ಇಂದು ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಸ್ಮಾರ್ಟ್ಫೋನ್ಗಳು ಸಿಗುತ್ತಿರುವ ಕಾರಣ ಇದರ ಬಳಕೆ ಕೂಡ ಹೆಚ್ಚಾಗಿದೆ. ಮಕ್ಕಳಿಂದ ಹಿಡಿದು ವಯಸ್ಸಾದವರ ಕೈಯಲ್ಲೂ ಸ್ಮಾರ್ಟ್ಫೋನ್ಗಳು ಇವೆ. ಹಲವರು ಇದಕ್ಕೇ ಅಡಿಕ್ಟ್ ಆಗಿದ್ದಾರೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಸಾಮಾನ್ಯ ವ್ಯಕ್ತಿಯು ತಮ್ಮ ಸ್ಮಾರ್ಟ್‌ಫೋನ್ ಬಳಕೆಗೆ ಪ್ರತಿದಿನ ಸುಮಾರು 3 ಗಂಟೆ 15 ನಿಮಿಷಗಳನ್ನು ಮೀಸಲಿಡುತ್ತಾರೆ. ಇದಲ್ಲದೆ, ಸುಮಾರು ಶೇ. 20 ರಷ್ಟು ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್ ಜೊತೆಗೆ ಪ್ರತಿ ದಿನ ಸರಾಸರಿ 4-5 ಗಂಟೆಗಳಿಗಿಂತ ಹೆಚ್ಚು ಸಮಯವನ್ನು ಕಳೆಯುತ್ತಾರೆ. ಕುತೂಹಲಕಾರಿಯಾಗಿ, ಜನರು ವಾರಾಂತ್ಯಕ್ಕಿಂತ ವಾರದ ದಿನಗಳಲ್ಲಿ ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಹೆಚ್ಚು ಬಳಸುತ್ತಾರಂತೆ. ಅವರು ತಮ್ಮ ಫೋನ್‌ಗಳನ್ನು ದಿನಕ್ಕೆ ಸುಮಾರು 58 ಬಾರಿ ನೋಡುತ್ತಾರೆ ಎಂದು ಅಂಕಿಅಂಶಗಳು ಹೇಳುತ್ತದೆ.
ಹಾಗಂತ ಸ್ಮಾರ್ಟ್‌ಫೋನ್ ಅನ್ನು ಅತಿ ಹೆಚ್ಚು ಬಳಸುವ ದೇಶದಲ್ಲಿ ಭಾರತ ಮುಂದಿಲ್ಲ. ಬದಲಾಗಿ ಫಿಲಿಪೈನ್ಸ್ 5 ಗಂಟೆ 47 ನಿಮಿಷಗಳ ಕಾಲ ಅತಿ ಹೆಚ್ಚು ಸರಾಸರಿ ದೈನಂದಿನ ಸ್ಮಾರ್ಟ್‌ಫೋನ್ ಬಳಕೆಯಲ್ಲಿ ಮುಂದಿದೆ. ಜಪಾನ್ ದಿನಕ್ಕೆ 1 ಗಂಟೆ 29 ನಿಮಿಷಗಳಷ್ಟು ಕಡಿಮೆ ಸರಾಸರಿಯನ್ನು ಹೊಂದಿದೆ. ಏತನ್ಮಧ್ಯೆ, ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಉಪಯೋಗಿಸುವ ಸರಾಸರಿ ಸಮಯ 4 ಗಂಟೆ 5 ನಿಮಿಷಗಳು.
