ಕ್ಯಾಲಿಫೊರ್ನಿಯಾ: ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟರ್ (Twitter) ಮಾಲೀಕತ್ವವನ್ನು ಉದ್ಯಮಿ ಎಲಾನ್ ಮಸ್ಕ್ (Elon Musk) ವಹಿಸಿಕೊಂಡ ಬೆನ್ನಲ್ಲೇ ಕಂಪನಿಯು ಹಲವು ಬದಲಾವಣೆಗಳನ್ನು ಕಾಣುತ್ತಿದೆ. ಅಕ್ಷರ ಮಿತಿ (Character Limit) ಬದಲಾವಣೆ ವಿಚಾರವೂ ಇದರಲ್ಲಿ ಪ್ರಮುಖವಾದದ್ದಾಗಿದೆ. ಅಕ್ಷರ ಮಿತಿಯನ್ನು ಈಗಿರುವ 280ರ ಬದಲಾಗಿ 1,000ಕ್ಕೆ ಹೆಚ್ಚಿಸುವ ಕುರಿತು ಖುದ್ದು ಎಲಾನ್ ಮಸ್ಕ್ ಟ್ವೀಟ್ ಮೂಲಕ ಸುಳಿವು ನೀಡಿದ್ದಾರೆ. ಟ್ವಿಟರ್ನ ಅಕ್ಷರ ಮಿತಿ 1,000ಕ್ಕೆ ಹೆಚ್ಚಿಸುವಂತೆ ಬಳಕೆದಾರರೊಬ್ಬರು ಟ್ವೀಟ್ ಮೂಲಕ ಸಲಹೆ ನೀಡಿದ್ದರು. ಇದಕ್ಕೆ ಉತ್ತರಿಸಿದ ಮಸ್ಕ್, ಈ ವಿಚಾರ ನಮ್ಮ ಪರಿಗಣನೆಯಲ್ಲಿದೆ ಎಂದು ಉಲ್ಲೇಖಿಸಿದ್ದಾರೆ.
ಈ ಹಿಂದೆ ಟ್ವಿಟರ್ನಲ್ಲಿ ಗರಿಷ್ಠ 140 ಅಕ್ಷರ ಬರೆಯುವುದಕ್ಕಷ್ಟೇ ಅವಕಾಶವಿತ್ತು. 2017ರಲ್ಲಿ ಇದನ್ನು 280ಕ್ಕೆ ಹೆಚ್ಚಿಸಲಾಗಿತ್ತು. ಅಕ್ಷರ ಮಿತಿಯೇ ಟ್ವಿಟರ್ ಮತ್ತು ಇತರ ಸಮಾಜಿಕ ಜಾಲತಾಣಗಳ ನಡುವಣ ಪ್ರಮುಖ ವ್ಯತ್ಯಾಸವಾಗಿದೆ. ಇದೀಗ ಅಕ್ಷರ ಮಿತಿಯನ್ನು ಹೆಚ್ಚಿಸಲು ಮಸ್ಕ್ ಆಸಕ್ತಿ ವಹಿಸಿದ್ದಾರೆ ಎಂದು ‘ಮ್ಯಾಶಬಲ್’ ತಾಣ ವರದಿ ಮಾಡಿದೆ. ನವೆಂಬರ್ 27ರಂದು ಟ್ವಿಟರ್ ಬಳಕೆದಾರರೊಬ್ಬರು ಅಕ್ಷರ ಮಿತಿಯನ್ನು 280ರಿಂದ 420ಕ್ಕೆ ಹೆಚ್ಚಿಸುವಂತೆ ಸಲಹೆ ನೀಡಿದ್ದರು. ಅದಕ್ಕೂ ಪ್ರತಿಕ್ರಿಯಿಸಿದ್ದ ಮಸ್ಕ್, ಉತ್ತಮ ಸಲಹೆ ಎಂದು ಉತ್ತರಿಸಿದ್ದರು. ಅದಕ್ಕೂ ಮುನ್ನ ಮತ್ತೊಬ್ಬ ಬಳಕೆದಾರ, ಅಕ್ಷರ ಮಿತಿಯನ್ನು ತೊಡೆದುಹಾಕುವಂತೆ ಸಲಹೆ ನೀಡಿದ್ದರು. ಇದಕ್ಕೂ ಮಸ್ಕ್ ಸಹಮತ ವ್ಯಕ್ತಪಡಿಸಿದ್ದರು.
Idea on expanding character limit to 1000 https://t.co/dh8SSk3JHP
— John Kraus (@johnkrausphotos) November 28, 2022
ಮಸ್ಕ್ ಕಾರ್ಯಭಾರದ ಬೆನ್ನಲ್ಲೇ ಹಲವು ಬದಲಾವಣೆ
ಮಸ್ಕ್ ಅವರು ಟ್ವಿಟರ್ ಮಾಲೀಕತ್ವ ವಹಿಸಿಕೊಂಡ ಬೆನ್ನಲ್ಲೇ ಸಿಇಒ ಪರಾಗ್ ಅಗರ್ವಾಲ್ ಸೇರಿದಂತೆ 3,500ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ್ದರು. ಬಳಿಕ ಟ್ವಿಟರ್ನ ಬ್ಲೂಟಿಕ್ಗೆ ಶುಲ್ಕ ವಿಧಿಸುವ ನೀತಿ ರೂಪಿಸಿದ್ದರು. ಆದರೆ, ನಕಲಿ ಖಾತೆಗಳ ಹಾವಳಿ ತಡೆಯುವಲ್ಲಿ ವಿಫಲವಾದ ಕಾರಣ ಅದನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದರು. ಶೇಕಡಾ 75ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದ ಬಳಿಕ, ವಜಾ ಪ್ರಕ್ರಿಯೆ ಮುಗಿದಿದೆ. ಇನ್ನು ನೇಮಕಾತಿ ಆರಂಭಿಸಲಾಗುವುದು ಎಂದು ಮಸ್ಕ್ ಕಳೆದ ವಾರ ಹೇಳಿದ್ದರು. ಆದರೆ ಮತ್ತೆ ಕೆಲವರನ್ನು ವಜಾಗೊಳಿಸಿ ಸುದ್ದಿಯಾಗಿದ್ದರು. ಇದೀಗ ಅಕ್ಷರ ಮಿತಿ ಹೆಚ್ಚಿಸುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳುವ ಸುಳಿವು ನೀಡಿದ್ದಾರೆ.
ಹೆಚ್ಚಿನ ಟೆಕ್ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