ಇಂದು ಸೆಪ್ಟೆಂಬರ್ 27– ಸರಿಯಾಗಿ 25 ವರ್ಷದ ಹಿಂದೆ ಗೂಗಲ್ (Google Inc.) ಎಂಬ ಕಂಪನಿಯ ಹುಟ್ಟು ಆಗಿತ್ತು. ಅಮೆರಿಕದ ಸ್ಟಾನ್ಫೋರ್ಡ್ ಯೂನಿವರ್ಸಿಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಪ್ರೋಗ್ರಾಮ್ನಲ್ಲಿ ಸೆರ್ಗೆ ಬ್ರಿನ್ (sergy Brin) ಮತ್ತು ಲ್ಯಾರಿ ಪೇಜ್ (Larry Page) ಎಂಬಿಬ್ಬರು ವಿದ್ಯಾರ್ಥಿಗಳ ಭೇಟಿಯಾಗಿತ್ತು. ಇಡೀ ವಿಶ್ವ ವ್ಯಾಪಿ ಅಂತರ್ಜಾಲ ಎಲ್ಲರಿಗೂ ತಲುಪಲು ಏನಾದರೊಂದು ಮಾರ್ಗ ಹುಡುಕಬೇಕು ಎಂದು ಅವರಿಬ್ಬರ ಮನಸಿನಲ್ಲಿ ಏಕರೀತಿಯ ಗುರಿ ಮತ್ತು ಆಲೋಚನೆಗಳು ಬಂದಿದ್ದವು. ಅದು 1996ರ ವರ್ಷ. ಬ್ಯಾಕ್ರಬ್ ಎಂಬ ರಿಸರ್ಚ್ ಪ್ರಾಜೆಕ್ಟ್ ಶುರುವಾಯಿತು. ಇವರ ಆಲೋಚನೆಗೆ ರೂಪುಗೊಡಲು ಸಹಾಯವಾಗಿ ಸ್ಕಾಟ್ ಹಸನ್ (Scot Hassan) ಎಂಬುವವರು ಇದ್ದರು. ಈ ಮೂವರು ಸೇರಿ ಮಾಡಿದ ಸಾಹಸ ಒಂದು ಉತ್ತಮ ಸರ್ಚ್ ಎಂಜಿನ್ ಸೃಷ್ಟಿಗೆ ಕಾರಣವಾಯಿತು. ಸ್ಕಾಟ್ ಹಸನ್ ಸರ್ಚ್ ಎಂಜಿನ್ನ ಬಹುತೇಕ ಕೋಡ್ಗಳನ್ನು ರಚಿಸಿದರು.
ಈ ಸರ್ಚ್ ಎಂಜಿನ್ ಆಲೋಚನೆ ಸಾಕಾರಗೊಳ್ಳುತ್ತಿರುವಂತೆಯೇ ಸ್ಕಾಟ್ ಹಸನ್ ಬೇರೆ ಬೇರೆ ದಾರಿ ಹುಡುಕಿಕೊಂಡು ಹೋದರು. ಸೆರ್ಗಿ ಬ್ರಿನ್ ಮತ್ತು ಲ್ಯಾರಿ ಪೇಜ್ ಇಬ್ಬರೂ ಕೂಡ ಒಂದು ಗ್ಯಾರೇಜ್ ಅನ್ನು ಬಾಡಿಗೆಗೆ ಪಡೆದು ಗೂಗಲ್ ಎಂಬ ಕಂಪನಿ ಆರಂಭಿಸಿದರು. ಅದು 1998, ಸೆಪ್ಟೆಂಬರ್ 27. ಇಪ್ಪತ್ತೈದು ವರ್ಷದ ಬಳಿಕ ತಮ್ಮ ಗೂಗಲ್ ಮೇಲೆ ಕೋಟ್ಯಂತರ ಜನರು ಒಂದಿಲ್ಲೊಂದು ರೀತಿಯಲ್ಲಿ ಅವಲಂಬಿತರಾಗುತ್ತಾರೆ ಎಂದು ಸೆರ್ಗೇ ಬ್ರಿನ್ ಮತ್ತು ಲ್ಯಾರಿ ಪೇಜ್ ಅಂದಾಜು ಮಾಡಿರಲಿಲ್ಲ. ಅಷ್ಟರಮಟ್ಟಿಗೆ ಹೊಸ ಹೊಸ ಆವಿಷ್ಕಾರಗಳೊಂದಿಗೆ ಗೂಗಲ್ ಅಗಾಧವಾಗಿ ಬೆಳೆದಿದೆ.