$1 ಟ್ರಿಲಿಯನ್‌ಗಿಂತಲೂ ಹೆಚ್ಚು ಮೌಲ್ಯದ ಜಾಗತಿಕ ಮೊಬೈಲ್ ಉದ್ಯಮವು ವರ್ಷದಿಂದ ವರ್ಷಕ್ಕೆ ನಿರಂತರ ಬೆಳವಣಿಗೆ ಕಾಣುತ್ತಲೇ ಇದೆ. 2016 ರಿಂದ, ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆಯು ಸ್ಥಿರವಾಗಿ ಹೆಚ್ಚುತ್ತಿದೆ ಮತ್ತು ಕನಿಷ್ಠ ಮುಂದಿನ ಐದು ವರ್ಷಗಳವರೆಗೆ ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆ ಏರುತ್ತಲೇ ಇರುತ್ತದಂತೆ. 2016 ರಲ್ಲಿ, ಪ್ರಪಂಚವು ಸುಮಾರು 3.67 ಬಿಲಿಯನ್ ಸ್ಮಾರ್ಟ್‌ಫೋನ್ ಚಂದಾದಾರಿಕೆಗಳನ್ನು ಕಂಡಿತು. ಈ ಅಂಕಿ ಅಂಶವು ವಾರ್ಷಿಕವಾಗಿ 300 ಮಿಲಿಯನ್‌ನಿಂದ 800 ಮಿಲಿಯನ್‌ಗಳಷ್ಟು ಹೆಚ್ಚಳವನ್ನು ಕಂಡಿದೆ. ಇದು 2022 ರಲ್ಲಿ ಅಂದಾಜು 6.57 ಶತಕೋಟಿಯನ್ನು ತಲುಪಿತ್ತು. 2027 ರ ವೇಳೆಗೆ ಸ್ಮಾರ್ಟ್‌ಫೋನ್ ಉಪಯೋಗಿಸುವವ ಸಂಖ್ಯೆ ಸುಮಾರು 7.69 ಶತಕೋಟಿಯಷ್ಟು ತಲುಪಲಿದೆ.
ಭಾರತದಲ್ಲಿನ ಸ್ಮಾರ್ಟ್‌ಫೋನ್ ವಿಚಾರಕ್ಕೆ ಬಂದರೆ, ಇಲ್ಲಿನ ಮಾರುಕಟ್ಟೆಯು 600 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿದೆ. ಇದರಲ್ಲಿ ಅತಿ ಹೆಚ್ಚು ಬಳಕೆದಾರರು ಯುವಕರೇ ಆಗಿದ್ದಾರೆ. ಮೊಬೈಲ್ ಉಪಯೋಗಿಸುವವರಲ್ಲಿ ಶೇ. 53 ರಷ್ಟು ಮಂದಿ 18 ರಿಂದ 24 ವರ್ಷ ವಯಸ್ಸಿನವರಾಗಿದ್ದಾರೆ.
ನಮ್ಮಲ್ಲಿ ಬಹಳಷ್ಟು ಜನರಿಗೆ ಒಂದು ಅಭ್ಯಾಸವಿದೆ. ಬೆಳಗ್ಗೆ ಎದ್ದಾಗ ಮಾಡುವ ಮೊದಲ ಕೆಲಸ ಫೋನ್‌ಗಳನ್ನು ಪರಿಶೀಲಿಸುವುದು. ಮತ್ತು ಮಲಗುವ ಮೊದಲು ಮಾಡುವ ಕೊನೆಯ ಕೆಲಸ ಕೂಡ ಸ್ಮಾರ್ಟ್‌ಫೋನ್ ನೋಡುವುದು. ಇದು ಒಂದು ಕಾಯಿಲೆ ಎಂದರೆ ನಂಬಲೇಬೇಕು. ಇದು ನಮ್ಮ ಮೆದುಳಿನಲ್ಲಿರುವ ರಾಸಾಯನಿಕಗಳಿಂದ ನಿಯಂತ್ರಿಸಲ್ಪಡುವ ನಿರಂತರ ಪ್ರಚೋದನೆಯಾಗಿದೆ. ಈ ಹಾರ್ಮೋನ್ ಹೆಸರು ಡೋಪಮೈನ್.
ಸ್ಮಾರ್ಟ್‌ಫೋನ್ ಅನ್ನು ಪದೇಪದೇ ನೋಡುವಂತೆ ನಮ್ಮನ್ನು ಪ್ರಚೋದಿಸುವುದು ಒಂದು ರಾಸಾಯನಿಕ ಡೋಪಮೈನ್. ಇದನ್ನು ‘ಫೀಲ್-ಗುಡ್’ ರಾಸಾಯನಿಕ ಎಂದು ಕರೆಯಲಾಗುತ್ತದೆ. ಏಕೆಂದರೆ ಇದು ಮೆದುಳಿನ ಪ್ರತಿಫಲ ವ್ಯವಸ್ಥೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಂದರೆ, ಇದು ನಮ್ಮನ್ನು ಖುಷಿ ಪಡಿಸಲು ಪ್ರಚೋದಿಸುತ್ತದೆ. ನಮ್ಮ ಮೆದುಳಿನಲ್ಲಿರುವ ಡೋಪಮೈನ್ ಆನಂದಿಸಬಹುದಾದ ಯಾವುದನ್ನಾದರೂ ನಿರೀಕ್ಷಿಸುತ್ತಾ ಇರುತ್ತದೆ. ಈ ನಿರೀಕ್ಷೆಯೇ ಫೋನ್‌ಗಳನ್ನು ಪದೇಪದೇ ಪರಿಶೀಲಿಸಲು ನಮ್ಮನ್ನು ಪ್ರೇರೇಪಿಸುತ್ತದೆ. ಈ ಪ್ರಚೋದನೆಯನ್ನು ಸಕಾರಗೊಳಿಸಲು ಮೊಬೈಲ್ ಗೇಮ್ಸ್ ಮತ್ತು ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳನ್ನು ರಚಿಸಲಾಗಿದೆ.
