Huawei Watch Buds 2-in-1: ಸ್ಮಾರ್ಟ್​ವಾಚ್​ನಲ್ಲಿಯೇ ಲಭ್ಯವಾಗುತ್ತಿದೆ ಆಕರ್ಷಕ ಇಯರ್​ಬಡ್ಸ್!

|

Updated on: Feb 17, 2023 | 4:46 PM

ಸ್ಮಾರ್ಟ್​ವಾಚ್ ಮತ್ತು ಇಯರ್​​ಬಡ್ಸ್ ಗ್ಯಾಜೆಟ್ ಮಾರುಕಟ್ಟೆಯ ಈಗಿನ ಟ್ರೆಂಡ್. ಅದರಲ್ಲೂ ಯುವಜನತೆ, ಸ್ಟೈಲಿಶ್ ಆಗಿ ಕಾಣಬಯಸುವ ಜತೆಗೆ, ಫಿಟ್ನೆಸ್ ಕಾಳಜಿ, ಆರೋಗ್ಯ, ದೇಹದ ಸ್ಥಿತಿಗತಿಯನ್ನು ಸ್ಮಾರ್ಟ್​ ಆಗಿ ಟ್ರ್ಯಾಕ್ ಮಾಡಲು ಸ್ಮಾರ್ಟ್​ಗ್ಯಾಜೆಟ್​ ಬಳಸುತ್ತಾರೆ. ಉಳಿದಂತೆ, ಫೋನ್ ಕರೆ, ನೋಟಿಫಿಕೇಶನ್, ಟೈಮರ್, ರಿಮೈಂಡರ್ ಹೀಗೆ ಹತ್ತು ಹಲವು ಪ್ರಯೋಜನಗಳನ್ನು ಸ್ಮಾರ್ಟ್​ವಾಚ್ ನೀಡುತ್ತದೆ. ಈ ಬಾರಿ ಹುವೈ, ಸ್ಮಾರ್ಟ್​ವಾಚ್ ಜತೆಗೇ, ಇಯರ್​ಬಡ್ಸ್ ಕೂಡ ನೀಡಿದೆ.

Huawei Watch Buds 2-in-1: ಸ್ಮಾರ್ಟ್​ವಾಚ್​ನಲ್ಲಿಯೇ ಲಭ್ಯವಾಗುತ್ತಿದೆ ಆಕರ್ಷಕ ಇಯರ್​ಬಡ್ಸ್!
ಹುವೈ ವಾಚ್ ಬಡ್ಸ್ 2 ಇನ್ 1
Follow us on

ಟೆಕ್ ಲೋಕದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದು ಮಾಡುತ್ತಿರುವುದು ಸ್ಮಾರ್ಟ್​ವಾಚ್ ಮತ್ತು ಇಯರ್​ಬಡ್ಸ್. ಹೊಸ ವಿನ್ಯಾಸ ಮತ್ತು ಫೀಚರ್ ಸಹಿತ ಮಾರುಕಟ್ಟೆಗೆ ಬರುತ್ತಿರುವ ಅವುಗಳನ್ನು ಖರೀದಿಸಲು ಜನರು ಹೆಚ್ಚು ಉತ್ಸಾಹ ತೋರುತ್ತಿದ್ದಾರೆ. ಚೀನಾ ಮೂಲದ ಹುವೈ, ಇಂಗ್ಲೆಂಡ್​ನಲ್ಲಿ ಹುವೈ ವಾಚ್ ಬಡ್ಸ್ 2 ಇನ್ 1(Huawei Watch Buds 2 in 1) ಸ್ಮಾರ್ಟ್​ವಾಚ್ ಅನ್ನು ಬಿಡುಗಡೆ ಮಾಡಿದೆ. ಸ್ಮಾರ್ಟ್​ವಾಚ್ ಜತೆಗೇ, ಅದರಲ್ಲಿಯೇ ಇಯರ್​ಬಡ್ಸ್ ಇರುವ ಆಕರ್ಷಕ ವಿನ್ಯಾಸವನ್ನು ಹುವೈ ಪರಿಚಯಿಸಿದೆ. ವೃತ್ತಾಕಾರದ ವಿನ್ಯಾಸ ಮತ್ತು ಲೆದರ್ ಸ್ಟ್ರಾಪ್ ಹೊಸ ಹುವೈ ವಾಚ್ ಬಡ್ಸ್ ಸ್ಮಾರ್ಟ್​ವಾಚ್ ವಿಶೇಷತೆಯಾಗಿದೆ.

ಹುವೈ ವಾಚ್ ಬಡ್ಸ್ 2 ಇನ್ 1 ವಿಶೇಷತೆಗಳೇನು?

