Android Phones: ಭಾರತದಲ್ಲಿ ಭಿನ್ನವಾಗಿರಲಿವೆ ಆ್ಯಂಡ್ರಾಯ್ಡ್ ಫೋನ್​ಗಳು; ಕಾರಣ ಇಲ್ಲಿದೆ

|

Updated on: Jan 26, 2023 | 5:15 PM

ಡಿಫಾಲ್ಟ್ ವೆಬ್ ಬ್ರೌಸರ್​ಗಳನ್ನು ಆಯ್ಕೆ ಮಾಡಲು ಬಳಕೆದಾರರಿಗೆ ಅವಕಾಶ, ಆ್ಯಪ್​ ಡೆವಲಪರ್​ಗಳಿಗೆ ಪಾವತಿ ಮಾಡಲು ಗೂಗಲ್ ಪಾವತಿ ವ್ಯವಸ್ಥೆಗೆ ಪರ್ಯಾಯವಾಗಿ ಬೇರೆ ಆಯ್ಕೆ ಬಳಸಲು ಅವಕಾಶ ನೀಡುವುದು ಪ್ರಮುಖ ಬದಲಾವಣೆಗಳಾಗಿರಲಿವೆ. ಉಳಿದ ಬದಲಾವಣೆಗಳ ಬಗ್ಗೆ ಇಲ್ಲಿದೆ ವಿವರ.

Android Phones: ಭಾರತದಲ್ಲಿ ಭಿನ್ನವಾಗಿರಲಿವೆ ಆ್ಯಂಡ್ರಾಯ್ಡ್ ಫೋನ್​ಗಳು; ಕಾರಣ ಇಲ್ಲಿದೆ
ಗೂಗಲ್
Follow us on

ನವದೆಹಲಿ: ಗೂಗಲ್​ನ (Google) ಭಾರತ ಘಟಕವು ಶೀಘ್ರದಲ್ಲೇ ಆ್ಯಂಡ್ರಾಯ್ಡ್ ಮೊಬೈಲ್ ಆಪರೇಟಿಂಗ್ ಸಿಸ್ಟಂ ಮತ್ತು ಗೂಗಲ್ ಪ್ಲೇ ಆ್ಯಪ್​ ಸ್ಟೋರ್​​ನಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಿದೆ. ಪರಿಣಾಮವಾಗಿ ಆ್ಯಂಡ್ರಾಯ್ಡ್​ ಫೋನ್​ಗಳಲ್ಲಿ ತುಸು ಭಿನ್ನತೆ ಕಂಡುಬರಲಿದೆ. ಸರ್ಕಾರದ ಆದೇಶ, ನಿಯಮಗಳನ್ನು ಪಾಲಿಸುವುದಾಗಿ ಇತ್ತೀಚೆಗೆ ಸುಪ್ರೀಂ ಕೋರ್ಟ್​ಗೆ ಗೂಗಲ್ ತಿಳಿಸಿತ್ತು. ಇದರ ಬೆನ್ನಲ್ಲೇ ಬದಲಾವಣೆಗೆ ಮುಂದಾಗಿದೆ ಎನ್ನಲಾಗಿದೆ. 2022ರಲ್ಲಿ ಭಾರತೀಯ ಸ್ಪರ್ಧಾ ಆಯೋಗವು (CCI) ಗೂಗಲ್​ಗೆ ಭಾರೀ ದಂಡ ವಿಧಿಸಿತ್ತು. ಆ್ಯಂಡ್ರಾಯ್ಡ್ ಆ್ಯಪ್​ಗಳಿಗೆ ಸಂಬಂಧಿಸಿ ಸ್ಪರ್ಧಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ದಂಡ ವಿಧಿಸಲಾಗಿತ್ತಲ್ಲದೆ, ಲೋಪಗಳನ್ನು ಸರಿಪಡಿಸುವಂತೆ ಸೂಚಿಸಲಾಗಿತ್ತು. ಇದರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಗೂಗಲ್​ಗೆ ಅಲ್ಲಿ ಹಿನ್ನಡೆಯಾಗಿತ್ತು. ಭಾರತವು ಆ್ಯಂಡ್ರಾಯ್ಡ್ ಸ್ಮಾರ್ಟ್​​ಫೋನ್ ಮಾರುಕಟ್ಟೆಯಲ್ಲಿ ಶೇ 97ರಷ್ಟು ಪಾಲು ಹೊಂದಿದ್ದು, ಇತ್ತೀಚಿನ ನಿಯಮದಿಂದಾಗಿ ಆ್ಯಂಡ್ರಾಯ್ಡ್ ಆ್ಯಪ್ ಡೆವಲಪರ್​ಗಳಿಗೆ ಪ್ರಯೋಜನವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಡಿಫಾಲ್ಟ್ ವೆಬ್ ಬ್ರೌಸರ್​ಗಳನ್ನು ಆಯ್ಕೆ ಮಾಡಲು ಬಳಕೆದಾರರಿಗೆ ಅವಕಾಶ, ಆ್ಯಪ್​ ಡೆವಲಪರ್​ಗಳಿಗೆ ಪಾವತಿ ಮಾಡಲು ಗೂಗಲ್ ಪಾವತಿ ವ್ಯವಸ್ಥೆಗೆ ಪರ್ಯಾಯವಾಗಿ ಬೇರೆ ಆಯ್ಕೆ ಬಳಸಲು ಅವಕಾಶ ನೀಡುವುದು ಪ್ರಮುಖ ಬದಲಾವಣೆಗಳಾಗಿರಲಿವೆ. ಸಿಸಿಐ ನಿರ್ದೇಶನಗಳಿಗೆ ಅನುಗುಣವಾಗಿ ನಡೆದುಕೊಳ್ಳಲು ಬದ್ಧವಾಗಿದ್ದೇವೆ. ಆ ನಿಟ್ಟಿನಲ್ಲಿ ಬದಲಾವಣೆಗಳನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ಪತ್ರಿಕಾ ಪ್ರಕಟಣೆ ಮೂಲಕ ಗೂಗಲ್ ಇತ್ತೀಚೆಗೆ ತಿಳಿಸಿತ್ತು.