ಈ ಬಗ್ಗೆ ಟಿ9 ಕನ್ನಡ ಪ್ರೀಮಿಯಂ ನ್ಯೂಸ್ ಆ್ಯಪ್ಗೆ ಮಾಹಿತಿ ನೀಡಿದ ವೈದ್ಯೆ ಡಾ. ಸುಮಾ ಸಿ, ”ಡಿಜಿಟಲ್ ಮಾಧ್ಯಮವು ನಮ್ಮ ಮೆದುಳಿನಲ್ಲಿ ಡ್ರಗ್ಸ್ ಅಥವಾ ಆಲ್ಕೋಹಾಲ್ ಬೇಕು ಎಂದು ಹೇಳುವ ಅದೇ ಪ್ರದೇಶವನ್ನು ಪ್ರಚೋದಿಸುತ್ತಿರುತ್ತದೆ. ಇದು ಡೋಪಮೈನ್ ಅನ್ನು ಬಿಡುಗಡೆ ಮಾಡುತ್ತದೆ. ನಿಯಮಿತ ಬಳಕೆಯಿಂದ, ನಮ್ಮ ಮಿದುಳುಗಳು ಡೋಪಮೈನ್ ಚಟುವಟಿಕೆಯನ್ನು ಕಡಿಮೆ ಮಾಡುತ್ತದೆ. ಅಂದರೆ ಡೋಪಮೈನ್ ಕುಗ್ಗುತ್ತಾ ಬಂದು ಈರೀತಿ ಸಂಭವಿಸಬಹುದು. ಇದೇ ರೀತಿ ಮುಂದುವರೆದರೆ ನಮ್ಮ ಮೆದುಳುಗಳು ಸಾಕಷ್ಟು ಡೋಪಮೈನ್ ಇಲ್ಲದ ಸ್ಥಿತಿಗೆ ಬರುತ್ತದೆ. ಆಗ ಖಿನ್ನತೆ, ಆತಂಕ, ನಿದ್ರೆಯ ತೊಂದರೆ, ಕಿರಿಕಿರಿ ಮತ್ತು ಅತಿಯಾದ ಆಸೆಗಳ ಭಾವನೆಗಳಿಗೆ ಕಾರಣವಾಗುತ್ತದೆ. ಇದು ಸಂಭವಿಸಿದಾಗ, ಡಿಜಿಟಲ್ ಮಾಧ್ಯಮವನ್ನು ಬಳಸಲು ಪ್ರಾರಂಭಿಸುತ್ತೇವೆ,” ಎಂದು ತಿಳಿಸಿದ್ದಾರೆ.
ಅತಿಯಾದ ಸ್ಮಾರ್ಟ್‌ಫೋನ್ ಅಥವಾ ಸಾಮಾಜಿಕ ಮಾಧ್ಯಮ ಬಳಕೆಯನ್ನು ಮಾದಕ ವ್ಯಸನಗಳಂತೆ ಗಂಭೀರವಾಗಿ ಪರಿಗಣಿಸಬೇಕೆ? ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಕೆಲವು ಜನರು ಅವುಗಳನ್ನು ಮಾದಕ ವ್ಯಸನಕ್ಕೆ ಹೋಲಿಸಬಾರದು ಎಂದು ವಾದಿಸುತ್ತಾರೆ. ಏಕೆಂದರೆ ಡಿಜಿಟಲ್ ಮಾಧ್ಯಮವನ್ನು ಬಳಸುವುದರಿಂದ ಹೆಚ್ಚು ಡೋಪಮೈನ್ ಬಿಡುಗಡೆಯಾಗುತ್ತದೆ ನಿಜ. ಆದರೆ, ಇದು ಕೊಕೇನ್ ಅಥವಾ ಮೆಥಾಂಫೆಟಮೈನ್‌ಗಳಂತಹ ಔಷಧಿಗಳ ಬಿಡುಗಡೆಗಿಂತ ಕಡಿಮೆಯಾಗಿದೆ ಎನ್ನುತ್ತಾರೆ.
