AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Google: ಗೂಗಲ್​ಗೆ ಮತ್ತೆ ಹಿನ್ನಡೆ; ಶೇ 10 ದಂಡ ಪಾವತಿಸಲು ಎನ್​ಸಿಎಲ್​ಎಟಿ ಸೂಚನೆ

ಗೂಗಲ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಕೈಗೆತ್ತಿಕೊಂಡ ದ್ವಿಸದ್ಯ ಪೀಠವು ಭಾರತೀಯ ಸ್ಪರ್ಧಾ ಆಯೋಗದ ಕಾರ್ಯಾಚರಣೆಗಳಿಗೆ ತಕ್ಷಣವೇ ತಡೆ ನೀಡಬೇಕೆಂಬ ಮನವಿಯನ್ನು ತಿರಸ್ಕರಿಸಿದೆ. ಪ್ರತಿವಾದಿಗಳ ವಾದ ಆಲಿಸಿದ ನಂತರ ಆದೇಶ ನೀಡುವುದಾಗಿ ಹೇಳಿದೆ.

Google: ಗೂಗಲ್​ಗೆ ಮತ್ತೆ ಹಿನ್ನಡೆ; ಶೇ 10 ದಂಡ ಪಾವತಿಸಲು ಎನ್​ಸಿಎಲ್​ಎಟಿ ಸೂಚನೆ
ಗೂಗಲ್
TV9 Web
| Updated By: Ganapathi Sharma|

Updated on: Jan 04, 2023 | 1:46 PM

Share

ನವದೆಹಲಿ: ಸ್ಪರ್ಧಾ ವಿರೋಧಿ ಅಭ್ಯಾಸಗಳಿಗಾಗಿ ಭಾರಿ ಮೊತ್ತದ ದಂಡ ವಿಧಿಸಿದ್ದ ಭಾರತೀಯ ಸ್ಪರ್ಧಾ ಆಯೋಗದ (CCI) ತೀರ್ಪನ್ನು ಪ್ರಶ್ನಿಸಿ ಗೂಗಲ್ (Google) ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ವಿಚಾರಣೆಗೆ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (NCLAT) ಸಮ್ಮತಿಸಿದೆ. ಆದರೆ, ಭಾರತೀಯ ಸ್ಪರ್ಧಾ ಆಯೋಗ ವಿಧಿಸಿದ್ದ 1,337 ಕೋಟಿ ರೂ. ದಂಡದ ಶೇಕಡಾ 10ರಷ್ಟನ್ನು ಪಾವತಿಸುವಂತೆ ನಿರ್ದೇಶನ ನೀಡಿದೆ. ಗೂಗಲ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಕೈಗೆತ್ತಿಕೊಂಡ ದ್ವಿಸದ್ಯ ಪೀಠವು ಭಾರತೀಯ ಸ್ಪರ್ಧಾ ಆಯೋಗದ ಕಾರ್ಯಾಚರಣೆಗಳಿಗೆ ತಕ್ಷಣವೇ ತಡೆ ನೀಡಬೇಕೆಂಬ ಮನವಿಯನ್ನು ತಿರಸ್ಕರಿಸಿದೆ. ಪ್ರತಿವಾದಿಗಳ ವಾದ ಆಲಿಸಿದ ನಂತರ ಆದೇಶ ನೀಡುವುದಾಗಿ ಹೇಳಿದೆ. ಈ ವಿಚಾರವಾಗಿ ಭಾರತೀಯ ಸ್ಪರ್ಧಾ ಆಯೋಗಕ್ಕೆ ನೋಟಿಸ್ ನೀಡಿರುವ ಎನ್​ಸಿಎಲ್​ಎಟಿ, ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರವರಿ 13ಕ್ಕೆ ನಿಗದಿಪಡಿಸಿದೆ.

ಆ್ಯಂಡ್ರಾಯ್ಡ್ ಮೊಬೈಲ್ ಆ್ಯಪ್​ಗಳಿಗೆ ಸಂಬಂಧಿಸಿದ ಸ್ಪರ್ಧಾ ವಿರೋಧಿ ಅಭ್ಯಾಸಗಳಿಗಾಗಿ ಅಲ್ಫಾಬೆಟ್ ಇಂಕ್‌ನ ಗೂಗಲ್‌ಗೆ ಸ್ಪರ್ಧಾ ಆಯೋಗವು 2022ರ ಅಕ್ಟೋಬರ್​ನಲ್ಲಿ 1,337 ಕೋಟಿ ರೂ. ದಂಡ ವಿಧಿಸಿತ್ತು. ದಂಡ ವಿಧಿಸಿದ ಕ್ರಮಕ್ಕೆ ಗೂಗಲ್​ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಇದರಿಂದ ಭಾರತದ ಗ್ರಾಹಕರು ಮತ್ತು ಉದ್ದಿಮೆಗಳಿಗೆ ದೊಡ್ಡ ಹಿನ್ನಡೆಯಾಗಲಿದೆ ಎಂದು ಕಂಪನಿ ಹೇಳಿತ್ತು. ಸ್ಪರ್ಧಾ ಆಯೋಗದ ನಿರ್ಧಾರವನ್ನು ಪರಿಶೀಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಗೂಗಲ್ ವಕ್ತಾರರು ತಿಳಿಸಿದ್ದರು.