ಸ್ಮಾರ್ಟ್​ವಾಚ್ ಒಂದು, ಇಯರ್​ಬಡ್ಸ್ ಇನ್ನೊಂದು ಎಂದು ಪ್ರತ್ಯೇಕವಾಗಿ ಇನ್ನು ಒಯ್ಯಬೇಕಿಲ್ಲ. ಬದಲಿಗೆ, ಇಯರ್​ಬಡ್ಸ್ ಈಗ ಸ್ಮಾರ್ಟ್​ವಾಚ್​ನಲ್ಲಿಯೇ ಇರಲಿದೆ. ಅದಕ್ಕಾಗಿಯೇ ಹುವೈ, ಆಕರ್ಷಕ ವಿನ್ಯಾಸದ ವಾಚ್ ಬಡ್ಸ್ ಬಿಡುಗಡೆ ಮಾಡಿದೆ. ಅಂದರೆ, ಹುವೈ ಸ್ಮಾರ್ಟ್​​ವಾಚ್ (Huawei Smartwatch) ಜತೆಗೇ ಇಯರ್​ಬಡ್ಸ್​ ಇರಲಿದೆ. ಸ್ಮಾರ್ಟ್​ವಾಚ್ ವೃತ್ತಾಕಾರದ ಡಯಲ್ ಕೆಳಭಾಗದಲ್ಲಿ ಇಯರ್​ಬಡ್ಸ್ ಇರಿಸಲು ವ್ಯವಸ್ಥೆ ಇದೆ. ಮ್ಯಾಗ್ನೆಟ್ ಕ್ಯಾಪ್ ತೆರೆದಾಗ, ಅಲ್ಲಿ ಬಡ್ಸ್ ಇರಲಿದೆ. ಅವುಗಳನ್ನು ಬಳಸಿ, ಮತ್ತೆ ಅಲ್ಲಿಯೇ ಇರಿಸಿದರೆ, ಚಾರ್ಜ್ ಆಗಲಿದೆ.

1.43 ಇಂಚಿನ ಅಮೊಲೆಡ್ ಡಿಸ್​ಪ್ಲೇ ಇರುವ ಹುವೈ ಸ್ಮಾರ್ಟ್​ವಾಚ್​ನಲ್ಲಿ ಬ್ಲೂಟೂತ್ ಕಾಲಿಂಗ್ ವ್ಯವಸ್ಥೆ ಇದೆ. ಅದರ ಜತೆಗೇ, IP54 ರೇಟಿಂಗ್​ನ ವಾಟರ್ ಪ್ರೂಫ್ ಮತ್ತು ಡಸ್ಟ್ ರೆಸಿಸ್ಟ್ ವ್ಯವಸ್ಥೆ ಇದ್ದು, ಹೊರಗಡೆ ಯಾವುದೇ ಸಮಸ್ಯೆಯಿಲ್ಲದೇ ಬಳಸಬಹುದು ಎಂದು ಕಂಪನಿ ಹೇಳಿದೆ. ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ, 3 ದಿನ ಸ್ಮಾರ್ಟ್​ವಾಚ್ ಬ್ಯಾಟರಿ ಬಾಳಿಕೆ ಹಾಗೂ 4 ಗಂಟೆಯವರೆಗೆ ಇಯರ್​ಬಡ್ಸ್ ಬ್ಯಾಟರಿ ಬಾಳಿಕೆ ಬರುತ್ತದೆ. ಫಿಟ್ನೆಸ್ ಮತ್ತು ಆರೋಗ್ಯದ ಕಾಳಜಿ ವಹಿಸುವವರಿಗೆ ಹಾಗೂ ಇಯರ್​ಬಡ್ಸ್ ಕೂಡ ಜತೆಗೇ ಇರಬೇಕು ಎನ್ನುವವರಿಗೆ ಹುವೈ ವಾಚ್ ಬಡ್ಸ್ 2 ಇನ್ 1 ಸ್ಮಾರ್ಟ್​ವಾಚ್ ಉತ್ತಮ ಆಯ್ಕೆಯಾಗಿರಲಿದೆ.

ಹುವೈ ವಾಚ್ ಬಡ್ಸ್ 2 ಇನ್ 1 ಬೆಲೆ ಎಷ್ಟಿದೆ?

ನೂತನ ಸ್ಮಾರ್ಟ್​ವಾಚ್ ದರ ಇಂಗ್ಲೆಂಡ್ ಮಾರುಕಟ್ಟೆಯಲ್ಲಿ 449.99 ಪೌಂಡ್ ಇದೆ. ಭಾರತದ ಮಾರುಕಟ್ಟೆಗೆ ಹೋಲಿಸಿದರೆ, ಅಂದಾಜು ₹45,000 ದರವಿರಲಿದೆ. ಅಲ್ಲಿ ಈಗಾಗಲೇ ಪ್ರಿ-ಆರ್ಡರ್ ಆರಂಭವಾಗಿದ್ದು, ಮಾರ್ಚ್ 1ರಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಭಾರತದಲ್ಲಿ ಯಾವಾಗ ಬಿಡುಗಡೆ ಮತ್ತು ದರ ಎಷ್ಟಿರಲಿದೆ ಎನ್ನುವುದನ್ನು ಕಂಪನಿ ಬಹಿರಂಗಪಡಿಸಿಲ್ಲ.

Published On - 4:46 pm, Fri, 17 February 23