ಕೊಕೇನ್ ಮತ್ತು ಮೆಥಾಂಫೆಟಮೈನ್‌ಗಳು ಶಕ್ತಿಯುತವಾದ, ವ್ಯಸನಕಾರಿ ಉತ್ತೇಜಕ ಔಷಧಿಗಳಾಗಿದ್ದು, ಮೆದುಳಿನಲ್ಲಿ ಡೋಪಮೈನ್ ಮಟ್ಟವನ್ನು ಗಣನೀಯವಾಗಿ ಹೆಚ್ಚಿಸುತ್ತವೆ, ಇದು ಅತಿಯಾದ ಯೂಫೋರಿಯಾ ಅಥವಾ ಸಂತೋಷ ಮತ್ತು ವ್ಯಸನದ ಹೆಚ್ಚಿನ ಅಪಾಯಕ್ಕೆ ಕಾರಣವಾಗುತ್ತದೆ.
ಅತಿಯಾದ ಸಾಮಾಜಿಕ ಮಾಧ್ಯಮ ಬಳಕೆಯನ್ನು ಅಧ್ಯಯನ ಮಾಡುವ ತಜ್ಞರ ಪ್ರಕಾರ, ಜನರು ಕೆಲ ಸಮಯ ಡಿಜಿಟಲ್ ತಾಣದಿಂದ ಬ್ರೇಕ್ ತೆಗೆದುಕೊಳ್ಳುವುದು ಪ್ರಯೋಜನಕಾರಿ ಎಂದು ಹೇಳುತ್ತಾರೆ. ಈ ಬಗ್ಗೆ ಡಾ. ಸುಮಾ ಸಿ ಅವರು ಮಾತನಾಡಿದ್ದು, ಅವರ ಹೇಳಿಕೆ ಇಲ್ಲಿದೆ.
“ಸಾಮಾಜಿಕ ಮಾಧ್ಯಮದಿಂದ ವಿರಾಮ ತೆಗೆದುಕೊಳ್ಳುವುದನ್ನು ನಾನು ನಿಜವಾಗಿಯೂ ಬೆಂಬಲಿಸುತ್ತೇನೆ. ಇದು ವಾರಾಂತ್ಯದಲ್ಲಿ ನಮ್ಮ ಅಭ್ಯಾಸಗಳನ್ನು ಬದಲಾಯಿಸಲು ಸಹಾಯ ಮಾಡುತ್ತದೆ. ಇದರಿಂದ ನಿಯಮಿತ ಸಾಮಾಜಿಕ ಮಾಧ್ಯಮ ಬಳಕೆಯನ್ನು ಕಡಿಮೆ ಮಾಡಬಹುದು. ನನ್ನ ಅನುಭವದ ಪ್ರಕಾರ, ಸಾಮಾಜಿಕ ಮಾಧ್ಯಮದಿಂದ ಹೊರಬಂದು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಮಯ ಕಳೆಯಬೇಕು. ಇದು ನೈಜ ಜಗತ್ತಿನಲ್ಲಿ ಧನಾತ್ಮಕ ಭಾವನೆಗಳನ್ನು ಉಂಟುಮಾಡುತ್ತದೆ. ಸಂಬಂಧಗಳನ್ನು ಬಲಪಡಿಸುತ್ತದೆ ಮತ್ತು ಒಗ್ಗಟ್ಟಿನ ಭಾವನೆಗಳನ್ನು ಹೆಚ್ಚಿಸುತ್ತದೆ. ಕಾಫಿಗಾಗಿ ಸ್ನೇಹಿತರನ್ನು ಭೇಟಿ ಮಾಡುವುದು ಮೆಸೆಂಜರ್ ಮೂಲಕ ಅವರೊಂದಿಗೆ ಚಾಟ್ ಮಾಡುವುದಕ್ಕಿಂತ ಹೆಚ್ಚು ತೃಪ್ತಿಕರವಾಗಿರುತ್ತದೆ,” ಎಂದು ಡಾ. ಸುಮಾ ಸಿ ಹೇಳುತ್ತಾರೆ.