ಒರಿಜಿನಲ್ ಈಕ್ವಿಪ್​ಮೆಂಟ್ ತಯಾರಕರು ಈಗ ವೈಯಕ್ತಿಕ ಗೂಗಲ್ ಆ್ಯಪ್​ಗಳ ಪ್ರಿ ಇನ್​ಸ್ಟಾಲೇಷನ್​ಗೆ ಪರವಾನಗಿ ನೀಡಬಹುದಾಗಿದೆ. ಈ ಹಿಂದೆ ಗೂಗಲ್​ ಅಭಿವೃದ್ಧಿಪಡಿಸಿದ ಆ್ಯಪ್​ಗಳಾದ ಯೂಟ್ಯೂಬ್, ಮೀಟ್, ಜಿಮೇಲ್​ ಅನ್ನು ಪ್ರಿ ಇನ್​ಸ್ಟಾಲ್​ ಮಾಡಬೇಕೆಂದು ಆ್ಯಂಡ್ರಾಯ್ಡ್ ಪರವಾನಗಿ ಒಪ್ಪಂದದಲ್ಲಿ ಹೇಳಲಾಗಿತ್ತು.

ಡಿಫಾಲ್ಟ್ ಸರ್ಚ್ ಎಂಜಿನ್, ಹೆಚ್ಚುವರಿ ಬಿಲ್ಲಿಂಗ್​ ಆಯ್ಕೆಗೆ ಅವಕಾಶ

ಭಾರತದ ಬಳಕೆದಾರರಿಗೆ ಇನ್ನು ಮುಂದೆ ತಮಗೆ ಬೇಕಾದ ಡಿಫಾಲ್ಟ್ ಸರ್ಚ್ ಎಂಜಿನ್​ ಅನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ದೊರೆಯಲಿದೆ. ಚಾಯ್ಸ್ ಸ್ಕ್ರೀನ್ ಮೂಲಕ ಈ ಆಯ್ಕೆ ಮಾಡಬಹುದಾಗಿದ್ದು, ಬಳಕೆದಾರರು ಹೊಸ ಆ್ಯಂಡ್ರಾಯ್ಡ್ ಸ್ಮಾರ್ಟ್​​ಫೋನ್ ಅಥವಾ ಟ್ಯಾಬ್ಲೆಟ್​​ ಅನ್ನು ಸೆಟಪ್ ಮಾಡುವಾಗ ಆಯ್ಕೆ ದೊರೆಯಲಿದೆ. ಮೈಕ್ರೋಸಾಫ್ಟ್ ಬಿಂಗ್ ಅಥವಾ ಡಕ್​ಡಕ್​​​ಗೋದಂಥ ಹೆಚ್ಚು ಸರ್ಚ್ ಎಂಜಿನ್​ಗಳನ್ನು ಹೊಂದಲೂ ಬಳಕೆದಾರರಿಗೆ ಅವಕಾಶ ದೊರೆಯಲಿದೆ. ಹೆಚ್ಚಿನ ಬಿಲ್ಲಿಂಗ್ ಆಯ್ಕೆಗಳನ್ನೂ ಗ್ರಾಹಕರಿಗೆ ನೀಡುವುದಾಗಿಯೂ ಗೂಗಲ್​ ಹೇಳಿದೆ.

ಇದನ್ನೂ ಓದಿ: Google: ಗೂಗಲ್​ಗೆ ಮತ್ತೆ ಹಿನ್ನಡೆ; ಶೇ 10 ದಂಡ ಪಾವತಿಸಲು ಎನ್​ಸಿಎಲ್​ಎಟಿ ಸೂಚನೆ

ಗೂಗಲ್​ ಪ್ಲೇ ಹೊರತುಪಡಿಸಿ ವಿವಿಧ ಮೂಲಗಳಿಂದ ಆ್ಯಪ್​ಗಳನ್ನು ಡೌನ್​ಲೋಡ್ ಮಾಡಿಕೊಳ್ಳಲೂ ಅವಕಾಶ ದೊರೆಯಲಿದೆ. ಆದರೆ, ವೈರಸ್ ದಾಳಿಯ ಅಪಾಯದ ಬಗ್ಗೆ ಎಚ್ಚರಿಕೆ ವಹಿಸಬೇಕಾಗಲಿದೆ. ಮುಂದಿನ ಕೆಲವೇ ತಿಂಗಳುಗಳಲ್ಲಿ ಬದಲಾವಣೆಗಳು ಜಾರಿಗೆ ಬರಲಿವೆ ಎಂದು ಗೂಗಲ್ ಹೇಳಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:35 pm, Thu, 26 January 23