ಗೂಗಲ್ ತನ್ನ ಪ್ಲೇ ಸ್ಟೋರ್‌ನಲ್ಲಿ (Google Play Store) ಅಪ್ಲಿಕೇಶನ್ ಅನುಮತಿಗಳ ಲಿಸ್ಟ್ ಅನ್ನು ಮತ್ತೆ ಪರಿಚಯಿಸಲು ಮುಂದಾಗಿದೆ. ಗೂಗಲ್ ಈ ವರ್ಷದ ಆರಂಭದಲ್ಲಿ ಡೇಟಾ (data) ಸುರಕ್ಷತೆ ಲೇಬಲ್ ಎಂಬ ಆಯ್ಕೆಯನ್ನು ಪರಿಚಯಿಸಿತ್ತು. ಇದರ ಬೆನ್ನಲ್ಲೇ ಅಪ್ಲಿಕೇಶನ್ ಅನುಮತಿಗಳ ಲಿಸ್ಟ್ ಅನ್ನು ತೆಗೆದುಹಾಕಿತ್ತು. ಇದೀಗ ಪುನಃ ಈ ಆಯ್ಕೆಯನ್ನು ಪ್ಲೇ ಸ್ಟೋರ್‌ನಲ್ಲಿ ನೀಡಲು ಮುಂದಾಗಿದೆ. ಆದರೆ, ಕಂಪನಿ ಈ ಆಯ್ಕೆ ಯಾವಾಗ ಸಿಗಲಿದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ. ಇದು ಶೀಘ್ರದಲ್ಲೇ ಬರಲಿದೆ ಎಂದಷ್ಟೆ ಗೂಗಲ್ (Google) ತನ್ನ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.
ಆಂಡ್ರಾಯ್ಡ್ ಡೆವಲಪರ್‌ಗಳ ಪ್ರಕಾರ, ಗೂಗಲ್ ಈ ಆಯ್ಕೆಯನ್ನು ಪ್ಲೇ ಸ್ಟೋರ್‌ನಲ್ಲಿ ಡೇಟಾ ಸುರಕ್ಷತೆ ಲೇಬಲ್‌ಗಳ ಬದಲಿಗೆ ತಿಂಗಳ ನಂತರ ಪರಿಚಯಿಸಲಿದೆಯಂತೆ. ಡೇಟಾ ಸುರಕ್ಷತೆ ವಿಭಾಗವನ್ನು ಕಂಪನಿಯು ಕಳೆದ ಏಪ್ರಿಲ್‌ನಲ್ಲಿ ಪರಿಚಯಿಸಿತ್ತು. ಇದು ಬಳಕೆದಾರರಿಗೆ ತಮ್ಮ ಡೇಟಾವನ್ನು ಹೇಗೆ ಸಂಗ್ರಹಿಸುತ್ತದೆ, ಹಂಚಿಕೊಳ್ಳುತ್ತದೆ ಮತ್ತು ಸುರಕ್ಷಿತವಾಗಿರಿಸುತ್ತದೆ ಎಂಬುದರ ಕುರಿತು ಮಾಹಿತಿ ನೀಡುತ್ತದೆ.
ಇದರ ನಡುವೆ TechCrunch ನ ವರದಿಯ ಪ್ರಕಾರ, ಬಳಕೆದಾರರು ಇನ್ನೂ ತಮ್ಮ ಫೋನ್‌ನಲ್ಲಿನ ಅಪ್ಲಿಕೇಶನ್‌ಗಳ ಮೆನುಗೆ ಹೋಗಬಹುದು ಮತ್ತು ವೈಯಕ್ತಿಕ ಅಪ್ಲಿಕೇಶನ್‌ಗಳ ಅನುಮತಿಗಳನ್ನು ಪರಿಶೀಲಿಸಬಹುದು ಎಂದಿದೆ. ಆದರೆ ಇದು ಇನ್ನೂ ಗೂಗಲ್ ಅಪ್ಲಿಕೇಶನ್ನ ಸ್ಟೋರ್‌ನಲ್ಲಿ ಕಾಣಿಸಿಕೊಂಡಿಲ್ಲ. ಹೊಸ ಬದಲಾವಣೆಯು ಪ್ಲೇ ಸ್ಟೋರ್‌ನಿಂದ ನೇರವಾಗಿ ಡೇಟಾ ಸುರಕ್ಷತೆ ಲೇಬಲ್‌ಗಳು ಮತ್ತು ಅಪ್ಲಿಕೇಶನ್ ಅನುಮತಿಗಳನ್ನು ನೋಡಲು ಅವಕಾಶ ನೀಡುತ್ತದೆ ಎಂದು ವರದಿಯಾಗಿದೆ.