ಇದನ್ನೂ ಓದಿ: ಸ್ಪರ್ಧಾತ್ಮಕ ವಿರೋಧಿ ಅಭ್ಯಾಸಗಳಿಗಾಗಿ ಗೂಗಲ್​​ಗೆ ₹ 1,337 ಕೋಟಿ ದಂಡ ವಿಧಿಸಿದ ಸಿಸಿಐ

ದಂಡ ವಿಧಿಸಿರುವುದು ಭಾರತೀಯರಿಗೆ ಹಿನ್ನಡೆ ಉಂಟು ಮಾಡಲಿದೆ. ದಂಡದ ಪರಿಣಾಮವಾಗಿ ಆ್ಯಂಡ್ರಾಯ್ಡ್‌ನ ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಸುರಕ್ಷತಾ ಅಪಾಯಗಳು ಎದುರಾಗಲಿವೆ. ಭಾರತೀಯರಿಗೆ ಮತ್ತು ಭಾರತದ ಉದ್ದಿಮೆಗಳಿಗೆ ಮೊಬೈಲ್​ಗಳ ಮೇಲಿನ ಖರ್ಚೂ ಹೆಚ್ಚಾಗಲಿದೆ ಎಂದು ಗೂಗಲ್ ಹೇಳಿತ್ತು. ನಂತರ ಸ್ಪರ್ಧಾ ಆಯೋಗದ ಆದೇಶವನ್ನು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಪ್ರಶ್ನಿಸಿದ್ದ ಗೂಗಲ್, ದಂಡ ವಿಧಿಸಿರುವುದಕ್ಕೆ ಮಧ್ಯಂತರ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿತ್ತು. ಆದರೆ, ಈ ಮನವಿ ತಿರಸ್ಕೃತಗೊಂಡಿದೆ.

ಮರಳಿ ದಂಡ ವಿಧಿಸಿದ್ದ ಸಿಸಿಐ

1,337 ಕೋಟಿ ರೂ. ದಂಡ ವಿಧಿಸಿದ ಕೆಲವೇ ದಿನಗಳಲ್ಲಿ ಅಂಥದ್ದೇ ಕಾರಣಕ್ಕಾಗಿ ಗೂಗಲ್​ಗೆ ಸಿಸಿಐ 936.44 ಕೋಟಿ ರೂ. ದಂಡ ವಿಧಿಸಿತ್ತು. ಜತೆಗೆ, ನ್ಯಾಯೋಚಿತವಲ್ಲದ ವ್ಯಾಪಾರದ ಅಭ್ಯಾಸವನ್ನು ತಕ್ಷಣವೇ ನಿಲ್ಲಿಸುವಂತೆ ಸೂಚಿಸಿತ್ತು. ಸ್ಪರ್ಧಾ ವಿರೋಧಿ ಅಭ್ಯಾಸಗಳಿಗಾಗಿ ಗೂಗಲ್ ವಿರುದ್ಧ ಕೇಳಿಬಂದಿದ್ದ ದೂರುಗಳಿಗೆ ಸಂಬಂಧಿಸಿ 2020ರ ಕೊನೆಯಲ್ಲಿ ಸಿಸಿಐ ತನಿಖೆ ಆರಂಭಿಸಿತ್ತು. ಪ್ಲೇಸ್ಟೋರ್​ನಲ್ಲಿ ಪಾವತಿ ಮಾಡಿದ ಆ್ಯಪ್​ಗಳಿಗಾಗಿ ಗೂಗಲ್​ ತನ್ನದೇ ಆದ ಬಿಲ್ಲಿಂಗ್ ವ್ಯವಸ್ಥೆ ಅನುಸರಿಸುವುದು ಕಾನೂನುಸಮ್ಮತವಲ್ಲದ ನಡವಳಿಕೆ ಎಂದು ಸಿಸಿಐ ಹೇಳಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