ಕೇವಲ ಯುವಕರು ಮಾತ್ರವಲ್ಲದೆ ಇಂದು ಮಕ್ಕಳು ಕೂಡ ಮೊಬೈಲ್ಗೆ ಅಡಿಕ್ಟ್ ಆಗಿದ್ದಾರೆ. 9 ರಿಂದ 17 ವರ್ಷದೊಳಗಿನ ಮಕ್ಕಳು ಸಾಮಾಜಿಕ ಮಾಧ್ಯಮ, ವಿಡಿಯೋಗಳು ಮತ್ತು ಆನ್‌ಲೈನ್ ಗೇಮಿಂಗ್‌ನ ಮೇಲೆ ಅವಲಂಬಿತರಾಗಿದ್ದಾರೆ ಎಂದು ಶೇ. 40 ಕ್ಕಿಂತ ಹೆಚ್ಚು ಭಾರತೀಯ ಪೋಷಕರು ಒಪ್ಪಿಕೊಂಡಿದ್ದಾರೆ ಎಂದು ಸರ್ಕಲ್ಸ್ ಸಮೀಕ್ಷೆ ತಿಳಿಸಿದೆ. ಪ್ರತಿಕ್ರಿಯಿಸಿದವರಲ್ಲಿ 40 ಪ್ರತಿಶತದಷ್ಟು ಜನರು ತಮ್ಮ ಮಕ್ಕಳು ಪ್ರತಿದಿನ ವಿಡಿಯೋಗಳನ್ನು ವೀಕ್ಷಿಸಲು, ಸಾಮಾಜಿಕ ಮಾಧ್ಯಮವನ್ನು ಬಳಸಲು ಮತ್ತು ಆಟಗಳನ್ನು ಆಡಲು ಆನ್‌ಲೈನ್‌ನಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಾರೆ ಎಂದು ಒಪ್ಪಿಕೊಂಡಿದ್ದಾರೆ.
ಸುಮಾರು 62 ಪ್ರತಿಶತದಷ್ಟು ಜನರು ತಮ್ಮ 13 ರಿಂದ 17 ವರ್ಷ ವಯಸ್ಸಿನ ಮಕ್ಕಳು ಸ್ಮಾರ್ಟ್‌ಫೋನ್‌ಗಳಲ್ಲಿ ದಿನಕ್ಕೆ 3 ಗಂಟೆಗಳ ಅಥವಾ ಅದಕ್ಕಿಂತ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ ಎಂದು ಹೇಳುತ್ತಾರೆ. ಸಮೀಕ್ಷೆಯ ಪ್ರಕಾರ, 71 ಪ್ರತಿಶತದಷ್ಟು ಜನರು ತಮ್ಮ 13 ರಿಂದ 17 ವರ್ಷ ವಯಸ್ಸಿನ ಮಕ್ಕಳು ಸ್ಮಾರ್ಟ್‌ಫೋನ್‌ಗಳನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.
ನಿಮ್ಮ ಫೋನ್‌ಗೆ ನೀವು ವ್ಯಸನಿಯಾಗುತ್ತಿರುವಿರಿ ಎಂದು ನೀವು ಅರಿತುಕೊಂಡರೆ, ತಕ್ಷಣ ಅದರಿಂದ ಹೊರಬರಲು ಮಾರ್ಗಗಳನ್ನು ಹುಡುಕಬೇಕು. ಸೆಲ್ ಫೋನ್ ಚಟವು ಗಂಭೀರವಾದ ಆರೋಗ್ಯ ಹಾನಿಯನ್ನು ಉಂಟುಮಾಡುತ್ತದೆ. ನೀವು ವಿವಿಧ ಪಠ್ಯೇತರ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಲು ಪ್ರಯತ್ನಿಸಬೇಕು; ಆರೋಗ್ಯಕರ ಮತ್ತು ಫಿಟ್ ಆಗಿರಲು ನಿಮ್ಮ ದಿನಚರಿಯಲ್ಲಿ ಧ್ಯಾನ ಮತ್ತು ಯೋಗವನ್ನು ಅಳವಡಿಸಲು ಪ್ರಯತ್ನಿಸಿ.
Published On - 12:53 pm, Sat, 4 May 24