50 ಅಪಾಯಕಾರಿ ಆ್ಯಪ್ ಡಿಲೀಟ್:
ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಬಳಕೆದಾರರು ಉಪಯೋಗಿಸುವ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ನಕಲಿ ಆ್ಯಪ್ಗಳ ಹಾವಳಿ ಹೆಚ್ಚುತ್ತಿದೆ. ಈಗಾಗಲೇ ಅನೇಕ ಬಾರಿ ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ ಅಪಾಯಕಾರಿ ಆ್ಯಪ್ಗಳನ್ನು ಡಿಲೀಟ್ ಮಾಡಿದೆ. ಈಗ ಮತ್ತೆ ಕೆಲವೊಂದು ಅಪ್ಲಿಕೇಶನ್ಗಳಲ್ಲಿ ಗೂಗಲ್ ಈ ಮಾಲ್ವೇರ್ ಅನ್ನು ಪತ್ತೆಹಚ್ಚಿದ್ದು, ಇದನ್ನು ಉಪಯೋಗಿಸುತ್ತಿರುವರಿಗೆ ಎಚ್ಚರಿಕೆ ನೀಡಿದೆ. ಅಲ್ಲದೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಕಂಡುಬಂದಿರುವ ಹೊಸ 50 ಅಪಾಯಕಾರಿ ಅಪ್ಲಿಕೇಶನ್‌ಗಳ ಪಟ್ಟಿಯನ್ನು ಪರಿಶೀಲಿಸಿ ಅವುಗಳನ್ನು ನೀವು ಇನ್ಸ್ಟಾಲ್ ಮಾಡಿದ್ದರೆ ತಕ್ಷಣವೇ ಡಿಲೀಟ್ ಮಾಡುವಂತೆ ಸೂಚನೆ ನೀಡಿದೆ.
Zscaler ಈ ಬಗ್ಗೆ ಮಾಹಿತಿ ನೀಡಿದ್ದು ಜೋಕರ್, ಫೇಸ್ಸ್ಟೀಲರ್ ಹಾಗೂ ಕಾಪರ್ ಎಂಬ ಮೂರು ಮಾಲ್ವೆರ್ಗಳಿಂದ ಅಪಾಯ ಇದೆ ಎಂದು ಹೇಳಿದೆ. ಇದರಲ್ಲಿ ಹೆಚ್ಚಿನ ಆ್ಯಪ್ಗಳು ಜೋಕರ್ ಮಾಲ್ವೆರ್ ಮೂಲಕ ಕೆಲಸ ಮಾಡುತ್ತದಂತೆ. ಇದು ಬಳಕೆದಾರರ ಎಸ್ಎಮ್ಎಸ್ ಮಾಹಿತಿ, ಕಾಂಟೆಕ್ಟ್ ಲಿಸ್ಟ್, ನಿಮ್ಮ ಮೊಬೈಲ್ ಬಗೆಗಿನ ಮಾಹಿತಿ ಸೇರಿದಂತೆ ಅನೇಕ ವಿಚಾರವನ್ನು ಕದಿಯುತ್ತದೆ. ಇದೀಗ ಈ 50 ಆ್ಯಪ್ಗಳ ಬಗ್ಗೆ ಎಚ್ಚೆತ್ತುಕೊಂಡಿರುವ ಗೂಗಲ್ ಪ್ಲೇ ಸ್ಟೋರ್ ಅವುಗಳನ್ನು ಡಿಲೀಟ್ ಮಾಡಿವೆ.
Published On - 12:40 pm, Fri, 22 July 22