಗೆ ಪತ್ರ ಬರೆದಿರುವ ನೇಹಾ, “ನೀವು ಒದಗಿಸಿದ ತಂತ್ರಜ್ಞಾನದಿಂದ ನಾವು ಆಸ್ಪತ್ರೆಗೆ ತಲುಪಿದ್ದೇವೆ ಮತ್ತು ನನ್ನ ಪತಿ ಈಗ ಆರೋಗ್ಯವಾಗಿದ್ದಾರೆ. ನಾನು ನಿಮಗೆ ಬಹಳಷ್ಟು ಪ್ರೀತಿ ಮತ್ತು ಸಂತೋಷವನ್ನು ಬಯಸುತ್ತೇನೆ ಮತ್ತು ನನ್ನ ಪತಿಗೆ ಅವರ ಜೀವನವನ್ನು ನೀಡಿದಕ್ಕಾಗಿ ಧನ್ಯವಾದಗಳು,” ಎಂದು ತಿಳಿಸಿದ್ದಾರೆ. ಇತ್ತ ನೇಹಾ ಅವರ ಪತ್ರಕ್ಕೆ ಪ್ರತಿಕ್ರಿಯಿಸಿದ ಆ್ಯಪಲ್ ಸಿಇಒ ಟಿಮ್ ಕುಕ್, “ನೀವು ವೈದ್ಯಕೀಯ ಗಮನವನ್ನು ಪಡೆದಿರುವುದಕ್ಕೆ ಮತ್ತು ನಿಮಗೆ ಬೇಕಾದ ಚಿಕಿತ್ಸೆಯನ್ನು ಪಡೆದಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನಿಮ್ಮ ಕಥೆಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು. ಆರೋಗ್ಯವಾಗಿರಿ,” ಎಂದು ಪ್ರತಿಕ್ರಿಯಿಸಿದ್ದಾರೆ.
ಇಸಿಜಿ ಅಪ್ಲಿಕೇಶನ್ ಆ್ಯಪಲ್ ವಾಚ್ ಸರಣಿ 4, ಸರಣಿ 5, ಸರಣಿ 6, ಅಥವಾ ಸರಣಿ 7 ನಲ್ಲಿನ ವಿದ್ಯುತ್ ಹೃದಯ ಸಂವೇದಕವನ್ನು ಬಳಸಿಕೊಂಡು ನಿಮ್ಮ ಹೃದಯ ಬಡಿತ ಮತ್ತು ಲಯವನ್ನು ರೆಕಾರ್ಡ್ ಮಾಡಬಹುದು ಅಂದರೆ ಆ್ಯಪಲ್ ವಾಚ್ನಲ್ಲಿರುವ ಈ ಇಸಿಜಿ ಅಪ್ಲಿಕೇಶನ್ ಮತ್ತು ಅನಿಯಮಿತ ಹೃದಯ ರಿದಮ್ ನೋಟಿಫಿಕೇಶನ್ ಫೀಚರ್ಸ್ ಅನಿಯಮಿತ ಲಯದ ಸಾಮಾನ್ಯ ರೂಪವಾದ ಎಫಿಬ್‌ನ ಚಿಹ್ನೆಗಳನ್ನು ಗುರುತಿಸಲು ಬಳಕೆದಾರರಿಗೆ ಸಹಾಯ ಮಾಡುತ್ತದೆ.
Galaxy A33 5G: ಗ್ಯಾಲಕ್ಸಿ A ಸರಣಿಯಲ್ಲಿ ಬಿಡುಗಡೆ ಆಯಿತು ಎರಡು ಹೊಸ ಸ್ಮಾರ್ಟ್ಫೋನ್: ಬೆಲೆ ಎಷ್ಟು?