ಇದನ್ನೂ ಓದಿ: ಕಾಲಜ್ಞಾನಿ ಗೂಗಲ್; ಯಾವ ಸಮಯದಲ್ಲಿ ಕಡಿಮೆ ಬೆಲೆಗೆ ವಿಮಾನ ಟಿಕೆಟ್ ಬುಕ್ ಮಾಡಬಹುದು? ಗೂಗಲ್ ಫ್ಲೈಟ್ಸ್ನಲ್ಲಿದೆ ಹೊಸ ಫೀಚರ್
ಗೂಗಲ್ ಎಂಬುದು ಗೂಗೊಲ್ (googol) ಎಂಬ ಗಣಿತ ಸಂಖ್ಯಾ ಪದದ ಅಪಭ್ರಂಶ. ಗೂಗೊಲ್ ಎಂದರೆ ಗಣಿತದಲ್ಲಿ ಹತ್ತರ ನೂರು ಘಾತಗಳ ಒಂದು ಸಂಖ್ಯೆ. ಇಂಗ್ಲೀಷ್ನಲ್ಲಿ ಟೆನ್ ಟು ದಿ ಪವರ್ ಆಫ್ 100 ಎನ್ನುತ್ತಾರೆ (10100). 1 ಅಂಕಿ ಮುಂದೆ ನೂರು ಸೊನ್ನೆಗಳನ್ನು ಸೇರಿಸಿದಾಗ ಬರುವ ಸಂಖ್ಯೆ.
ಇಷ್ಟು ದೊಡ್ಡ ಮೊತ್ತದ ಮಾಹಿತಿಯನ್ನು ತಮ್ಮ ಸರ್ಚ್ ಎಂಜಿನ್ ಹೆಕ್ಕಿ ತೆಗೆಯುತ್ತದೆ ಎಂದು ಸೂಚಿಸಲು ಗೂಗಲ್ ಪದವನ್ನು ಲ್ಯಾರಿ ಪೇಜ್ ಮತ್ತು ಸೆರ್ಗಿ ಬ್ರಿನ್ ತಮ್ಮ ಹೊಸ ಕಂಪನಿಗೆ ಇಡುತ್ತಾರೆ. ಗೂಗೋಲ್ ಎಂಬ ಉಚ್ಚಾರಣೆ ಬರದೇ ಗೂಗಲ್ ಎಂದು ಹೆಸರಿಡುತ್ತಾರೆ.
ಗೂಗಲ್ ಬಹುತೇಕ ಸರ್ವವ್ಯಾಪಿ ಆಗಿಹೋಗಿದೆ. ನಮ್ಮ ನಿತ್ಯಜೀವನದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಗೂಗಲ್ ತಂತ್ರಜ್ಞಾನಗಳನ್ನು ನಾವು ಬಳಸುತ್ತೇವೆ. ಪರಿಪೂರ್ಣ ಸರ್ಚ್ ಎಂಜಿನ್ ಆಗಿ ರೂಪುಗೊಂಡ ಗೂಗಲ್ ಎಂಬ ಗಿಡ, ಬೆಳೆದು ಹಲವು ರೆಂಬೆ, ಕೊಂಬೆಗಳನ್ನು ಬೆಳೆಸಿಕೊಂಡು ಇಂದು ಬೃಹತ್ ವಟವೃಕ್ಷವಾಗಿ ಬಹಳ ಮಂದಿಗೆ ಸಹಾಯವಾಗಿದೆ. ಅದರ ಇಮೇಲ್, ಮ್ಯಾಪ್ಸ್, ಬ್ರೌಸರ್, ಕ್ಲೌಡ್, ಯೂಟ್ಯೂಬ್, ಟ್ರಾನ್ಸ್ಲೇಟ್, ಪ್ಲೇಸ್ಟೋರ್ ಹೀಗೆ ಹಲವು ಗೂಗಲ್ ಅಪ್ಲಿಕೇಶನ್ಗಳು ಮತ್ತು ಸರ್ವಿಸ್ಗಳು ಬಹಳ ಜನರಿಗೆ ಸಹಾಯವಾಗಿವೆ.
ಇದನ್ನೂ ಓದಿ: ಸ್ವಾತಂತ್ರ್ಯ ದಿನಕ್ಕೆ ಡೂಡಲ್ ರಚಿಸುವ ಮೂಲಕ ಭಾರತೀಯರ ಸಂಭ್ರಮವನ್ನು ಇಮ್ಮಡಿಗೊಳಿಸಿದ ಗೂಗಲ್
ಆರ್ಟಿಫಿಶಿಯಲ್ ಎಂಟಿಲೆನ್ಸ್, ಮೆಷಿನ್ ಲರ್ನಿಂಗ್, ಸ್ಮಾರ್ಟ್ಫೋನ್, ಸ್ಮಾರ್ಟ್ ಹೋಮ್ ಹೀಗೆ ಗೂಗಲ್ನ ವ್ಯಾಪ್ತಿ ನಮ್ಮ ತಂತ್ರಜ್ಞಾನ ಕ್ಷೇತ್ರದಲ್ಲಿ ಬಹಳವಾಗಿ ವ್ಯಾಪಿಸಿದೆ.
ಇಪ್ಪತ್ತೈದರ ಹರೆಯದ ಗೂಗಲ್ನಿಂದ ಮುಂದಿನ ವರ್ಷಗಳಲ್ಲಿ ಇನ್ನೆಷ್ಟು ಆವಿಷ್ಕಾರಗಳು ಆಗುತ್ತವೋ ಕಾದುನೋಡಬೇಕು. ಗೂಗಲ್ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಭಾರತ ಮೂಲದ ಸುಂದರ್ ಪಿಚೈ ಅವರು ಸಿಇಒ ಆಗಿರುವುದು ನಮ್ಮೆಲ್ಲಿರಿಗೂ ಅಚ್ಚರಿಯ ವಿಚಾರ
ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:10 am, Wed, 27 September 23